ಬೆಂಗಳೂರು: ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಯ ಫಲಿತಾಂಶದ ಬಳಿಕ ಕುಮಾರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಕಾರ್ಯಕರ್ತರಿಂದ ಮುಂದುವರಿದ ರಾಜಕೀಯ ದ್ವೇಷದ ಫಲಶ್ರುತಿಯಾಗಿ ನಡೆಯುತ್ತಿರುವಂಥ ಬಿಜೆಪಿ ಕಾರ್ಯಕರ್ತರ ಮೇಲಿನ ಹಲ್ಲೆ ಮತ್ತು ಹತ್ಯೆ, ಮಹಿಳಾ ಕಾರ್ಯಕರ್ತೆಯರ ಮೇಲಿನ ದೌರ್ಜನ್ಯ ಮತ್ತು ಅತ್ಯಾಚಾರದ ಪ್ರಯತ್ನ, ಬಿಜೆಪಿ ಕಾರ್ಯಾಲಯಗಳಿಗೆ ಬೆಂಕಿ ಇಡುವುದು ಹಾಗೂ ಹಿಂದುಗಳಿಗೆ ಸೇರಿದ ಮಳಿಗೆಗಳ ಲೂಟಿ ಎಗ್ಗಿಲ್ಲದೆ ಸಾಗಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲಕ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರವೂ ರಾಜಕೀಯ ಅಸಹನೆ ಮತ್ತು ದ್ವೇಷದ ರಾಜಕೀಯವಾಗಿದ್ದು, ಪಶ್ಚಿಮ ಬಂಗಾಳದಲ್ಲಿ ಮುಂದಿನ ದಿನಗಳಲ್ಲಿ ಸಂಭವಿಸಬಹುದಾದ ಅರಾಜಕತೆಗೆ ನಾಂದಿಯಾಗಿದೆ. ಈ ರೀತಿಯ ದ್ವೇಷದ ಮತ್ತು ದೌರ್ಜನ್ಯದ ರಾಜಕೀಯ ಸಂವಿಧಾನ ವಿರೋಧಿಯಾಗಿದ್ದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಸ್ವಂತ ಕ್ಷೇತ್ರದಲ್ಲಿ ಸೋತಿರುವ ಮಮತಾ ಬ್ಯಾನರ್ಜಿ ಮತ್ತೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದು, ಸಂಭ್ರಮಾಚರಣೆಯ ನೆವದಲ್ಲಿ ಟಿಎಂಸಿ ಕಾರ್ಯಕರ್ತರಿಂದ ಬಿಜೆಪಿ ಕಾರ್ಯಕರ್ತರನ್ನು ಮತ್ತು ಹಿಂದೂಗಳನ್ನು ಗುರಿಯಾಗಿಸಿ ವ್ಯವಸ್ಥಿತವಾಗಿ ನಡೆಸುತ್ತಿರುವ ಹಲ್ಲೆ, ದೌರ್ಜನ್ಯ ಮತ್ತು ಅತ್ಯಾಚಾರಗಳನ್ನು ಹತ್ತಿಕ್ಕದೆ ದ್ವೇಷದ ರಾಜಕೀಯಕ್ಕೆ ಕುಮ್ಮಕ್ಕು ನೀಡುತ್ತಿರುವುದು ಸರ್ವಥಾ ಖಂಡನೀಯ. ಒಂದು ಜವಾಬ್ದಾರಿಯುತ ರಾಜಕೀಯ ಪಕ್ಷವಾಗಿ ಚುನಾವಣೆಯನ್ನು ಗೆದ್ದ ಮೇಲೆ ರಾಜ್ಯದ ಎಲ್ಲಾ ಜನತೆಯನ್ನು ಮಕ್ಕಳಂತೆ ನೋಡುವ ಜವಾಬ್ದಾರಿ ಸಂವಿಧಾನದ ಆಶಯವಾಗಿದ್ದು, ಟಿಎಂಸಿ ಕಾರ್ಯಕರ್ತರ ಈ ದ್ವೇಷದ ವರ್ತನೆ ನಾಗರಿಕ ಸಮಾಜದ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿದ್ದು, ಎಲ್ಲೋ ಒಂದೆಡೆ ಅಹಂಕಾರದ ಸರ್ವಾಧಿಕಾರಿ ಧೋರಣೆಯನ್ನು ಪ್ರತಿನಿಧಿಸುವಂತಿದ್ದು, ಸಂವಿಧಾನದ ಆಶಯಗಳಿಗೆ ತಿಲಾಂಜಲಿ ನೀಡಿದಂತಾಗಿದೆ ಎಂದು ಅವರು ತಿಳಿಸಿದ್ದಾರೆ.
ಅಧಿಕಾರ ಸಿಕ್ಕಿದ ಭ್ರಮೆಯಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರಿ ದೌರ್ಜನ್ಯ ಮತ್ತು ದ್ವೇಷದ ರಾಜಕೀಯ ಮಾಡುತ್ತಿರುವುದನ್ನು ಈ ದೇಶ ಯಾವತ್ತೂ ಸಹಿಸುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ. ಈ ಹಿಂಸಾಚಾರಗಳನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದು ನಳಿನ್ ಕುಮಾರ್ ಕಟೀಲ್ ಅವರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.