ನವದೆಹಲಿ: ಹಿರಿಯರಿಗೆ ಮತ್ತು ವಿಕಲಾಂಗಚೇತನರಿಗೆ ಲಸಿಕಾ ಪ್ರಕ್ರಿಯೆಯನ್ನು ಸರಳಗೊಳಿಸಲು ಸರಕಾರವು ಹಿರಿಯ ನಾಗರಿಕರಿಗಾಗಿ “ಮನೆಯ ಹತ್ತಿರ” ಲಸಿಕಾ ಕೇಂದ್ರಗಳನ್ನು ತೆರೆಯಲು ಅನುಮೋದನೆ ನೀಡಿದೆ ಎಂದು ಸಾಮಾಜಿಕ ನ್ಯಾಯ ಮತ್ತು ಸಶಕ್ತೀಕರಣ ಖಾತೆ ಸಹಾಯಕ ಸಚಿವ ರತ್ತನ್ ಲಾಲ್ ಕಟಾರಿಯಾ ಹೇಳಿದ್ದಾರೆ.
ಅವರು ವಿಶ್ವ ಹಿರಿಯರ ನಿಂದನೆ ಜಾಗೃತಿ ದಿನದ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಜಾಗತಿಕ ಸಾಂಕ್ರಾಮಿಕದ ಸಂದರ್ಭದಲ್ಲಿ ಹಿರಿಯ ನಾಗರಿಕರಿಗೆ ನೆರವಾಗಲು ಕೇಂದ್ರ ಸರಕಾರ ಕೈಗೊಂಡ ವಿವಿಧ ಕ್ರಮಗಳ ಬಗ್ಗೆ ಸಚಿವರು ಪ್ರಮುಖವಾಗಿ ಪ್ರಸ್ತಾಪಿಸಿದರು. ಕೇಂದ್ರ ಸರಕಾರವು ತನ್ನ ಹಿರಿವಯಸ್ಸಿನ ನಾಗರಿಕರಿಗೆ ರಕ್ಷಣೆ ಒದಗಿಸಲು, ಅವರಿಗೆ ತ್ವರಿತವಾಗಿ ಲಸಿಕೆ ದೊರೆಯುವಂತೆ ಮಾಡಲು ಕ್ರಮ ಕೈಗೊಂಡಿದೆ. ಅವರನ್ನು ಪ್ರಾಥಮಿಕ ವರ್ಗದಲ್ಲಿ ಪರಿಗಣಿಸಿದೆ. ಈ ದೂರದೃಷ್ಟಿಯ ನೀತಿಯಿಂದಾಗಿ ನಮ್ಮ ಹಿರಿವಯಸ್ಸಿನ ಜನಸಂಖ್ಯೆಯಲ್ಲಿ ಬಹುಪಾಲು ಜನರು ಮೊದಲ ಡೋಸ್ ಪಡೆದಿದ್ದಾರೆ ಮತ್ತು ಕೋವಿಡ್ -19 ರಿಂದ ತಮಗೆ ರಕ್ಷಣೆ ಪಡೆಯಲು ಸಮರ್ಥರಾಗಿದ್ದಾರೆ ಎಂದವರು ಹೇಳಿದರು.
ಹಿರಿಯರವಾಣಿ ಯೋಜನೆ ಅಡಿಯಲ್ಲಿ ಇತ್ತೀಚೆಗೆ ಪ್ರಮುಖ ರಾಜ್ಯಗಳಲ್ಲಿ ಕಾರ್ಯಾರಂಭ ಮಾಡಲಾದ ರಾಜ್ಯವಾರು ಕಾಲ್ ಸೆಂಟರ್ ಗಳ (ಉಚಿತ ದೂರವಾಣಿ ಸಂಖ್ಯೆ -14567) ಯಶೋಗಾಥೆಗಳನ್ನು ಕಟಾರಿಯಾ ಅವರು ಪ್ರಮುಖವಾಗಿ ಉಲ್ಲೇಖಿಸಿದರು.
ಚಾಲ್ತಿಯಲ್ಲಿರುವ ಕೋವಿಡ್ ಜಾಗತಿಕ ಸಾಂಕ್ರಾಮಿಕದ ಅವಧಿಯಲ್ಲಿ ಸಹಾಯವಾಣಿ ಅತ್ಯುತ್ತಮ ಕೆಲಸವನ್ನು ಮಾಡುತ್ತಿದೆ .ಉದಾಹರಣೆಗೆ ಕಾಸ್ಗಂಜ್ ಜಿಲ್ಲೆಯಲ್ಲಿ ಸಹಾಯವಾಣಿಯ ಮೂಲಕ ಹಸಿವೆಯಿಂದ ಬಳಲುತ್ತಿದ್ದ, ವಸತಿ ಇಲ್ಲದ 70 ವರ್ಷದ ಹಿರಿಯ ಮಹಿಳೆಯೊಬ್ಬರಿಗೆ ವೃದ್ಧಾಶ್ರಮ ವ್ಯವಸ್ಥೆಯನ್ನು ಒದಗಿಸಲಾಗಿದೆ. ’ಹಿರಿಯರವಾಣಿ” ಯು ಕಳೆದ ಒಂದೂವರೆ ತಿಂಗಳಿನಿಂದ ಚಾಂದೌಸಿ ಬಸ್ ನಿಲ್ದಾಣದಲ್ಲಿ ಸಿಲುಕಿ ಹಾಕಿಕೊಂಡಿದ್ದ 70 ವರ್ಷದ ಮಾಜಿ ಹೋರಾಟಗಾರರಿಗೆ ಅವರ ಮನೆಯನ್ನು ತಲುಪಲು ಸಹಾಯ ಮಾಡಿದೆ. ’ಹಿರಿಯರವಾಣಿ’ಯು ಸಾವಿರಾರು ಹಿರಿಯ ವ್ಯಕ್ತಿಗಳಿಗೆ ಸಹಾಯ ಒದಗಿಸುತ್ತಿದೆ ಎಂದು ಸಚಿವರು ವಿವರಿಸಿದರು.
ವಿಶೇಷವಾಗಿ ಜಾಗತಿಕ ಸಾಂಕ್ರಾಮಿಕದ ಸಂದರ್ಭದಲ್ಲಿ ಹಿರಿಯರಿಗೆ ಕೌಟುಂಬಿಕ ರಚನೆಗಳು ಮತ್ತು ಬಾಂಧವ್ಯದ ಅವಶ್ಯಕತೆಯ ಬಗ್ಗೆ ಒತ್ತಿ ಹೇಳಿದ ಸಚಿವರು ಕೋವಿಡ್ -19 ಜಾಗತಿಕ ಸಾಂಕ್ರಾಮಿಕವು ಏಕಾಂಗಿ ಹಿರಿಯರ ವಾಸ್ತವಿಕ ಚಿತ್ರಣವನ್ನು ಚಿತ್ರಿಸಿದೆ ಎಂದರು. ಅವರು ತಮ್ಮ ಸುತ್ತ ಬದುಕುತ್ತಿರುವ ಜನರನ್ನು ಅವಲಂಬಿಸಬೇಕಾಗಿದೆ. ಸ್ಥಳೀಯ ಜನರ ಸೇವಾ ಭಾವನೆ ಅಥವಾ ಅವಶ್ಯಕ ಸಾಮಗ್ರಿಗಳನ್ನು ಒದಗಿಸುವ ರಿಟೈಲ್ ಸೇವಾದಾರರನ್ನು ಅವಲಂಬಿಸಬೇಕಾಗಿದೆ. ಇವುಗಳ ಗೈರುಹಾಜರಿಯಲ್ಲಿ ಅವರು ಅವಶ್ಯ ಸಾಮಗ್ರಿಗಳ ಖರೀದಿಗೆ ಹೊರಗೆ ಹೋಗಬೇಕಾಗುತ್ತದೆ, ಇದು ಅವರಿಗೆ ಸೋಂಕು ತಗಲುವ ಅಪಾಯವನ್ನು ಹೆಚ್ಚಿಸುತ್ತದೆ ಎಂದರು.
ಕೊನೆಯಲ್ಲಿ ಅವರು ಕುಟುಂಬದ ಪ್ರತಿಯೊಬ್ಬ ಸದಸ್ಯರೂ, ಅದರಲ್ಲೂ ವಿಶೇಷವಾಗಿ ಹಿರಿಯರು ಆದಷ್ಟು ಬೇಗ ಲಸಿಕೆ ಪಡೆಯಬೇಕು ಎಂದು ಕೋರಿದರಲ್ಲದೆ, ಹಿರಿಯ ವಯಸ್ಸಿನ ಸಂಬಂಧಿಕರಿಗೆ ಮತ್ತು ಅವಶ್ಯಕತೆ ಇರುವ ನೆರೆ ಹೊರೆಯವರಿಗೆ ಸಹಾಯ ಮಾಡಲು ಮುಂದೆ ಬರುವಂತೆ ಮನವಿ ಮಾಡಿದರು.
ವಿಶ್ವ ಹಿರಿಯರ ನಿಂದನೆ ಜಾಗೃತಿ ದಿನ (ಡಬ್ಲ್ಯು.ಇ.ಎ.ಎ.ಡಿ.) ಯನ್ನು ಪ್ರತೀ ವರ್ಷ ಜೂನ್ 15 ರಂದು ಆಚರಿಸಲಾಗುತ್ತದೆ. ಹಿರಿಯರ ನಿಂದನಾ ತಡೆಗಾಗಿ ಇರುವ ನೆಟ್ ವರ್ಕ್ (ಐ.ಎನ್.ಪಿ.ಇ.ಎ.) ನ ಕೋರಿಕೆಯ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ತನ್ನ ಗೊತ್ತುವಳಿ 66/127, ಡಿಸೆಂಬರ್ 2011 ರಲ್ಲಿ ಇದಕ್ಕೆ ಅಧಿಕೃತವಾಗಿ ಮಾನ್ಯತೆ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.