ಕೊರೋನಾ ಲಸಿಕೆ ಬಿಡುಗಡೆಯಾಗಿ, ಇನ್ನೇನು ಜನಜೀವನ ಸಮಾಧಾನದ ಸ್ಥಿತಿ ತಲಪಿದೆ ಎನ್ನುವಾಗಲೇ ಕೊರೋನಾ ಎರಡನೇ ಅಲೆಯ ಅಟ್ಟಹಾಸ ಶುರುವಾಗಿರುವುದು ಸರ್ಕಾರವೂ ಸೇರಿದಂತೆ ಎಲ್ಲರನ್ನೂ ಕಂಗೆಡಿಸಿದೆ. ಕೊರೋನಾ ಆರ್ಭಟ, ಲಾಕ್ಡೌನ್ ಕಾರಣಗಳಿಂದಾಗಿ ಆರ್ಥಿಕತೆ ಸಂಪೂರ್ಣ ಹಳ್ಳ ಹಿಡಿದಿತ್ತು. ಲಾಕ್ಡೌನ್ ತೆರವಿನ ಬಳಿಕ ಕೊಂಚ ಚೇತರಿಕೆ ಕಂಡು ಬರುತ್ತಿದೆ ಎನ್ನುವಾಗಲೇ ಮತ್ತೆ ಕೊರೋನಾ ಎರಡನೇ ಅಲೆಯ ಆರ್ಭಟ. ಒಂದೆಡೆ ಸುಡುವ ಉರಿಬಿಸಿಲು, ಇನ್ನೊಂದೆಡೆ ದಿನೇ ದಿನೇ ಹೆಚ್ಚುತ್ತಿರುವ ಸೋಂಕಿನ, ಸಾವಿನ ಪ್ರಮಾಣ. ಸೋಂಕಿನ ಲಕ್ಷಣಗಳೇ ಕಾಣಿಸದೆ ಜನರು ತಮಗೆ ಕೊರೋನಾ ಸೋಂಕು ತಗಲಿದೆ ಎಂದು ತಿಳಿಯುವುದಾದರೂ ಹೇಗೆ? ತಿಳಿದುಕೊಳ್ಳುವಷ್ಟರಲ್ಲಿ ಕೊರೋನಾ ವೈರಸ್ ದೇಹದೊಳಗೆ ಸಾಕಷ್ಟು ಹಾನಿಯೆಸಗಿ, ಭಯಾನಕ ಸ್ಥಿತಿಗೆ ತಳ್ಳಿರುತ್ತದೆ. ಈಗಾಗಲೇ (ಏ. 15ರ ಅಂಕಿ ಸಂಖ್ಯೆಯ ಪ್ರಕಾರ) ಕರ್ನಾಟಕದಲ್ಲಿ 11,09,650 ಪಾಸಿಟಿವ್ ಕೇಸ್ಗಳು, ಜೊತೆಗೆ 13,112 ಸಾವಿನ ಪ್ರಕರಣಗಳು ಸಂಭವಿಸಿವೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿದ 9,99,958 ಮಂದಿ ಬಿಡುಗಡೆಯಾಗಿದ್ದಾರೆ. ರಾಜ್ಯದ ಉಳಿದ ಕಡೆಗಳಿಗೆ ಹೋಲಿಸಿದರೆ ರಾಜಧಾನಿ ಬೆಂಗಳೂರಿನಲ್ಲೇ ಕೊರೋನಾ ಆರ್ಭಟ ಹೆಚ್ಚಿದೆ ಎಂಬುದು ಅಂಕಿ ಅಂಶಗಳಿಂದ ವ್ಯಕ್ತ (ಬೆಂಗಳೂರು ನಗರ ಸೋಂಕಿತರು : 9917 ಸಾವಿನ ಸಂಖ್ಯೆ : 57).
ಕೊರೋನಾ ಹೆಮ್ಮಾರಿ ಇರದಿದ್ದ 2018ಕ್ಕೂ ಮುನ್ನ ರಾಜ್ಯದಲ್ಲಿ ಸಾವಿನ ಪ್ರಮಾಣ ಕಮ್ಮಿ ಇತ್ತೆ ಎಂಬ ಪ್ರಶ್ನೆ ಸಹಜ. ಹುಟ್ಟು-ಸಾವು ಪ್ರಮಾಣ ಇಂತಿಷ್ಟೇ ಇರಬೇಕೆಂದು ಯಾರಿಗೂ ಯಾವ ಸರ್ಕಾರಕ್ಕೂ ನಿಯಂತ್ರಿಸಲು ಸಾಧ್ಯವಿಲ್ಲ. ಏಕೆಂದರೆ ಅದು ಮನುಷ್ಯರ ಸಾಮರ್ಥ್ಯಕ್ಕೆ ಮೀರಿದ್ದು. ಸರ್ಕಾರಿ ಅಂಕಿಅಂಶಗಳ ಪ್ರಕಾರ, ರಾಜ್ಯದಲ್ಲಿ 2007ರಲ್ಲಿ ಸತ್ತವರ ಸಂಖ್ಯೆ 3,81,890. 2010ರಲ್ಲಿ ಸತ್ತವರು – 3,81,743. ಕೋವಿಡ್ ಕಾರಣದಿಂದಾಗಿ ರಾಜ್ಯದಲ್ಲಿ 2021 ಫೆಬ್ರವರಿ 5 ರವರೆಗೆ ಸಾವಿಗೀಡಾದವರು 12,230. ಸೋಂಕಿತರು – 9,41,500. ಕೋವಿಡ್ ಇಲ್ಲದಿದ್ದಾಗಲೂ 2007, 2010ರಲ್ಲಿ ರಾಜ್ಯದಲ್ಲಿ 3 ಲಕ್ಷಕ್ಕೂ ಹೆಚ್ಚು ಮಂದಿ ಬೇರೆ ಬೇರೆ ಕಾರಣಗಳಿಂದಾಗಿ ಸಾವಿಗೀಡಾಗಿದ್ದಾರೆ. ಹಾಗೆ ನೋಡಿದರೆ ಕೋವಿಡ್ ಹೆಮ್ಮಾರಿ ಕಾಲದಲ್ಲಿ ಸಾವಿಗೀಡಾದವರು ಹೋಲಿಕೆಯಲ್ಲಿ ಕಡಿಮೆಯೇ ಎನ್ನುವುದು ಸತ್ಯ.
ಕೊರೋನಾ ಹೆಮ್ಮಾರಿಯ ಆರ್ಭಟಕ್ಕಿಂತ ಈಗ ಸಿಡಿಲಿನಂತೆ ಜನಮನವನ್ನು ಅಪ್ಪಳಿಸಿ ಕಂಗೆಡಿಸುತ್ತಿರುವುದು – ದೃಶ್ಯ ಮಾಧ್ಯಮಗಳ ವೈಭವೀಕರಿಸಿದ ಉತ್ಪ್ರೇಕ್ಷೆಯ ವರದಿಗಳು ಹಾಗೂ ಸೋಷಿಯಲ್ ಮೀಡಿಯಾದ ವಾಟ್ಸಾಪ್, ಫೇಸ್ಬುಕ್ ಮೊದಲಾದವುಗಳಲ್ಲಿ ಪ್ರಕಟವಾಗುತ್ತಿರುವ ಕೋವಿಡ್ ಸಂಬಂಧಿತ ಆಧಾರರಹಿತ ಸುದ್ದಿಗಳು, ಫೇಕ್ವಿಡಿಯೋಗಳು. ದೃಶ್ಯ ಮಾಧ್ಯಮಗಳು ಹಾಗೂ ಸೋಷಿಯಲ್ ಮೀಡಿಯಾಗಳಿಗೆ ಒಂದು ರೀತಿಯಲ್ಲಿ ದಾಸರಾಗಿರುವ (ಅಥವಾ ವ್ಯಸನಿಗಳಾಗಿರುವ) ಬಹುತೇಕ ಮಂದಿ ತಾವು ನೋಡಿದ್ದೆಲ್ಲ, ಕೇಳಿದ್ದೆಲ್ಲ ನಿಜವೆಂದೇ ಭ್ರಮಿಸಿ, ತಮ್ಮ ಸುತ್ತಮುತ್ತಲಿನ ಜನರ ತಲೆಯೊಳಗೂ ಅದೇ ಹುಳವನ್ನು ಬಿಟ್ಟು ಭಯ, ಗಾಬರಿಯ ಸಾಮೂಹಿಕ ಸನ್ನಿಯನ್ನು ಸೃಷ್ಟಿಸುತ್ತಿದ್ದಾರೆ. ತನ್ಮೂಲಕ ತಮ್ಮ ಸಾಮಾಜಿಕ ಜವಾಬ್ದಾರಿಯನ್ನೇ ಮರೆತು ಬಿಡುತ್ತಿದ್ದಾರೆ. ಇದು ವರ್ತಮಾನದ ದೊಡ್ಡ ದುರಂತ.
ದೃಶ್ಯ ಮಾಧ್ಯಮಗಳಿಗೆ ತಮ್ಮ ಟಿಆರ್ಪಿ ಏರಿಕೆ ಹೊರತುಪಡಿಸಿ ಬೇರೆ ಯಾವ ಸದಾಶಯಗಳೂ ಇಲ್ಲವೆಂಬ ವಿಚಿತ್ರ ಸ್ಥಿತಿಗೆ ತಲಪಿ ಅದೆಷ್ಟೋ ಸಮಯವಾಗಿದೆ. ಸತ್ಯದ ತಲೆಯ ಮೇಲೆ ಸುತ್ತಿಗೆಯಿಂದ ಹೊಡೆದಷ್ಟು ಸಲೀಸಾಗಿ ಬೇಜವಾಬ್ದಾರಿಯಿಂದ ಅವು ಪ್ರಸಾರ ಮಾಡುವ ಸುಳ್ಳು ಸುದ್ದಿಗಳು ಸಾಕಷ್ಟು ಅನಾಹುತ ಎಸಗುತ್ತಿವೆ. ಕೋವಿಡ್ ಕುರಿತು ಭಯಾನಕ ರೂಪದ ಹೆದರಿಕೆಯನ್ನು ಜನರ ಮನದಾಳದಲ್ಲಿ ಬಿತ್ತಿದ ಕುಖ್ಯಾತಿ ಈ ದೃಶ್ಯ ಮಾಧ್ಯಮಗಳು ಹಾಗೂ ಸೋಷಿಯಲ್ ಮೀಡಿಯಾಗಳಿಗೇ ಸಲ್ಲಬೇಕಾಗಿದೆ! ಯಾರೋ ಕೆಲವರು ನಿರ್ಲಕ್ಷ್ಯದಿಂದ ಚಿಕಿತ್ಸೆ ಪಡೆಯದೆ ಕೋವಿಡ್ನಿಂದ ಸಾವಿಗೀಡಾದದ್ದನ್ನೇ ಮತ್ತೆ ಮತ್ತೆ ದಿನದ ಇಪ್ಪತ್ತನಾಲ್ಕು ಗಂಟೆಗಳ ಕಾಲ ತೋರಿಸಿದರೆ ಅದನ್ನೇ ಇಡೀ ದಿನ ನೋಡಿದ ಮನಸ್ಸುಗಳು ಆಘಾತಗೊಳ್ಳದಿರಲು ಹೇಗೆ ಸಾಧ್ಯ? ಸೋಂಕು ತಗಲಿದ್ದರೂ ಸೂಕ್ತ ಚಿಕಿತ್ಸೆ ಪಡೆದು ಗುಣಮುಖರಾಗಿ ಬಂದವರನ್ನು ಯಾಕೆ ದೃಶ್ಯ ಮಾಧ್ಯಮಗಳು ಹಾಗೂ ಸೋಷಿಯಲ್ ಮೀಡಿಯಾಗಳು ವೈಭವೀಕರಿಸಿ ತೋರಿಸಬಾರದು? ಹಾಗೆ ಮಾಡಿದಲ್ಲಿ ಜನರ ಮನದೊಳಗೆ ಅಡಗಿರುವ ಭೀತಿಯನ್ನು ಕೊಂಚ ಮಟ್ಟಿಗಾದರೂ ನಿವಾರಿಸಬಹುದಲ್ಲವೆ? ಋಣಾತ್ಮಕ ಚಿಂತನೆಗಳ ಹುಳವನ್ನೇ ಜನರ ತಲೆಗೆ ತುಂಬುವುದೇಕೆ? ಧನಾತ್ಮಕ, ಭರವಸೆಯ ಅಂಶಗಳನ್ನು ಬಿತ್ತಿದಲ್ಲಿ ಅದು ಸಾಮಾಜಿಕ ಸತ್ಪರಿಣಾಮ ಬೀರಲು ನೆರವಾಗಲಾರದೆ?
ಕೋವಿಡ್ ಎರಡನೇ ಅಲೆಯ ಆರ್ಭಟ ಹೆಚ್ಚುತ್ತಿದ್ದಂತೆ ದೃಶ್ಯ ಮಾಧ್ಯಮಗಳ ಕೆಂಗಣ್ಣು ಮೊದಲು ಬಿದ್ದಿದ್ದು ರಾಜ್ಯ ಸರ್ಕಾರದ ಮೇಲೆ. ಎರಡನೇ ಅಲೆಯ ಅಬ್ಬರ ತಡೆಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲೇ ಇಲ್ಲ. ಸರ್ಕಾರಕ್ಕೆ ಜನರ ಆರೋಗ್ಯ ರಕ್ಷಣೆಗಿಂತ ಉಪಚುನಾವಣೆಯಲ್ಲಿ ಗೆಲ್ಲುವುದೇ ಮುಖ್ಯವಾಗಿದೆ. ಯಡಿಯೂರಪ್ಪ ಒಬ್ಬ ನಾಲಾಯಖ್ ಮುಖ್ಯಮಂತ್ರಿ. ಸ್ವತಃ ತಮ್ಮನ್ನೇ ಕೋವಿಡ್ ಎರಡನೇ ಅಲೆಯಿಂದ ರಕ್ಷಿಸಿಕೊಳ್ಳಲಾಗಿಲ್ಲ ಎಂದೆಲ್ಲ ವಾಚಾಮಗೋಚರವಾಗಿ ದೃಶ್ಯ ಮಾಧ್ಯಮಗಳು ಸುದ್ದಿ ಪ್ರಸಾರ ನೆಪದಲ್ಲಿ ವಾಂತಿ ಮಾಡಿಕೊಂಡಿವೆ. ಯಾವುದೇ ಸುದ್ದಿ ಪ್ರಸಾರಕ್ಕೆ ಕನಿಷ್ಠ ಘನತೆ, ಗಾಂಭೀರ್ಯವಾದರೂ ಇರಬೇಕೆಂಬ ಸಾಮಾನ್ಯ ಸಂಗತಿಯೂ ದೃಶ್ಯ ಮಾಧ್ಯಮಗಳೆಂಬ ಕೂಗುಮಾರಿಗಳಿಗೆ ಮರೆತೇ ಹೋಗಿಬಿಟ್ಟಿದೆ. ಉಪಚುನಾವಣೆಯಲ್ಲಿ ಗೆಲ್ಲಬೇಕೆಂದು ಆಡಳಿತ ಪಕ್ಷ, ಪ್ರತಿಪಕ್ಷ ಪ್ರಚಾರ ನಡೆಸುವುದು, ಮೆರವಣಿಗೆ ಮಾಡಿ ಮತ ಯಾಚಿಸುವುದು ಪ್ರಮಾದವೇನೂ ಅಲ್ಲ. ಪ್ರಚಾರ ಸಭೆ, ಮೆರವಣಿಗೆ ಸಂದರ್ಭಗಳಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸಲೇಬೇಕು ಎನ್ನುವುದರಲ್ಲಿ ಮಾತ್ರ ಎರಡು ಮಾತಿಲ್ಲ. ಬಿಜೆಪಿ, ಕಾಂಗ್ರೆಸ್ ಎರಡೂ ರಾಜಕೀಯ ಪಕ್ಷಗಳು ಕೋವಿಡ್ ನಿಯಮಗಳನ್ನು ಪ್ರಚಾರದ ಭರಾಟೆಯಲ್ಲಿ ಉಲ್ಲಂಘಿಸಿರುವುದು ಸ್ಪಷ್ಟ. ಅದನ್ನು ದೃಶ್ಯಮಾಧ್ಯಮಗಳು ಟೀಕಿಸಿರುವುದರಲ್ಲಿ ಖಂಡಿತ ತಪ್ಪಿಲ್ಲ.
ಆದರೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಕೋವಿಡ್ ಹೆಮ್ಮಾರಿ ನಿಯಂತ್ರಣಕ್ಕೆ ವ್ಯವಸ್ಥಿತವಾಗಿ ಲಸಿಕೆ ಕಾಯಕ್ರಮವನ್ನು ಆಯೋಜಿಸಿರು ವುದನ್ನು ಮರೆಯಲು ಸಾಧ್ಯವೆ? ಜಿಲ್ಲೆ, ತಾಲೂಕು, ಹೋಬಳಿ ಮಟ್ಟದವರೆಗೂ ಈಗ ಕೋವಿಡ್ ಲಸಿಕೆ ಕಾರ್ಯಕ್ರಮ ವ್ಯವಸ್ಥಿತವಾಗಿ ಸರ್ಕಾರದ ಕಡೆಯಿಂದ ಆಯೋಜಿಸಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಯೊಂದಕ್ಕೆ ತಲಾ ೨೫೦ ರೂ. ತೆರಬೇಕು. ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಲಸಿಕೆ ನೀಡಿಕೆ ಮುಂದುವರಿದಿದ್ದರೂ ಜನರೇ ಉತ್ಸಾಹದಿಂದ ಪಾಲ್ಗೊಳ್ಳುತ್ತಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಹಾಕಿಸಿಕೊಂಡರೆ ಸೈಡ್ ಇಫೆಕ್ಟ್ ಜಾಸ್ತಿಯಂತೆ ಎಂಬ ಅಪಪ್ರಚಾರ ಕೂಡ ಅಲ್ಲಲ್ಲಿ ನಡೆದಿದೆ. ಬಹುಶಃ ಖಾಸಗಿ ಆಸ್ಪತ್ರೆಯ ಪಟ್ಟಭದ್ರರೇ ಇಂತಹುದೊಂದು ವದಂತಿಯನ್ನು ತೇಲಿಬಿಟ್ಟಿರಬಹುದು! ‘ಲಸಿಕೆ ಹಾಕಿಸಿಕೊಂಡರೆ ಏನೂ ಪ್ರಯೋಜನವಿಲ್ಲವಂತೆ’ ಎಂದು ಇತ್ತೀಚೆಗೆ ನಾನು ಲಸಿಕೆ ಹಾಕಿಸಿಕೊಳ್ಳಲು ಮನೆ ಸಮೀಪದ ಸರ್ಕಾರಿ ಆಸ್ಪತ್ರೆಯೊಂದಕ್ಕೆ ಹೋಗಿದ್ದಾಗ, ಸರತಿಯ ಸಾಲಿನಲ್ಲಿದ್ದ ಮಹಿಳೆಯೊಬ್ಬರು ಪುಂಗಿ ಊದುತ್ತಲೇ ಇದ್ದರು. ‘ಹಾಗಿದ್ದರೆ ನೀವೇಕೆ ಇಲ್ಲಿಗೆ ಬಂದಿದ್ದು? ನಿಮಗೇಕೆ ಲಸಿಕೆ? ಮನೆಯಲ್ಲೇ ಇರಬಹುದಾಗಿತ್ತಲ್ಲ?’ ನಾನು ಪ್ರಶ್ನಿಸಿದಾಗ ಆಕೆ ಮಾತಾಡದೆ ಮುಖ ಬೇರೆಡೆಗೆ ತಿರುಗಿಸಿದರು. ಲಸಿಕೆ ಹಾಕಿಸಿಕೊಳ್ಳುವುದರಿಂದ ಯಾವುದೇ ಬಗೆಯ ಪ್ರಯೋಜನವೇ ಇಲ್ಲವೆಂದಿದ್ದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇಷ್ಟೆಲ್ಲ ಶ್ರಮ ಹಾಕಿ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳುವ ಅಗತ್ಯವೇ ಇರಲಿಲ್ಲ. ಇಂತಹುದೊಂದು ಸಾಮಾನ್ಯ ಸಂಗತಿಯ ಅರಿವು ಕೂಡ ವಿದ್ಯಾವಂತರೆನಿಸಿಕೊಂಡ ಹಲವರಿಗೆ ಇಲ್ಲದಿರುವುದು ವಿಪರ್ಯಾಸ. ಖಾಸಗಿ ಕಂಪೆನಿಯೊಂದರಲ್ಲಿ ಒಳ್ಳೆಯ ಉದ್ಯೋಗದಲ್ಲಿರುವ ನನ್ನ ಬಂಧುಗಳೊಬ್ಬರು ಇನ್ನೂ ಲಸಿಕೆ ಹಾಕಿಸಿಕೊಂಡಿಲ್ಲ. ಲಸಿಕೆ ಹಾಕಿಸಿಕೊಂಡರೆ ಸೈಡ್ ಎಫೆಕ್ಟ್ ಆಗುತ್ತದೆಂದು ಅವರ ಆಪ್ತರ್ಯಾರೋ ತಲೆಯಲ್ಲಿ ಹುಳ ಬಿಟ್ಟಿದ್ದಾರೆ. ಇವರೂ ಅದನ್ನೇ ನಂಬಿ ಬಿಟ್ಟಿದ್ದಾರೆ!
ಮುಂದೆ ಮೂರನೇ ಕೊರೋನಾ ಅಲೆ ಬರುತ್ತದೆ. ಮನುಷ್ಯನ ರಕ್ತನಾಳವನ್ನೇ ಛಿದ್ರಗೊಳಿಸಿ, ಎಲ್ಲರೂ ರಕ್ತವಾಂತಿ ಮಾಡುವ ಸ್ಥಿತಿ ಬರುತ್ತದೆ ಎಂದು ಶಾಸ್ತ್ರಿಗಳೊಬ್ಬರು ಮೊನ್ನೆ ಯುಗಾದಿ ಪಂಚಾಂಗ ಶ್ರವಣದ ಸಂದರ್ಭದಲ್ಲಿ ಭವಿಷ್ಯ ನುಡಿದಿದ್ದಾರಂತೆ. ಹಾಗಂತ ಮೊನ್ನೆ ಲಸಿಕೆ ಹಾಕಿಸಿಕೊಳ್ಳಲು ಬಂದ ಮಹಿಳೆಯೊಬ್ಬರು ಅಲ್ಲಿದ್ದವರ ಬಳಿ ಸುದ್ದಿ ಪ್ರಸಾರ ಮಾಡುತ್ತಿದ್ದರು! ಕೆಲವರು ಗಾಬರಿಗೊಂಡರು. ಕೆಲವರು ನಕ್ಕರು. ಒಬ್ಬರಂತೂ, ಆ ಶಾಸ್ತ್ರಿಗಳಿಗೆ ಮೊದಲು ಲಸಿಕೆ ಹಾಕಿಸಿಕೊಳ್ಳಲು ಹೇಳಿ. ಅವರ ಮಾನಸಿಕ ಸ್ಥಿತಿ ಏರುಪೇರಾದಂತಿದೆ ಎಂದು ಹೇಳಿಯೇ ಬಿಟ್ಟರು.
ಕೊರೋನಾ ಹೆಮ್ಮಾರಿಯ ಆರ್ಭಟ ಯಾವಾಗ ಕಡಿಮೆಯಾಗುತ್ತದೋ ಶಾಸ್ತ್ರಿಗಳು ನುಡಿದಂತೆ ಮೂರನೇ ಅಲೆಯೂ ಬರುತ್ತದೆಯೋ ಯಾರಿಗೂ ಗೊತ್ತಿಲ್ಲ. ಹಾಗಾಗಿ ಯಾರೂ ಏನೇ ಹೇಳಿದರೂ ಅದನ್ನೇ ನಿಜವೆಂದು ನಂಬಿ ಗಾಬರಿಯಾಗುವ ಕೆಟ್ಟಕಾಲ ಇದು. ಯಾರಿಗೂ ವಿಶ್ವಾಸವಿಲ್ಲ. ಬೇರೆಯವರ ಸ್ಥಿತಿ ಏನಾದರೂ ಹಾಳಾಗಿ ಹೋಗಲಿ, ನಾವು, ನಮ್ಮ ಕುಟುಂಬ ಬದುಕುಳಿದರೆ ಸಾಕು ಎಂಬ ಸ್ವಹಿತಾಸಕ್ತಿ ಬಹುತೇಕರನ್ನು ಆವರಿಸಿಬಿಟ್ಟಿದೆ.
ಸೂಕ್ತ ಮುನ್ನೆಚ್ಚರಿಕೆ, ಸಾಮಾಜಿಕ ಅಂತರ, ಸದಾ ಹೊರಗೆ ಮಾಸ್ಕ್ ಧಾರಣೆ, ಜನಸಂದಣಿ ಸೇರದಿರುವುದು ಮುಂತಾದ ಕೋವಿಡ್ ಬಿಗಿನಿಯಮಗಳನ್ನು ತಪ್ಪದೆ ಎಲ್ಲರೂ ಪಾಲಿಸಿದರೆ ಕೊರೋನಾ ಆರ್ಭಟ ಖಂಡಿತಾ ತಗ್ಗುತ್ತದೆ. ಇಂತಹುದೊಂದು ಧೈರ್ಯ, ಭರವಸೆಯನ್ನು ಜನಮನದಲ್ಲಿ ತುಂಬುವ ಸಾಮಾಜಿಕ ಜವಾಬ್ದಾರಿ ಸರ್ಕಾರಿ, ರಾಜಕೀಯ ಪಕ್ಷಗಳು, ಮಾಧ್ಯಮಗಳು, ಸಾಮಾಜಿಕ ಸಂಘಟನೆಗಳು, ಪ್ರಜ್ಞಾವಂತರು ಎಲ್ಲರದೂ ಆಗಿದೆ. ಅಂತಹ ಗುರುತರ ಸಾಮಾಜಿಕ ಜವಾಬ್ದಾರಿಯನ್ನು ಸದ್ಯಕ್ಕೆ ನಾವೆಲ್ಲರೂ ಮರೆತುಬಿಟ್ಟಿರುವುದು ಖಂಡಿತ ತರವಲ್ಲ.
✍️ ದು. ಗು. ಲಕ್ಷ್ಮಣ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.