ಬೆಂಗಳೂರು: ಕೊರೋನಾ ಏರಿಕೆಯಾಗುತ್ತಿದ್ದು, ಸೋಂಕಿತರ ಚಿಕಿತ್ಸೆಗೆ ಪೂರಕವಾದ ಲಸಿಕೆ ಕೊರತೆ ಎದ್ದು ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಸಚಿವರ ಜೊತೆಗೆ ಮಹತ್ವದ ಸಭೆ ನಡೆಸಿದ್ದಾರೆ.
ರಾಜ್ಯದಲ್ಲಿ ಎ. 24 ರಿಂದಲೇ ಕೊರೋನಾ ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿತ್ತು. ಆ ಬಳಿಕ ಸದ್ಯ ಕಠಿಣ ಲಾಕ್ಡೌನ್ ನಿಯಮ ಹೇರಲಾಗಿದ್ದು ಕೊರೋನಾ ಸೋಂಕು ನಿಯಂತ್ರಣ ಹಿನ್ನೆಲೆಯಲ್ಲಿ ಇದು ಮಹತ್ವ ಪಡೆದಿದೆ ಎಂದು ಸಿಎಂ ತಿಳಿಸಿದ್ದಾರೆ. ಈ ಸಂಬಂಧ ಸಾರ್ವಜನಿಕರಿಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಈ ಸಭೆ ನಡೆಸಿರುವುದಾಗಿ ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಕಳೆದ ಬಾರಿಗಿಂತ ಈ ಬಾರಿ ಕೊರೋನಾ ಚಿಕಿತ್ಸೆಗೆ ಅಗತ್ಯವಾದ ಹಾಸಿಗೆ, ವೆಂಟಿಲೇಟರ್, ಆಕ್ಸಿಜನ್ ಸೇರಿದಂತೆ ಇನ್ನಿತರ ಎಲ್ಲಾ ಸೌಲಭ್ಯಗಳನ್ನು, ಆಸ್ಪತ್ರೆಗಳನ್ನು ಹೆಚ್ಚಿಸಲಾಗಿದೆ. ಸೋಂಕಿತರಿಗೆ ಅಗತ್ಯ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಈ ಕ್ರಮ ಮಹತ್ವದ್ದಾಗಿದೆ. ಆಸ್ಪತ್ರೆಗಳ ಮೂಲಸೌಕರ್ಯ ಹೆಚ್ಚಿಸುವ ಕೆಲಸ ಮುಂದುವರಿಯುತ್ತಿದೆ ಎಂದು ಅವರು ಹೇಳಿದ್ದಾರೆ. ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ಆರಂಭಿಸಲು ಸರ್ಕಾರ ಸಹಾಯ ಧನ ನೀಡುತ್ತಿದೆ. ಆಮ್ಲಜನಕ ಪೂರೈಕೆಗೂ ಅಗತ್ಯ ಕಾರ್ಯತಂತ್ರ ರೂಪಿಸಲಾಗಿದೆ. ಆ ಮೂಲಕ ಆಮ್ಲಜನಕ ಕೊರತೆ ನೀಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರ ಸಹ ಈ ನಿಟ್ಟಿನಲ್ಲಿ ರಾಜ್ಯದ ಜೊತೆ ಕೈಜೋಡಿಸಿದೆ. ವಿದೇಶಗಳಿಂದ ಸಹ ಆಮ್ಲಜನಕ ಬಂದಿದೆ.
ರಾಜ್ಯದಲ್ಲಿ ರಾಜ್ಯ ಸರ್ಕಾರದ, ಕೇಂದ್ರ ಸರ್ಕಾರ, ಎನ್ಎಚ್ಎಐ ಸೇರಿದಂತೆ ವಿದೇಶಗಳಿಂದ ಸಹ ಆಕ್ಸಿಜನ್ ಘಟಕಗಳನ್ನು ರಾಜ್ಯದಲ್ಲಿ ಆರಂಭಿಸಲಾಗಿದೆ. ಆಕ್ಸಿ ಬಸ್ಗಳಿಗೂ ಚಾಲನೆ ನೀಡಲಾಗಿದೆ. ಜಿಲ್ಲೆಗಳಲ್ಲಿ 10 ಸಾವಿರ ವರೆಗೆ ಆಕ್ಸಿಜನ್ ಸಿಲಿಂಡರ್ ಪಡೆಯಲು ಚಿಂತನೆ ನಡೆದಿದೆ ಎಂದು ಹೇಳಿದ್ದಾರೆ. ಜಿಲ್ಲೆಗಳ ಅಗತ್ಯತೆಗೆ ಅನುಗುಣವಾಗಿ ಆಕ್ಸಿಜನ್ ಹಂಚಿಕೆ ನಡೆದಿದೆ. ಇನ್ನೂ ಹೆಚ್ಚಿನ ನೆರವು ನೀಡಲಾಗುತ್ತದೆ. ಸದ್ಯ 1.10 ಕೋಟಿ ಲಸಿಕೆ ಡೋಸ್ ಗಳನ್ನು 45 ಮೇಲ್ಪಟ್ಟ ಲಸಿಕೆ ವಿತರಣೆ ಮಾಡಿದೆ. 18 – 44 ವರ್ಷದವರಿಗೆ ನೀಡಲು 3 ಕೋಟಿ ಲಸಿಕೆ ಡೋಸ್ ಖರೀದಿಸಿರುವ ರಾಜ್ಯ ಸರ್ಕಾರ, ಈ ಹಿನ್ನೆಲೆಯಲ್ಲಿ ಜಾಗತಿಕ ಟೆಂಡರ್ ಕರೆದಿದೆ ಎಂದು ಮಾಹಿತಿ ನೀಡಿದ್ದಾರೆ. ಸದ್ಯ 18 -44 ವರ್ಷಗಳವರಿಗೆ ಲಸಿಕೆ ವಿತರಣೆ ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ರೆಮ್ಡೆಸಿವಿರ್ ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಇತರ ರಾಜ್ಯಗಳಿಗೆ ಪೂರೈಕೆಯಾಗದ ರೆಮ್ಡೆಸಿವಿರ್ ಗಳನ್ನು ರಾಜ್ಯಕ್ಕೆ ನೀಡಲು ಮನವಿ ಮಾಡಲಾಗಿದೆ. ಜನತೆ ಕೊರೋನಾ ನಿರ್ಬಂಧಗಳನ್ನು ಅನುಸರಿಸಿ ಕೊರೋನಾ ಮುಕ್ತವಾಗಿಸಲು ಸರ್ಕಾರದ ಜೊತೆ ಕೈಜೋಡಿಸುವಂತೆ ಸಿಎಂ ಮನವಿ ಮಾಡಿದ್ದಾರೆ. ಜೊತೆಗೆ ಕೊರೋನಾ ಮೂರನೇ ಅಲೆ ನಿಯಂತ್ರಣಕ್ಕೆ ಕಾರ್ಯಪಡೆ ರಚಿಸಿದೆ ಎಂದೂ ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಡಿಸಿಎಂ ಅಶ್ವತ್ಥ್ ನಾರಾಯಣ , ಸಚಿವ ಡಾ ಕೆ ಸುಧಾಕರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.