ಸಂಪೂರ್ಣ ಜಗತ್ತೇ ಕೊರೋನಾದೊಂದಿಗೆ ಹೋರಾಡುತ್ತಿದ್ದ ಸಂದರ್ಭದಲ್ಲಿ ಕುತಂತ್ರಿ ಚೀನಾವು ಮತ್ತೊಮ್ಮೆ ತನ್ನ ನಿಜ ಬಣ್ಣವನ್ನು ತೋರಿತ್ತು. ಸರಿಯಾಗಿ ಒಂದು ವರ್ಷದ ಹಿಂದೆ 15 ಜೂನ್ 2020, ಜಗತ್ತಿನ ಬಹುತೇಕ ಎಲ್ಲಾ ರಾಷ್ಟ್ರಗಳೂ ಕೊರೋನಾ ಎಂಬ ಸಾಂಕ್ರಾಮಿಕ ಮಾಹಾಮಾರಿಯ ವಿರುದ್ದದ ಹೋರಾಟದಲ್ಲಿ ವ್ಯಸ್ತವಾಗಿದ್ದವು. ನಾವೆಲ್ಲರೂ ಲಾಕ್ಡೌನ್ನ ಅನ್ವಯ ಮನೆಯಲ್ಲೇ ಜಾಗರೂಕರಾಗಿ ಕೊರೋನಾದ ಕುರಿತಾಗಿ ಚರ್ಚೆಗಳನ್ನು ನಡೆಸುತ್ತಿದ್ದೆವು. ಆದರೆ ದೇಶದ ಗಡಿಯುದ್ದಕ್ಕೂ ಯೋಧರು ಚಳಿ ಮತ್ತು ಮಳೆಗೆ ಎದೆಯೊಡ್ಡಿ ನಮ್ಮ ರಕ್ಷಣೆಯಲ್ಲಿ ನಿರತರಾಗಿದ್ದರು. ಭಾರತ ಮತ್ತು ಚೀನಾದ ಗಡಿಭಾಗವಾದ ಪೂರ್ವ ಲಢಾಕ್ನಲ್ಲಿ ಚೀನೀ ಸೈನ್ಯವು ಮರೆಯಲಾರದ ಪಾಠವೊಂದನ್ನು ಕಲಿಯಿತು. ಹಲವಾರು ದಿನಗಳಿಂದ ನಡೆಯುತ್ತಿದ್ದ ಗಡಿ ಭದ್ರತಾ ವಿವಾದವು ಅಂದು ಬೇರೆಯ ಸ್ವರೂಪವನ್ನೇ ಪಡೆಯಿತು. ಚೀನೀ ಯೋಧರು ಮಾತುಕತೆಯ ಅನ್ವಯ ಹಿಂದಿರುಗಿದ್ದಾರೆಯೇ ಎಂದು ಪರಿಶೀಲನೆ ನಡೆಸಲು ತೆರಳಿದ್ದ ಭಾರತೀಯ ಸೇನೆಯ ಅಧಿಕಾರಿ ಮತ್ತು ಯೋಧರ ಮೇಲೆ ಚೀನೀ ಸೈನಿಕರು ಅಚಾನಕ್ ದಾಳಿಯನ್ನು ನಡೆಸಿದರು. ಈ ದಾಳಿಯನ್ನು ಚೀನೀ ಸೈನ್ಯವು ಪೂರ್ವ ನಿಯೋಜಿತವಾಗಿ ನಡೆಸಿತ್ತು. ಮುಳ್ಳು ತಂತಿಗಳಿಂದ ಸುತ್ತುವರಿಯಲ್ಪಟ್ಟ ಮರದ ತುಂಡುಗಳನ್ನು, ಇತ್ಯಾದಿ ಆಯುಧಗಳನ್ನು ಬಳಸಿ ಹಲ್ಲೆಯನ್ನು ನಡೆಸಲಾಗಿತ್ತು. ಅಂದು ಗಾಲ್ವಾನ್ ಕಣಿವೆಯ ಕಡಿದಾದ ಭಾಗದಲ್ಲಿ ಭಾರತೀಯ ಮತ್ತು ಚೀನಿ ಸೇನೆಯ ನಡುವೆ ಹಲವು ಗಂಟೆಗಳ ಕಾಲ ಹೋರಾಟವು ನಡೆದಿತ್ತು. ಅಂದು ಭಾರತೀಯ ಸೇನೆಯ ಕಮಾಂಡಿಗ್ ಆಫೀಸರ್ ಕರ್ನಲ್ ಸಂತೋಷ್ ಬಾಬು ಸಹಿತ ಭಾರತೀಯ ಸೇನೆಯ 20 ವೀರ ಯೋಧರು ಸರ್ವೋಚ್ಚ ಬಲಿದಾನವನ್ನು ನೀಡಿದ್ದರು. ಆದರೆ ಯಾವುದೇ ಆಯುಧಗಳಿಲ್ಲದೆ ಭಾರತೀಯ ವೀರರು ಬರಿಗಯ್ಯಲ್ಲಿ ಹೋರಾಟವನ್ನು ನಡೆಸಿ ತಮ್ಮ ಶೌರ್ಯ ಮತ್ತು ಸಾಹಸಗಳಿಂದ ಚೀನೀ ಯೋಧರಿಗೆ ಮರೆಯಲಾಗದ ಪಾಠವನ್ನೂ ಕಲಿಸಿದ್ದರು. ಈ ಘಟನೆಯ ಬಳಿಕ ಚೀನಾ ನಿರ್ಮಿತ ವಸ್ತುಗಳನ್ನು ನಿರ್ಬಂಧಿಸಬೇಕು ಮತ್ತು ಚೀನಾ ವಸ್ತುಗಳನ್ನು ಬಹಿಷ್ಕರಿಸುವ ಮೂಲಕ ಚೀನಾದ ಆರ್ಥಿಕತೆಗೆ ತಕ್ಕುದಾದ ಉತ್ತರವನ್ನು ನೀಡಬೇಕು ಎನ್ನುವ ಕೂಗು ಬಲವಾಗಿ ಕೇಳಿ ಬಂತು. ಮಾತ್ರವಲ್ಲದೆ ದೇಶದ ಬಹುತೇಕ ನಾಗರೀಕರು ಈ ಕೂಗನ್ನೂ ಕೃತಿಯಲ್ಲೂ ತೋರುವ ಮೂಲಕ ದೇಶದ ಹಿತಕ್ಕಾಗಿ ಒಗ್ಗಟ್ಟಾದರು.
ಆಪರೇಶನ್ ಸ್ನೋ ಲಿಯೋಪಾರ್ಡ್
1. ಕರ್ನಲ್ ಸಂತೋಷ್ ಬಾಬು
ತೆಲಂಗಾಣ ರಾಜ್ಯದ ಸೂರ್ಯಪೇಟೆಯವರಾದ ಬಿಕ್ಕುಮಲ್ಲ ಸಂತೋಷ್ ಬಾಬು 2008 ರಲ್ಲಿ ಪುಣೆಯ ರಾಷ್ಟ್ರೀಯ ಸೇನಾ ಅಕಾಡಮಿಯಿಂದ ಸೇನಾ ಅಧಿಕಾರಿಯಾಗಿ ತೇರ್ಗಡೆಯನ್ನು ಹೊಂದಿದರು. ಕಾಂಗೋದಲ್ಲಿ ವಿಶ್ವ ಶಾಂತಿ ದಳದಲ್ಲಿ ಸೇವೆಯನ್ನು ಸಲ್ಲಿಸಿದ್ದ ಅವರು 2019 ರಲ್ಲಿ 19, ಬಿಹಾರ್ ರೆಜಿಮೆಂಟ್ನ ಕಮಾಂಡಿಂಗ್ ಆಫೀಸರ್ ಆಗಿ ನಿಯುಕ್ತಿಗೊಂಡರು. 2020 ರಂದು ನಡೆದ ಗಾಲ್ವಾನ್ ಆಪರೇಶನ್ ಸ್ನೋ ಲಿಯೋಪಾರ್ಡ್ ಸಂದರ್ಭದಲ್ಲಿ ದೇಶದ ಸಾರ್ವಭೌಮತೆಯ ರಕ್ಷಣಾ ಕರ್ತವ್ಯ ನಿರತರಾಗಿದ್ದ ಸಂದರ್ಭದಲ್ಲಿ ವೀರಗತಿಯನ್ನು ಪಡೆದರು. ಇವರ ಶೌರ್ಯ ಮತ್ತು ಕರ್ತವ್ಯ ನಿಷ್ಠೆಯನ್ನು ಗುರುತಿಸಿ ಮರಣೋತ್ತರ ಮಹಾ ವೀರ ಪದಕ ನೀಡಿ ಗೌರವಿಸಲಾಯಿತು.
2. ಸಿಪಾಯಿ ಗಣೇಶ್ ಹಂಸದ
ಜಾರ್ಖಂಡ್ ರಾಜ್ಯದ ಬುಡಕಟ್ಟು ಜಿಲ್ಲೆಯೊಂದರ ಬಡ ಕುಟುಂಬವೊಂದರಲ್ಲಿ ಜನಿಸಿದ ಯುವಕ ತನ್ನ ಬಾಲ್ಯದ ದೇಶಸೇವೆಯ ಕನಸನ್ನು ನನಸಾಗಿಸಿ 2019 ರಲ್ಲಿ ಸೇನೆಯಲ್ಲಿ ಭರ್ತಿಗೊಳ್ಳುತ್ತಾರೆ. ಗಾಲ್ವಾನ್ನಲ್ಲಿ ನಡೆದ ಆಪರೇಶನ್ ಸ್ನೋ ಲಿಯೋಪಾರ್ಡ್ನಲ್ಲಿ ದೇಶದ ಸಾರ್ವಭೌಮತೆಯ ರಕ್ಷಣೆಗಾಗಿ ತಮ್ಮ ಪರಮೋಚ್ಚ ಬಲಿದಾನವನ್ನು ನೀಡುತ್ತಾರೆ.
3. ಸಿಪಾಯಿ ಗುರ್ತೇಜ್ ಸಿಂಗ್
ಮೂಲತಃ ಪಂಜಾಬ್ನ ಕೃಷಿಕ ದಂಪತಿಗಳ ಕಿರಿಯ ಪುತ್ರನಾದ ಗುರ್ತೇಜ್ ಸಿಂಗ್ರ ಮುಖ್ಯ ಧ್ಯೇಯ ಸೈನ್ಯವನ್ನು ಸೇರಿ ದೇಶಸೇವೆಯನ್ನು ಸಲ್ಲಿಸುವುದಾಗಿತ್ತು. ಅಂತೆಯೇ ಪದವಿ ಪೂರ್ವ ವಿದ್ಯಾಭ್ಯಾಸದ ಬಳಿಕ 2018 ರಲ್ಲಿ ಪಂಜಾಬ್ ರೆಜಿಮೆಂಟ್ನಲ್ಲಿ ಭರ್ತಿಗೊಳ್ಳುತ್ತಾರೆ. ಸ್ವಭಾವತಃ ಪರೋಪಕಾರಿಯಾಗಿದ್ದ ಇವರು ಅತ್ಯುತ್ತಮ ಹಾಕಿ ಪಟು ಕೂಡಾ ಆಗಿದ್ದರು. ಗಾಲ್ವಾನ್ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ 23 ವರ್ಷದ ವೀರಯೋಧ ಬರಿಗಯ್ಯಲ್ಲಿ 12 ಚೀನಾ ಯೋಧರನ್ನು ಹೊಸಕಿ ಹಾಕಿದ್ದರು ಎಂಬುದು ಇವರ ಶೌರ್ಯಕ್ಕೆ ಹಿಡಿದ ಕನ್ನಡಿ. ಇವರ ಪರಾಕ್ರಮಕ್ಕಾಗಿ ಗುರ್ತೇಜ್ ಸಿಂಗ್ ಅವರಿಗೆ ಮರಣೋತ್ತರ ವೀರ ಚಕ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
4. ನಾಯಿಬ್ ಸುಬೇದಾರ್ ಮಂದೀಪ್ ಸಿಂಗ್
ಮೂಲತಃ ಪಂಜಾಬ್ ರಾಜ್ಯದ ಪಟಿಯಾಲ ಜಿಲ್ಲೆಯವರಾದ ಮಂದೀಪ್ ಸಿಂಗ್ 1997 ರಲ್ಲಿ ತಮ್ಮ 17 ನೇ ವಯಸ್ಸಿನಲ್ಲಿ ಭಾರತೀಯ ಸೈನ್ಯದಲ್ಲಿ ಸೇರ್ಪಡೆಗೊಂಡರು. ಎರಡು ದಶಕಗಳ ಕಾಲ ದೇಶಸೇವೆಯಲ್ಲಿ ನಿರತರಾದ ಅವರು ಗಾಲ್ವಾನ್ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವೀರಗತಿಯನ್ನು ಪಡೆದರು. ಅವರ ಶೌರ್ಯ ಮತ್ತು ಸಾಹಸವನ್ನು ಗೌರವಿಸಿ ನಾಯಿಬ್ ಸುಬೇದಾರ್ ಮಂದೀಪ್ ಸಿಂಗ್ ಅವರಿಗೆ ಮರಣೋತ್ತರ ಸೇನಾ ಮೆಡಲ್ ಪದಕವನ್ನು ನೀಡಿ ಪುರಸ್ಕರಿಸಲಾಯಿತು.
5. ಹವಿಲ್ದಾರ್ ಪಳನಿ
ಮೂಲತಃ ತಮಿಳುನಾಡಿನ ರಾಮನಾಥಪುರಂನ ಕುಡುಕ್ಕಲ್ಲೋರ್ ಗ್ರಾಮದ ಕೃಷಿ ಕುಟುಂಬದ ಪುತ್ರ ಪಳನಿ ಬಾಲ್ಯದಿಂದಲೇ ಸೈನ್ಯವನ್ನು ಸೇರಿ ದೇಶಸೇವೆಯನ್ನು ಮಾಡುವ ಕನಸನ್ನು ಹೊಂದಿದ್ದರು. ಏಪ್ರಿಲ್ 1999 ರಲ್ಲಿ ಭಾರತೀಯ ಸೈನ್ಯಕ್ಕೆ ಭಾರ್ತಿ ಹೊಂದುವಾಗ ಪಳನಿಯವರ ವಯಸ್ಸು ಕೇವಲ 18. ಸಂಯವನ್ನು ಸೇರಿ ಎರಡು ದಶಕಗಳ ಕಾಲ ದೇಶಸೇವೆಯನ್ನು ಮಾಡಿ ಗಾಲ್ವಾನ್ನ ಕಾರ್ಯಾಚರಣೆಯಲ್ಲಿ ಅವರು ದೇಶಕ್ಕಾಗಿ ಪರಮೋಚ್ಚ ಬಲಿದಾನವನ್ನು ನೀಡುತ್ತಾರೆ. ಪಳನಿಯವರ ಕರ್ತವ್ಯ ನಿಷ್ಠೆ ಮತ್ತು ದೇಶದೆಡೆಗಿನ ಬದ್ಧತೆ, ಶೌರ್ಯವನ್ನು ಗೌರವಿಸಿ ಅವರನ್ನು ಮರಣೋತ್ತರ ವೀರ ಚಕ್ರವನ್ನು ನೀಡಿ ಪುರಸ್ಕರಿಸಲಾಗಿದೆ.
6. ಸಿಪಾಯಿ ಕುಂದನ್ ಕುಮಾರ್ ಓಜಾ
ಮೂಲತಃ ಜಾರ್ಖಂಡ್ ರಾಜ್ಯದವರಾದ ಸಿಪಾಯಿ ಕುಂದನ್ ಕುಮಾರ್ ಓಜಾ ಜನಿಸಿದ್ದು 18 ಜೂನ್ 1993 ರಂದು. 18 ನೇ ವಯಸ್ಸಿನಲ್ಲೇ ಸೈನ್ಯಕ್ಕೆ ಸೇರಿದ ಅವರು ತಮ್ಮ ಬಹು ಸಮಯವನ್ನು ಇತರರನ್ನು ಸೈನ್ಯಕ್ಕೆ ಸೇರುವಂತೆ ಹುರಿದುಂಬಿಸುತ್ತಾ ಕಳೆಯುತ್ತಿದ್ದರು. ಗಾಲ್ವಾನ್ನಲ್ಲಿ ನಡೆದ ಘರ್ಷಣೆಯಲ್ಲಿ ವೀರಗತಿಯನ್ನು ಪಡೆದ ಅವರು ತ್ರಿವರ್ಣ ಧ್ವಜವನ್ನು ಹೊದ್ದು ಮನೆಗೆ ಹಿಂತಿರುಗಿದಾಗ ಅವರನ್ನು ಕಾಯಿತ್ತಿದ್ದದ್ದು ಅವರ 18 ದಿನಗಳ ಮಗಳು. ಕುಂದನ್ ಓಜಾರವರ ಶೌರ್ಯವನ್ನು ಗೌರವಿಸಿ ಅವರಿಗೆ ಮರಣೋತ್ತರ ಸೇನಾ ಪದಕವನ್ನು ನೀಡಿ ಪುರಸ್ಕರಿಸಲಾಯಿತು.
7. ಸಿಪಾಯಿ ಅಮನ್ ಕುಮಾರ್
ಬಿಹಾರ ರಾಜ್ಯದ ಸಮಷ್ಠಿಪುರ್ ಗ್ರಾಮದ ಯುವಕನ ಬಾಲ್ಯದ ಕನಸು ನನಸಾದದ್ದು 2014 ರಲ್ಲಿ ಸೈನ್ಯಕ್ಕೆ ಭರ್ತಿಗೊಂಡಾಗ. ಗಾಲ್ವಾನ್ ಘರ್ಷಣೆಯಲ್ಲಿ ತಮ್ಮ ಸರ್ವೋಚ್ಚ ಬಲಿದಾನವನ್ನು ನೀಡಿ ಹುತಾತ್ಮರಾದ ಅಮನ್ ಕುಮಾರ್ ಅವರ ತಂದೆ ತಮ್ಮ ಇನ್ನೊಬ್ಬ ಮಗನನ್ನೂ ಸೈನ್ಯಕ್ಕೆ ಸೇರಿಸುವ ಇಚ್ಛೆಯನ್ನು ಹೊಂದಿದ್ದಾರೆ. ಅಮನ್ ಕುಮಾರ್ ಅವರ ಶೌರ್ಯ ಮತ್ತು ಬಲಿದಾನವನ್ನು ಗೌರವಿಸುತ್ತಾ ಅವರಿಗೆ ಸೇನಾ ಪದಕವನ್ನು ನೀಡಿ ಗೌರವಿಸಲಾಯಿತು.
8. ಹವಿಲ್ದಾರ್ ಬಿಪುಲ ರಾಯ್
ಪಶ್ಚಿಮ ಬಂಗಾಳದ ಬಿಂಡಿಪಾರಾ ಗ್ರಾಮದ ಬಿಪುಲ ರಾಯ್ ಬಾಲ್ಯದಿಂದಲೇ ಸೇನೆಯತ್ತ ಒಲವನ್ನು ಹೊಂದಿದ್ದರು. 2005 ರಲ್ಲಿ ತಮ್ಮ 19ನೇ ವಯಸ್ಸಿನಲ್ಲಿ ಅವರು ಸೈನ್ಯವನ್ನು ಸೇರಿ ದೇಶಸೇವೆಯ ಕನಸನ್ನು ನನಸಾಗಿಸುವ ಅವಕಾಶವನ್ನು ಪಡೆದರು. 2020 ರ ಜೂನ್ನಲ್ಲಿ ಗಾಲ್ವಾನ್ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅಪ್ರತಿಮ ಶೌರ್ಯವನ್ನು ಪ್ರದರ್ಶಿಸಿ ವೀರಗತಿಯನ್ನು ಪಡೆದ ಅವರನ್ನು ಮರಣೋತ್ತರ ಸೇನಾ ಪದಕವನ್ನು ನೀಡಿ ಗೌರವಿಸಲಾಯಿತು.
9. ಸಿಪಾಯಿ ಗುರ್ಬಿನ್ದೆರ್ ಸಿಂಗ್
ಪಾಂಜಾಬ್ನ ತೊಲೆವಾಲ್ ಎಂಬ ಗ್ರಾಮದಲ್ಲಿ ಜನಿಸಿದ ಗುರುಬಿಂದೆರ್ ಸಿಂಗ್ ತಮ್ಮ 19 ನೇ ವಯಸ್ಸಿನಲ್ಲೇ ಸೈನ್ಯಕ್ಕೆ ಸೇರಿದರು. ವೈವಾಹಿಕ ಜೀವನಕ್ಕೆ ಕಾಲಿರಿಸುವ ನಿಟ್ಟಿನಲ್ಲಿ ವಿವಾಹ ನಿಶ್ಚಯಿಸಲ್ಪಟ್ಟಿದ್ದ ಗುರುಬಿಂದೆರ್ ಸಿಂಗ್ ವೈವಾಹಿಕ ಜೀವನಕ್ಕೆ ಕಾಲಿರಿಸುವ ಮುನ್ನವೇ ವೀರಗತಿಯನ್ನು ಪಡೆದರು. ಅವರ ಶೌರ್ಯ ಮತ್ತು ಸಾಹಸವನ್ನು ಗೌರವಿಸುವ ನಿಟ್ಟಿನಲ್ಲಿ ಅವರಿಗೆ ಮರಣೋತ್ತರ ಸೇನಾ ಪದಕವನ್ನು ನೀಡಿ ಪುರಸ್ಕರಿಸಲಾಗಿದೆ.
10. ನಾಯಿಬ್ ಸುಬೇದಾರ್ ಸತ್ನಾಮ್ ಸಿಂಗ್
ಪಂಜಾಬ್ನ ಗುರುದಾಸ್ ಪುರ ಜಿಲ್ಲೆಯ ಸತ್ನಾಮ್ ಸಿಂಗ್ 1979 ರಲ್ಲಿ ಜನಿಸಿದರು. 1995 ರಲ್ಲಿ ತಮ್ಮ 17 ನೇ ವಯಸ್ಸಿಗೆ ಸೈನ್ಯವನ್ನು ಸೇರಿದ್ದ ಅವರು 24 ವರ್ಷಗಳ ಕಾಲ ದೇಶಸೇವೆಯಲ್ಲಿ ನಿರತರಾಗಿದ್ದು 2020 ರ ಗಾಲ್ವಾನ್ನಲ್ಲಿ ನಡೆದ ಆಪರೇಶನ್ ಸ್ನೋ ಲಿಯೋಪಾರ್ಡ್ ಕಾರ್ಯಾಚರಣೆಯಲ್ಲಿ ವೀರಗತಿ ಪಡೆದರು. ದೇಶದೆಡೆಗಿನ ಅವರ ಕರ್ತವ್ಯನಿಷ್ಠೆ ಮತ್ತು ಶೌರ್ಯವನ್ನು ಗುರುತಿಸಿ ಅವರಿಗೆ ಮರಣೋತ್ತರ ಸೇನಾ ಮೆಡಲ್ ಪದವನ್ನು ನೀಡಿ ಗೌರವಿಸಲಾಗಿದೆ.
11. ಗಣೇಶ್ ರಾಮ್ ಕುಂಜಂ
ಛತ್ತೀಸಘಡ ರಾಜ್ಯದ ಪುಟ್ಟ ಗ್ರಾಮವಾದ ಗೀಧಾಳಿಯಾ ವೀರ ಪುತ್ರ ಗಣೇಶ್ ಜನಿಸಿದ್ದು 1993 ರಲ್ಲಿ. 2011 ರಲ್ಲಿ ತಮ್ಮ 18 ನೇ ವಯಸ್ಸಿನಲ್ಲೇ ಸೈನ್ಯಕ್ಕೆ ಭರ್ತಿಗೊಂಡ ಇವರು ತಮ್ಮ ಬಹು ವರುಷಗಳ ಸೈನ್ಯಕ್ಕೆ ಸೇರುವ ಕನಸನ್ನು ನನಸಾಗಿಸಿದ್ದರು. 2020 ರ ಜೂನ್ 15 ರಂದು ನಡೆದ ಆಪರೇಶನ್ ಸ್ನೋ ಲಿಯೋಪಾರ್ಡ್ ಕಾರ್ಯಾಚರಣೆಯಲ್ಲಿ ತಮ್ಮ ಸರ್ವೋಚ್ಚ ಬಲಿದಾನವನ್ನು ನೀಡಿ ಹುತಾತ್ಮರಾದರು. ಇವರ ಸಾಹಸವನ್ನು ಗೌರವಿಸಲು ಮರಣೋತ್ತರ ಸೇನಾ ಪದಕವನ್ನು ನೀಡಿ ಗೌರವಿಸಲಾಯಿತು.
12. ಸಿಪಾಯಿ ಅಂಕುಶ್ ಠಾಕೂರ್
ಸೈನ್ಯಾಧಿಕಾರಿಯಾಗಬೇಕೆಂಬ ಕನಸನ್ನು ಹೊತ್ತಿದ್ದ ಅಂಕುಶ್ ಠಾಕೂರ್ ಸೇವೆಗೆ ತೆರೆಳಿದ ಬಳಿಕ ರಜೆ ಪಡೆದು ಒಂದು ಬಾರಿಯೂ ಮನೆಗೆ ಬಂದಿರಲಿಲ್ಲ. ತಾಯಿಯನ್ನು ಅತಿಯಾಗಿ ಪ್ರೀತಿಸುತ್ತಿದ್ದ ಯೋಧನ ಹೃದಯದಲ್ಲಿ ಭಾರತಮಾತೆಯ ಕಡೆಗಿನ ಪ್ರೇಮ ಇನ್ನೂ ಹೆಚ್ಚಿತ್ತು. ತನ್ನ 21 ನೇ ವಯಸ್ಸಿನಲ್ಲೇ ತಾಯ್ನಾಡಿಗಾಗಿ ತನ್ನ ಸರ್ವೋಚ್ಚ ಬಲಿದಾನ ನೀಡಿದ ವೀರನನ್ನು ಮರಣೋತ್ತರ ಸೇನಾ ಪದಕ ನೀಡಿ ಗೌರವಿಸಲಾಯಿತು.
13. ನಾಯಕ್ ದೀಪಕ್ ಸಿಂಗ್
“ಲಾಕ್ಡೌನ್ ತೆರವುಗೊಂಡ ಬಳಿಕ ಮನೆಗೆ ಹಿಂದಿರುಗುತ್ತೇನೆ” ಮಾತಿಗೆ ತಪ್ಪದೆ ದೀಪಕ್ ಸಿಂಗ್ ಮನೆಗೆ ಹಿಂತಿರುಗಿದ್ದರು, ಆದರೆ ತ್ರಿವರ್ಣ ಧ್ವಜವನ್ನು ಹೊತ್ತು. ಮಧ್ಯಪ್ರದೇಶದ ರೇವಾ ಜಿಲ್ಲೆಯ ಫರಾಂಡಾ ಗ್ರಾಮದ ವೀರ ಪುತ್ರ ದೀಪಕ್ ಸಿಂಗ್ ಅವರ ಹಿರಿಯ ಸಹೋದರ ಕೂಡ ಸೈನ್ಯದಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಗ್ರಾಮದಲ್ಲಿ ಪ್ರತಿಯೊಬ್ಬನಿಂದಲೂ ಪ್ರೀತಿಸಲ್ಪಡುತ್ತಿದ್ದ ವೀರ ಯೋಧ ಆಪರೇಶನ್ ಸ್ನೋ ಲಿಯೋಪಾರ್ಡ್ ಕಾರ್ಯಾಚರಣೆಯಲ್ಲಿ ತಮ್ಮ ಸರ್ವೋಚ್ಚ ಬಲಿದಾನವನ್ನು ನೀಡಿದರು. ಅವರ ಶೌರ್ಯ ಸಾಹಸಗಳನ್ನು ಗುರುತಿಸಿ ಅವರನ್ನು ಮರಣೋತ್ತರ ಸೇನಾ ಪದಕವನ್ನು ನೀಡಿ ಪುರಸ್ಕರಿಸಲಾಗಿದೆ.
14. ನಾಯಿಬ್ ಸುಬೇದಾರ್ ನದು ರಾಮ್ ಸೊರೇನ್
ಒರಿಸ್ಸಾದ ಬಡಾ ಚಂಪುದ ಗ್ರಾಮದಲ್ಲಿ 1977 ರಲ್ಲಿ ಜನಿಸಿದ ನದು ರಾಮ್ ತಮ್ಮ 19 ನೇ ವಯಸ್ಸಿನಲ್ಲೇ 1996 ರಲ್ಲಿ ಭಾರತೀಯ ಸೈನ್ಯದಲ್ಲಿ ಸೇರ್ಪಡೆಗೊಂಡರು. ಉತ್ತಮ ಕ್ರೀಡಾಪಟುವಾಗಿದ್ದ ನದೂ ರಾಮ್ ಅತ್ಯುತ್ತಮ ಹಾಕಿ ಮತ್ತು ಫುಟ್ಬಾಲ್ ಆಟಗಾರರಾಗಿದ್ದರು. 22 ವರ್ಷಗಳ ದೀರ್ಘಕಾಲ ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದ ಅವರು ಆಪರೇಶನ್ ಸ್ನೋ ಲಿಯೋಪಾರ್ಡ್ ಕಾರ್ಯಾಚರಣೆಯಲ್ಲಿ ದೇಶಕ್ಕಾಗಿ ಸರ್ವೋಚ್ಚ ಬಲಿದಾನವನ್ನು ನೀಡಿ ಅಮರರಾದರು. ಮತ್ತು ತಮ್ಮ ಶೌರ್ಯ ಮತ್ತು ಸಾಹಸಕ್ಕಾಗಿ ಮರಣೋತ್ತರ ವೀರ ಚಕ್ರ ಪದಕದಿಂದ ಪುರಸ್ಕೃತರಾದರು.
15. ಸಿಪಾಯಿ ಚಂದ್ರಕಾಂತ ಪ್ರಧಾನ್
ಒರಿಸ್ಸಾದ ಕಂಧಮಾಲ್ ಜಿಲ್ಲೆಯ ಸಾಮಾನ್ಯ ಕೃಷಿ ಕುಟುಂಬದಲ್ಲಿ ಜನಿಸಿದ ಚಂದ್ರಕಾಂತ, 2014 ನೆ ಇಸವಿಯಲ್ಲಿ ತಮ್ಮ 21 ನೇ ವಯಸ್ಸಿನಲ್ಲಿ ಸೈನ್ಯಕ್ಕೆ ಭರ್ತಿಗೊಂಡರು. ಪರೋಪಕಾರಿ ಸ್ವಭಾವದ ಚಂದ್ರಕಾಂಡ ಗ್ರಾಮದ ಎಲ್ಲರಿಗೂ ಪ್ರಿಯವಾಗಿದ್ದರು. ಗಾಲ್ವಾನ್ನಲ್ಲಿ ನಡೆದ ಆಪರೇಶನ್ ಸ್ನೋ ಲಿಯೋಪಾರ್ಡ್ ಕಾರ್ಯಾಚರಣೆಯಲ್ಲಿ ವೀರಗತಿಯನ್ನು ಪಡೆದ ಅವರನ್ನು ಮರಣೋತ್ತರ ಸೇನಾ ಪದಕದೊಂದಿಗೆ ಗೌರವಿಸಲಾಯಿತು.
16. ಸಿಪಾಯಿ ಚಂದನ್ ಕುಮಾರ್
ಬಿಹಾರದ ಜ್ಞಾನಪುರ ಗ್ರಾಮದ ಚಂದನ್ ಕುಮಾರ್, ತಮ್ಮ ಪಾಲಕರ 8 ಮಕ್ಕಳಲ್ಲಿ ಕಿರಿಯವರು. ತನ್ನ ಮೂರು ಮಂದಿ ಹಿರಿಯ ಸಹೋದರರಂತೆ ತಾವೂ ಸೇನೆಯಲ್ಲಿ ಸೇವೆಯನ್ನು ಸಲ್ಲಿಸುವ ಕನಸನ್ನು ಹೊಂದಿದ್ದ ಅವರು ತಮ್ಮ 19 ನೇ ವಯಸ್ಸಿನಲ್ಲಿ 2017 ರಲ್ಲಿ ಸೇನೆಗೆ ಆಯ್ಕೆಯಾಗುವ ಮೂಲಕ ಸಾಧಿಸಿದರು. ಗಾಲ್ವಾನ್ನಲ್ಲಿ ನಡೆದ ಆಪರೇಶನ್ ಸ್ನೋ ಲಿಯೋಪಾರ್ಡ್ ಕಾರ್ಯಾಚರಣೆಯಲ್ಲಿ ತಮ್ಮ ಶೌರ್ಯ ಸಾಹಸಗಳಿಂದ ಚೀನೀ ಸೈನ್ಯಕ್ಕೆ ಪಾಠ ಕಲಿಸಿದ ಅವರು ಕರ್ತವ್ಯ ನಿರ್ವಹಣೆಯ ಸಂದರ್ಭದಲ್ಲಿ ವೀರಮರಣವನ್ನಪ್ಪಿದರು. ಅವರ ಸಾಹಸ ಶೌರ್ಯಗಳಿಗಾಗಿ ಮರಣೋತ್ತರ ಸೇನಾ ಪದಕ ಪುರಸ್ಕಾರದಿಂದ ಅವರಿಗೆ ಗೌರವವನ್ನು ಸಲ್ಲಿಸಲಾಯಿತು.
17. ಸಿಪಾಯ್ ಜೈ ಕಿಶೋರ್ ಸಿಂಗ್
ಬಿಹಾರದ ವೈಶಾಲಿ ಜಿಲ್ಲೆಯವರಾದ ಜೈ ಕಿಶೋರ್ ಸಿಂಗ್ ಬಾಲ್ಯದಿಂದಲೇ ಸೇನೆಯನ್ನು ಸೇರುವ ಗುರಿಯನ್ನು ಹೊಂದಿದರು. ಅದರಂತೆಯೇ 2018 ರಲ್ಲಿ ಸೈನ್ಯಕ್ಕೆ ಭರ್ತಿಯಾದಾಗ ಅವರ ವಯಸ್ಸು ಕೇವಲ 19 ವರ್ಷ. 2020 ರ ಜೂನ್ನಲ್ಲಿ ನಡೆದ ಆಪರೇಶನ್ ಸ್ನೋ ಲಿಯೋಪಾರ್ಡ್ನಲ್ಲಿ ಹೋರಾಡುತ್ತಾ ವೀರಮರಣವನ್ನಪ್ಪಿದ 21 ವರ್ಷದ ಯುವಕನ ಪರಾಕ್ರಮಕ್ಕಾಗಿ ಅವರಿಗೆ ಮರಣೋತ್ತರ ಸೇನಾ ಮೆಡಲ್ ಪದಕವನ್ನು ನೀಡಿ ಪುರಸ್ಕರಿಸಲಾಯಿತು.
18. ಹವಿಲ್ದಾರ್ ಸುನಿಲ್ ಕುಮಾರ್
ಬಿಹಾರದ ಸಿಕಾರಿಯಾ ಪಂಚಾಯತ್ನ ಪುಟ್ಟ ಗ್ರಾಮವೊಂದರ ವೀರ ಯೋಧ ಹವೀಲ್ದಾರ್ ಸುನಿಲ್ ಕುಮಾರ್ ಅತ್ಯಂತ ಪರೋಪಕಾರ ಗುಣವನ್ನು ಹೊಂದಿದ್ದ ಸ್ನೇಹಪರಿ ವ್ಯಕ್ತಿಯಾಗಿದ್ದರು. ರಜೆಯ ಸಮಯದಲ್ಲಿ ಊರಿಗೆ ಬಂದ ಸಂದರ್ಭದಲ್ಲೆಲ್ಲ ತಮ್ಮ ಊರಿನ ಯುವಕರನ್ನು ಸೈನ್ಯಕ್ಕೆ ಸೇರುವಂತೆ ಹುರಿದುಂಬಿಸುತ್ತಿದ್ದರು. 2020 ರಲ್ಲಿ ಗಾಲ್ವಾನ್ ಕಣಿವೆಯಲ್ಲಿ ನಡೆದ ಆಪರೇಶನ್ ಸ್ನೋ ಲಿಯೋಪಾರ್ಡ್ನ ಸಂದರ್ಭದಲ್ಲಿ ವೀರಗತಿಯನ್ನು ಪಡೆದ ಇವರ ಪರಾಕ್ರಮವನ್ನು ಗೌರವಿಸಿ ಸೇನಾ ಪದಕವನ್ನು ನೀಡಿ ಗೌರವಿಸಲಾಗಿದೆ.
19. ಸಿಪಾಯ್ ರಾಜೇಶ್ ಒರಂಗ್
ಮೂಲತಃ ಪಶ್ಚಿಮ ಬಂಗಾಳದ ಬೆಲಗೋರಿಯಾ ಗ್ರಾಮದ ಸಾಮಾನ್ಯ ಕೃಷಿಕ ಕುಟುಂಬದಲ್ಲಿ ಜನಿಸಿದರು. 2015 ರಲ್ಲಿ ತಮ್ಮ 21 ನೇ ವಯಸ್ಸಿಗೆ ಭಾರತೀಯ ಸೇನೆಯಲ್ಲಿ ಭರ್ತಿಗೊಂಡ ಅವರು ಐದು ವರ್ಷಗಳ ಸೇವೆಯನ್ನು ಸಲ್ಲಿಸಿ ವೈವಾಹಿಕ ಜೀವನಕ್ಕೆ ಕಾಲಿರಿಸಲು ದಿನಗಳನ್ನು ಎಣಿಸುತ್ತಿದ್ದರು. ಗಾಲ್ವಾನ್ ಕಣಿವೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವೀರೋಚಿತವಾಗಿ ಹೋರಾಡುತ್ತಾ ವೀರಗತಿಯನ್ನು ಪಡೆದ ಅವರ ಬಲಿದಾನವನ್ನು ಗೌರವಿಸಲು ಅವರಿಗೆ ಮರಣೋತ್ತರ ಸೇನಾ ಪದಕವನ್ನು ನೀಡಿ ಗೌರವಿಸಲಾಯಿತು.
20. ಸಿಪಾಯ್ ಗಣೇಶ್ ಹ್ಯಾಂಡ್ಸ
ಜಾರ್ಖಂಡ್ ರಾಜ್ಯದ ಚಿಂಗಾರ ಪಂಚಾಯತ್ನ ಪುಟ್ಟ ಕೊಸಫಲಿಯ ಗ್ರಾಮದ ಗಣೇಶ್ 2018 ರಲ್ಲಿ ಭಾರತೀಯ ಸೈನ್ಯಕ್ಕೆ ಭರ್ತಿಗೊಂಡರು. ಹೈದರಾಬಾದ್ಗೆ ವರ್ಗಾವಣೆಯನ್ನು ಪಡೆದಿದ್ದ ಅವರು ಕೊರೋನಾ ಲಾಕ್ಡೌ ಕಾರಣದಿಂದಾಗಿ ಅಲ್ಲಿಗೆ ತೆರಳಲು ಸಾಧ್ಯವಾಗಿರಲಿಲ್ಲ. ಉತ್ತಮ ಫುಟ್ಬಾಲ್ ಆಟಗಾರರಾಗಿದ್ದ ಗಣೇಶ್ ತಮ್ಮ 22 ನೇ ವಯಸ್ಸಿಗೆ ದೇಶಕ್ಕಾಗಿ ತಮ್ಮ ಸರ್ವೋಚ್ಛ ಬಲಿದಾನವನ್ನು ನೀಡಿ ಹುತಾತ್ಮರಾದರು. ಅವರ ಪರಾಕ್ರಮವನ್ನು ಮರಣೋತ್ತರ ಸೇನಾ ಪದಕ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.
ದೇಶಕ್ಕಾಗಿ, ದೇಶದ ಸಾರ್ವಭೌಮತೆಯ ರಕ್ಷಣೆಗಾಗಿ ತಮ್ಮ ಸರ್ವೋಚ್ಛ ಬಲಿದಾನವನ್ನು ನೀಡಿದ ವೀರ ಯೋಧರನ್ನು ಮರೆಯದಿರೋಣ.
ಒಂದು ವರ್ಷದ ಹಿಂದೆ 15 ಜೂನ್ 2020, ಜಗತ್ತಿನ ಬಹುತೇಕ ಎಲ್ಲಾ ರಾಷ್ಟ್ರಗಳೂ ಕೊರೋನಾ ಎಂಬ ಸಾಂಕ್ರಾಮಿಕ ಮಾಹಾಮಾರಿಯ ವಿರುದ್ದದ ಹೋರಾಟದಲ್ಲಿ ವ್ಯಸ್ತವಾಗಿದ್ದವು. ಆದರೆ ದೇಶದ ಗಡಿಯುದ್ದಕ್ಕೂ ಯೋಧರು ಚಳಿ ಮತ್ತು ಮಳೆಗೆ ಎದೆಯೊಡ್ಡಿ ನಮ್ಮ ರಕ್ಷಣೆಯಲ್ಲಿ ನಿರತರಾಗಿದ್ದರು. ಅಂದು ಗಾಲ್ವಾನ್ ಕಣಿವೆಯ ಕಡಿದಾದ ಭಾಗದಲ್ಲಿ ಭಾರತೀಯ ಮತ್ತು ಚೀನಿ ಸೇನೆಯ ನಡುವೆ ಹಲವು ಗಂಟೆಗಳ ಕಾಲ ಹೋರಾಟವು ನಡೆದಿತ್ತು. ಆದರೆ ಯಾವುದೇ ಆಯುಧಗಳಿಲ್ಲದೆ ಭಾರತೀಯ ವೀರರು ಬರಿಗಯ್ಯಲ್ಲಿ ಹೋರಾಟವನ್ನು ನಡೆಸಿ ತಮ್ಮ ಶೌರ್ಯ ಮತ್ತು ಸಾಹಸಗಳಿಂದ ಚೀನೀ ಯೋಧರಿಗೆ ಮರೆಯಲಾಗದ ಪಾಠವನ್ನೂ ಕಲಿಸಿದ್ದರು. ದೇಶಕ್ಕಾಗಿ, ದೇಶದ ಸಾರ್ವಭೌಮತೆಯ ರಕ್ಷಣೆಗಾಗಿ ತಮ್ಮ ಸರ್ವೋಚ್ಛ ಬಲಿದಾನವನ್ನು ನೀಡಿದ ವೀರ ಯೋಧರನ್ನು ಮರೆಯದಿರೋಣ.
✍️ “KnowYourHeroes” ತಂಡ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.