ಬೆಂಗಳೂರು: ಕಲ್ಬುರ್ಗಿಯಲ್ಲಿ ರೆಮ್ಡಿಸಿವಿರ್ ಚುಚ್ಚುಮದ್ದು ಮತ್ತು ವೈದ್ಯಕೀಯ ವ್ಯವಸ್ಥೆಯಲ್ಲಿ ಸಮಸ್ಯೆ ಆಗಿಲ್ಲ. ಕಾಂಗ್ರೆಸ್ ಪಕ್ಷದವರ ಆರೋಪ ಗಮನಿಸಿ ಈ ಪತ್ರಿಕಾಗೋಷ್ಠಿ ಮಾಡಬೇಕಾಯಿತು ಎಂದು ಬಿಜೆಪಿ ಸಂಸದ ಡಾ. ಉಮೇಶ್ ಜಾಧವ್ ತಿಳಿಸಿದರು.
ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲದಿನಗಳ ಹಿಂದೆ ಇಂಜೆಕ್ಷನ್ ಕೊರತೆ ಇದ್ದಾಗ ತಕ್ಷಣವೇ ಜಿಲ್ಲೆಗೆ ಅವುಗಳನ್ನು ತರಿಸಿಕೊಡಲಾಗಿದೆ. ಇದಕ್ಕಾಗಿ ಬೆಂಗಳೂರು ವಿಮಾನನಿಲ್ದಾಣಕ್ಕೆ ತೆರಳಿದ್ದೇನೆ. ಹಗಲಿರುಳೆನ್ನದೆ ಇದಕ್ಕಾಗಿ ಪ್ರಯತ್ನ ಮಾಡಿದ್ದೇವೆ ಎಂದು ವಿವರಿಸಿದರು.
ವಿವಿಧ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೂ ಭೇಟಿ ನೀಡಿದ್ದೇನೆ. ಆದರೆ, ಕಾಂಗ್ರೆಸ್ಸಿಗರು ವಸ್ತುಸ್ಥಿತಿ ತಿಳಿಯದೆ ಆರೋಪ ಮಾಡಿದ್ದಾರೆ ಎಂದು ತಿಳಿಸಿದರು. ಇಂಜೆಕ್ಷನ್ ವಿಚಾರದಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಈ ವಿಚಾರದಲ್ಲಿ ತನಿಖೆ ಎದುರಿಸಲೂ ಸಿದ್ಧನಿದ್ದೇನೆ ಎಂದು ಸ್ಪಷ್ಟಪಡಿಸಿದರು. ಇಂಜೆಕ್ಷನ್ ಕುರಿತು ಸ್ಥಳೀಯ ಕಾಂಗ್ರೆಸ್ ಶಾಸಕರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.
ಎಲ್ಲರೂ ಕೊರೊನಾ ಲಸಿಕೆ ಪಡೆಯಬೇಕು. ರೆಮ್ಡಿಸಿವಿರ್ ಇಂಜೆಕ್ಷನ್ ವಿಚಾರದಲ್ಲಿ ಜನರು ಆತಂಕಕ್ಕೆ ಒಳಗಾಗಬಾರದು ಎಂದು ಅವರು ಮನವಿ ಮಾಡಿದರು. ಸಂಸದನಾಗಿ ನನ್ನ ಜೀವ ಪಣಕ್ಕಿಟ್ಟು ಕೆಲಸ ಮಾಡಲು ಬದ್ಧನಾಗಿದ್ದೇನೆ ಎಂದು ಅವರು ತಿಳಿಸಿದರು. ಹೋಮಿಯೋಪಥಿ, ಆಯುರ್ವೇದ ವೈದ್ಯರನ್ನು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.
ಕೋವಿಡ್ ವಿಚಾರದಲ್ಲಿ ದೂಷಣೆ ಬೇಡ. ಎಲ್ಲಾ ಪಕ್ಷದವರು ಪರಸ್ಪರ ಹೊಂದಾಣಿಕೆಯಿಂದ ಕಾರ್ಯ ನಿರ್ವಹಿಸಿದರೆ ಈ ಸಂಕಷ್ಟದಿಂದ ಹೊರಬರಬಹುದು ಎಂದು ತಿಳಿಸಿದರು.
ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ್ ನಾರಾಯಣ್ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.