ಮಂಗಳೂರು: ಕರೋನಾ ಸೋಂಕು ನಿಯಂತ್ರಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹತ್ತು ಹಲವು ಕ್ರಮಗಳನ್ನು ಕೈಗೊಳ್ಳುತ್ತಿರುವ ನಡುವೆಯೇ ಮಂಗಳೂರು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕುಟುಂಬಸ್ಥರೂ, ಸೋಂಕು ತಡೆಗೆ ತಮ್ಮಿಂದಾದ ಸೇವೆ ನೀಡಲು ಮುಂದಾಗಿದ್ದಾರೆ.
ಪೊಲೀಸ್ ಸಿಬ್ಬಂದಿಗಳ ಕುಟುಂಬದ ಸದಸ್ಯರೇ ರೂಪಿಸಿಕೊಂಡಿರುವ ಜ್ಞಾನೋದಯ ಮಂಡಳಿ ಮೂಲಕ ಮಂಗಳೂರು ಪೊಲೀಸರಿಗೆ ಮಾಸ್ಕ್ ತಯಾರಿಸಿ ನೀಡಲು ಮುಂದೆ ಬಂದಿದ್ದು, ಪೊಲೀಸ್ ಆಯುಕ್ತರ ಕಚೇರಿ ಇವರ ಆಸಕ್ತಿ ಮತ್ತು ಕಾಳಜಿಯನ್ನು ಗಮನಿಸಿ 10 ಸಾವಿರ ಮಾಸ್ಕ್ ತಯಾರಿಸಿ ಕೊಡಲು ಬೇಡಿಕೆ ಸಲ್ಲಿಸಿದೆ.
ಮಾಸ್ಕ್ ತಯಾರಿಕೆಗೆ ಆಯುಕ್ತರ ಕಚೇರಿ ವತಿಯಿಂದ ಬಟ್ಟೆ, ದಾರ ಇತ್ಯಾದಿ ಕಚ್ಚಾ ವಸ್ತುಗಳನ್ನು ಒದಗಿಸಿದ್ದು, ಮಹಿಳೆಯರು, ಕುಟುಂಬಸ್ಥರು ತಯಾರಿಕೆಯಲ್ಲಿ ನಿರತರಾಗಿದ್ದಾರೆ.
ಡಿಡಿ ನ್ಯೂಸ್ನೊಂದಿಗೆ ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಮಾತನಾಡಿದ್ದು, ಕೋವಿಡ್ ಸಂಕಷ್ಟ ಕಾಲದಲ್ಲಿ ಪೊಲೀಸ್ ಸಿಬ್ಬಂದಿಯ ಕುಟುಂಬಸ್ಥರು ಮಾಸ್ಕ್ ತಯಾರಿಸಿಕೊಡಲು ಮುಂದೆ ಬಂದರು. ಅವರ ಕೌಶಲ್ಯವನ್ನು ಸದ್ಬಳಕೆ ಮಾಡಿಕೊಳ್ಳಲಾಗುವುದು. ಮಂಗಳೂರು ವ್ಯಾಪ್ತಿಯ 2 ಸಾವಿರ ಸಿಬ್ಬಂದಿಗೆ ತಲಾ 5ರಂತೆ ಮಾಸ್ಕ್ ನೀಡಲು 10 ಸಾವಿರ ಮಾಸ್ಕ್ ತಯಾರಿಸಿಕೊಡಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಜ್ಞಾನೋದಯ ಮಂಡಳಿಯ ಮುಖ್ಯಸ್ಥೆ ಆಶಾ, ಪೊಲೀಸರಿಗೆ ರಜೆ ಇರುವುದಿಲ್ಲ. ಅವರು ಯಾವುದೇ ಸಮಯದಲ್ಲೂ ಕೆಲಸ ಮಾಡಬೇಕಾಗುತ್ತದೆ. ಅವರ ಆರೋಗ್ಯ ರಕ್ಷಣೆಯ ಉದ್ದೇಶದಿಂದ ಮಾಸ್ಕ್ ತಯಾರಿಸಿಕೊಡಲು ಮುಂದೆ ಬಂದಿದ್ದೇವೆ ಎಂದು ಹೇಳಿದರು. ಮತ್ತೋರ್ವ ಸದಸ್ಯೆ ಭಾಗೀರಥಿ, ಈಗಾಗಲೇ 2 ಸಾವಿರ ಮಾಸ್ಕ್ ತಯಾರಿಸಿದ್ದು, ಕೆಲವು ದಿನಗಳಲ್ಲಿ ಬೇಡಿಕೆ ಸಲ್ಲಿಸಿರುವ ಎಲ್ಲ ಮಾಸ್ಕ್ಗಳನ್ನು ತಯಾರಿಸಿ ಕೊಡಲಾಗುವುದು ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.