ದೇಶ ಒಂದು ಕಡೆಯಲ್ಲಿ ಕೊರೋನದ ಅಲೆಯಿಂದ ಆರ್ಥಿಕವಾಗಿ ತತ್ತರಿಸಿ ಹೋಗಿದೆ, ಹೀಗಾಗಿ ಸರ್ಕಾರ ಅನೇಕ ಯೋಜನೆಗಳ ಮೂಲಕ ಆದಷ್ಟು ಜನರ ಹಸಿವು ನೀಗಿಸಲು ಪ್ರಯತ್ನಿಸುತ್ತಿದೆ. ಮಾತ್ರವಲ್ಲದೇ, ಅನೇಕ ವ್ಯಕ್ತಿಗಳು, ಸಂಘಟನೆಗಳು, ಸಂಸ್ಥೆಗಳು ಕೂಡ ಹಸಿವು ನೀಗಿಸುವ ಕಾರ್ಯದಲ್ಲಿ ಕೈಜೋಡಿಸಿವೆ. ಇಂತಹ ಸಂದರ್ಭದಲ್ಲಿ ಕಳೆದ ಹಲವು ವರ್ಷಗಳಿಂದ ನೂರಾರು ಜನರ ಹೊಟ್ಟೆ ತುಂಬಿಸುತ್ತಾ ಬಂದಿರುವ 85 ವರ್ಷದ ಇಳಿ ವಯಸ್ಸಿನ ಶ್ರೀಮತಿ ಎಂ. ಕಮಲಥಾಳ್ ಎಂಬ ಅಜ್ಜಿಯೊಬ್ಬರು ಎಲ್ಲರಿಗೂ ಮಾದರಿಯಾಗಿದ್ದಾರೆ.
ತಮಿಳುನಾಡಿನ ಕೊಯಮತ್ತೂರಿನ ವಡಿವೇಲಂಪಾಳ್ಯನಲ್ಲಿ ವಾಸಿಸುತ್ತಿರುವ ಎಂ. ಕಮಲಥಾಳ್ ಇವರು ಇಡ್ಲಿ ಅಜ್ಜಿ ಎಂದೇ ಅಲ್ಲಿ ಹೆಸರುವಾಸಿ. ತಮ್ಮ ಆದಾಯದ ಬಗ್ಗೆ ಕೊಂಚವೂ ಯೋಚಿಸದೇ ಇಂದಿಗೂ ಕೇವಲ 1 ರೂಪಾಯಿಗೆ 1 ಇಡ್ಲಿಯನ್ನು ಸುಮಾರು 30 ವರ್ಷಗಳಿಗಿಂತ ಅಧಿಕ ವರ್ಷಗಳ ಕಾಲದಿಂದ ನಿಸ್ವಾರ್ಥವಾಗಿ ಮಾರುತ್ತಿರುವುದು ನಿಜಕ್ಕೂ ಎಲ್ಲಾ ದೇಶವಾಸಿಗಳೂ ಹೆಮ್ಮೆ ಪಡುವಂತಹ ವಿಷಯ. 10 ಪೈಸೆಯಿಂದ ಆರಂಭವಾದ ಇಡ್ಲಿಯ ಬೆಲೆ ಕ್ರಮೇಣ 25, 50, 75 ಪೈಸೆಗಳಾಗಿ ಕಳೆದ 15 ವರ್ಷಗಳಿಂದ 1 ರೂಪಾಯಿಗೇ ಸೀಮಿತವಾಗಿರುವುದು ಅಚ್ಚರಿ ಪಡುವ ಸಂಗತಿ.
ಅಜ್ಜಿಯ ಹೋಟೆಲ್ ಫೈವ್ ಸ್ಟಾರ್ ಸಣ್ಣ ಗೂಡಿನಂತಿರುವ ಪುಟ್ಟ ಜಾಗ. ಇಲ್ಲಿಯ ಇಡ್ಲೀ, ಸಾಂಬರ್ ಮತ್ತು ಚಟ್ನಿಯ ರುಚಿಯನ್ನು ಸವಿಯಲು ನೂರಾರು ಕಿಮೀ ದೂರಗಳಿಂದಲೂ ಜನರು ಹುಡುಕಿಕೊಂಡು ಬೆಳ್ಳಂಬೆಳಗ್ಗೆ ಅಜ್ಜಿಯ ಹೋಟೆಲ್ ಮುಂದೆ ಹಾಜರಾಗಿ ಸಾಲು ಗಟ್ಟಿ ನಿಲ್ಲುವುದನ್ನು ನೋಡುವುದಕ್ಕೇ ಏನೋ ಒಂದು ಸಂತೋಷ. ಆಕೆ ಇಡ್ಲಿ ತಯಾರಿಸುವ ಕೈಗಳು ಸ್ವಾಭಿಮಾನದ ಸಂಕೇತ. ಹಾಗೆಯೇ ರುಚಿಕರ ಇಡ್ಲಿ ಜೊತೆಗೆ ತಾಯಿಯ ಮಮತೆಯ ಭಾವ ಎಲ್ಲವು ಅಜ್ಜಿಯ ಹೋಟೆಲಿನಲ್ಲಿ ಲಭ್ಯ.
ಅಜ್ಜಿಯ ಇಡ್ಲಿ ತಯಾರಿಸುವ ಕಾರ್ಯ ಬೆಳೆಗ್ಗೆ 5 ಗಂಟೆಯಿಂದವೇ ಪ್ರಾರಂಭ. ಆಧುನಿಕ ಯಂತ್ರಗಳನ್ನು ಬಳಸದೆ ಸಾಂಪ್ರದಾಯಿಕ ಕಲ್ಲಿನ ಮೂಲಕವೇ ಹಿಟ್ಟು ರುಬ್ಬಿ, ಪ್ರತಿದಿನ ಅಂದಾಜು ಸುಮಾರು 1000-1200 ಬಿಸಿ ಬಿಸಿಯಾದ ಇಡ್ಲಿಗಳನ್ನು ತಯಾರು ಮಾಡಲಾಗುತ್ತದೆ. ಪ್ರತೀ ದಿನ ಬೆಳಿಗ್ಗೆ 6 ಗಂಟೆಗೆ ಗ್ರಾಹಕರಿಗೆ ಸೇವೆ ನೀಡುವ ಅಜ್ಜಿಯ ಈ ಉಪಾಹಾರ ಗೃಹ ಸಾಧಾರಣವಾಗಿ ಮಧ್ಯಾಹ್ನದವರೆಗೂ ತೆರೆದಿರುತ್ತದೆ. ಅಜ್ಜಿಯ ಉಪಹಾರಗೃಹಕ್ಕೆ ಬಂದ ಗ್ರಾಹಕರ್ಯಾರೂ ಈ ವರೆಗೆ ಖಾಲಿ ಹೊಟ್ಟೆಯಲ್ಲಿ ಹೋದ ಉದಾಹರಣೆಯೇ ಇಲ್ಲ.
ಇಡ್ಲಿ ಅಜ್ಜಿ ಇಳಿ ವಯಸ್ಸಿನ ಅಜ್ಜಿ, ಹೀಗಾಗಿ ವಯೋ ಸಹಜವಾಗಿ ಸುಕ್ಕುಗಟ್ಟಿದ ಮುಖ, ಮೂಳೆಗಳಿಗೆ ಅಂಟಿಕೊಂಡ ಚರ್ಮ ಮತ್ತು ಬೆನ್ನು ಸ್ವಲ್ಪ ಬಾಗಿದೆ, ಕಣ್ಣುಗಳೂ ಸಹಾ ಮಂಜಾಗಿದೆ. ಆದರೂ ಯಾವುದೇ ಮಧ್ಯವಯಸ್ಕ ಮಹಿಳೆಗಿಂತಲೂ ಅತ್ಯಂತ ಚುರುಕಾಗಿ ಕೆಲಸ ಮಾಡುತ್ತಾರೆ. ಸಂಪೂರ್ಣ ಉಪಾಹಾರ ಗೃಹದ ವ್ಯವಹಾರಗಳನ್ನು ತಾವೇ ನೋಡಿಕೊಳ್ಳುತ್ತಾರೆ. ಅವರ ಮೊಮ್ಮಗನ ಪತ್ನಿ ಪಿ. ಆರತಿ ಸಹಾ ಇವರ ಜೊತೆ ಸಹಾಯಕ್ಕಾಗಿ ಇರುತ್ತಾರೆ ಮತ್ತು ಆಕೆಯೂ ಅಜ್ಜಿಯ ಈ ಒಳ್ಳೆಯ ಕಾರ್ಯವನ್ನು ಮುಂದುವರಿಸಿಕೊಂಡು ಹೋಗುವ ಇಚ್ಚೆಯನ್ನು ವ್ಯಕ್ತಪಡಿಸಿರುವುದು ಮೆಚ್ಚಬೇಕಾದದ್ದು. ಇಂದಿಗೂ ಸಹ ಅಡುಗೆಗೆ ಬೇಕಾದ ಉರುವಲುಗಳನ್ನು ಮಧ್ಯಾಹ್ನ ಉಪಹಾರ ಗೃಹ ಮುಚ್ಚಿದ ನಂತರ ಅಜ್ಜಿಯೇ ಆರಿಸಲು ಹೋಗುವುದು ನಿಜಕ್ಕೂ ಆಶ್ಚರ್ಯವಾಗಿವೆ.
ಇತ್ತೀಚಿನ ದಿನಗಳಲ್ಲಿ ಎಲ್ಲಾ ವಸ್ತುಗಳ ಬೆಲೆಯೂ ಹೆಚ್ಚಾಗಿರುವಾಗ ಇಂದಿಗೂ ಕೇವಲ 1 ರೂಪಾಯಿಗೆ 1 ಇಡ್ಲಿ ಮತ್ತು ಅದರ ಜೊತೆಗೆ ಯಥೇಚ್ಚ ಚಟ್ನಿ ಮತ್ತು ಸಾಂಬಾರ್ ಹೇಗೆ ಕೊಡುತ್ತೀರಿ? ಎಂದು ಕುತೂಹಲದಿಂದ ಅಜ್ಜಿಯನ್ನು ವಿಚಾರಿಸಿದರೆ, ಒಂದು ನಗೆ ಬೀರಿ ‘ನಾನೆಂದೂ ಇದನ್ನು ಒಂದು ವ್ಯಾಪಾರ ಎಂದು ಯೋಚಿಸಿಯೇ ಇಲ್ಲ. ಹಸಿದವರ ಹೊಟ್ಟೆ ತುಂಬಿಸುವುದು ಒಂದು ಶ್ರೇಷ್ಠ ಕಾರ್ಯ. ಇಂದಿಗೂ ಹಲವಾರು ಜನರಿಗೆ ಒಪ್ಪೊತ್ತಿನ ಊಟವೂ ಸಿಗದ ಪರಿಸ್ಥಿತಿ ಇದೆ. ಹಾಗಾಗಿ ಅಂತಹವರಿಗೆ ನನ್ನ ಕೈಲಾದ ಮಟ್ಟಿಗೆ ಸಹಾಯ ಮಾಡುವ ಮನಸ್ಸಿನಿಂದ ಈ ಕಾಯಕವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇನೆ. ಇದರಿಂದ ಲಾಭ ಮತ್ತು ನಷ್ಟವನ್ನು ಎಂದೂ ಯೋಚಿಸಿಲ್ಲ. ನಾನೂ ಆರ್ಥಿಕವಾಗಿ ಬಡವಿ. ಆದರೂ ನನ್ನ ಕೈಯಲ್ಲಾದ ಮಟ್ಟಿಗೆ ಇತರರಿಗೆ ಸಹಾಯವನ್ನು ಮಾಡಬೇಕು ಎಂಬ ಹಂಬಲ. ಹಾಗಾಗಿ ನನಗೆ ನಷ್ಟವಾದರೂ ಪರವಾಗಿಲ್ಲ ಇತರರು ಹಸಿದ ಹೊಟ್ಟೆಯಲ್ಲಿ ಇರಬಾರದು ಎಂಬ ಉದ್ದೇಶದಿಂದ ಕೆಲಸ ಮಾಡುತ್ತಿರುವುದಾಗಿ ಮನದಾಳದ ಮಾತುಗಳನ್ನು ಹೇಳುತ್ತಾರೆ. ಇದುವರೆಗೂ ನಾವು ಹಾಕಿದ ಬಂಡವಾಳಕ್ಕೆ ನಷ್ಟವಂತೂ ಆಗಿಲ್ಲ ಎಂದು ಹೇಳುವ ಅಜ್ಜಿ ಮಾತು ಇತರರಿಗೂ ಆದರ್ಶ ಎಂದು ಹೇಳಿದರೆ ಅತಿಶಯವಲ್ಲ.
ಅದೆಷ್ಟೋ ಬಾರಿ ಒಂದು ರೂಪಾಯಿಯೂ ಕೊಡದೆ ಇಡ್ಲಿ ತಿಂದು ಹೋದವರು, ಮತ್ತೆ ಇನ್ನೊಮ್ಮೆ ಬಂದಾಗ ಆ ಹಣವನ್ನು ವಾಪಸ್ ಕೇಳದೆ ನಗುನಗುತ್ತಾ ಮತ್ತೆ ಇಡ್ಲಿ ನೀಡುವ ಅಪರೂಪದ ವ್ಯಕ್ತಿತ್ವ ಅಜ್ಜಿಯದ್ದು. ಈ ನಿಸ್ವಾರ್ಥ ಸೇವೆಗಾಗಿ ಹೆಚ್ಚಿನ ಹಣವನ್ನು ಕೊಟ್ಟಿರುವುದೂ ಉಂಟು. ಮುಂದೆ ಎಂದಾದರೂ ಇಡ್ಲಿಗಳ ಬೆಲೆಯನ್ನು ಹೆಚ್ಚಿಸುವ ಆಲೋಚನೆ ಇದೆಯೇ ? ಎಂದು ಅಜ್ಜಿಯನ್ನು ಕೇಳಿದಾಗ, ಇದೊಂದು ಪುಣ್ಯದ ಕೆಲಸ, ಭಗವಂತನ ಕೃಪೆಯಿಂದ ಮತ್ತು ಎಲ್ಲರ ಸಹಾಕಾರದಿಂದ ನಡೆದು ಕೊಂಡು ಹೋಗುತ್ತಿದೆ, ಹಾಗಾಗಿ ತಿನ್ನುವವರು ನೆಮ್ಮದಿಯಾಗಿ ತಿನ್ನಲಿ ಬಿಡಿ ಎಂದು ಹೇಳುತ್ತಾರೆ ಇಡ್ಲಿ ಅಜ್ಜಿ.
ಹಾಗೇ ಅಲ್ಲಿಯ ಸ್ಥಳೀಯ ಶಾಲೆಗೆ ಹೋಗುವ ಮಕ್ಕಳುಗಳೂ ಸಹಾ ಬೆಳಿಗ್ಗೆ ಹೊಟ್ಟೆಯ ತುಂಬಾ ಇಡ್ಲಿಗಳನ್ನು ಇಲ್ಲಿಯೇ ತಿಂದುಕೊಂಡು, ಜೊತೆಗೆ ಮಧ್ಯಾಹ್ನದ ಊಟಕ್ಕೂ ಡಬ್ಬಿಗಳಲ್ಲಿ ಅದೇ ಇಡ್ಲಿಗಳನ್ನು ತೆಗೆದುಕೊಂಡು ಹೋಗುವುದನ್ನು ಕಾಣಬಹುದಾಗಿದೆ. ಕೊಯಮತ್ತೂರಿನ ಮಿಕ್ಸರ್, ಗ್ರೈಂಡರ್ ತಯಾರಿಕಾ ಕಂಪನಿಯೊಂದು ಪ್ರೀತಿಯಿಂದ ಅಜ್ಜಿಗೆ ಮಿಕ್ಸರ್, ಗ್ರೈಂಡರ್ ಉಡುಗೊರೆಯಾಗಿ ಕೊಟ್ಟರೆ, ಉಜ್ವಲ ಯೋಜನೆಯಡಿಯಲ್ಲಿ ಭಾರತ್ ಗ್ಯಾಸ್ ಅವರು ಉಚಿತವಾಗಿ ಅಜ್ಜಿಯ ಮನೆಗೇ ಬಂದು ಗ್ಯಾಸ್ ಕನೆಕ್ಷನ್ ಮಾಡಿಕೊಟ್ಟಿದೆ.
ಕೇಂದ್ರ ಪೆಟ್ರೋಲಿಯಂ ಮಂತ್ರಿ ಧರ್ಮೇಂದ್ರ ಪ್ರಧಾನ್ ಅವರೂ ಸಹ ಅಜ್ಜಿಗೆ ಕರೆ ಮಾಡಿ ಶುಭಾಶಯಗಳನ್ನು ತಿಳಿಸಿದ್ದಾರೆ. ಸ್ಥಳೀಯ ಜಿಲ್ಲಾಧಿಕಾರಿಗಳೂ ಸಹಾ ಅಜ್ಜಿಯ ನಿಸ್ವಾರ್ಥ ಸೇವೆಯನ್ನು ಮೆಚ್ಚಿ ಪ್ರಧಾನ ಮಂತ್ರಿಗಳ ಆವಾಸ್ ಯೋಜನೆಯಡಿ ಅಜ್ಜಿಗೆ ಹೊಸ ಮನೆ ಕಟ್ಟಿ ಕೊಡುವುದಾಗಿ ಭರವಸೆ ನೀಡಿದ್ದಾರೆ. ಇಷ್ಟೆಲ್ಲಾ ಪ್ರಖ್ಯಾತಿಯನ್ನು ಪಡೆದಿದ್ದರೂ ಸಹಾ ಅಜ್ಜಿ, ಇದಾವುದನ್ನೂ ತಲೆಗೆ ಹಚ್ಚಿಕೊಳ್ಳದೇ ಪ್ರತಿನಿತ್ಯವೂ ತನ್ನ ಕಾಯಕವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ಕೊರೋನ ಸಂದರ್ಭದಲ್ಲಿ ಸರ್ಕಾರ ಯಾವುದೇ ಆರ್ಥಿಕ ಸೌಲಭ್ಯ ಒದಗಿಸಲಿಲ್ಲ ಎನ್ನುತ್ತ ಸರ್ಕಾರವನ್ನು ದೂಷಿಸುತ್ತಾ ಕುಳಿತವರಿಗೆ, ಸ್ವಾಭಿಮಾನಿಯಾಗಿ ದುಡಿದು ಸಂಪಾದಿಸಿ ತಾನೂ ತಿಂದು, ಮತ್ತೊಬ್ಬರ ಹಸಿವನ್ನು ನೀಗುತ್ತಿರುವ ಇಡ್ಲಿ ಅಜ್ಜಿಯ ಜೀವನ ಅನುಕರಣೀಯ. ಆತ್ಮನಿರ್ಭರ ಭಾರತದ ಪರಿಕಲ್ಪನೆಗೆ ಶ್ರೇಷ್ಠ ಉದಾಹರಣೆ. ಜೊತೆಗೆ ಇಡ್ಲಿ ಅಜ್ಜಿಯ ಮಾದರಿ ಜೀವನ ನಮಗೆಲ್ಲಾ ಸ್ಫೂರ್ತಿ.
✍️ ಪ್ರಣವ ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.