ಭಾರತೀಯ ಮಹಿಳೆಯರ ಸಾಹಸ ಮತ್ತು ಶೌರ್ಯದ ಅನೇಕ ಉದಾಹರಣೆಗಳು ನಮಗೆ ಇತಿಹಾಸದ ಉದ್ದಕ್ಕೂ ಕಾಣಸಿಗುತ್ತವೆ. ಸ್ವಭಾವತಃ ಸಿಖ್ಖರು ಸಾಹಸ ಮತ್ತು ಧೈರ್ಯಕ್ಕೆ ಹೆಸರುವಾಸಿಗಳು. ಭಾರತೀಯ ಸೈನ್ಯದಲ್ಲಿ ಅತೀ ಹೆಚ್ಚಿನ ಸೈನಿಕರು ಪಂಜಾಬ್ ರಾಜ್ಯದವರು ಎಂಬುದು ಅವಗಣಿಸಲ್ಪಡುವ ವಿಷಯವೇ ಅಲ್ಲ. ಇಂದಿಗೂ ಸೈನ್ಯದಲ್ಲಿ ಸಿಖ್ ರೆಜಿಮೆಂಟ್ ಮತ್ತು ಪಂಜಾಬ್ ರೆಜಿಮೆಂಟ್ ಗಳಿವೆ. ಇಂದಿಗೂ ಭಾರತ ಸೈನ್ಯದ ಆಯಕಟ್ಟಿನ ಅಧಿಕಾರಿಗಳಾಗಿ ಕಡಿಮೆಯೆಂದರೆ 5 ರಿಂದ 10% ಸಿಖ್ಖರಿದ್ದಾರೆ. ಪಂಚ ನದಿಗಳ ನಾಡಾದ ಪಂಜಾಬ್ ತನ್ನ ಗಡಿಯನ್ನು ಪಾಕಿಸ್ತಾನದೊಂದಿಗೆ ಹಂಚಿಕೊಂಡಿರುವುದು ಬಹುಷಃ ಅವರ ದುರ್ದೈವ. ಹಲವಾರು ವರ್ಷಗಳಿಂದಲೂ ಭಾರತದ ಮೇಲೆ ದಾಳಿ ನಡೆಸುವ ಯಾರೇ ಆದರೂ ಪಂಜಾಬವನ್ನು ಖಂಡಿತಾ ಆಕ್ರಮಿಸುತ್ತಿದ್ದರು. ಬಹುಷಃ ತಮ್ಮ ಮೇಲಾಗುತ್ತಿದ್ದ ಆಕ್ರಮಣಗಳಿಂದಾಗಿ ಸಿಖ್ಖರು ಧೈರ್ಯ ಮತ್ತು ಸಾಹಸಗಳನ್ನೇ ಮೈಗೂಡಿಸಿಕೊಂಡು ಬೆಳೆದರು.ಮೊಘಲರು ಅತೀ ಹೆಚ್ಚು ಬಾರಿ ಆಕ್ರಮಿಸಿದ್ದು ಪಾಂಜಾಬ್ ನ ಮೇಲೆಯೇ. ಪ್ರತೀಬಾರಿ ಆಕ್ರಮಣವಾದಾಗಲೂ ಎದೆ ಎತ್ತಿ ಹೋರಾಡಿ ಮೊಘಲರನ್ನು ಹಿಮ್ಮೆಟ್ಟಿಸಿದ ಶ್ರೇಯವೂ ಕೂಡ ಇವರಿಗೆ ಸಲ್ಲಬೇಕು.
ಹೀಗೆ ಶೌರ್ಯ ಸಾಹಸಕ್ಕೆ ಹೆಸರಾದ ಪಂಜಾಬ್ ನ ಮೊದಲ ಮಹಿಳಾ ಯೋಧೆಯೇ ಮಾತಾ ಭಾಗ್ ಕೌರ್.(ಮೈ ಭಾಗೋ ಜಿ). ಕಳೆದ ೩೦೦ ವಷಗಳಿಂದಲೂ ಸಂತ ಯೋಧೆ ಎಂದು ಸಿಖ್ಖರಿಂದ ಕರೆಸಿಕೊಳ್ಳುವ ಅಪರೂಪದ ಸೇನಾನಿ ಈಕೆ. 1705 ರ ಡಿಸೆಂಬರ್ 29 ರಂದು ನಡೆದ ಪ್ರಸಿದ್ಧ ಮುಕಾತ್ಸರ್ ಕದನದಲ್ಲಿ ಮೊಘಲರ ವಿರುದ್ಧ 40 ಸಿಖ್ಖ್ ಯೋಧರನ್ನು ಧೈರ್ಯದಿನ ಮುನ್ನಡೆಸಿದ್ದರು ಮಾತಾ ಭಾಗ್ ಕೌರ್. ಬಾಲ್ಯದಿಂದಲೇ ಈಕೆಯ ತಂದೆ ಈಕೆಯನ್ನು ಪುರುಷರಿಗೆ ಸಮಾನವಾಗಿ ಯುದ್ಧವಿದ್ಯೆಯಲ್ಲಿ ತರಬೇತು ನೀಡಿ ಬೆಳೆಸಿದ್ದರು. ಪಂಜಾಬ್ ನ ಇಂದಿನ ತಾರ್ನ್ ತರಂ ಜಿಲ್ಲೆಯಲ್ಲಿ ಸಿಖ್ ಧರ್ಮನಿಷ್ಠ ಮತ್ತು ಗುರು ಹರಗೋಬಿಂದರ ಸೈನ್ಯದ ಮಾಲೋಷ ಅವರ ಪುತ್ರಿಯಾಗಿ ಜನಿಸಿದ್ದ ಭಾಗ್ ಕೌರ್ ಮುಂದೆ ನಿಧನ್ ಸಿಂಗ್ ಅವರನ್ನು ವಿವಾಹವಾದರು. ಇವರ ಅಜ್ಜ ಭಾಯ್ ಪೆರೋ ಷಾ ಅವರು ೫ ನೇ ಗುರುಗಳಾದ ಗುರು ಅರ್ಜುನ್ ದೇವ್ ಸಿಂಗ್ ರ ಕಾಲದಲ್ಲಿ ಸಿಖ್ ಧರ್ಮ ಸ್ವೀಕರಿಸಿದ್ದ ೮೪ ಗ್ರಾಮಗಳ ಮುಖ್ಯಸ್ಥರಾಗಿದ್ದರು.
ಮೊದಲಿನಿಂದಲೂ ಪರಧರ್ಮದ ಬಗ್ಗೆ ಅಸಹಿಷ್ಣುಗಳಾದ ಮೊಘಲರಿಗೆ ಗುರು ಹರಗೋಬಿಂದ ಸಿಂಗ್ ರನ್ನು ಬಂಧಿಸಲೇ ಬೇಕೆಂಬ ಹಠವಿತ್ತು. ಹೀಗಾಗಿ ಔರಂಗಜೇಬ್ ನ ಆದೇಶದ ಮೇರೆಗೆ ವಜೀರ್ ಖಾನ್ ನೇತೃತ್ವದಲ್ಲಿ ಯುದ್ಧಕ್ಕೆ ಹೊರಟಿದ್ದರು. ಗುರುಗಳ ರಕ್ಷಣೆಗಾಗಿ 40 ಜನ ಖಾಲ್ಸಾ ಯೋಧರು ನೇಮಿಸಲ್ಪಟ್ಟಿದ್ದರು. ಖಾಲ್ಸಾ ಯೋಧರು ಸಿಖ್ಖರ ಒಂದು ಪಂಗಡವಾಗಿದ್ದು ,ಇವರು ಹಲವು ಕಠಿಣ ನಿಯಮಗಳನ್ನು ಪಾಲಿಸಬೇಕಾಗಿರುತ್ತದೆ. ಒಂದು ಬಾರಿ ಗುರುಗಳು ಮತ್ತು 40 ಯೋಧರಿದ್ದ ಸ್ಥಳವನ್ನು ಮೊಘಲರು ಸುತ್ತುವರೆದು ಯೋಧರಿಗೂ ಗುರುಗಳಿಗೂ ಆಹಾರದ ಅಭಾವವುಂಟಾಗುತ್ತದೆ. ಇಂತಹ ಸಂದರ್ಭದಲ್ಲಿ 40 ಯೋಧರು ಗುರುಗಳಿಗೆ “ ಬೇಡವ ( ಗುರಗಳ ಮೇಲಿನ ನಿಷ್ಠೆಯ ನಿರಾಕರಣೆಯನ್ನು ಲಿಖಿತ ರೂಪದಲ್ಲಿ ನೀಡುವುದು)” ನೀಡಿ ಸ್ವತಃ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಸಲುವಾಗಿ ಊರಿಗೆ ಹಿಂತಿರುಗಿದರು. 1705 ರಲ್ಲಿ ಆನಂದಪುರ್ ಸಾಹಿಬ್ ನಲ್ಲಿದ್ದ ಯುದ್ಧದಂತಹ ಪ್ರತಿಕೂಲ ಸಮಯದಲ್ಲಿ ಸಿಖ್ಖರು ಗುರುಗಳನ್ನು ಏಕಾಂಗಿಯಾಗಿಸಿ ಹಿಂತಿರುಗಿದ್ದಾರೆ ಎಂದು ತಿಳಿದ ಭಾಗ್ ಕೌರ್ ಅತೀವ ದುಃಖಿತಳಾದಳು. ಹಿಂತಿರುಗಿ ಬಂದ ಯೋಧರ ಮನೆಗಳಿಗೆ ತೆರಳಿ ಅವರು ಮಾಡಿರುವ ಕೃತ್ಯವು ನಾಚಿಗೆಗೇಡಿನದ್ದೆಂದು ಖಂಡಿಸಿ ಮನವರಿಕೆ ಮಾಡಿಸಿದಳು. ತಮ್ಮ ಕೃತ್ಯದ ಬಗ್ಗೆ ಪಶ್ಚಾತ್ತಾಪವನ್ನು ವ್ಯಕ್ತಪಡಿಸಿ ಗುರುಗಳನ್ನು ಹುಡುಕಲು ಸನ್ನದ್ದರಾದ ಖಾಲ್ಸಾ ಸೈನಿಕರೊಂದಿಗೆ ಅವರ ಮುಂದಾಳತ್ವವನ್ನು ವಹಿಸಿಕೊಂಡು ತಾನೂ ಅವರೊಂದಿಗೆ ಹೊರಟಳು.
ಆದರೆ ಗುರುಗಳನ್ನು ಭೇಟಿಯಾಗುವುದಕ್ಕೂ ಮುನ್ನವೇ ಅವರು ಖಿದ್ರಾನಾ ಎಂಬ ಜಲಾಶಯದ ಬಳಿಯಲ್ಲಿ ವಿರಮಿಸಬೇಕಾಯಿತು. ಏಕೆಂದರೆ ಗುರುಗಳನ್ನು ಬಂಧಿಸಲು ಹೊಂಚು ಹಾಕುತ್ತಿದ್ದ ಮೊಘಲರು ಆ ಪ್ರದೇಶವನ್ನು ಸುತ್ತುವರಿದಿದ್ದರು. ಈ ಸಮಯದಲ್ಲಿ ಸರೋವರದ ಬಳಿಯಲ್ಲಿ ಡೇರೆಗಳನ್ನು ನಿರ್ಮಿಸಿ ಸಿಖ್ ಯೋಧರು ಪೊದೆಗಳ ಹಿಂದೆ ಅಡಗಿ ಕುಳಿತರು. ಹತ್ತು ಸಾವಿರದ ಸಂಖ್ಯೆಯಲ್ಲಿದ್ದ ಮೊಘಲರನ್ನು ಎದುರಿಸಲು ಭಾಗ್ ಕೌರ್ ನೇತೃತ್ವದ 40 ಜನರ ಸೈನ್ಯವು ಯಾವುದೇ ಭಯವಿಲ್ಲದೆ ಸಿದ್ಧವಾಗಿತ್ತು. ನೀರು ಕುಡಿಯಲು ಸರೋವರದ ಬಳಿಗೆ ಬಂದ ಮೊಘಲ್ ಸೈನಿಕರನ್ನು ಮರೆಯಿಂದಲೇ ಘಾಸಿಗೊಳಿಸಿದಾಗ ನೀರಿನ ಅಭಾವದಿಂದಾಗಿ ಮೊಘಲ್ ಸೈನಿಕರು ತತ್ತರಿಸತೊಡಗಿದರು. ಇಂತಹ ಸಮಯದಲ್ಲಿ ಖಾಲ್ಸಾ ಸೈನಿಕರು ವೀರಾವೇಶದಿಂದ ಮೊಘಲರ ಮೇಲೆರಗಿ ಆಕ್ರಮಣವನ್ನು ಪ್ರಾರಂಭಿಸಿತು. ಸ್ವತಃ ಭಾಗ್ ಕೌರ್ ಖಾಲ್ಸಾ ಸಮವಸ್ತ್ರವನ್ನು ಮತ್ತು ತಲೆಯಲ್ಲಿ ಕೇಸ್ಕಿಯನ್ನು ಧರಿಸಿ ಸಿಂಹಿಣಿಯಂತೆ ಮುಂಚೂಣಿಯಲ್ಲಿ ಹೋರಾಡಿದಳು.ಕೊನೆಗೂ ಬೃಹತ್ ಸಂಖ್ಯೆಯಲ್ಲಿದ್ದ ಮೊಘಲ್ ಸೈನಿಕರು ಸೋತು ಹಿಂದೆಸರಿಯಬೇಕಾಯಿತು.
ಹತ್ತಿರದ ಬೆಟ್ಟದಿಂದ ಯುದ್ಧವನ್ನು ವೀಕ್ಷಿಸುತ್ತಿದ್ದ ಗುರುಗಳು ತಾವೂ ಸ್ವತಃ ಬಾಣಗಳನ್ನು ಪ್ರಯೋಗಿಸುತ್ತ ಯುದ್ಧಭೂಮಿಗೆ ಆಗಮಿಸಿದ್ದರು. ಅವಳ ಸಾಹಸವನ್ನು ನೋಡಿದ ಗುರುಗಳು,ಖಾಲ್ಸಾ ಸೈನಿಕರು ನೀಡಿದ್ದ ‘ಬೇಡವಾ’ ವನ್ನು ಹರಿದೆಸೆದು ೪೦ ಜನರನ್ನು ಚಾಲೀಸ್ ಮುಕ್ತೇ ಎಂದು ಆಶೀರ್ವದಿಸಿದರು. ಆದರೆ ಯುದ್ಧದಲ್ಲಿ ಭೀಕರವಾಗಿ ಗಾಯಗೊಂಡಿದ್ದ 40 ಜನ ಖಾಲ್ಸಾ ಯೋಧರೂ ಸಾವನ್ನಪ್ಪಿದ್ದರು. ಯೋಧರನ್ನು ಮುನ್ನಡೆಸಿದ್ದ ಭಾಗ್ ಕೌರ್ ಕೂಡ ಮಾರಣಾಂತಿಕವಾಗಿ ಗಾಯಗೊಂಡಿದ್ದಳು. ಈ ಘಟನೆಯ ಬಳಿಕ ಖಿದ್ರಾನ ಸರೋವರವನ್ನು “ಮುಕ್ತಾರ್” ಅಂದರೆ “ವಿಮೋಚಕರ ಸರೋವರ” ಎಂದು ಕರೆಯಲಾಗುತ್ತದೆ.
ಬಳಿಕ ಚೇತರಿಸಿಕೊಂಡ ಮೈ ಭಾಗೋವನ್ನು ಗ್ರಾಮಕ್ಕೆ ಹಿಂತಿರುಗುವಂತೆ ಹೇಳಿದರಾದರೂ, ಮೈ ಭಾಗೋ ಗುರು ಗೋಬಿಂದ ಸಿಂಗ್ ಜೀ ಯವರೊಂದಿಗೆ ಅವರ ಅಂಗರಕ್ಷಕಳಾಗಿ ಉಳಿದುಕೊಂಡಳು. ಖಾಲ್ಸ ಯೋಧರ ಸಮವಸ್ತ್ರದೊಂದಿಗೆ ಸೇವೆ ಸಲ್ಲಿಸಿದ ಪ್ರಥಮ ಮಹಿಳೆಯಾಗಿ ಇತಿಹಾಸ ರಚಿಸಿದರು. ೧೭೦೮ ರಲ್ಲಿ ಗುರುಗಳ ಕಾಲಾನಂತರ ಧ್ಯಾನದಲ್ಲೇ ನಿರತರಾದರು. ಕರ್ನಾಟಕದ ಬೀದರ್ ನಿಂದ ಕೆಲವು ಕಿಲೋಮೀಟರ್ಗಳಷ್ಟು ದೂರದಲ್ಲಿರುವ ಜಿನಿವಾರದಲ್ಲಿರುವ ಅವರ ಗುಡಿಸಲನ್ನು ಈಗ “ ಗುರುದ್ವಾರ ಟ್ಯಾಪ್ ಅಸ್ತಾನ್ ಮೈ ಭಾಗೋ ಜಿ” ಆಗಿ ಪರಿವರ್ತಿಸಲಾಗಿದೆ. ಧರ್ಮದ ರಕ್ಷಣೆಗಾಗಿ ಸಿಂಹಿಣಿಯಂತೆ ಪುರುಷ ಯೋಧರಿಗೆ ಸಮವಾಗಿ ಹೋರಾಡಿದ ಈಕೆ ಸಮಸ್ತ ಸಿಖ್ ಮಹಿಳೆಯರಿಗೆ ಆದರ್ಶವಾಗಿ ಇನ್ನೂ ಜನಮಾನಸದಲ್ಲಿ ನೆಲೆಸಿದ್ದಾಳೆ. 10 ಸಾವಿರ ಮೊಘಲರನ್ನು ಸೋಲಿಸಿದ 41 ಜನರ ಸೈನ್ಯವನ್ನು ಇತಿಹಾಸ ಎಂದೂ ಮರೆಯದಿರಲಿ.
✍️ ದೀಪಾ ಜಿ. ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.