ಕಳೆದ ನಾಲ್ಕು ದಿನಗಳಿಂದ ನಿದ್ದೆ ಬರುತ್ತಿಲ್ಲ. ಭಯ ಆಗ್ತಿದೆ. ಪರೀಕ್ಷೆ ಬರೆಯುತ್ತಿರುವ ಹಾಗೆ ಒಮ್ಮೆ ಎನಿಸಿದರೆ ಇನ್ನೊಮ್ಮೆಗೆ ಪರೀಕ್ಷೆಯಲ್ಲಿ ಏನೋ ಉತ್ತರ ಬರೆಯಲಾಗದ ಸ್ಥಿತಿ ಎದುರಿಸಿದ ಕ್ಷಣ. ಇದರಿಂದ ಆತಂಕ ಎದುರಾಗಿದೆ ಸರ್ ಏನ್ ಮಾಡಲಿ. ಊಟ, ತಿಂಡಿ ಯಾವುದೇ ಆಹಾರ ರುಚಿಸುತ್ತಿಲ್ಲ. ಜೀವನವೇ ಬೇಸರವಾಗಿ ಅಧೀರರನ್ನಾಗಿಸಿದೆ.
ಹೀಗೆಂದು ವಾರದ ಹಿಂದೆ ಒಬ್ಬ ವಿದ್ಯಾರ್ಥಿ ನನಗೆ ಕರೆ ಮಾಡಿ ತನ್ನ ಆತಂಕ, ಗೋಳು ತೋಡಿಕೊಂಡ. ಬಹುಶಃ ಇದು ಒಬ್ಬ ವಿದ್ಯಾರ್ಥಿ ಎದರಿಸುವ ಆತಂಕ, ಗೋಳಲ್ಲ. ಬಹುತೇಕ ವಿದ್ಯಾರ್ಥಿಗಳ ಮನಸ್ಥಿತಿ ಇದೇ ಆಗಿದೆ. ಇದಕ್ಕೆ ಕಾರಣ ಪರೀಕ್ಷೆ ಅನಿಶ್ಚತತೆ. ಕೊರೊನಾ ಕಾರಣದಿಂದ ಪಿಯುಸಿ ಮತ್ತು ಎಸ್ಎಸ್ಎಲ್ಸಿ ಪರೀಕ್ಷೆಗಳು ನಡೆಯುವುದೇ ಒಂದು ದೊಡ್ಡ ಸವಾಲಾಗಿದೆ. ನಡೆದರೂ ಆಫ್ಲೈನ್ ಅಥವಾ ಆನ್ಲೈನ್, ಎಂಬುದೂ ಗೊಂದಲವಿದೆ. ಪರೀಕ್ಷೆ ಯಾವ ರೀತಿ ನಡೆಯಬೇಕು ಅನ್ನೂದರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಖಾಸಗಿ ಸೇರಿದಂತೆ ಹಲವು ಕಾಲೇಜುಗಳು ಈಗಾಗಲೇ ಆನ್ಲೈನ್ ಮೂಲಕವೇ ಸಿಲೇಬಸ್ ಮುಗಿಸಿವೆ. ವಿದ್ಯಾರ್ಥಿಗಳ ಕೂಡ ಈ ಒಂದು ವ್ಯವಸ್ಥೆಗೆ ಅಡ್ಜಸ್ಟ್ ಆಗಿ ಪಾಠ ಕಲಿತಿದ್ದಾರೆ. ಆದರೆ ಪರೀಕ್ಷೆಯ ಮಾದರಿ ಆನ್ಲೈನ್ ಆದರೆ ಹೇಗೆ ಎದುರಿಸುವುದು ಎನ್ನುವ ಆತಂಕವೂ ಅವರಲ್ಲಿದೆ. ಸಮಾನ್ಯವಾಗಿ ವಿಧ್ಯಾರ್ಥಿಗಳು ಪರೀಕ್ಷಾ ಪಧ್ಧತಿ ಮೇರೆಗೆ ಸಿದ್ಧತೆ ಮಾಡಿಕೊಳ್ಳುತ್ತಾರೆ. ಆದರೆ ಕೋವಿಡ್ ಎರಡನೇ ಅಲೆಯ ಹಿನ್ನಲೆಯಲ್ಲಿ ಯಾವುದನ್ನೂ ಹೆಳುವುದು ಕಷ್ಟವಾಗಿದೆ.
ಇದೆಲ್ಲದರ ಮಧ್ಯೆ ಪರೀಕ್ಷೆ ನಡೆಯುವುದಾದರೂ ಎಂದು? ವೇಳಾಪಟ್ಟಿಯೇ ನಿಗದಿಯಾಗದ ಕಾರಣ ವಿದ್ಯಾರ್ಥಿಗಳಲ್ಲಿ ಒಂದ ತರಹ ಎದುಗುದಿ, ಆತಂಕ ಸೃಷ್ಟಿಸಿದೆ. ಪಿಯುಸಿ ಎಂದಾಕ್ಷಣ ಜೀವನದ ಪ್ರಮುಖ ಘಟ್ಟ ಭವಿಷ್ಯ ರೂಪಿಸುವ ಹಂತ. ಸಹಜವಾಗಿಯೇ ಪಾಲಕರ ಮತ್ತು ಶಿಕ್ಷಕರ ನಿರೀಕ್ಷೆ ಭಾರ ವಿದ್ಯಾರ್ಥಿಗಳ ಮೇಲೆ ಇದ್ದೇ ಇರುತ್ತದೆ. ಎಂಜನಿಯರಿಂಗ್, ಮೆಡಿಕಲ್ ಅಥವಾ ಇನ್ನ್ಯಾವುದೇ ವೃತ್ತಿಪರ ಕೋರ್ಸ್ ಗಳನ್ನು ಕಲಿಯಲು ಪಿಯುಸಿ ನಿರ್ಣಾಯಕ. ಇಲ್ಲಿನ ಸಾಧನೆಯೇ ಮುಂದಿನದಕ್ಕೆ ರಹದಾರಿ. ಹೀಗಾಗಿ ಉತ್ತಮ ಫಲಿತಾಂಶದ ನಿರೀಕ್ಷೆ ವಿದ್ಯಾರ್ಥಿ ಸೇರಿದಂತೆ ಎಲ್ಲರದ್ದಾಗಿರುತ್ತದೆ. ಇಂತಹದರಲ್ಲಿ ಅನಿಶ್ಚಿತತೆ ಎದುರಾದಾಗ ವಿದ್ಯಾರ್ಥಿಗಳು ಮಾನಸಿಕ ಆತಂಕ ಅಥವಾ ಖಿನ್ನತೆಗೆ ಒಳಗಾಗುವುದು, ಭಯ ಬೀಳುವುದು ಸಹಜ. ಆದರೆ ಇದಕ್ಕೆ ಹೆದರುವುದು ಬೇಡ. ಇದು ಸಹಜ. ಎಂತಹ ಜಾಣ ವಿದ್ಯಾರ್ಥಿಯಾದರೂ ಇಂತಹ ಸ್ಥಿತಿ ಎದುರಾದಾಗ ಗೊಂದಲ ಮಾಮೂಲು. ಆದರೆ ಇದಕ್ಕೆ ಪರಿಹಾರವಿದೆ. ಪಾಲಕರಾದವರು ಮತ್ತು ಶಿಕ್ಷಕರು ವಿದ್ಯಾರ್ಥಿಗಳ ಮನಸ್ಥಿತಿ ಹಾಗೂ ಸಾಮರ್ಥ್ಯ ಅರ್ಥ ಮಾಡಿಕೊಳ್ಳಬೇಕು. ಅವರಲ್ಲಿನ ಮಾನಸಿಕ ತುಮುಲಗಳನ್ನು ಅರಿಯುವ ಯತ್ನ ಮಾಡಬೇಕು. ಇದ್ದಕ್ಕಿದ್ದ ಹಾಗೆ ಮಕ್ಕಳು ಅದೇಕೆ ಭಯ ಪಡುತ್ತಿದ್ದಾರೆ? ಇಷ್ಟು ದಿನ ಎಲ್ಲ ಪರೀಕ್ಷೆಗಳನ್ನು ಸಮರ್ಥವಾಗಿ ಬರೆದಿರುವ ಇವರ ಇಂದಿನ ಈ ಮನಸ್ಥಿತಿಗೆ ಕಾರಣವೇನು? ಎಂಬುದರ ಬಗ್ಗೆ ವಿಸ್ತೃತ ಆಲೋಚನೆ ಮಾಡಬೇಕು. ದಿಢೀರ್ನೆ ಅವರನ್ನು ಬೈಯ್ಯುವುದಲ್ಲ. ಅಥವಾ ನೀನು ಹೀಗೆ ಓದದೇ ಕುಳಿತರೆ ಎಂಜನಿಯರಿಂಗ್ ಅಥವಾ ಮೆಡಿಕಲ್ ಸಿಗುವುದು ಅಷ್ಟೇ ಎಂಬು ಮೂದಲಿಸುವುದು ಬೇಡ. ಅವರ ಮನಸ್ಥಿತಿಗೆ ಏನು ಮಾಡಬಹುದು? ಅದಕ್ಕೆ ಪರಿಹಾರವೇನಾದರೂ ಇದೆಯಾ ಎಂಬುದರ ಬಗ್ಗೆ ಆಲೋಚಿಸಬೇಕು. ಸಾಮಾನ್ಯವಾಗಿ ಮಕ್ಕಳ ಜೊತೆಗೆ ಸಮಯವನ್ನು ಕಳೆದು ಅವರ ಮನಸ್ಥಿತಿಯನ್ನು ಅರ್ಥೈಸಿಕೊಳ್ಳಲು ಯತ್ನಿಸಿದಾಗ ಅವರ ಮನಸ್ಸಿನಲ್ಲಿರೋ ಸಮಸ್ಯಗಳು ನಮಗೆ ಅರ್ಥವಗುತ್ತವೆ. ಅವಶ್ಯಕತೆ ಬಿದ್ದಲ್ಲಿ ಹತ್ತಿರದ ಆಪ್ತಸಲಹೆಗಾರರು ಅಥವಾ ಮನೋವೈದ್ಯರನ್ನು ಸಂಪರ್ಕಿಸಬೇಕು. ಅದಕ್ಕೆ ಅವರು ಸೂಕ್ತ ಪರಿಹಾರ ಸೂಚಿಸುವರು. ಇದು ನಿರ್ಲಕ್ಷ್ಯ ಮಾಡುವ ಸಂಗತಿಯಲ್ಲ. ಮನೋವೈದ್ಯರ ಬಳಿ ಹೋದರೆ ಎಲ್ಲಿ ಜನ ಮಗನಿಗೆ ಹುಚ್ಚು ಹಿಡಿದಿದೆ ಎಂದುಕೊಳ್ಳುತ್ತಾರೆ ಎಂದುಕೊಳ್ಳಬೇಡಿ. ಇದು ಮನಸ್ಸಿಗೆ ಸಂಬಂಧಿತ ವಿಷಯ. ಅಷ್ಟೇ ಸೂಕ್ಷ್ಮವಾದುದು. ಕೆಲವು ಮಕ್ಕಳು ಪಾಲಕರ ಹತ್ತಿರ ಹೇಳಿಕೊಳ್ಳಲಾಗದೇ ಒಳಗೊಳಗೆ ಕೊರಗುವುದು ಅಥವಾ ಗೊಂದಲಕ್ಕೆ ಒಳಗಗಿದ್ದನ್ನು ನಾವು ನೋಡಿದ್ದೇವೆ. ಇದು ಸ್ವಲ್ಪ ಸಮಾಧಾನದಿಂದ ಎಲ್ಲರೂ ಕುಳಿತು ಪರಿಸ್ಥಿತಿಯ ಅನಿವಾರ್ಯತೆ ಅರಿತು ಚರ್ಚಿಸಿ ಸಾಗಬೇಕಾದ ವಿಷಯ.
ಏನು ಮಾಡಬೇಕು?
ಪಾಲಕರು ಮತ್ತು ಶಿಕ್ಷಕರು ಈ ತರಹದ ಗೊಂದಲಕ್ಕೆ ಒಳಗಾದ ವಿದ್ಯಾರ್ಥಿಗಳ ಚಲನವಲನ ಗಮನಿಸಿ. ಅವರ ವರ್ತನೆಯಲ್ಲಿ ಏನಾದರೂ ಬದಲಾವಣೆಗಳನ್ನು ಕಂಡರೆ, ಅವರ ಮನಸ್ಥಿತಿ ಅರ್ಥ ಮಾಡಿಕೊಳ್ಳಿ. ಸುಮ್ಮನೇ ಕೂಡುವುದು, ಸಿಟ್ಟು ಮಾಡುವುದು, ಅಳುವುದು, ಊಟ ನಿದ್ದೆ ಬಿಡುವುದು ಅಥವಾ ಜೀವನವೇ ಬೇಸರ ಎಂದು ಯಾರಾದರೂ ಹೇಳಿದರೆ ಅದನ್ನು ನಿರ್ಲಕ್ಷಿಸದಿರಿ. ಆತನ ಹತ್ತಿರ ಪ್ರೀತಿಯಿಂದ ಮಾತನಾಡಿ. ಧೈರ್ಯ ತುಂಬಿ. ಏನೂ ಆಗುವುದಿಲ್ಲ. ನೀನು ಸಮರ್ಥನಿದ್ದಿಯಾ ಮತ್ತು ನಾವು ನಿನ್ನ ಜೊತೆಗಿದ್ದೇವೆ ಎಂದು ಮನವರಿಕೆ ಮಾಡಿಕೊಡಿ. ತಡಮಾಡದೇ ಮನೋವೈದ್ಯರ ಬಳಿ ಕರೆದುಕೊಂಡು ಹೋಗಿ. ಅವರ ಸಲಹೆ ಸೂಚನೆಗಳನ್ನು ಪಾಲಿಸಿ.
“Wish you best of luck And Do your best”
✍️ ಡಾ. ಆದಿತ್ಯ ಪಾಂಡುರಂಗಿ, ಎಂಡಿ
ಮನೋವೈದ್ಯರು, ಧಾರವಾಡ.
ಜೀವನವೇ ಬೇಸರ ಎಂದು ಯಾರಾದರೂ ಹೇಳಿದರೆ ಅದನ್ನು ನಿರ್ಲಕ್ಷಿಸದಿರಿ. ಆತನ ಹತ್ತಿರ ಪ್ರೀತಿಯಿಂದ ಮಾತನಾಡಿ. ಧೈರ್ಯ ತುಂಬಿ. ಏನೂ ಆಗುವುದಿಲ್ಲ. ನೀನು ಸಮರ್ಥನಿದ್ದಿಯಾ ಮತ್ತು ನಾವು ನಿನ್ನ ಜೊತೆಗಿದ್ದೇವೆ ಎಂದು ಮನವರಿಕೆ ಮಾಡಿಕೊಡಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.