ಅದೊಂದು ವಠಾರದಲ್ಲಿ ನಾಲ್ಕು ಜನರಿರುವ ಒಂದು ಸಣ್ಣ ಕುಟುಂಬವೊಂದು ವಾಸವಾಗಿತ್ತು. ಅದೊಮ್ಮೆ ಇದ್ದಕ್ಕಿದ್ದಂತೆಯೇ ಆ ಮನೆಗೆ ದೂರದೂರಿನಿಂದ ಸುಮಾರು ಎಂಟು ಹತ್ತು ನೆಂಟರು ಆಗಮಿಸಿ ಬಿಟ್ಟರು. ಬಂದರವರನ್ನು ನೋಡಿದರೆ ದೂರ ಪ್ರಯಾಣದಿಂದ ಬಹಳ ಹಸಿದಂತೆ ಕಾಣುತ್ತಿದ್ದರು. ಅವರೆಲ್ಲರನ್ನು ಊಟಕ್ಕೆ ಕುಳ್ಳಿರಿಸಬೇಕು. ಆದರೆ ಅವರ ಮನೆಯಲ್ಲಿ ಎಲ್ಲರಿಗೂ ಸಾಕಾಗುವಷ್ಟು ಅಡುಗೆ ಇರಲಿಲ್ಲ. ಅಷ್ಟು ಜನರಿಗೆ ಅಡುಗೆ ಮಾಡಬೇಕೆಂದರೂ ಕನಿಷ್ಟ ಪಕ್ಷ ಒಂದೆರಡು ಗಂಟೆಯಾದರೂ ಬೇಕಿತ್ತು. ತಿಂಗಳ ಕೊನೆಯಾಗಿದ್ದರಿಂದ ಹೋಟೇಲ್ಲಿನಿಂದಲೂ ತರುವಷ್ಟು ಹಣ ಅವರ ಬಳಿ ಇರಲಿಲ್ಲ. ಕೂಡಲೇ ಮನೆಯಾಕೆ ಧೃತಿಗೆಡದೆ ಎಲ್ಲರಿಗೂ ಊಟದ ವ್ಯವಸ್ಥೆ ಮಾಡುತ್ತೇನೆ ಎಂದು ಸಂಕಲ್ಪ ಮಾಡಿ, ಅನ್ನಕ್ಕೆ ಕುಕ್ಕರ್ ಇಟ್ಟು ಕೂಡಲೇ ವಠಾರದ ಅಕ್ಕ ಪಕ್ಕದ ಮನೆಗಳಿಗೆ ಹೊಗಿ ಅವರ ಮನೆಯಲ್ಲಿದ್ದ ಸಾರು, ಹುಳಿಯನ್ನು ಪಡೆದುಕೊಂಡು ಬಂದು ಹತ್ತು ನಿಮಿಷಕ್ಕೆ ಬಿಸಿ ಬಿಸಿ ಅನ್ನದ ಜೊತೆಗೆ ಬಗೆಬಗೆಯ ಊಟ ಬಡಿಸಿ ಎಲ್ಲರನ್ನೂ ಸಂತೈಸಿದ್ದರು. ಉತ್ತಮ ನೆರೆಹೊರೆಯಿಂದಾಗಿ ಕ್ಷಣಮಾತ್ರದಲ್ಲಿ ಅತಿಥಿ ಸತ್ಕಾರಕ್ಕೆ ಕಿಂಚಿತ್ತೂ ಲೋಪವಾಗದಂತೆ ನೋಡಿಕೊಂಡಿದ್ದರು ಆ ಮನೆಯಾಕೆ.
ದೇಶದಲ್ಲಿ ಸದ್ಯದ ಪರಿಸ್ಥಿತಿ ಇದಕ್ಕಿಂತಲೂ ಭಿನ್ನವಾಗೇನೂ ಇಲ್ಲವಾಗಿದೆ. ದೇಶದ ಜನಸಂಖ್ಯೆಗೆ ಅನುಗುಣವಾಗಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ವ್ಯವಸ್ಥೆಗಳು ಇದ್ದು ಅದನ್ನು ಕಾಲ ಕಾಲಕ್ಕೆ ಅನುಗುಣವಾಗಿ ಹೆಚ್ಚಳ ಮಾಡಲಾಗುತ್ತಿತ್ತು. ಆದರೆ ಚೀನಾ ದೇಶದಿಂದ ಧುತ್ತೆಂದು ಇಡೀ ಪ್ರಪಂಚಕ್ಕೇ ವಕ್ಕರಿಸಿದ ಕೊರಾನಾ ಎಂಬ ಮಹಾಮಾರಿಯಿಂದಾಗಿ ದೇಶಾದ್ಯಂತ ಇದ್ದ ವೈದ್ಯಕೀಯ ವ್ಯವಸ್ಥೆಗಳು ಸಾಲಾದಾಗಿವೆ. ಎಲ್ಲೆಡೆಯೂ ಹಾಹಾಕಾರ ಏಳುವಂತಾಗಿದೆ.
ಬಡವ ಶ್ರೀಮಂತ ಎಂಬ ಬೇಧಭಾವವಿಲ್ಲದೇ ಎಲ್ಲರನ್ನೂ ಅಕ್ರಮಿಸಿಕೊಂಡಿರುವ ಈ ಕೊರೋನಾ ಮಹಾಮಾರಿಗೆ ಸರ್ಕಾರದ ಕಡೆಯಿಂದ ಉಚಿತ ಚಿಕಿತ್ಸೆಗಾಗಿ ಆಸ್ಪತ್ರೆಗಳು ಸಿಗದೇ ಹೋದಾಗ ಖಾಸಗೀ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುವುದು ಜನಸಾಮಾನ್ಯರಿಗೆ ದುಬಾರಿಯೇ ಎನಿಸಿದಾಗ, ಸುಖಾ ಸುಮ್ಮನೇ ಸರ್ಕಾರವನ್ನು ದೂರುತ್ತಾ ತಮ್ಮ ಆಕ್ರೋಶಗಳನ್ನು ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹೊರಹಾಕುವ ಎಷ್ಟೋ ಮಂದಿಯನ್ನು ನಾವು ನೋಡಿದ್ದೇವೆ.
ಇಂತಹ ಸಂದರ್ಭದಲ್ಲಿ ಬೇಕಾಬಿಟ್ಟಿ ಸರ್ಕಾರವನ್ನು ದೂರುತ್ತಾ ಕೂರದೇ ಮೇಲೆ ತಿಳಿಸಿದ ಉದಾಹರಣೆಯಲ್ಲಿನ ಒಳ್ಳೆಯ ನೆರಹೊರೆಯವರಂತೆ ಜನರ ಸಾಮಾನ್ಯರಿಗಾಗಿ ಸಂಘಪರಿವಾರದ ಅಂಗ ಸಂಸ್ಥೆಯಾದ ರಾಷ್ಟ್ರೋತ್ಥಾನ ಪರಿಷತ್ ಮತ್ತು ಸೇವಾಭಾರತಿಯ ಸಹಯೋಗದೊಂದಿಗೆ ವಿಶೇಷ ಕೋವಿಡ್ ಅರೈಕೆಯ ಕೇಂದ್ರಗಳು ಬೆಂಗಳೂರಿನಲ್ಲಿ ಕಳೆದ ಮೂರ್ನಾಲ್ಕು ವಾರಗಳಿಂದಲೂ ಆರಂಭಿಸಿರುವುದು ಅತ್ಯಂತ ಶ್ಲಾಘನೀಯವಾದ ಕಾರ್ಯವಾಗಿದೆ.
ಸಾಮಾನ್ಯವಾಗಿ ಎಲ್ಲಾ ಕೋವಿಡ್ ಪೀಡಿತರು ಆಸ್ಪತ್ರೆಗೆ ಸೇರಲೇ ಬೇಕಿಲ್ಲ. ಮನೆಯಲ್ಲಿಯೇ ಇತರರಿಂದ ಪ್ರತ್ಯೇಕವಾಗಿದ್ದು ಔಷಧೋಪಚಾರವನ್ನು ಪಡೆದು ಹುಷಾರಾಗಿರುವವರ ಸಂಖ್ಯೆಯೂ ಕಡಿಮೆ ಏನಿಲ್ಲ. ಆದರೆ ಕೋವೀಡ್-೧೯ರ ಎರಡನೇ ಅಲೆ ಸ್ವಲ್ಪ ತೀವ್ರವಾಗಿರುವ ಕಾರಣ ಸ್ವಲ್ಪ ಉಸಿರಾಟದ ಸಮಸ್ಯೆಗಳು ಕಾಣಿಸಿಕೊಂಡರೂ ಜನಮರುಳೋ ಜಾತ್ರೆ ಮರುಳೋ ಎನ್ನುವಂತೆ ಎಲ್ಲರೂ ಆಸ್ಪತ್ರೆಗಳಿಗೆ ಸೇರಲು ಬಯಸುವುದರಿಂದ ನಿಜವಾಗಿಯೂ ಆಸ್ಲತ್ರೆಯ ಅವಶ್ಯಕತೆ ಇರುವ ರೋಗಿಗಳಿಗೆ ಆಸ್ಪತ್ರೆಯ ಚಿಕಿತ್ಸೆಯೇ ದೊರೆಯದೇ ಇರುವುದನ್ನು ಮನಗಂಡ ರಾಷ್ಟ್ರೋತ್ಥಾನದ ಕಾರ್ಯಕರ್ತರೂ ಕೂಡಲೇ ಬನಶಂಕರಿ ಬಡಾವಣೆಯಲ್ಲಿರುವ ತಮ್ಮ ಶಾಲೆಯಲ್ಲಿಯೇ ಸುಮಾರು ೯೦ ಹಾಸಿಗೆಗಳ ಸುಸಜ್ಜಿತ ಕೋವಿಡ್ ಆರೈಕಾ ಕೇಂದ್ರವನ್ನು ಆರಂಭಿಸಿದರು.
ಇಲ್ಲಿ 24 ಗಂಟೆಗಳೂ ಅನುಭವಸ್ಥ ತಜ್ಞವೈದ್ಯರು ಮತ್ತು ನುರಿತ ದಾದಿಯರಲ್ಲದೇ ಕೋವೀಡ್ ಸೋಂಕಿತರ ಅಗತ್ಯಗಳನ್ನು ಪೂರೈಸಲು ಕಠಿಬದ್ಧರಾಗಿರುವ ಸ್ವಯಂಸೇವಕರ ತಂಡವೇ ಅಲ್ಲಿದೆ. ಬೆಳಿಗ್ಗೆ 6ಕ್ಕೆಲ್ಲಾ ಆರೋಗ್ಯಕರವಾದ ಕಷಾಯ. ಸದಾಕಾಲವೂ ಸ್ವಚ್ಚವಾಗಿರುವ ಶೌಚಾಲಯ, ಸ್ನಾನಕ್ಕೆ ಬಿಸಿ ನೀರು, 8ಕ್ಕೆಲ್ಲಾ ರುಚಿಯಾದ ತಿಂಡಿ, 10 ಗಂಟೆಗೆ ಕಾಫಿ, ಮಧ್ಯಾಹ್ನ 12ಕ್ಕೆ ಊಟ ಸಂಜೆ 4ಕ್ಕೆ ಲಘು ಉಪಹಾರ ರಾತ್ರಿ 8ಕ್ಕೆ ಊಟ ಮತ್ತು 10 ಗಂಟೆಯ ಹೊತ್ತಿಗೆ ಅರಿಶಿನ ಮಿಶ್ರಿತ ಹಾಲು, ಮಲಗಿ ಕೊಳ್ಳಲು ಮೆತ್ತನೆಯ ಹಾಸಿಗೆ ಮತ್ತು ಹೊದ್ದುಕೊಳ್ಳಲು ಹೊದಿಕೆ ಇರುವಂತಹ ವಿಶೇಷ ಆಸ್ಪತ್ರೆಯ ಕೊಠಡಿಗಳಾಗಿವೆ. ಕಾಲ ಕಾಲಕ್ಕೆ ಕೋವಿಡ್ ಸೋಂಕಿತರಿಗೆ ಅಗತ್ಯವಾದ ಔಷಧೋಪಚಾರಗಳನ್ನು ಸಹ ಇಲ್ಲಿ ಕೊಡಲಾಗುತ್ತದೆ. ಬಿಸಿ ನೀರಿನ ಹಬೆಯನ್ನು ತೆಗೆದುಕೊಳ್ಳುವ ಸೌಲಭ್ಯವೂ ಇಲ್ಲಿದೆ. ಅಗತ್ಯವಿದ್ದಲ್ಲಿ ಜೀವರಕ್ಷಕ ಅಮ್ಲಜನಕದ ಸೌಲಭ್ಯವೂ ಇಲ್ಲಿದೆ. ಕಾಲ ಕಾಲಕ್ಕೆ ಇಲ್ಲಿನ ರೋಗಿಗಳ ವೈದ್ಯಕೀಯ ತಪಾಸಣೆ ಮಾಡುತ್ತಾ ಪರಿಸ್ಥಿತಿ ಕೈಮೀರುತ್ತಿದೆ ಎಂದಾದಾಗ, ಕೂಡಲೇ ಆಂಬ್ಯುಲೆನ್ಸ್ ಮೂಲಕ ಹೆಚ್ಚಿನ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲು ಸಿದ್ಧರಾಗಿರುವ ತಂಡವಿದೆ. ಎಲ್ಲದ್ದಕ್ಕಿಂತಲೂ ಮುಖ್ಯವಾಗಿ ಇಷ್ಟೆಲ್ಲಾ ಸೌಲಭ್ಯಗಳು ಸಂಪೂರ್ಣವಾಗಿ ಉಚಿತ ಎನ್ನುವುದು ಅತ್ಯಂತ ಗಮನಾರ್ಹ ಮತ್ತು ಶ್ಲಾಘನೀಯವಾಗಿದೆ.
ಕೋವಿಡ್ ಪರೀಕ್ಷೆಗೊಳಗಾಗಿ ಕೋವಿಡ್ ವೈರಾಣು ಧೃಢಪಟ್ಟು BU ಸಂಖ್ಯೆ ಹೊಂದಿರುವ ಯಾವುದೇ 10-60 ವರ್ಷವಯಸ್ಸಿನ ಉಸಿರಾಟದ ಆಮ್ಲಜನಕದ ಮಟ್ಟ ೯೪ಕ್ಕೂ ಮೇಲಿರುವ ಲಿಂಗ, ಧರ್ಮ ಬೇಧವಿಲ್ಲದೇ ತಮ್ಮ ನಾಲ್ಕು ಜೊತೆ ಬಟ್ಟೆಗಳೊಂದಿಗೆ ಈ ಕೇಂದ್ರದ ಸೌಲಭ್ಯವನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. ಇದು ಕೋವಿಡ್ ಪ್ರಥಮ ಆರೈಕೆಯ ಕೇಂದ್ರವಾಗಿರುವ ಕಾರಣ ತೀವ್ರವಾಗಿ ಕೋವಿಡ್ ನಿಂದ ಬಳಲುತ್ತಿವವರಿಗೆ ಈ ಕೇಂದ್ರದಲ್ಲಿ ಸೇರಿಸಿಕೊಳ್ಳಲಾಗುವುದಿಲ್ಲ ಮತ್ತು ಅವರ ಜೊತೆಗೆ ಬರುವವರನ್ನು ಇಲ್ಲಿ ಇಟ್ಟು ಕೊಳ್ಳಲಾಗುವುದಿಲ್ಲ.
ಇಷ್ಟೆಲ್ಲಾ ಸೌಲಭ್ಯವುಳ್ಳ ಕೇಂದ್ರವನ್ನು ನಡೆಸಲು ತಿಂಗಳಿಗೆ ಸುಮಾರು 50 ಲಕ್ಷಗಳು ಬೇಕಾಗುತ್ತದೆ. ಸಂಘ ಮತ್ತು ಸಂಘ ಪರಿವಾರದ ಸ್ವಯಂಸೇವಕರು ಸ್ವಾರ್ಥಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂದು ಭಾವಿಸಿ, ದೇಶಕ್ಕೆ ವಿಪತ್ತು ಬಂದಾಗಲೆಲ್ಲಾ ಅಗತ್ಯ ಸೇವೆ ಸಲ್ಲಿಸುತ್ತಿರುವುದು ಜನಮಾನಸದಲ್ಲಿ ಈಗಾಗಲೇ ಅಚ್ಚೊತ್ತಿರುವುದರಿಂದ ಇಂತಹ ಕಾರ್ಯಕ್ರಮಕ್ಕೆ ಆರ್ಥಿಕವಾಗಿ ಬೆಂಬಲ ನೀಡಲು ಅನೇಕ ಕಾರ್ಪೊರೇಟ್ ಸಂಸ್ಥೆಗಳು ಮುಂದಾಗಿದ್ದು ತಮ್ಮ CSR ನಿಧಿಯಿಂದ ಸಹಾಯ ಮಾಡುತ್ತಿವೆ. ಇದೂ ಅಲ್ಲದೇ ದೇಶವಿದೇಶದಲ್ಲಿ ನೆಲೆಸಿರುವ ಅನೇಕ ಸಹೃದಯೀ ಸ್ಥಿತಿವಂತರು ಸಹಾ ಮುಂದೆ ಬಂದಿರುವುದು ಇಂತಹ ಹತ್ತು ಹಲವಾರು ಜನಪರ ಸೇವಾ ಕೇಂದ್ರಗಳನ್ನು ಆರಂಭಿಸುವುದಕ್ಕೆ ಪ್ರೋತ್ಸಾಹಕರವಾಗಿದೆ. ಇನ್ನೂ ಹಲವರು ದೇಶ ವಿದೇಶಗಳಿಂದ ಕರೆ ಮಾಡಿ oxymeter, oxygen concentrator ಮುಂತಾದವುಗಳನ್ನು ಕಳುಹಿಸಿಕೊಡಲು ಒಪ್ಪಿಕೊಂಡಿದ್ದಾರೆ. ಇಂತಹ ಮಹತ್ಕಾರ್ಯದಲ್ಲಿ ತಮ್ಮದೂ ಅಳಿಲು ಸೇವೆ ಸಲ್ಲಿಸಲು ಇಚ್ಚಿಸುವವರು ರಾಷ್ಟ್ರೋತ್ಧಾನದ ವೆಬ್ ಸೈಟಿನಲ್ಲಿ ಸೂಚಿಸಿರುವ ಬ್ಯಾಂಕಿನ ಅಕೌಂಟ್ ನಂಬರಿಗೆ ಹಣವನ್ನು ಕಳುಹಿಸಬಹುದಾಗಿದೆ.
ಬನಶಂಕರಿ ಶಾಲೆಯಲ್ಲಿನ ವಿಶೇಷ ಚಿಕಿತ್ಸಾ ಕೇಂದ್ರಕ್ಕೆ ಬಂದ ಪ್ರೋತ್ಸಾಹ ಮತ್ತು ಪ್ರತಿಕ್ರಿಯೆಯಿಂದ ಉತ್ತೇಜಿತರಾಗಿ ರಾಮಮೂರ್ತಿನಗರದ ರಾಷ್ಟ್ರೋತ್ಥಾನ ಶಾಲೆಯಲ್ಲಿಯೂ 50 ಹಾಸಿಗೆಯ ಕೇಂದ್ರ, ಯಲಹಂಕದ ಮಂಗಳ ವಿದ್ಯಾಮಂದಿರದಲ್ಲಿಯೂ ಕಳೆದ ವಾರ 50 ಹಾಸಿಗೆಯ ವಿಶೇಷ ಚಿಕಿತ್ಸಾ ಕೇಂದ್ರವನ್ನು ಆರಂಭಿಸಲಾಗಿಯಲ್ಲದೇ, ಬೆಂಗಳೂರಿನ ಹೊರವಲಯದವರಿಗೆ ಅನುಕೂಲಕರವಾಗಲೆಂದು ಮಾಗಡಿ ರಸ್ತೆಯಲ್ಲಿರುವ ಚನ್ನೇಹಳ್ಳಿ ಜನಸೇವಾ ವಿದ್ಯಾಕೇಂದ್ರದಲ್ಲಿಯೇ ಎರಡು ದಿನಗಳ ಹಿಂದೆ ೫೦ ಹಾಸಿಗೆ ಹಾಸಿಗೆಯ ವಿಶೇಷ ಚಿಕಿತ್ಸಾ ಕೇಂದ್ರವನ್ನು ಆರಂಭಿಸಲಾಗಿದೆ.
ಇಂತಹ ಚಿಕಿತ್ಸಾ ಕೇಂದ್ರಗಳು ಆರಂಭಿಸಲು ಎಲ್ಲಾ ರೀತಿಯ ಸೌಲಭ್ಯವುಳ್ಳ ಸೂಕ್ತ ಜಾಗ ಸಿಕ್ಕಿದಲ್ಲಿ ಇನ್ನೂ ಹತ್ತು ಹಲವಾರು ಕೇಂದ್ರಗಳನ್ನು ತೆರೆಯಲು ರಾಷ್ಟ್ರೋತ್ಥಾನ ಮತ್ತು ಸೇವಾಭಾರತಿಯ ಸ್ವಯಂಸೇವಕರು ಸಿದ್ಧರಾಗಿದ್ದಾರೆ.
ಸಾಧಾರಣವಾಗಿ ಇಲ್ಲಿಗೆ ಬರುವ ರೋಗಿಗಳನ್ನು ಅವರ ದೇಹದ ಆರೋಗ್ಯಕ್ಕೆ ಅನುಗುಣವಾಗಿ 7-14 ದಿನಗಳ ವರೆಗೂ ಇಲ್ಲಿ ರೋಗಿಗಳನ್ನು ಇಟ್ಟುಕೊಳ್ಳಲಾಗುತ್ತದೆ. ಈಗಾಗಲೇ ಬನಶಂಕರಿ ಚಿಕಿತ್ಸಾ ಕೇಂದ್ರದಿಂದ ಸುಮಾರು 15-20 ಮತ್ತು ರಾಮಮೂರ್ತಿ ನಗರದ ಕೇಂದ್ರದಿಂದ 30-35 ರೋಗಿಗಳು ಇಲ್ಲಿನ ಸೇವೆಯನ್ನು ಪಡೆದು ಗುಣಮುಖರಾಗಿ ತಮ್ಮ ತಮ್ಮ ಮನೆಗಳಿಗೆ ಹಿಂದಿರಿಗಿರುವುದು ಆಶಾದಾಯಕವಾಗಿದೆ. ಕೆಲವೇ ಕೆಲವು ಬೆರಳಣಿಕೆಯಷ್ಟು ಜನರು ಹೆಚ್ಚಿನ ಚಿಕಿತ್ಸೆಗಳಿಗಾಗಿ ಬೇರೆಯ ಆಸ್ಪತ್ರೆಗೆ ಸೇರಿಸಲಾಗಿದೆ.
ಪ್ರತ್ಯಕ್ಷಿಸಿ ನೋಡಿದರೂ ಪ್ರಮಾಣಿಸಿ ನೋಡು ಎನ್ನುವಂತೆ ಇಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿರುವ ಒಂದಿಬ್ಬರನ್ನು ಮಾತಾನಾಡಿಸಿದಾಗ ಅವರ ಪ್ರತಿಕ್ರಿಯೆಯಂತೂ ಅದ್ಭುತವಾಗಿತ್ತು. ಅದರಲ್ಲೂ ಒಂದು ಕುಟುಂಬದ ಹಿರಿಯ ಮಗನ ಕುಟುಂಬ ದೂರದ ಕೆನಡಾದಲ್ಲಿದೆ. ಅವರ 70+ ವಯಸ್ಸಿನ ತಂದೆ, 65+ ವಯಸ್ಸಿನ ತಾಯಿ ಮತ್ತು ಅವರ ಮಗನಿಗೆ ಕೋವಿಡ್ ತಗುಲಿದೆ. ಮನೆಯಲ್ಲಿ ಸೊಸೆ ಮತ್ತು ಪುಟ್ಟ ವಯಸ್ಸಿನ ಮಗುವಿಗೆ ಏನು ಮಾಡುವುದು ಎಂಬ ದಿಕ್ಕೇ ತೋಚದೆ ಕೆನಾಡಲ್ಲಿರುವ ತಮ್ಮ ಓರಗಿತ್ತಿಗೆ ಕರೆ ಮಾಡಿದ್ದಾರೆ. ಆಕೆ ಅಲ್ಲಿಂದಲೇ ತನಗೆ ಪರಿಚಯವಿರುವರಿಂದ ರಾಷ್ಟ್ರೋತ್ಥಾನದ ಸ್ವಯಂಸೇವಕರ ಸಂಖ್ಯೆ ದೊರೆತು ಅಲ್ಲಿಂದಲೇ ಕರೆ ಮಾಡಿ ಸಹಾಯವನ್ನು ಕೋರಿದಾಗ, ತುಂಬು ಹೃದಯದಿಂದ ಸಹಾಯ ಹಸ್ತ ಚಾಚಿದ ಸ್ವಯಂಸೇವಕರು ಮೂವರನ್ನೂ ತಮ್ಮ ಕೇಂದ್ರಕ್ಕೆ ಕರೆತಂದು ಹಿರಿಯರಿಗೆ ಅಗತ್ಯವಿದ್ದ ಅಮ್ಲಜನಕವನ್ನು ನೀಡಿ ಸುಮಾರು ಎರಡು ವಾರಗಳ ಕಾಲ ಅವರಿಗೆ ಚಿಕಿತ್ಸೆ ನೀಡಿದ ಪರಿಣಾಮ ಎಲ್ಲರೂ ಗುಣಮುಖರಾಗಿ ಮನೆಗೆ ಬಂದಿದ್ದಾರೆ ಎಂದು ಹೇಳಿದಾಗ ಅವರ ಮುಖದಲ್ಲಿದ್ದ ಮಂದಹಾಸ ನಿಜಕ್ಕೂ ಅವರ್ಣನೀಯ.
ಕಳೆದ ನವೆಂಬರ್ ತಿಂಗಳಿನಲ್ಲಿ ಮದುವೆಯಾಗಿದ್ದ ಜೋಡಿಯೊಂದು ಕೊರೋನಾ ಮಹಾಮಾರಿಗೆ ತುತ್ತಾಗಿ ಮನೆಯಲ್ಲಿ ಅವರನ್ನು ನೋಡಿಕೊಳ್ಳುವವರು ಯಾರೂ ಇಲ್ಲದಿದ್ದಾಗ, ಯಲಹಂಕದ ಸೇವಾ ಕೇಂದ್ರ ಪರಿಚಯವಾಗಿ ಈಗ ಅವರಿಬ್ಬರೂ ಅಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವುದು ಗಮನಾರ್ಹವಾಗಿದೆ.
ಸಮಾಜ/ಸರಕಾರ ನಮಗೆ ಏನು ಮಾಡಿತು ಎಂದು ಕೇಳುವವರು ಇಂದಿನ ದಿನಗಳಲ್ಲಿ ಹೆಚ್ಚಾಗಿರುವಾಗ ಎಲೆಮರೆಕಾಯಿಯಂತೆ ಸದ್ದಿಲ್ಲದೇ ಇಂತಹ ವಿಶೇಷ ಚಿಕಿತ್ಸಾ ಕೇಂದ್ರಗಳನ್ನು ಆರಂಭಿಸುವ ಮೂಲಕ ಆಸ್ಪತ್ರೆಗಳ ಮೇಲಿನ ಅವಲಂಭನೆಯನ್ನು ಕಡಿಮೆ ಮಾಡುವ ಮೂಲಕ ನಿಜವಾಗಿಯೂ ಆಸ್ಪತ್ರೆಯ ಸೌಲಭ್ಯ ಅಗತ್ಯವಿರುವವರಿಗೆ ಸಿಗುವಂತೆ ಮಾಡುತ್ತಿರುವ ರಾಷ್ಟ್ರೋತ್ಥಾನ ಮತ್ತು ಸೇವಾಭಾರತಿಯ ಈ ಸಮಾಜಮುಖಿ ಕಾರ್ಯ ನಿಜಕ್ಕೂ ಆನನ್ಯ ಮತ್ತು ಅನುಕರಣಿಯ ಎಂದರೆ ಅತಿಶಯೋಕ್ತಿಯೇನಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.