ಭಾರತದ ಮುಕುಟಮಣಿ ಎಂದೇ ಪ್ರಸಿದ್ಧ ಜಮ್ಮು ಮತ್ತು ಕಾಶ್ಮೀರ. ಕಾಶ್ಮೀರವನ್ನು ತನ್ನ ವಶಕ್ಕೆ ಪಡೆಯಬೇಕೆಂದು ನೆರೆಯ ಪಾಕಿಸ್ತಾನವು ಸ್ವಾತಂತ್ರ ದೊರೆತ ದಿನದಿಂದಲೇ ಸತತವಾಗಿ ಪ್ರಯತ್ನಿಸುತ್ತಿರುವುದು ನಮ್ಮೆಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ. ಹಲವು ಬಾರಿ ಕದನ ವಿರಾಮವನ್ನು ಉಲ್ಲಂಘಿಸಿ ಗುಂಡಿನ ದಾಳಿ ನಡೆಸುವುದು, ಗಡಿಯೊಳಗೆ ಪಾಠಾಣರನ್ನು ನುಗ್ಗಿಸಿ ಹತ್ಯಾಕಾಂಡ ನಡೆಸಿಯೂ ಸೋಲೊಪ್ಪಿ ಸುಮ್ಮನಾಗದೆ ಕಾರ್ಗಿಲ್ ಯುದ್ಧ ಹೂಡಿ ಮುಖಭಂಗವನ್ನು ಅನುಭವಿಸಿದ್ದು ಇವವೆಲ್ಲವೂ ಒಂದು ಮುಖವಾದರೆ ಇದಕ್ಕೆ ಇನ್ನೊಂದು ಕರಾಳ ಮುಖವೂ ಇದೆ. ಕಾಶ್ಮೀರವು ಕಲ್ಹಣನ ರಾಜ್ಯ, ಲಲಿತಾದಿತ್ಯ ಎಂಬ ವೀರನ ನಾಡು, ತಾಯಿ ಶಾರದೆಯ ನೆಲೆವೀಡು. ಆದರೆ 1990 ರ ಜನವರಿ 19 ರಂದು ಇತಿಹಾಸವು ಹಿಂದೆಂದೂ ಕೇಳದ ರೀತಿಯ ಕ್ರೌರ್ಯಕ್ಕೆ ಕಾಶ್ಮೀರ ಸಾಕ್ಷಿಯಾಗಿತ್ತು. ಕಾಶ್ಮೀರದ ಮತಾಂಧರು ಮತ್ತು ಪಾಕಿಸ್ತಾನಿ ಪ್ರೇರಿತ ಭಯೋತ್ಪಾದಕರು ಕಾಶ್ಮೀರದ ಮೂಲ ನಿವಾಸಿಗಳಾದ ಪಂಡಿತರ ಹತ್ಯಾಕಾಂಡ ನಡೆಸಿದರು. ಮತಾಂತರವಾಗಿ ಇಲ್ಲದಿದ್ದಲ್ಲಿ ಸಾವನ್ನಪ್ಪಿ, ಓಡಿ ಹೋಗುವವರು ನಿಮ್ಮ ಹೆಣ್ಣು ಮಕ್ಕಳನ್ನು ಬಿಟ್ಟು ಹೋಗಿ ಎಂದು ಧ್ವನಿವರ್ಧಕಗಳಲ್ಲಿ ಕೂಗಿ ಹೇಳಲಾಗಿತ್ತು. ಇಂದಿಗೂ ಕಾಶ್ಮೀರಿ ಪಂಡಿತರು ಅವರದೇ ದೇಶದಲ್ಲಿ ನಿರಾಶ್ರಿತರು.
ಕಾಶ್ಮೀರದೊಂದಿಗೆ ಬೆಸೆದಿರುವ ಜಮ್ಮು ಕೂಡ ಮತಾಂಧರ ಕ್ರೌರ್ಯಕ್ಕೆ ಬಲಿಯಾಗದಿರಲಿಲ್ಲ. ಜಮ್ಮುವಿನ ಹಿಂಡ್ಪ್ಪ್ಗಳ ಮೇಲೂ ಅನೇಕ ಬಾರಿ ಮತಾಂಧರು ಕ್ರೌರ್ಯವನ್ನು ಮೆರೆದಿದ್ದಾರೆ. ಅಲ್ಲಿಯೂ ಹತ್ಯಾಕಾಂಡಗಳು ನಡೆದಿವೆ. ಆದರೆ ನಾವೆಲ್ಲರೂ ಅವುಗಳ ಬಗ್ಗೆ ತಿಳಿದಿಲ್ಲ ಮತ್ತು ತಿಳಿದವರೂ ಮರೆತು ಬಿಟ್ಟಿದ್ದೇವೆ. ಏಪ್ರಿಲ್ 17, 1998 ರಂದು ಜಮ್ಮು ಕಾಶ್ಮೀರ (ಅಂದಿನ ರಾಜ್ಯ)ದರಿಯಾಸಿ ಜಿಲ್ಲೆಯ ಪ್ರಾಣ್ ಕೋಟ್ ಗ್ರಾಮದಲ್ಲಿ ಕ್ರೌರ್ಯ ಮೆರೆದಿದ್ದರು. ಒಂದೇ ಒಂದು ಗುಂಡನ್ನೂ ಹಾರಿಸದೆ ಅಂದು 29 ಹಿಂದೂಗಳನ್ನು ಭೀಕರವಾಗಿ ಕೊಲೆಗಯ್ಯಲಾಗಿತ್ತು. ಮೃತಪಟ್ಟವರಲ್ಲಿ ಮೂರು ನಾಲ್ಕು ವರ್ಷದವರನ್ನೂ ಸೇರಿದಂತೆ 12 ಮಕ್ಕಳಿದ್ದರು. ಇವರನ್ನು ಗಂಟಲು ಸೀಳಿ ಮತ್ತು ಸಜೀವವಾಗಿ ದಹಿಸುವ ಮೂಲಕ ಹತ್ಯೆಗಯ್ಯಲಾಗಿತ್ತು. ಮುಂದೆ ದಲೀಪ್ ಸಿಂಗ್ ಎನ್ನುವ 7 ವರ್ಷದ ಬಾಲಕನು ತನ್ನ ತಂದೆಯನ್ನು ಯಾವ ರೀತಿ ಶಿರಚ್ಛೇದಗೊಳಿಸಲಾಯಿತು ಹಾಗೂ ತನ್ನ 16 ಹರೆಯದ ಬಿಟ್ಟೋ ದೇವಿ ಎಂಬ ಸಹೋದರಿಯೊಂದಿಗೆ ಸಂಪೂರ್ಣ ಕುಟುಂಬವನ್ನು ದಹಿಸಲಾಯಿತು ಎಂದು ಹೇಳಿದ್ದು ಅಲ್ಲಿ ಅಂದು ನಡೆದ ಕ್ರೌರ್ಯಕ್ಕೆ ಸಾಕ್ಷಿಯಾಗಿತ್ತು. ನೀನೆಂಬೋ ದೇವಿ ಮತ್ತವರ 9 ತಿಂಗಳ ಹಸುಳೆಯನ್ನೂ ಅಂದು ಕೊಲೆಗಯ್ಯಲಾಗಿತು, ಅವರ ಪತಿ ಸುರಂ ಚಂದ್ ಇಂದಿಗೂ ನ್ಯಾಯದ ಪ್ರತೀಕ್ಷೆಯಲಿದ್ದಾರೆ.
ಅಂದು ಮತಾಂತರಗೊಳ್ಳಲು ನಿರಾಕರಿಸಿದ ಕಾರಣಕ್ಕಾಗಿ ಹತ್ಯಾಕಾಂಡವನ್ನು ನಡೆಸಲಾಯಿತು ಎಂದು ಬದುಕುಳಿದವರು ತಿಳಿಸಿದರೆ, ಸಂಬಂಧಿಸಿದ ಅಧಿಕಾರಿಗಳಿಗೆ ಹತ್ಯಾಕಾಂಡದ ಕುರಿತಾದ ವಿಚಾರವು ತಿಳಿದದ್ದು 10 ಗಂಟೆಗಳ ಬಳಿಕ. ವಿಚಾರ ತಿಳಿದ ಬಳಿಕವೂ ಭದ್ರತಾ ಪಡೆಗಳು ಆಗಮಿಸಿದ್ದು ಮಾರನೆಯ ದಿನ. ಈ ಘಟನೆಯಿಂದಾಗಿ ಗ್ರಾಮದ ಸುಮಾರು ಸಾವಿರ ಹಿಂದೂಗಳು ರಿಯಾಸಿ, ಪೌನಿ ತನ್ಪಾಲ್, ಚಸಾನಾ ಪ್ರದೇಶಗಳಿಗೆ ವಲಸೆ ಹೋಗುವಂತಾಯಿತು. ಘಟನೆ ನಡೆದು ದಶಕದ ಬಳಿಕ ಏಪ್ರಿಲ್ 2008 ರಲ್ಲಿ, ಹಿಜ್ಬುಲ್ ಮುಜಾಹಿದ್ದೀನ್ಗೆ ಸೇರಿದ ಉಗ್ರಗಾಮಿ ಮಾಸ್ಟರ್ ಮೈಂಡ್ ಅಬ್ದುಲ್ ಹಕ್ ಅಲಿಯಾಸ್ ಜಹಾಂಗೀರ್ ನನ್ನ ಭಾರತೀಯ ಭದ್ರತಾ ಪಡೆಗಳು ಗುಂಡಿಕ್ಕಿ ಸಂಹರಿಸಿತು. ಆದರೆ ಇಂದಿಗೂ ಪ್ರಾಣ್ ಕೋಟ್ ನ ಸಂತ್ರಸ್ತ ಹಿಂದೂ ಕುಟುಂಬಗಳು ಎರಡು ದಶಕಗಳ ಬಳಿಕವೂ ನ್ಯಾಯಕ್ಕಾಗಿ ಎದುರು ನೋಡುತ್ತಿದೆ. ನಾವು ಈ ಹತ್ಯಾಕಾಂಡವನ್ನು ಮರೆತೇ ಬಿಟ್ಟಿದ್ದೇವೆ. ಭಾರತೀಯ ಇತಿಹಾಸದ ಕಪ್ಪು ಚುಕ್ಕೆಯಾಗಿರುವ ಈ ಹತ್ಯಾಕಾಂಡವನ್ನು ಮರೆಯದಿರೋಣ ಅಲ್ಲವೇ?
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.