ಕೊರೋನಾ ಸೋಂಕು ಇಡೀ ಪ್ರಪಂಚವನ್ನೇ ನಿದ್ದೆಗೆಡಿಸಿದೆ. ಭಾರತದಲ್ಲಿಯೂ ಕೊರೋನಾ ಸೋಂಕಿನ ಹಾವಳಿ ಜನರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಒಂದು ಕಡೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊರೋನಾ ಸೋಂಕು ನಿಯಂತ್ರಣ, ಜನರ ಸುರಕ್ಷತೆಯ ದೃಷ್ಟಿಯಿಂದ ಹಲವಾರು ನಿಯಂತ್ರಣ ಕ್ರಮಗಳನ್ನು ಜಾರಿಗೆ ತರುತ್ತಿದೆ. ಮತ್ತೊಂದು ಕಡೆಯಲ್ಲಿ ಕೊರೋನಾ ಸೋಂಕು ಸೃಷ್ಟಿಯಾಗಲು ಪ್ರಧಾನಿ ನರೇಂದ್ರ ಮೋದಿ ಅವರೇ ಕಾರಣ ಎಂಬಂತೆ ದೂಷಣೆ ಮಾಡುವ ಹೊಲಸು ರಾಜಕೀಯಕ್ಕೆ ಇಳಿದಿದ್ದಾರೆ.
ಮುಖ್ಯವಾಗಿ ಈ ಸಂಕಷ್ಟದ ಸಂದರ್ಭದಲ್ಲಿ ನಾವೆಲ್ಲರೂ ಒಗ್ಗಂಟಿನಿಂದ ಹೋರಾಡಿದರಷ್ಟೇ ಕೊರೋನಾ ಎಂಬ ಮಹಾಮಾರಿಯ ನಿಯಂತ್ರಣ ಸಾಧ್ಯ. ಈ ಅಂಶವನ್ನೇ ಮರೆತಿರುವ ಪ್ರತಿ ಪಕ್ಷಗಳು, ಮೋದಿ ವಿರೋಧಿಗಳು ದೇಶದಲ್ಲಿ ಸೋಂಕು ನಿಯಂತ್ರಣ ಮಾಡುವಲ್ಲಿ ಸರ್ಕಾರ ಎಡವಿದೆ. ಪ್ರಧಾನಿ ಮತ್ತು ಅವರ ಸರ್ಕಾರದ ಅಧಿಕಾರಿಗಳು ಕೊರೋನಾ ಹಬ್ಬಿಸುತ್ತಿದ್ದಾರೆ. ಜನರ ಜೀವನದ ಜೊತೆ ಆಟವಾಡುತ್ತಿದ್ದಾರೆ ಎಂದೆಲ್ಲಾ ಅಬ್ಬರಿಸಿ ಬೊಬ್ಬಿಡುತ್ತಿರುವುದು ವಾಸ್ತವ.
ಇನ್ನೂ ಕೆಲವರು ಕೊರೋನಾ ಸೋಂಕಿಗೆ ಚಿಕಿತ್ಸೆ ನೀಡುವ ವೈದ್ಯರನ್ನು ದೂರುವುದು, ವೈದ್ಯರ ನಿರ್ಲಕ್ಷ್ಯವೇ ಸೋಂಕಿತರ ಸಾವಿಗೆ ಕಾರಣ ಎಂದೆಲ್ಲಾ ಬಿಂಬಿಸುವುದು ಸಹ ನಮ್ಮ ನಡುವೆಯೇ ನಡೆಯುತ್ತಿರುವ ಸತ್ಯಗಳು. ಈ ಎಲ್ಲದರ ನಡುವೆ ಹಾಗೇ ಒಂದು ನೋಟ ಹಾಯಿಸಿದಲ್ಲಿ ನಾವೆಲ್ಲ ಎಲ್ಲಿ ತಪ್ಪುತ್ತಿದ್ದೇವೆ? ನಮ್ಮ ಈ ವಿರೋಧಕ್ಕೂ ಪ್ರಧಾನಿ ಮೋದಿ ಸೇರಿದಂತೆ ಎಲ್ಲಾ ರಾಜ್ಯಗಳಲ್ಲಿ ಆಡಳಿತದಲ್ಲಿರುವ ಸರ್ಕಾರ, ಅಧಿಕಾರಿಗಳು, ವೈದ್ಯಕೀಯ ಸಿಬ್ಬಂದಿಗಳಿಗೂ ಏನಾದರೂ ಸಂಬಂಧವಿದೆಯೇ?, ಯಾರದ್ದೋ ಕೆಲವರ ತಪ್ಪಿಗೆ ಇಡೀ ವ್ಯವಸ್ಥೆಯನ್ನೇ ದೂಷಿಸುವುದು ಸರಿಯೇ? ಎಂಬ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ.
ಹೌದು, ಸೋಂಕಿತರಿಗೆ ಆಕ್ಸಿಜನ್ ಸೌಲಭ್ಯ, ಅಗತ್ಯ ವೈದ್ಯಕೀಯ ಚಿಕಿತ್ಸೆ, ಹಾಸಿಗೆ, ವೆಂಟಿಲೇಟರ್, ರೆಮ್ಡೆಸಿವಿರ್ ಮೊದಲಾದವುಗಳ ಕೊರತೆಯಿಂದ ಹೆಚ್ಚು ಮರಣಗಳು ಸಂಭವಿಸುತ್ತಿವೆ ಎಂಬುದನ್ನು ನಾವು ದಿನನಿತ್ಯ ಕೇಳುತ್ತಿದ್ದೇವೆ. ಆದರೆ ಸೋಂಕಿತರಲ್ಲಿ ಎಷ್ಟು ಮಂದಿ ಆರಂಭಿಕ ಲಕ್ಷಣಗಳು ಗೋಚರವಾದ ತಕ್ಷಣವೇ ವೈದ್ಯಕೀಯ ಸಲಹೆ ಪಡೆದಿದ್ದಾರೆ ಎಂಬುದರ ಬಗೆಗೂ ವೈದ್ಯಕೀಯ ಸಿಬ್ಬಂದಿಗಳನ್ನು ದೂಷಿಸುವ ಮುನ್ನ ನಾವೊಮ್ಮೆ ಅರಿಯಬೇಕು. ಹಾಗೆಯೇ ಇನ್ನಾದರೂ ನಮ್ಮಲ್ಲಿ ಕೊರೋನಾ ಸೋಂಕಿಗೆ ಸಂಬಂಧಿಸಿದಂತೆ ಯಾವುದಾದರೂ ಲಕ್ಷಣಗಳು ಕಂಡುಬಂದಲ್ಲಿ ಯಾವುದೇ ಹಿಂಜರಿಕೆ ಇಲ್ಲದೆ ವೈದ್ಯರನ್ನು ಸಂಪರ್ಕ ಮಾಡುವ, ಕೊರೋನಾ ಮಾದರಿ ಪರೀಕ್ಷೆ ಮಾಡಿಕೊಳ್ಳುವ ಬಗೆಗೂ ಹೆಚ್ಚು ಆಸ್ಥೆ ವಹಿಸಬೇಕು.
ಇನ್ನು ಕೊರೋನಾ ಲಸಿಕೆ ಕೊರತೆಯ ಬಗ್ಗೆ ಮೋದಿ ಅವರನ್ನು ದೂಷಿಸುವ ವಿವೇಕ ರಹಿತರು, ಲಸಿಕೆ ಬಳಕೆಗೆ ಬಂದು ಮೊದಲ ಡೋಸ್ ನೀಡಲಾರಂಭಿಸಿದ ಸಂದರ್ಭದಲ್ಲಿ ಎಷ್ಟು ಪ್ರಮಾಣದಲ್ಲಿ ಲಸಿಕೆಗಳನ್ನು ವ್ಯರ್ಥ ಮಾಡಿದ್ದೇವೆ ಎಂಬುದರ ಬಗೆಗೂ ಒಮ್ಮೆ ಯೋಚಿಸಬೇಕು. ಇದಕ್ಕೆ ಕಾರಣವಾದದ್ದು ಮೋದಿಯನ್ನು ವಿರೋಧಿಸುವ ಭರದಲ್ಲಿ ಲಸಿಕೆಯ ಬಗ್ಗೆಯೂ ಜನರನ್ನು ದಾರಿ ತಪ್ಪಿಸಿದ್ದಲ್ಲದೆ ಮತ್ತೇನು? ಈಗ ಅದೇ ಲಸಿಕೆಗೆ ಮೊದಲು ವಿರೋಧ ವ್ಯಕ್ತಪಡಿಸಿದವರೇ, ಜನರ ದಾರಿ ತಪ್ಪಿಸಿದವರೇ ಸಾಲು ನಿಂತಿದ್ದಾರೆ ಎಂಬುದನ್ನು ನಾವಿಲ್ಲಿ ಮರೆಯುವಂತಿಲ್ಲ.
ಇನ್ನು ಆಕ್ಸಿಜನ್, ವೆಂಟಿಲೇಟರ್ಗಳನ್ನು ನಮಗೆ ಅಗತ್ಯವಿದ್ದ ಪ್ರಮಾಣದಲ್ಲಿ ಸಂಗ್ರಹಿಸಿಡುವ, ತಯಾರಿಸುವ ಕೆಲಸ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈ ಸಾಂಕ್ರಾಮಿಕ ಸಂಕಷ್ಟದ ಅರಿವು ಮೊದಲೇ ಇದ್ದಿದ್ದರೆ ಅಥವಾ ಇಂದು ಗೂಬೆ ಕೂರಿಸುವ ‘ಬುದ್ಧಿವಂತರು’ ಕೆಲ ವರ್ಷಗಳ ಹಿಂದೆಯೇ ಹೀಗೊಂದು ಸ್ಥಿತಿ ಬರುತ್ತದೆ ಎಂದು ಎಚ್ಚರಿಸಿದ್ದರೆ ಮೋದಿ ಅವರು ಅವರ ಈ 7 ವರ್ಷಗಳ ಆಡಳಿತಾವಧಿಯಲ್ಲಿ ಆಕ್ಸಿಜನ್ ಉತ್ಪಾದನೆಗೂ ನೀವು ಹೇಳಿದಂತೆ ಕ್ರಮ ಕೈಗೊಳ್ಳುತ್ತಿದ್ದರೇನೋ. ಈಗ ವೃಥಾ ಗೂಬೆ ಕೂರಿಸಿ ಮಜಾ ತೆಗೆದುಕೊಳ್ಳುವ ನೀವುಗಳು, ಅಂದೇ ಎಚ್ಚರಿಸಿದ್ದರೆ ಹೀಗಾಗುತ್ತಿರಲಿಲ್ಲ ಅಲ್ಲವೇ. ಆದರೆ ಇಂತಹ ಪ್ರತಿಕೂಲ ಸ್ಥಿತಿ ನಿರ್ಮಾಣವಾದ ಬಳಿಕ ಮೋದಿ ಸರ್ಕಾರ ಆಕ್ಸಿಜನ್ ಉತ್ಪಾದನೆ ಸೇರಿದಂತೆ ವೈದ್ಯಕೀಯ ಕ್ಷೇತ್ರದಲ್ಲಿ ದಾಖಲೆಯ ಪ್ರಮಾಣದಲ್ಲಿ ಸುಧಾರಣೆ ಮಾಡಿದೆ. ಇದಕ್ಕೆ ಸಾಕ್ಷಿ ಮೋದಿ ಶಕೆ ಆರಂಭವಾಗುವ ಹಿಂದಿನ ಸರ್ಕಾರದ 70 ವರ್ಷಗಳ ಆಡಳಿತ ಮತ್ತು ಈಗಿನ ಮೋದಿ ಸರ್ಕಾರದ 7 ವರ್ಷಗಳ ಆಡಳಿತದ ಅಂಕಿಅಂಶಗಳೇ ನುಡಿಯುತ್ತವೆ.
ಇನ್ನು ಕೊರೋನಾ ಲಸಿಕೆಯನ್ನು ವಿದೇಶಗಳಿಗೆ ನೆರವಿನ ರೂಪದಲ್ಲಿ ನೀಡಿದ ಮೋದಿ ಅವರ ನಿಲುವನ್ನು ವಿರೋಧಿಸುವವರಿಗೇನೂ ನಮ್ಮಲ್ಲಿ ಕಡಿಮೆ ಇಲ್ಲ. ಆದರೆ ನಾವಿಲ್ಲಿ ಅರ್ಥ ಮಾಡಿಕೊಳ್ಳಬೇಕಾದ ಒಂದು ವಿಷಯವನ್ನು ಪದೇ ಪದೇ ಮರೆಯುತ್ತಿರುವುದು ದುರಾದೃಷ್ಟ. ಅದೇನೆಂದರೆ ಪ್ರಪಂಚ ನಿಂತಿರುವುದು’ನೀ ನನಗಿದ್ದರೆ, ನಾ ನಿನಗೆ’ ಎಂಬ ಧ್ಯೇಯದಲ್ಲಿ. ಇಲ್ಲಿ ಮೋದಿ ಅವರು ಮಾನವೀಯ ನೆಲೆಯಲ್ಲಿ ಲಸಿಕೆ ಕಳುಹಿಸಿದರು. ನಾವಿದನ್ನು ವೈಜ್ಞಾನಿಕವಾಗಿ, ತಾರ್ಕಿಕವಾಗಿ ಯೋಚಿಸೋಣ. ನಮಗೆ ಲಸಿಕೆ ತಯಾರಿಸಲು ಅಥವಾ ಇತರೇ ವೈದ್ಯಕೀಯ ವಸ್ತು ವಿಷಯಗಳನ್ನು ತಯಾರಿಸಲು ಬೇಕಾದ ಕಚ್ಚಾ ವಸ್ತುಗಳಲ್ಲಿ ಹಲವನ್ನು ನಾವು ಆಮದು ಮಾಡಿಕೊಳ್ಳುವುದು ವಿದೇಶಗಳಿಂದ. ಇಂತಹ ಸಂದರ್ಭದಲ್ಲಿ ನಾವು ಅವರಿಗೆ ಲಸಿಕೆ ನೀಡಿಲ್ಲ ಎಂದಿಟ್ಟುಕೊಳ್ಳಿ, ಮುಂದೆ ನಮ್ಮ ಕಷ್ಟಕಾಲದಲ್ಲಿ ನಮಗವರು ನೆರವು ನೀಡಿಯಾರೇ? ಈ ಬಗೆಗೂ ಒಮ್ಮೆ ಚಿಂತಿಸಬೇಕಲ್ಲವೇ.
ಹಾಗೆಯೇ ಕೆಲವು ಜನಸಾಮಾನ್ಯರಿಗೆ ಅರಿವಾಗದ, ಆದರೆ ರಾಜಕಾರಣಿಗಳಿಗೆ ಚೆನ್ನಾಗಿ ಅರಿವಿಗೆ ಮೂಡುವ ಮತ್ತು ಎಲ್ಲಾ ರಾಜಕೀಯ ನಿಲುವುಗಳ ಬಗ್ಗೆ ಅರಿವಿರುವವರೇ ಈ ನಡೆಯನ್ನು ಪ್ರಶ್ನಿಸುತ್ತಿರುವುದು, ಜೊತೆಗೆ ಜನರ ದಾರಿ ತಪ್ಪಿಸುತ್ತಿರುವುದು ಹಾಸ್ಯಾಸ್ಪದ ಅಲ್ಲದೆ ಮತ್ತಿನ್ನೇನು? ಇನ್ನು ಕೆಲವೊಮ್ಮೆ ದೇಶ ದೇಶಗಳ ನಡುವಿನ ಒಪ್ಪಂದದ ಕಾರಣಗಳಿಗೂ ನಾವು ಮಾನವೀಯತೆಯ ಹೊರತಾದ ನೆಲೆಯಲ್ಲಿಯೂ ನೆರವು ನೀಡಬೇಕಾಗುತ್ತದೆ. ಅದರಲ್ಲೂ ಇಂತಹ ಕೊರೋನಾ ಸಂದರ್ಭದಲ್ಲಿ ಯಾವುದೇ ಒಪ್ಪಂದಗಳು ಇರದೇ ಹೋದರೂ ಭಾರತದ ಮುಖ್ಯ ತತ್ವ ಮಾನವೀಯತೆಯ ನೆಲೆಯಲ್ಲಿ ನೆರವಾಗುವುದು ನಮ್ಮ ಧರ್ಮ. ಅಂದು ನಾವು ಮಾಡಿದ ನೆರವಿಗೆ, ಇಂದು ವಿದೇಶಗಳು ಎರಡನೇ ಅಲೆ ಎದುರಿಸಲು ಪೂರಕವಾದ ಎಲ್ಲಾ ನೆರವನ್ನು ನಮಗೆ ಕಳುಹಿಸಿಕೊಡುತ್ತಿದೆ ಎಂಬುದನ್ನು ಮರೆಯಬಾರದು. ಇದು ಮೋದಿ ಅವರ ಪರಸ್ಪರತಾ ಮನೋಭಾವ, ಎಲ್ಲರೂ ನಮ್ಮವರೆಂಬ ಭಾವನೆಯ ಸಂಕೇತವಲ್ಲದೆ ಬೇರಿನ್ನೇನು? ಹೇಳಿ.
ಸೋಂಕು ನಿಯಂತ್ರಣಕ್ಕೆ ಸರ್ಕಾರ ಸಾವಿ ಸಾವಿರ ನಿಯಂತ್ರಣ ಕ್ರಮಗಳನ್ನು ಜಾರಿಗೆ ತಂದರೂ ಅದನ್ನು ಮೀರುವವರಿಗೇನೂ ನಮ್ಮಲ್ಲಿ ಕಡಿಮೆಯಿಲ್ಲ. ಇಂತಹ ನಮ್ಮ ನಡವಳಿಕೆಗಳೇ ಸೋಂಕು ಹೆಚ್ಚಲು ಒಂದು ಮುಖ್ಯ ಕಾರಣವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು, ಶುಚಿತ್ವದತ್ತ ಗಮನ ಹರಿಸಿದಲ್ಲಿ ಕೊರೋನಾ ನಿಯಂತ್ರಣಕ್ಕೆ ಬೇರೆ ಮದ್ದಿಲ್ಲ. ಹಾಗಾಗಿ ಕೇವಲ ವಿರೋಧಿಸುವುದರಲ್ಲೇ ಕಾಲಕಳೆಯುವ ಬದಲು, ಸೋಂಕು ನಿಯಂತ್ರಣಕ್ಕೆ ನಾವೇನು ಕೊಡುಗೆ ನೀಡಬಹುದು ಎಂಬುದರ ಬಗ್ಗೆ ಗಮನ ಹರಿಸೋಣ. ಸರ್ಕಾರಗಳ ಜೊತೆಗೆ ಕೈಜೋಡಿಸಿ ಕೊರೋನಾ ಸೋಂಕು ಮುಕ್ತ ಪ್ರಪಂಚ ನಿರ್ಮಾಣದತ್ತ ಚಿತ್ತ ಹರಿಸೋಣ. ಏಕೆಂದರೆ ವಿರೋಧಿಸಲು ಬೇರಿನ್ನೇನಾದರೂ ಸಿಗಬಹುದು. ಈ ಸ್ಥಿತಿಯನ್ನು ವಿರೋಧಿಸುತ್ತಾ ಸೋಂಕು ನಿಯಂತ್ರಣವೂ ಅಸಾಧ್ಯ. ಮುಂದೊಮ್ಮೆ ವಿರೋಧಿಸಲು ನಾವೇ ಇರುವುದೂ ಸಂದೇಹವೇ.. ಕಾರಣ ಕೊರೋನಾ ನಮ್ಮನ್ನೂ ನುಂಗೀತು ಜೋಕೆ..
ಮೋದಿ ಕೆಲವರಿಗೆ ಅಪ್ರಿಯರಾಗಿರಬಹುದು. ಆದರೆ ವಿರೋಧಿಗಳಿಗೆ ಪ್ರಿಯವಾದವರೇ ಸರ್ಕಾರ ನಡೆಸುತ್ತಿದ್ದರೂ ಸೋಂಕು ನಿಯಂತ್ರಣದ ವೇಗ ಇಷ್ಟೂ ಇರಲು ಸಾಧ್ಯವಿರುತ್ತಿರಲಿಲ್ಲವೇನೋ. ಹಾಗಾಗಿ ವಿನಾ ಕಾರಣ ಮೊಸರಲ್ಲೂ ಕಲ್ಲು ಹುಡುಕುವುದು ಬಿಟ್ಟು, ನಿಯಂತ್ರಣ ದೃಷ್ಟಿಯಿಂದ ನಮ್ಮ ಕೈಲಾದ ಪ್ರಯತ್ನ ನಾವೂ ಮಾಡೋಣ. ಆ ಮೂಲಕ ಪ್ರಜ್ಞಾವಂತ ನಾಗರಿಕರಾಗೋಣ.
✍️ ಭುವನ ಬಾಬು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.