ಅದು ಭಾರತದ ಇತಿಹಾಸದ ಪುಟದ ರಕ್ತಸಿಕ್ತ ಅಧ್ಯಾಯ. ಅಂದು ಒಬ್ಬಿಬ್ಬರಲ್ಲ ಸಾವಿರದ ಇನ್ನೂರಕ್ಕೂ ಹೆಚ್ಚಿನ ದೇಶಪ್ರೇಮಿಗಳು ಹುತಾತ್ಮರಾಗಿದ್ದರು. ಪಂಜಾಬ್ನ ಜಲಿಯನ್ ವಾಲಾಭಾಗ್ನಲ್ಲಿ ಜನರಲ್ ಡಯರ್ ಎಂಬ ಬ್ರಿಟಿಷ್ ಅಧಿಕಾರಿ ನಡೆಸಿದ ಕ್ರೌರ್ಯ, ಯಾವುದೇ ನರಮೇಧಕ್ಕೂ ಕಡಿಮೆಯಿರಲಿಲ್ಲ.
ಅತ್ಯಂತ ಹೆಚ್ಚುಬಾರಿ ಆಕ್ರಮಣಕ್ಕೆ ಗುರಿಯಾದ ಪಂಜಾಬ್ ಅಂದು ಮತ್ತೊಮ್ಮೆ ದೇಶಪ್ರೇಮಿಗಳ ಮಾರಣಹೋಮಕ್ಕೆ ಸಾಕ್ಷಿಯಾಗಿತ್ತು. 13 ಏಪ್ರಿಲ್ 1919 ಸಿಖ್ ಪಂಗಡದ ಪವಿತ್ರ ಬೈಸಾಖಿ ದಿನ. ಬೈಸಾಖಿ ದಿನದಂದು ಅವಿಭಜಿತ ಪಂಜಾಬ್ನ ಜನರೆಲ್ಲರೂ ಜಲಿಯನ್ ವಾಲಾ ಭಾಗ್ನಲ್ಲಿ ಸೇರುವುದು ಹಲವಾರು ವರ್ಷಗಳಿಂದ ನಡೆಯುತ್ತಿದ್ದ ಸಂಪ್ರದಾಯ. ಅದರಂತೆ ಆ ದಿನವೂ ಜಲಿಯನ್ ವಾಲಾಭಾಗ್ ಜನರಿಂದ ತುಂಬಿತ್ತು. ಆದರೆ ಅದೇ ಸಂದರ್ಭದಲ್ಲಿ ಅಮೃತ್ಸರದಲ್ಲಿ 5 ಕ್ಕೂ ಹೆಚ್ಚಿನ ಜನರು ಗುಂಪುಗೂಡದಂತೆ ಮಾರ್ಷಲ್ ನಿಯಮವನ್ನು ಹೇರಲಾಗಿತ್ತು. ಆದರೆ ಗ್ರಾಮಾಂತರ ಪಂಜಾಬಿನ ಜನರು ಇದರ ತಮ್ಮ ಸಂಪ್ರದಾಯದಂತೆ ಜಲಿಯನ್ ವಾಲಾಭಾಗ್ನಲ್ಲಿ ಸೇರಿದ್ದರು. ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಜನರು ಸೇರಿದ್ದಾರೆ, ಮತ್ತಿವರು ಬ್ರಿಟಿಷ್ ಸರಕಾರದ ವಿರುದ್ಧ ದಂಗೆ ಏಳಬಹುದು ಎಂದು, ಜನರಲ್ ಡಯರ್ ಎಂಬ ಅಧಿಕಾರಿಯು ಕ್ರೂರವಾದ ನಿರ್ಧಾರವೊಂದನ್ನು ಕೈಗೊಂಡ.
ಇನ್ನೇನು ಸೂರ್ಯ ಮುಳುಗುವ ಸಮಯ. ಆಗ ಅಲ್ಲಿಗೆ ಬಂದಿದ್ದು 90 ಸೈನಿಕರ ಬ್ರಿಟೀಷ್ ತುಕಡಿ. ಉದ್ಯಾನವನದಲ್ಲಿ ಸೇರಿದ್ದ ಒಬ್ಬರೂ ತಪ್ಪಿಸಿಕೊಳ್ಳಬಾರದು, ಎಂಬ ಉದ್ದೇಶದಿಂದ ಉದ್ಯಾನವನಕ್ಕಿದ್ದ ಏಕೈಕ ಬಾಗಿಲನ್ನು ಜನರಲ್ ಡಯರ್ ಮುಚ್ಚಿಸಿದನು. ಬ್ರಿಟೀಷ್ ಸೈನಿಕರು ಆಯಕಟ್ಟಿನ ಸ್ಥಳಗಳಿಂದ ತಮ್ಮ ಬಂದೂಕುಗಳಿಂದ ಗುಂಡಿನ ಮಳೆಗರೆದರು. ಸುಮಾರು 10 ನಿಮಿಷಗಳ ಕಾಲ ನಡೆದ ಗುಂಡಿನ ಭೋರ್ಗರೆತ. ಹಬ್ಬದ ಸಂಭ್ರಮದಲ್ಲಿದ್ದ ಉದ್ಯಾನವನ ಅಕ್ಷರಶಃ ಸ್ಮಶಾನವಾಗಿತ್ತು. ಅಂದು ಹಾಗೆ ಬ್ರಿಟಿಷರ ಗುಂಡಿಗೆ ಪ್ರಾಣ ತೆತ್ತವರ ಸಂಖ್ಯೆ 1200 ಕ್ಕೂ ಹೆಚ್ಚು. ಗುಂಡಿನ ದಾಳಿಯಿಂದ ತಪ್ಪಿಸಲು ಪ್ರಯತ್ನಿಸಿದ ಅನೇಕರು ಮೈದಾನದ ಬಾವಿಗೆ ಬಿದ್ದು ಪ್ರಾಣ ಕಳೆದುಕೊಂಡರು. ಎಳೆಯ ಕಂದಮ್ಮಗಳು, ಮಕ್ಕಳು, ಮಹಿಳೆಯರೂ, ವೃದ್ಧರನ್ನೂ ಕರುಣೆಯಿಲ್ಲದೇ ನಿರ್ದಯವಾಗಿ ಮಾರಣಹೋಮ ನಡೆಸಲಾಗಿತ್ತು.
ಜನರಲ್ ಡಯರ್ ನಡೆಸಿದ ಹತ್ಯಾಕಾಂಡಕ್ಕೆ ಬ್ರಿಟನ್ನಲ್ಲಿ ಶ್ಲಾಘನೆ ವ್ಯಕ್ತವಾಗಿದ್ದರೆ ಭಾರತದಲ್ಲಿ ಆಕ್ರೋಶದ ಜ್ವಾಲೆ ಹೊತ್ತಿ ಉರಿಯುತ್ತಿತ್ತು. ಕ್ರೂರಿಯ ಕ್ರೌರ್ಯಕ್ಕಾಗಿ ಆತನನ್ನು ಶಿಕ್ಷಿಸಿ ಎಂದು ಹೇಳುವ ಗಟ್ಟಿತನವನ್ನು ಗಾಂಧೀಜಿ ಅಥವಾ ನೆಹರೂ ಎಂಬ ನಾಯಕರು ತೋರಲೇ ಇಲ್ಲ. ಆದರೂ ಭಾರತೀಯರ ಆಕ್ರೋಶಕ್ಕೆ ಮಣಿದ ಬ್ರಿಟೀಷ್ ಸರ್ಕಾರ ಕಾಟಾಚಾರಕ್ಕೊಂದು ತನಿಖೆಯನ್ನೂ ಮಾಡಿ, ಡಯರ್ನನ್ನ ಲಂಡನ್ಗೆ ವಾಪಸ್ ಕರೆಸಿಕೊಂಡಿತ್ತು. ತನಿಖೆಯ ಅಂಗವಾಗಿ ಅಲ್ಲಿ ಕೇವಲ 379 ಮಂದಿ ಮರಣ ಹೊಂದಿದ್ದರು ಎಂಬ ಸುಳ್ಳು ವರದಿಯನ್ನೂ ಪ್ರಕಟಿಸಲಾಗಿತ್ತು.
ಈ ಹತ್ಯಾಕಾಂಡವು ಭಾರತದ ಸ್ವಾತಂತ್ರ್ಯ ಸಂಗ್ರಾಮದ ದಿಷೆಯನ್ನೇ ಬದಲಿಸಿತು ಎಂಬುದು ಉತ್ಪ್ರೇಕ್ಷೆಯಲ್ಲ.
ಹತ್ಯಾಕಾಂಡದ ಜ್ವಾಲೆಯನ್ನು ಕಣ್ಣಲ್ಲೂ ಪ್ರತೀಕಾರದ ಜ್ವಾಲೆಯನ್ನೂ ಹೃದಯದಲ್ಲೂ ಹೊಂದಿದ್ದ ತರುಣ ಉಧಮ್ ಸಿಂಗ್, ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ ನಡೆದಾಗ, ಹತ್ಯಾಕಾಂಡಕ್ಕೆ ಆದೇಶವನ್ನು ನೀಡಿ, ಡಯರ್ನ ಕೃತ್ಯವನ್ನು ಸಮರ್ಥಿಸಿಕೊಂಡಿದ್ದ ಪಂಜಾಬ್ನ ಲೆಫ್ಟಿನೆಂಟ್ ಗೌವರ್ನರ್ ಆಗಿದ್ದ ಮೈಕಲ್ ಓಡ್ವೈರ್ನನ್ನು ಅವನದ್ದೇ ನೆಲದಲ್ಲಿ ಕೊಂದು ಪ್ರತೀಕಾರವನ್ನು ತೀರಿಸಿದ್ದ. ನ್ಯಾಯಾಲಯದಲ್ಲಿ ನಿಂತು ‘21 ವರ್ಷಗಳಿಂದ ನಾನು ಪ್ರತೀಕಾರಕ್ಕಾಗಿ ಹಾತೊರೆಯುತ್ತಿದ್ದೆ. ನನ್ನ ಜನಗಳ ರಕ್ತ ಕುಡಿದವನನ್ನು ನಾನು ಕೊಂದು ಹಾಕಿದೆ. ನನಗೀಗ ಆನಂದವಾಗಿದೆ, ಇದು ತಾಯ್ನಾಡಿಗಾಗಿ ನಾನು ಮಾಡಿದ ಕರ್ತವ್ಯ. ಪ್ರಾಣ ತ್ಯಾಗ ಮಾಡುವುದಕ್ಕಿಂತಲೂ ಹೆಚ್ಚಿನ ಗೌರವ ಇನ್ನೇನಿದೆ..?’ ಎಂಬ ದಿಟ್ಟ ಮಾತುಗಳನ್ನಾಡಿದ್ದ ಉಧಮ್ ಸಿಂಗ್. ಈ ಘಟನೆ ನಡೆದ ಮೂರು ತಿಂಗಳಲ್ಲೇ ಉದಮ್ ಸಿಂಗ್ನನ್ನ ಲಂಡನ್ನಲ್ಲಿ ನೇಣಿಗೇರಿಸಲಾಯಿತು.
ಅಂದು ಧೀರ ಉದಮ್ ಸಿಂಗ್ ತೋರಿದ ಧೈರ್ಯ ಸಾಹಸ ನೂರಾರು ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಫೂರ್ತಿಯಾಗಿತ್ತು. ಆದರೆ ಮಾರ್ಚ್ 1940 ರಲ್ಲಿ, ನೆಹರು ಮತ್ತು ಮಹಾತ್ಮ ಗಾಂಧಿಯವರೂ ಒಳಗೊಂಡಂತೆ, ಬಹಳಷ್ಟು ಜನರು ಉಧಂ ಸಿಂಗ್ ಕೃತ್ಯವನ್ನು “ವಿವೇಚನಾ ರಹಿತ” ಎಂದು ಖಂಡಿಸಿದ್ದರು.
ಇಂದಿಗೂ ಪಂಜಾಬ್ನ ಜನರು ಜಲಿಯನ್ ವಾಲಾ ಭಾಗ್ ಉದ್ಯಾನವನವನ್ನು ದೇವಾಲಯದಂತೆ ಗೌರವಿಸುತ್ತಾರೆ. ಅಂದಿನ ಕ್ರೌರ್ಯದ ಕುರುಹಾಗಿ ಗುಂಡುಗಳಿಂದ ಛಿದ್ರವಾದ ಗೋಡೆಗಳು, ಭಯಾನಕ ಕಥೆಯನ್ನು ಜೀವಂತವಾಗಿರಿಸಿದೆ. ಆವರಣಲ್ಲಿದ್ದ ಬಾವಿಯೂ ಹಾಗೆಯೇ ಇದೆ. ಆದರೆ ಆ ಮಣ್ಣಿಗೆ ಕಾಲಿರಿಸುವ ಪ್ರತಿಯೊಬ್ಬ ದೇಶಭಕ್ತನೂ ಚಪ್ಪಲಿ ಕಳಚಿ ಬರಿಗಾಲಿಂದ ಮಣ್ಣನ್ನು ಸ್ಪರ್ಶಸುತ್ತಾನೆ. ಮಣ್ಣನ್ನು ಕೈಗಳಿಂದ ಮುಟ್ಟಿ ನಮಸ್ಕಾರಿಸುತ್ತಾನೆ. ಪ್ರತಿಯೊಬ್ಬ ತಾಯಿಯೂ ಮಕ್ಕಳಿಗೆ ಅಂದಿನ ಕಥೆಯನ್ನು ಹೇಳುವ ಮೂಲಕ ಹುತಾತ್ಮ ವೀರರ ಗಾಥೆಯನ್ನೂ ಜೀವಂತವಾಗಿರಿಸುತ್ತಾಳೆ.
102 ವರ್ಷಗಳ ಹಿಂದಿನ ಕ್ರೌರ್ಯದ ಘಟನೆಯನ್ನು ಮರೆಯದಿರೋಣ. ಘಟನೆಯು ಹಳೆಯದಾದರೂ ಗಾಯವೂ ಮಾಸಿಲ್ಲ, ನೋವೂ ಕಡಿಮೆಯಾಗಿಲ್ಲ. ಅಲ್ಲವೇ??
✍️ ದೀಪಾ ಜಿ. ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.