ಉತ್ತಮ ವಿಚಾರಗಳು ನಮಗೆ ಗೊತ್ತಿಲ್ಲದೆ ಎಷ್ಟು ಪ್ರಭಾವ ಬೀರಬಹುದು ಎನ್ನುವುದಕ್ಕೆ ಅನೇಕ ಉದಾಹರಣೆಗಳನ್ನು ಇತ್ತೀಚೆಗೆ ನಾವು ನೋಡುತ್ತಿದ್ದೇವೆ. ಅದೇ ರೀತಿ ಪ್ರಧಾನಿ ನರೇಂದ್ರ ಮೋದಿಜಿ ಅವರು ನಡೆಸಿಕೊಡುವ ಮನ್ ಕೀ ಬಾತ್ ಕಾರ್ಯಕ್ರಮ ಸಮಾಜದ ಮೇಲೆ ಅತ್ಯಂತ ಪ್ರಭಾವ ಬೀರುತ್ತಿದೆ.
ಪ್ರಧಾನಿಯಾದ ಬಳಿಕ 2014ರ ಅಕ್ಟೋಬರ್ನಿಂದ ಅವರು ಆರಂಭಿಸಿದ ಮನ್ ಕೀ ಬಾತ್ ಕಾರ್ಯಕ್ರಮ ಜನರನ್ನು ಬೆಸೆಯುವ ನಿಟ್ಟಿನಲ್ಲಿನ ಒಂದು ದೊಡ್ಡ ಕ್ರಮವಾಗಿದೆ. ಪ್ರತಿ ತಿಂಗಳು ಮನ್ ಕೀ ಬಾತ್ ಪ್ರಸಾರಗೊಳ್ಳುವುದಕ್ಕೂ ಮುನ್ನ ಅವರು ಜನರಿಂದ ಸಲಹೆ ಸೂಚನೆಗಳನ್ನು ತೆಗೆದುಕೊಳ್ಳುತ್ತಾರೆ. ಈ ಸಲಹೆ ಸೂಚನೆಗಳು ಅವರ ಮಾತುಗಳಲ್ಲಿ ಪ್ರತಿಫಲನಗೊಳ್ಳುತ್ತದೆ. ಅವರು ನಡೆಸಿದಷ್ಟು ಸಂವಾದ ಕಾರ್ಯಕ್ರಮಗಳನ್ನು ಬೇರೊಬ್ಬ ಜನನಾಯಕ ನಡೆಸಿರಲು ಸಾಧ್ಯವೇ ಇಲ್ಲ. ಅದು ಪರೀಕ್ಷಾ ಪೆ ಚರ್ಚಾ ಇರಬಹುದು, ಶಿಕ್ಷಕರ ದಿನದಂದು ಅವರು ನಡೆಸುವ ಸಂವಾದ ಆಗಿರಬಹುದು, ತಂತ್ರಜ್ಞರೊಂದಿಗಿನ ಅವರ ಸಂವಾದ ಆಗಿರಬಹುದು, ಐಎಎಸ್ ಅಧಿಕಾರಿಗಳೊಂದಿಗಿನ ಅವರ ಸಂವಾದ ಆಗಿರಬಹುದು, ಮನ್ ಕೀ ಬಾತ್ ಆಗಿರಬಹುದು ಅಥವಾ ಅವರ ಯೋಜನೆಗಳ ಫಲಾನುಭವಿಗಳೊಂದಿಗೆ ಅವರು ನಡೆಸುವ ಸಂವಾದವೇ ಆಗಿರಬಹುದು, ಇವೆಲ್ಲವೂ ಪ್ರಜಾಪ್ರಭುತ್ವದ ಆಶಯಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿನ ದೊಡ್ಡ ಹೆಜ್ಜೆಗಳಾಗಿವೆ.
ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯಲ್ಲಿ ನಿಂತು ಅವರು ಮಾಡುವ ಭಾಷಣದಲ್ಲೂ ಜನಸಾಮಾನ್ಯರ ಚಿಂತನೆಗಳು ಪ್ರತಿಫಲನಗೊಳ್ಳುತ್ತವೆ. ಭಾಷಣಕ್ಕೂ ಹಲವು ದಿನಗಳ ಮುಂಚಿತವಾಗಿ ಅವರು ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಭಾಷಣಕ್ಕೆ ಸಲಹೆ ಸೂಚನೆಗಳನ್ನು ನೀಡುವಂತೆ ಜನರಿಗೆ ಮನವಿ ಮಾಡುತ್ತಾರೆ. ಅದರ ಆಧಾರದ ಮೇಲೆಯೇ ಅವರು ಭಾಷಣದಲ್ಲಿ ವಿಷಯಗಳಿಗೆ ಒತ್ತು ನೀಡುತ್ತಾರೆ.
ಅವರ ಹಲವು ನಿರ್ಧಾರ, ಯೋಜನೆಗಳ ಹಿಂದೆಯೂ ಜನಸಾಮಾನ್ಯರ ಕಾಳಜಿಗಳು ಅಭಿವ್ಯಕ್ತಗೊಂಡಿದೆ ಎಂದರೆ ಅದಕ್ಕೆ ಅವರು ಜನಸಾಮಾನ್ಯರೊಂದಿಗೆ ಸಾಧಿಸಿರುವ ಬೆಸುಗೆಯೇ ಕಾರಣ.
ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಆಡಳಿತಗಾರ ಪ್ರಜೆಗಳಿಂದಲೇ ಆಯ್ಕೆಯಾಗಿರುತ್ತಾನೆ. ಆಡಳಿತದಲ್ಲೂ ಪ್ರಜೆಗಳ ಹಿತಾಸಕ್ತಿ ಸರ್ವೋಚ್ಛವಾಗಿರುತ್ತದೆ. ಸರ್ಕಾರದ ಪ್ರತಿ ನಡೆ, ನಿರ್ಧಾರ, ನೀತಿಗಳಲ್ಲಿ ಪ್ರಜೆಗಳನ್ನು ಒಳಪಡಿಸಿಕೊಂಡು ಮುನ್ನಡೆಯುವವನು ಮಾತ್ರ ಉತ್ತಮ ಆಡಳಿತಗಾರನಾಗುತ್ತಾನೆ. ತನ್ನನ್ನು ತಾನು ʼಪ್ರಧಾನ ಸೇವಕʼ ಎಂದು ಕರೆದುಕೊಳ್ಳುವ ಮೋದಿ, ತಮ್ಮ ಕಾರ್ಯದ ಮೂಲಕವು ತಾನೊಬ್ಬ ಪ್ರಧಾನ ಸೇವಕ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಇವರ ತಿಂಗಳ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ನಿಂದ ಅದೆಷ್ಟೋ ಮಂದಿ ಪ್ರೇರಣೆ ಪಡೆದಿದ್ದಾರೆ. ಇನ್ನು ಹಲವರು ಅದೆಷ್ಟೋ ಮಂದಿಗೆ ಪ್ರೇರಣೆಯಾಗುವುದಕ್ಕೂ ಮನ್ ಕಿ ಬಾತ್ ಪ್ರಧಾನ ಭೂಮಿಕೆಯಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಇದಕ್ಕೆ ಒಂದು ಸ್ಪಷ್ಟ ಉದಾಹರಣೆ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ರೈತರೊಬ್ಬರು. ಕುಡಿಯುವ ನೀರು ಹಾಗೂ ರೈತರ ಕೃಷಿ ಚಟುವಟಿಕೆಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲೆಯ ಕುಲ್ಲಂಗಾಲು ನಿವಾಸಿ ಕೆ. ಮಾಧವ ಭಟ್, ತಮ್ಮ ಸ್ವಂತ ಹಣದಲ್ಲಿ ಕೆರೆಯನ್ನು ನಿರ್ಮಿಸಿ, ಪ್ರಶಂಸೆಗೆ ಒಳಗಾಗಿದ್ದಾರೆ. ಮತ್ತೊಂದಷ್ಟು ಜನರಿಗೆ ಪ್ರೇರಣೆಯಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಅಂತರ್ಜಲ ಮಟ್ಟ ಹೆಚ್ಚಳದ ಬಗೆಗೆ ಪ್ರಸ್ತಾಪಿಸಿದ್ದು, ಇದರಿಂದ ಪ್ರೇರಣೆಗೊಂಡ ಮಾಧವ ಭಟ್, 50 ಲಕ್ಷ ರೂಪಾಯಿ ವೆಚ್ಚದಲ್ಲಿ ವ್ಯವಸ್ಥಿತವಾಗಿ ಕೆರೆ ನಿರ್ಮಿಸಿದ್ದಾರೆ. ಈ ಕೆರೆ 1 ಕೋಟಿ 75 ಲಕ್ಷ ಲೀಟರ್ ನೀರಿನ ಸಾಮರ್ಥ್ಯ ಹೊಂದಿದೆ.
ಸುಮಾರು ಎರಡೂವರೆ ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಈ ಕೆರೆಯ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದು, ಮಳೆಗಾಲದಲ್ಲಿ ಕೆರೆಯಲ್ಲಿ ನೀರು ಶೇಖರಣೆಗೊಂಡು ಸುತ್ತಮುತ್ತಲಿನ ರೈತರು, ಜಾನುವಾರುಗಳಿಗೆ ಹಾಗೂ ಪ್ರಾಣಿ-ಪಕ್ಷಿಗಳಿಗೆ ಸಹಕಾರಿಯಾಗಲಿದೆ.
ಮಾಧವ ಭಟ್ ಅವರು ಹೇಳುವ ಪ್ರಕಾರ ಕೆರೆ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದು, ಮಳೆಗಾಲದಲ್ಲಿ ಕೆರೆಯಲ್ಲಿ ನೀರು ಶೇಖರಣೆಯಾಗುವುದರಿಂದ ಸುತ್ತಮುತ್ತಲಿನ ಬಾವಿಗಳಲ್ಲಿ ಅಂತರ್ಜಲ ಪ್ರಮಾಣ ಏರಿಕೆಯಾಗಲಿದೆ. ಅಲ್ಲದೆ ಬೇಸಿಗೆ ಕಾಲದಲ್ಲಿ ಪ್ರಾಣಿ, ಪಕ್ಷಿಗಳಿಗೆ ನೀರಿನ ಮೂಲವೂ ದೊರೆತಂತಾಗುತ್ತದೆ ಎನ್ನುವ ಆಶಯವನ್ನು ಅತ್ಯಂತ ಖುಷಿಯಿಂದ ಹಂಚಿಕೊಳ್ಳುತ್ತಾರೆ.
ನೀರು ಜೀವಜಗತ್ತಿನ ಪ್ರಮುಖ ಅಗತ್ಯಗಳಲ್ಲಿ ಒಂದು. ಮುಂದೊಮ್ಮೆ ಮೂರನೇ ಮಹಾಯುದ್ಧ ನಡೆದರೆ ಅದು ನೀರಿಗಾಗಿಯೇ ಎಂದು ತಿಳಿದವರು ಹೇಳುತ್ತಾರೆ. ಹೌದು ನೀರು ಕಡಿಮೆಯಾಗುತ್ತಿದೆ. ನೀರಿಗಾಗಿ ಹಾಹಾಕಾರ ಎದ್ದಿರುವುದನ್ನು ನಾವು ಇಂದಿಗೂ ಪ್ರಪಂಚದ ಹಲವು ಭಾಗಗಳಲ್ಲಿ, ಭಾರತದಲ್ಲಿಯೂ ಕಾಣಬಹುದಾಗಿದೆ. ಇಂತಹ ತುರ್ತು ಸ್ಥಿತಿಯಲ್ಲಿ ನೀರಿನ ಉಳಿಕೆ, ಅಂತರ್ಜಲ ವೃದ್ಧಿಯ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾದ ಅಗತ್ಯ ಮತ್ತು ಅನಿವಾರ್ಯತೆ ಎರಡೂ ಇದೆ. ಇಂತಹ ಸಂದರ್ಭದಲ್ಲಿ ಮಾಧವ ಭಟ್ ಅವರ ಈ ಕಾರ್ಯ ಶ್ಲಾಘನೀಯವೂ ಹೌದು. ಜೊತೆಗೆ ಮಾದರಿಯೂ ಹೌದು ಎಂಬುದರಲ್ಲಿ ಎರಡು ಮಾತಿಲ್ಲ. ಅವರಿಂದ ಪ್ರೇರಿತರಾಗಿ ನಾವು ಸಹ ನೀರನ್ನು ಉಳಿಸುವ ನಿಟ್ಟಿನಲ್ಲಿ ಮತ್ತಷ್ಟು ಪ್ರಯತ್ನ ನಡೆಸಿದಲ್ಲಿ ಮುಂದೆ ಎದುರಾಗುವ ನೀರಿನ ಸಮಸ್ಯೆಯಿಂದ ಮುಕ್ತಿ ಹೊಂದುವುದು ಸಹ ಸಾಧ್ಯ. ಇದು ಸುಳ್ಳಲ್ಲ.
ಒಂದು ವಿಚಾರ, ಒಂದೊಳ್ಳೆ ಯೋಚನೆ ಹೇಗೆಲ್ಲಾ ಪ್ರಯೋಜನಕ್ಕೆ ಬರುತ್ತದೆ, ಪ್ರೇರಣೆಯಾಗುತ್ತದೆ ಎಂಬುದಕ್ಕೆ ಜ್ವಲಂತ ಸಾಕ್ಷಿಯಾಗಿದ್ದಾರೆ ಮಾಧವ ಭಟ್ ಅವರು. ಇನ್ನು ಪ್ರಧಾನಿ ಮೋದಿ ಅವರ ಮನ್ ಕಿ ಬಾತ್ ಆಶಯ ಸಹ ಎಲ್ಲೋ ಒಂದು ಕಡೆಯಲ್ಲಿ ಫಲ ಪಡೆಯುತ್ತಿವೆ ಎಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲವೇನೋ. ‘ಕೆರೆಯ ನೀರನು ಕೆರೆಗೆ ಚೆಲ್ಲಿ ‘ಎಂಬಂತೆ ಮೋದಿ ಅವರು ಉತ್ತಮ ವಿಚಾರಗಳನ್ನು ಸಮಾಜದಿಂದ ಹೆಕ್ಕಿ ಮತ್ತೆ ಸಮಾಜಕ್ಕೆ ಚೆಲ್ಲುವ ಕೆಲಸದಲ್ಲಿ ಯಶಸ್ಸು ಪಡೆದಿದ್ದಾರೆ ಎಂಬುದಕ್ಕೆ ಇಂತಹ ಹಲವು ಉದಾಹರಣೆಗಳು ದೇಶದೆಲ್ಲೆಡೆ ನಮಗೆ ಸಿಗುತ್ತವೆ.
ಪ್ರಸ್ತುತ ಸಮಾಜ ಹೇಗಿದೆ ಎಂದರೆ ನಮಗೆ ಬೇಕಾದ ಮೂಲಭೂತ ಅವಶ್ಯಕತೆಗಳನ್ನು ಸರ್ಕಾರ ಒದಗಿಸಬೇಕು. ನಾವೇಕೆ ಮಾಡಬೇಕು ಎಂದು ಉದಾಸೀನ ತೋರುವವರೇ ಹೆಚ್ಚು ಕಾಣಸಿಗುತ್ತಾರೆ. ಆದರೆ ಪ್ರಧಾನಿ ಮೋದಿ ಅವರು ನೀಡಿದ ಒಂದು ಅಶರೀರವಾಣಿಯಿಂದ ಪ್ರೇರಣೆ ಪಡೆದ ಹಲವರು ಸಮಾಜಕ್ಕೆ ಬೇಕಾಗುವ, ಇತರರಿಗೆ ಮಾದರಿಯಾಗುವ ಕಾರ್ಯ ನಡೆಸುತ್ತಿದ್ದಾರೆ. ಯಾವ ಪ್ರಚಾರದ ಆಸೆಯೂ ಇಲ್ಲದೆ ನಿಸ್ವಾರ್ಥವಾಗಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ನಾವು ಸರ್ಕಾರಕ್ಕೆ ತೆರಿಗೆ ಪಾವತಿಸುತ್ತೇವೆ. ನಮಗೆ ಬೇಕಾದ್ದೆಲ್ಲವನ್ನೂ ಸರ್ಕಾರವೇ ಕೊಡಲಿ ಎಂಬ ಧೋರಣೆ ಹಲವರ ನಡುವೆ, ನಮ್ಮ ಕೈಲಾದದ್ದನ್ನು ನಾವೇ ಏಕೆ ಮಾಡಬಾರದು ಎಂದು ಸಾಧಿಸಿ ತೋರಿಸಿದವರಲ್ಲಿ ಒಬ್ಬರಾಗಿ, ನಮ್ಮೆಲ್ಲರಿಗೂ ಆದರ್ಶರಾಗಿದ್ದಾರೆ ಮಾಧವ ಭಟ್.
ಹೌದು ನಮ್ಮ ನಡುವಿನ ಮಾಧವ ಭಟ್ ಮನ್ ಕಿ ಬಾತ್ ನಿಂದ ಪ್ರೇರಣೆ ಪಡೆದು ಮತ್ತೆ ಮನ್ ಕಿ ಬಾತ್ ನಲ್ಲಿ ಸ್ಥಾನ ಪಡೆದಿದ್ದಾರೆ. ನಮ್ಮಲ್ಲಿ ಅದೆಷ್ಟೋ ದೃಶ್ಯ ಮಾಧ್ಯಮಗಳು, ಪತ್ರಿಕೆಗಳಿವೆ. ಇವುಗಳೂ ಸಹ ಸಮಾಜದಲ್ಲಿನ ಇಂತಹ ಉತ್ತಮ ಕೆಲಸಗಳ, ಉತ್ತಮ ಜನರ ಬಗ್ಗೆ ಸಮಾಜಕ್ಕೆ ಹೆಚ್ಚಿನ ಕಾಳಜಿ ವಹಿಸಿ ತಿಳಿಸಿಕೊಡುವ ಪ್ರಯತ್ನ ನಡೆಸಲಿ ಎಂಬ ಆಶಯ ಈ ಲೇಖನದ್ದು. ಅದೆಷ್ಟೋ ಮನ್ ಕಿ ಬಾತ್ಗಳು ಪ್ರಧಾನಿ ಮೋದಿ ಅವರು ನಡೆಸಿಕೊಟ್ಟಿದ್ದಾರೆ. ಅದರಿಂದ ಅದೆಷ್ಟೋ ಜನರು ಪ್ರೇರಣೆ ಪಡೆದಿದ್ದಾರೆ. ಸಮಾಜಕ್ಕಾಗಿ ಏನನ್ನೋ ನೀಡಿದ್ದಾರೆ. ಹೀಗೆಯೇ ಮತ್ತಷ್ಟು ಮನ್ ಕಿ ಬಾತ್ ನಡೆಯಲಿ. ಆ ಮೂಲಕ ಮತ್ತಷ್ಟು ಪ್ರೇರಣೆ, ಮಾದರಿಗಳು ಸೃಜಿಸಲಿ ಎಂಬುದು ದೇಶವಾಸಿಗಳ ಆಶಯ.
✍️ ಸುನೀಲ್ ಕುಲಕರ್ಣಿ, ಮಂಗಳೂರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.