“ಚಂದನ್ ಹೇ ಐಸ್ ದೇಶ್ ಕಿ ಮಾಟಿ, ತಪೋ ಭೂಮಿ ಹರ್ ಗ್ರಾಮ್ ಹೇ. ಹರ್ ಬಾಲಾ ದೇವೀಕಿ ಪ್ರತಿಮಾ ಬಚ್ಚಾ ಬಚ್ಚಾ ರಾಮ್ ಹೇ”ಪ್ರಸಿದ್ಧ ಗೀತೆಯೊಂದರ ಸಾಲುಗಳಿವು. ಪ್ರಭು ಶ್ರೀರಾಮಚಂದ್ರನು ದೇಶದ ಪ್ರತಿಯೊಬ್ಬ ಪ್ರಜೆಯ ಜೀವನದಲ್ಲೂ ಅದು ಯಾವ ರೀತಿಯಲ್ಲಿ ಹಾಸುಹೊಕ್ಕಿದ್ದಾನೆಂದರೆ “ನಮ್ಮ ದೇಶದ ಪ್ರತಿಯೊಂದು ಮಗುವಲ್ಲೂ ರಾಮನಿದ್ದಾನೆ”. ಮರ್ಯಾದಾ ಪುರುಷೋತ್ತಮ, ಆದರ್ಶ ಆಡಳಿತಗಾರ, ಪ್ರಜಾನುರಾಗಿ ಪ್ರಭು ಶ್ರೀರಾಮ ನಡೆದಂತೆ ನಡೆ ಎಂದು ಪ್ರತಿಯೊಂದು ಮನೆಯ ಹಿರಿಯರೂ ಮಕ್ಕಳಿಗೆ ಹೇಳುತ್ತಾರೆ. ರಾಮಾಯಣವೆಂದರೆ ಅದು ಕೇವಲ ಇತಿಹಾಸವಲ್ಲ ,ಅದೊಂದು ಪಠ್ಯ ಪುಸ್ತಕ. ಜೀವನದ ಪ್ರತಿಯೊಂದು ಪಾತ್ರಗಳಿಗೂ ಆದರ್ಶವಾಗುವ ಮತ್ತು ಪ್ರತಿಯೊಂದು ಗೊಂದಲಕ್ಕೂ ಉತ್ತರ ಲಭಿಸುವ ಘಟನೆಗಳು ರಾಮಾಯಣದಲ್ಲಿ ಲಭಿಸುತ್ತದೆ. ತನ್ನನ್ನು ನಂಬಿದವರ ಕೈಯನ್ನೆಂದಿಗೂ ರಾಮನು ಬಿಡಲಾರ ಎಂಬುದು ಭಕ್ತರ ಅಚಲ ನಂಬಿಕೆ. ಪ್ರಭು ಶ್ರೀರಾಮನ ಜನ್ಮದಿನವಾದ ರಾಮ ನವಮಿಯಂದು ರಾಮಾಯಣದ ಪ್ರಸಿದ್ಧಿ ಪಡೆಯದ ಕಥೆಯೊಂದನ್ನು ಅರಿಯೋಣ.
ರಾವಣ ಸಂಹಾರ,ಲಂಕೆಯ ವಿಜಯವಾಗಿ ಬಹಳ ವರ್ಷಗಳು ಕಳೆದ ಬಳಿಕ ರಾಮನಿಗೆ ತನ್ನ ಭಕ್ತರಾದ ವಿಭೀಷಣ ಮತ್ತು ಸುಗ್ರೀವರ ನೆನಪು ಬರುತ್ತಿತ್ತು. ಧರ್ಮಭೀರುವಾದ ವಿಭೀಷಣನು ನ್ಯಾಯವಂತ ಮತ್ತು ನಿಷ್ಠಾವಂತ, ಅವನ ಆಡಳಿತವು ಸುಭಿಕ್ಷವಾಗಿಯೇ ಇರುತ್ತದೆ. ಆದರೂ ಸಿಂಹಾಸನದ ಅಮಲಿನಿಂದ ರಾಜಭೋಗಗಳಿಂದ ಬದಲಾವಣೆಯೇನಾದರೂ ಆಗಿರಬಹುದೇ ? ಏಕೆಂದರೆ ಆತನು ಏರಿರುವ ಪದವಿಯೇ ಅಂತಹುದು. ಸುಗ್ರೀವನ ಉದಾಹರಣೆಯೂ ಇದೆಯಷ್ಟೆ?. ಸುಗ್ರೀವನು ರಾಜ್ಯ ಪ್ರಾಪ್ತಿಯಾದ ಸಂತೋಷದಲ್ಲಿ ಮೈ ಮರೆತು ಸೀತಾನ್ವೇಷಣೆಯ ಕಾರ್ಯವನ್ನೇ ಮರೆತಿರಲಿಲ್ಲವೇ?. ಪ್ರಪಂಚದ ಪರಿಸ್ಥಿತಿ ಹೀಗಿರುವಾಗ ಮೊದಲೇ ರಾಕ್ಷಸ ರಕ್ತವನ್ನು ಹಂಚಿಕೊಂಡು ಹುಟ್ಟಿರುವ ವಿಭೀಷಣನು ಸರಿಯಾದ ಮಾರ್ಗದಲ್ಲಿ ಮುಂದುವರೆಯುತ್ತಿದ್ದಾನೇನೋ ಎಂಬ ನಂಬಿಕೆಯಾದರು ಏನು? ಆದ್ದರಿಂದ ಒಮ್ಮೆ ಲಂಕೆಗೆ ಹೋಗಿ ಪರೀಕ್ಷಿಸುವುದೇ ಒಳ್ಳೆಯದು ಎಂದು ರಾಮನು ನಿರ್ಧರಿಸಿದ. ತನ್ನ ಪರಮ ಭಕ್ತನನ್ನು ಪರೀಕ್ಷಿಸುವುದು ಸರಿಯೇ ಎಂಬ ಸಂದೇಹ ಕೂಡ ಬರುತ್ತಿತ್ತು, ಆದರೂ ಹೋಗಿ ಒಂದಿಷ್ಟು ಉಪದೇಶ ಮಾಡುವುದು ಸರಿ ಎಂದು ರಾಮನು ತೀರ್ಮಾನಿಸಿದ.
ರಾಮನು ತೆರಳಲು ತೀರ್ಮಾನಿಸಿದ್ದನ್ನು ಅರಿತ ಭರತ ಈ ಬಾರಿ ತನ್ನನ್ನು ಕೂಡಾ ಲಂಕೆಗೆ ಕರೆದೊಯ್ಯುವಂತೆ ದುಂಬಾಲು ಬಿದ್ದ. ಸರಿ ಎಂದು ವಿಭೀಷಣನು ನೀಡಿದ ಪುಷ್ಪಕ ವಿಮಾನವನ್ನೇರಿ ದಕ್ಷಿಣದ ಕಡೆಗೆ ತಮ್ಮ ಪ್ರಯಾಣವನ್ನು ಮುಂದುವರೆಸಿದರು. ಇಬ್ಬರೂ ಕಿಷ್ಕಿಂದೆಯನ್ನು ತಲುಪಿ ಸುಗ್ರೀವನನ್ನು ಭೇಟಿ ಮಾಡಿದರು, ಈ ಭೇಟಿ ಸುಗ್ರೀವನಿಗೆ ಅತೀವ ಸಂತಸವನ್ನುಂಟು ಮಾಡಿತು. ಕಿಷ್ಕಿಂದೆಯ ಸಮಸ್ತರೂ ಶ್ರೀರಾಮನ ದರ್ಶನವನ್ನು ಪಡೆದು ಪುನೀತರಾದರು. ಶ್ರೀರಾಮನು ಪ್ರಯಾಣವನ್ನು ಮುಂದುವರೆಸುವಾಗ ತಾನೂ ಬರುವೆನೆಂದು ಸುಗ್ರೀವನು ಅವರೊಂದಿಗೆ ಸೇರಿಕೊಂಡನು. ಶ್ರೀರಾಮನ ಬರುವಿಕೆಯು ದೂತರ ಮುಖಾಂತರ ವಿಭೀಷಣನಿಗೆ ತಿಳಿದಾಗ ಆತನಿಗೆ ಅತೀವ ಸಂತಸವಾಯಿತು. ಆತನು ಕೂಡಲೇ ನಗರವನ್ನು ಅಲಂಕರಿಸುವಂತೆ ಆಜ್ಞೆಯನ್ನು ನೀಡಿ ತನ್ನ ಮಂತ್ರಿ ಮತ್ತು ಸೇನಾಧಿಪತಿಗಳೊಂದಿಗೆ ರಾಮನನ್ನು ಸ್ವಾಗತಿಸಲು ಆಗಮಿಸಿದನು.
ಈ ಭವ್ಯವಾದ ಸ್ವಾಗತವನ್ನು ಕಂಡು ಶ್ರೀರಾಮನು ತನ್ನ ಭಕ್ತನು ಬದಲಾಗಿಲ್ಲವೆಂಬುದನ್ನು ಅರಿತು ಬಹಳವಾಗಿ ಸಂತೋಷಿಸಿದನು. ಶ್ರೀರಾಮನನ್ನು ನೋಡಿದ ವಿಭೀಷಣನು ವಂದಿಸಿ ಅರಮನೆಯೆಡೆಗೆ ಕರೆದೊಯ್ದ. ರಾಜ್ಯವು ಹಿಂದಿನ ವೈಭವವನ್ನು ಪಡೆದಿತ್ತು ಮತ್ತು ಹಿಂದಿನ ಅಸುರೀ ಪ್ರಭೆಯಿಂದ ಮುಕ್ತವಾಗಿತ್ತು. ಭರತನು ಸುಂದರ ಲಂಕೆಯನ್ನು ನೋಡಿ ದಂಗು ಬಡಿದಂತಾಗಿದ್ದ. ಸಿಂಹಾಸನದಲ್ಲಿ ವಿರಾಜಮಾನನಾಗಿದ್ದ ಶ್ರೀರಾಮನಿಗೆ ಶೋಡಶೋಪಚಾರಗಳನ್ನು ಮಾಡಿದ ವಿಭೀಷಣನು ಕರ ಜೋಡಿಸಿ ಆತನ ಸ್ತೋತ್ರಗಳನ್ನು ಸ್ತುತಿಸತೊಡಗಿದ.ಅರಮನೆಯ ಹೊರಗೆ ಲಂಕೆಯ ಪ್ರಜೆಗಳು ಶ್ರೀರಾಮಚಂದ್ರನ ದಿವ್ಯದರ್ಶನಕ್ಕಾಗಿ ಹಾತೊರೆಯುತ್ತಿದ್ದರು. ಇಂತಹ ಸುಸಂಧರ್ಭ ಪುನಃ ದೊರೆಯುತ್ತದೆಯೋ ಇಲ್ಲವೋ ಎಂಬ ಅನುಮಾನ ಅವರಿಗಿತ್ತು.
ಪ್ರಜೆಗಳ ಪ್ರೀತಿಯನ್ನು ಅರಿತ ವಿಭೀಷಣನು ರಾಮನ ಬಳಿ ದರ್ಶನವೀಯುವಂತೆ ವಿನಂತಿಸಲು. ರಾಮನು ದರ್ಶನವನ್ನೀಯಲು ಅತೀವ ಸಂತಸದಿಂದ ಒಪ್ಪಿಗೆ ನೀಡಿದನು. ಬಳಿಕ 3 ದಿನಗಳುದ್ದಕ್ಕೂ ರಾಮ ಭರತ ಮತ್ತು ಸುಗ್ರೀವರ ದರ್ಶನವನ್ನು ಪ್ರಜೆಗಳು ಅತೀವ ಸಂತೋಷದಿಂದ ಪಡೆದು ಧನ್ಯರಾದರು. 4 ನೇ ದಿನ ರಾವಣನ ಮಾತೆ ಕೈಕಸೆ ವಿಭೀಷಣನನ್ನು ಕರೆದು “ ಮಗು ! ನಾನು ಕೂಡ ಶ್ರೀರಾಮನ ದರ್ಶನಾಕಾಂಕ್ಷಿಯಾಗಿದ್ದೆನಷ್ಟೇ. ಆತನ ದರ್ಶನದಿಂದ ಮಹಾ ಮುನಿಗಳೂ ಸಹ ಪುಣ್ಯವನ್ನು ಪಡೆಯುವರು. ಶ್ರೀರಾಮನು ಸಾಕ್ಷಾತ್ ಮಹಾವಿಷ್ಣುವಿನ ಅವತಾರವಾದರೆ, ಸೀತೆಯು ಸ್ವಯಂ ಲಕ್ಷ್ಮಿಯಾಗಿರುವಳು. ನಿನ್ನ ಅಣ್ಣ ರಾವಣ ಈ ರಹಸ್ಯವನ್ನು ಅರಿಯದವನಾದ, ನಾನು ಎಷ್ಟೋ ಬಾರಿ ಈ ಮಾತನ್ನು ರಾವಣನಿಗೆ ಹೇಳಿದೆ .ಆದರೆ ಅವನು ಅಪಹಾಸ್ಯ ಮಾಡಿದ. ಕೊನೆಗೆ ಪ್ರಭು ರಾಮನಿಂದ ಹತನಾದ ” ಎಂದು ಹೇಳಿದಳು.
ತಾಯಿಯ ಮಾತಿಗೆ ಒಪ್ಪಿದ ವಿಭೀಷಣನು ತನ್ನ ಪತ್ನಿಯಾದ ಸುರಮೆಯನ್ನೊಳಗೊಂದು ದರ್ಶನಕ್ಕೆ ತೆರಳಿ ಎಂದು ಸೂಚಿಸಿ, ಹೊರಗೆ ಬಂದು ರಾಮನ ಬಳಿ “ ತಮ್ಮ ದರ್ಶನಾರ್ಥಿಯಾಗಿ ತಾಯಿ ಕೈಕಸಿ ಬರುತ್ತಿದ್ದಾಳೆ ದಯವಿಟ್ಟು ಆಕೆಗೆ ದರ್ಶನವನ್ನು ನೀಡಿ ಆಕೆಯನ್ನು ಕೃತಾರ್ಥರನ್ನಾಗಿಸಿ” ಎಂದು ಬಿನ್ನಹಿಸುತ್ತಾನೆ. ಆಗ ರಾಮನು ಎದ್ದು ನಿಂತು “ ತಮ್ಮ ವಿಭೀಷಣ ನಿನ್ನ ತಾಯಿ ನನಗೂ ಮಾತೆಯೇ ಅಲ್ಲವೇ ,ಆಕೆಯು ನನ್ನೆಡೆಗೆ ಬರುವುದು ನನಗೆ ಅಶ್ರೇಯಸ್ಸು , ನಾನೇ ಆಕೆಯ ಬಳಿಗೆ ತೆರಳುವೆ. ನನ್ನ ಕರೆದುಕೊಂಡು ಹೋಗು”ಎಂದವನೇ ಮುಂದೆ ಹೊರಟು ಬಿಡುತ್ತಾನೆ. ಕೈಕಸಿಯನ್ನು ನೋಡಿದೊಡನೆಯೇ ಆಕೆಗೆ ನತಮಸ್ತಕನಾಗಿ ಆಕೆಗೆ ಪ್ರಣಾಮವನ್ನು ಸಲ್ಲಿಸುತ್ತಾನೆ. ನಂತರ ಸುರಮಳನ್ನೂ ಆಶೀರ್ವದಿಸುತ್ತಾನೆ.
ನಂತರ ಹಿಂತಿರುಗಲು ಉತ್ಸುಕನಾದ ರಾಮನು ಎಲ್ಲರಿಂದಲೂ ಬೀಳ್ಕೊಂಡ ಬಳಿಕ ವಿಭೀಷಣನು ರಾಮನ ಬಳಿ “ ಮಹಾ ಪ್ರಭೂ! ನೀನು ಲಂಕೆಗೆ ನಿರ್ಮಿಸಿದ ಸೇತುವೆಯು ಹಾಗೆಯೇ ಇದ್ದಲ್ಲಿ ನಮ್ಮ ಸಂಸ್ಕೃತಿಗೆ,ನಮ್ಮ ಪ್ರಜೆಗಳಿಗೆ ತುಂಬಾ ತೊಂದರೆಯಾಗುತ್ತದೆ. ಇದಕ್ಕೆ ನೀನೆ ಯೋಚಿಸಿ ಪರಿಹಾರವನ್ನು ನೀಡಬೇಕು ಎಂದು ಭಿನ್ನವಿಸುತ್ತಾನೆ. ವಿಭೀಷಣನ ಮಾತಿನ ಅಂತರಾರ್ಥವನ್ನು ತಿಳಿದ ರಾಮನು ಆ ಸೇತುವೆಯ ಮಧ್ಯಭಾಗವನ್ನು ಮುರಿದು ಹಾಕಿದನು. ಹತ್ತು ಯೋಜನೆಗಳಷ್ಟು ಉದ್ದದ ಆ ಸೇತುವೆಯನ್ನು ಮತ್ತೆ 3 ಭಾಗಗಳನ್ನಾಗಿ ಚೂರುಗಳನ್ನಾಗಿಸಿದ. ಇದರಿಂದಾಗಿ ಸೇತುವೆಯು ಸಂಪೂರ್ಣವಾಗಿ ನಿರ್ನಾಮವಾಯಿತು. ಇದರಿಂದ ಭಾರತದಿಂದ ಲಂಕೆಗೆ ಇದ್ದ ಮಾರ್ಗವು ಸಮುದ್ರ ಸೇರಿತು.
✍️ ದೀಪಾ ಜಿ. ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.