ದೇಶವು 75 ನೇ ಸ್ವಾತಂತ್ರ್ಯ ವರ್ಷಾಚರಣೆಯ ಹೊಸ್ತಿಲಲ್ಲಿದೆ. ದೇಶಕ್ಕಾಗಿ ಹಲವು ಮಂದಿ ಹೋರಾಟ ನಡೆಸಿದ್ದಾರೆ ಮಾತ್ರವಲ್ಲ ತ್ಯಾಗ ಬಲಿದಾನದ ಮೂಲಕ ರಾಷ್ಟ್ರವನ್ನು ದಾಸ್ಯದಿಂದ ಮುಕ್ತಗೊಳಿಸಿದ್ದಾರೆ. ಓರ್ವ ಮಹಿಳೆಯಾಗಿ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದು ಮಾತ್ರವಲ್ಲದೆ ಮಹಿಳಾ ಸಮಾನತೆ, ಸ್ವಾವಲಂಬನೆ ಸಹಿತ ಸಂಗೀತ, ರಂಗಕಲೆ, ಕರಕುಶಲ ವಸ್ತುಗಳ ತಯಾರಿಯಲ್ಲಿ ಜನಸಾಮಾನ್ಯರನ್ನು ಪ್ರೋತ್ಸಾಹಿಸಿ ಆರ್ಥಿಕ ಪ್ರಗತಿಗೂ ಕಾರಣರಾದವರು ಕಮಲಾದೇವಿ.
ಸಾಮಾಜಿಕ ನಿಲುವಿನ ಮೂಲಕ ದೂರದೃಷ್ಠಿ ಹೊಂದಿದ್ದ ಕಮಲಾದೇವಿ, ಸ್ವಾತಂತ್ರ್ಯ ನಂತರವು ದೇಶ ಕಟ್ಟುವ ಕಾರ್ಯದಲ್ಲಿ ಸಕ್ರಿಯರಾಗಿ, ದೇಶದ ಕಲಾ ಪರಂಪರೆಗೆ ನೀಡಿದ ಕೊಡುಗೆ ಅನನ್ಯ. ರಾಷ್ಟ್ರದ ಮಹತ್ತರ ಸಂಸ್ಥೆಗಳಾದ ಸಂಗೀತ ನಾಟಕ ಅಕಾಡೆಮಿ, ನ್ಯಾಶನಲ್ ಸ್ಕೂಲ್ ಆಫ್ ಡ್ರಾಮಾಗಳು ಕಮಲಾದೇವಿ ಚಟ್ಟೋಪಾಧ್ಯಾಯರ ಪರಿಶ್ರಮದ ಫಲವಾಗಿದೆ. ಕೇಂದ್ರೀಯ ಗೃಹ ಕೈಗಾರಿಕಾ ಸಂಸ್ಥೆ, ಭಾರತೀಯ ಕರಕುಶಲ ನಿಗಮಗಳು ಇವರ ಕತೃತ್ವ ಪ್ರಜ್ಞೆಗೆ ಸಾಕ್ಷಿ. ಓರ್ವ ಸಾಮಾಜಿಕ ಹೋರಾಟಗಾರ್ತಿಯಾಗಿ, ಕಲಾವಿದೆಯಾಗಿ, ಜನಪರ ನೇತಾರೆಯಾಗಿ ಇವರು ಸ್ಪರ್ಶಿಸಿದ ಕ್ಷೇತ್ರಗಳು ಹಲವು. ಬಹುಮುಖಿ ವ್ಯಕ್ತಿತ್ವ ಹೊಂದಿದ್ದ ಕಮಲಾದೇವಿ ಮೂಲತಃ ಕರ್ನಾಟಕದ ರಾಜ್ಯದ ಮಂಗಳೂರಿನವರು.
ಸ್ವಾತಂತ್ರ್ಯಪೂರ್ವದಲ್ಲಿ ಮದ್ರಾಸು ಸಂಸ್ಥಾನದ ಭಾಗವಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಸಾರಸ್ವತ ಬ್ರಾಹ್ಮಣ ಮನೆತನದಲ್ಲಿ ಎಪ್ರಿಲ್ 3, 1903 ರಲ್ಲಿ ಕಮಲಾದೇವಿ ಜನಿಸಿದರು. ಸುಶಿಕ್ಷಿತ ಮನೆಯಲ್ಲಿ ಬೆಳೆದ ಕಮಲಾದೇವಿಯವರಿಗೆ ಮನೆಯೇ ಪ್ರಥಮ ಪಾಠಶಾಲೆಯಾಗಿತ್ತು ಮಾತ್ರವಲ್ಲ ಇವರ ಪೋಷಕರು ಕಮಲಾದೇವಿಯವರ ಬಹುಮುಖಿ ವ್ಯಕ್ತಿತ್ವಕ್ಕೆ ಕಾರಣರಾದರು. ಇವರ ತಂದೆ ಅಂದಿನ ಕಾಲದಲ್ಲಿ ಮಂಗಳೂರಿನ ಜಿಲ್ಲಾಧಿಕಾರಿಯಾಗಿದ್ದರು. ತಾಯಿ ಕೂಡಾ ಶ್ರೀಮಂತ ಮನೆತನದಿಂದ ಬಂದವರು. ಸಂಸ್ಕೃತ ಭಾಷೆಯಲ್ಲಿ ಪಾಂಡಿತ್ಯ ಹೊಂದಿದ್ದ ಇವರ ತಾಯಿ ಕಮಲಾದೇವಿಯವರ ಶಿಕ್ಷಣಕ್ಕೆ ಪ್ರೋತ್ಸಾಹಿಸಿದರು. ಪೋಷಕರಿಗೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಆಸಕ್ತಿ ಇದ್ದ ಕಾರಣ ಹಲವು ಮಂದಿ ಸ್ವಾತಂತ್ರ್ಯ ಸೇನಾನಿಗಳ ಪರಿಚಯ ಇವರಿಗಿತ್ತು. ರಾಷ್ಟ್ರವಾದಿಗಳೊಂದಿಗಿನ ಸ್ನೇಹ ಸದಾಚಾರಗಳಿಂದ ಪ್ರಭಾವಿತರಾಗಿದ್ದ ಕಮಲಾದೇವಿಯವರಿಗೆ ಸಹಜವಾಗಿ ಮಹಾದೇವ ಗೋವೀಂದ ರಾನಡೆ, ರಮಾಭಾಯಿ, ಗೋಪಾಲಕೃಷ್ಣ ಗೋಖಲೆ ಸಹಿತ ಅನಿ ಬೆಸೆಂಟರ ಜೊತೆ ಸಂವಹನಕ್ಕೆ ದಾರಿ ಮಾಡಿ ಕೊಟ್ಟಿತ್ತು. ಇಂತಹ ಮೇರು ವ್ಯಕ್ತಿಗಳ ಸಂಪರ್ಕ, ಮಾತುಕತೆಯಿಂದ ಪ್ರಭಾವಿತರಾಗಿದ್ದ ಇವರು ನಂತರ ಸ್ವದೇಶಿ ಚಳುವಳಿಯಲ್ಲಿ ತಮ್ಮ ಎಳೆ ವಯಸ್ಸಿನಲ್ಲಿಯೇ ಧುಮುಕಿದರು. ಮಂಗಳೂರಿನ ಕ್ರಿಶ್ಚಿಯನ್ಮಿಶನ್ಶಾಲೆಯಲ್ಲಿ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ ಇವರು ಶಿಸ್ತು ಮತ್ತು ಗಾಂಭಿರ್ಯವನ್ನು ಬೆಳೆಸಿಕೊಂಡಿದ್ದರು. ಮನೆಯ ವಾತಾವರಣ ಮತ್ತು ಶಾಲೆಯಲ್ಲಿ ಅಳವಡಿಸಿಕೊಂಡ ಶಿಸ್ತು ಇವರ ಭವಿಷ್ಯದ ರಾಷ್ಟ್ರಸೇವೆಗೆ ನಾಂದಿ ಹಾಡಿತು.
ಕಮಲಾದೇವಿಯವರ ಜೀವನವೇನೂ ಸುಖದ ಸುಪತ್ತಿಗೆ ಆಗಿರಲಿಲ್ಲ, ಶ್ರೀಮಂತ ಮನೆತನದಲ್ಲಿ ಬೆಳೆದರೂ ಎಳೆಯವಲ್ಲಿಯೇ ಹಲವು ಕಷ್ಟ ಬೇಗುದಿಗಳನ್ನು ಕಂಡರು. ತನ್ನ ಎಳೆ ವಯಸ್ಸಿನಲ್ಲಿ ತನ್ನ ಆಪ್ತ ಸ್ನೇಹಿತೆಯಂತಿದ್ದ ಅಕ್ಕನನ್ನು ಕಳಕೊಂಡರು. ಆ ದುಃಖವನ್ನು ಮರೆಯುವ ಮೊದಲೇ ತನ್ನ ತಂದೆಯ ಅಕಾಲಿಕ ನಿಧನವನ್ನು ನೋಡಬೇಕಾಗಿ ಬಂದಿತ್ತು. ಈ ಘಟನೆ ಕಮಲಾದೇವಿ ಮತ್ತು ಆಕೆಯ ತಾಯಿಯನ್ನು ಬಹಳ ನೋಯಿಸಿತ್ತು. ಅಂದಿನ ಕಾಲದಲ್ಲಿದ್ದ ಭೂಹಕ್ಕು ನಿಯಮಗಳು ಮಹಿಳೆಯರ ಪರವಾಗಿ ಇಲ್ಲದೆ ಇದ್ದುದರಿಂದ ತಂದೆಯ ಆಸ್ತಿಯ ಕಿಂಚಿತ್ತೂ ಇವರಿಗೆ ದಕ್ಕಲಿಲ್ಲ. ತಮ್ಮ 14 ನೇ ವಯಸ್ಸಿನಲ್ಲಿ ಕೃಷ್ಣ ರಾವ್ಎಂಬವರನ್ನು ವಿವಾಹವಾದರು. ದುರಾದೃಷ್ಟವಶಾತ್ ಒಂದೇ ವರ್ಷದೊಳಗೆ ತಮ್ಮ ಪತಿಯನ್ನು ಕಳೆದುಕೊಂಡು ವಿಧವೆಯಾದರು. ನಂತರ ತಮ್ಮ ತಾಯಿಯ ಜೊತೆ ಸ್ವಲ್ಪ ಕಾಲ ವಾಸಿಸಿದರು. 20 ಶತಮಾನದ ಆರಂಭದಲ್ಲಿ ಮಹಿಳಾ ಸ್ವಾತಂತ್ರ್ಯ ಮತ್ತು ಸಮಾನತೆ ಎಳ್ಳಷ್ಟು ದನಿಯಿಲ್ಲದಿದ್ದ ಕಾಲಘಟ್ಟದಲ್ಲಿ ಸಮಾಜಿಕ ಸಂಕೋಲೆಗಳನ್ನು ದಾಟಿ ತಮ್ಮ ವಿದ್ಯಾಬ್ಯಾಸವನ್ನು ಮುಂದುವರಿಸಿದರು. ವಿಧವೆಯಾದಾಕೆ ಮನೆಯಿಂದ ಹೊರ ನಡೆಯುವಂತಿಲ್ಲ ಎಂಬಂತಹ ಸಾಮಾಜಿಕ ರೀತಿ ರಿವಾಜಿಗಳನ್ನು ಲೆಕ್ಕಿಸದೆ 1918 ರಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದರು. ನಂತರ ಅಂದಿನ ಮದ್ರಾಸಿನ ಕ್ವೀನ್ಮೇರಿ ಕಾಲೇಜಿನಲ್ಲಿ ತಮ್ಮ ಉನ್ನತ ವಿದ್ಯಾಭ್ಯಾಸವನ್ನು ಮುಂದುವರಿಸಿದರು. ಮದ್ರಾಸಿನಲ್ಲಿದ್ದ ಸಮಯ ಸರೋಜಿನಿ ನಾಯ್ಡು ಅವರ ಸಹೋದರಿ ಸುಹಾಸಿನಿ ಚಟ್ಟೋಪಾಧ್ಯಾಯ ಪರಿಚಯ ಕಮಲಾದೇವಿ ಅವರಿಗಾಯಿತು. ಸುಹಾಸಿನಿ ತಮ್ಮ ಸಹೋದರರಾದ ಹರೀಂದ್ರನಾಥ ಚಟ್ಟೋಪಾಧ್ಯಾಯರನ್ನು ಇವರಿಗೆ ಪರಿಚಯಿಸಿದರು. ಹರೀಂದ್ರನಾಥರು ಅಂದು ಓರ್ವ ಉತ್ತಮ ನಾಟಕ ಕಥಾ ರಚನೆಗಾರ ಎಂದು ಹೆಸರುವಾಸಿಯಾಗಿದ್ದರು ಮಾತ್ರವಲ್ಲ ರಂಗಸ್ಥಳದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಸಂಗೀತ, ನಾಟಕ, ಕಲೆ ಮೊದಲಾದ ಕ್ಷೇತ್ರಗಳಲ್ಲಿ ಇವರಿಬ್ಬರ ಆಸಕ್ತಿಗಳು ಒಂದೆ ತೆರನಾಗಿದ್ದ ಕಾರಣ ದೇವಿ ತಮ್ಮ 20 ನೇ ವಯಸ್ಸಿನಲ್ಲಿ ಹರೀಂದ್ರನಾಥರನ್ನು ವರಿಸಿದರು. ಅಂದಿನ ಸಮಾಜಿಕ ನಿಲುವುಗಳನ್ನು ದಿಕ್ಕರಿಸಿ ನಡೆದ ವಿವಾಹ ಇದಾಗಿತ್ತು. ಮಹಿಳೆಯರಿಗೆ ನಟನೆಯಲ್ಲಿ ಅವಕಾಶವಿಲ್ಲದ ಕಾಲಘಟ್ಟದಲ್ಲಿ ನಟನೆಯಲ್ಲೂ ತಮ್ಮನ್ನು ತೊಡಗಿಸಿಕೊಂಡರು. ಎರಡು ಸೈಲೆಂಟ್ ಸಿನಿಮಾಗಳಲ್ಲಿ ನಟಿಸಿದ ಕೀರ್ತಿ ಕಮಲಾದೇವಿ ಅವರದ್ದು. ಕನ್ನಡ ಭಾಷೆಯ ಮೃಚ್ಛಕಟಿಕಾ ಇವರ ಪ್ರಥಮ ಸಿನಿಮಾ, ನಂತರದ ಹಿಂದಿಯ ಕೆಲ ಸಿನಿಮಾಗಳಲ್ಲೂ ಪಾತ್ರ ನಿರ್ವಹಿಸಿದರು.
ಹರೀಂದ್ರನಾಥ ಚಟ್ಟೋಪಾಧ್ಯಾಯರನ್ನು ಮದುವೆಯಾದ ನಂತರ ಅವರೊಂದಿಗೆ ಲಂಡನ್ ತೆರಳಿದ ಕಮಲಾ, ಲಂಡನ್ನಿನ ಬೆಡ್ಪೋರ್ಡ್ ವಿ.ವಿ. ಯಲ್ಲಿ ಸಮಾಜಶಾಸ್ತ್ರ ಪದವಿ ಪಡೆದರು. 1923 ರ ಕಾಲಘಟ್ಟದಲ್ಲಿ ಭಾರತದಲ್ಲಾಗಲೇ ಸ್ವಾತಂತ್ರ್ಯ ಸಂಗ್ರಾಮದ ಕಹಳೆ ಮೊಳಗಿತ್ತು, ದೇಶ ಸೇವೆಯ ಕೂಗು ಕಮಲಾದೇವಿಯವರನ್ನು ಸ್ವಾತಂತ್ರ್ಯ ಸಂಗ್ರಾಮಕ್ಕೆ ಪ್ರೇರೇಪಿಸಿತು. ಮಹಾತ್ಮಾ ಗಾಂಧಿಯವರ ಅಸಹಕಾರ ಚಳುವಳಿ, ಸಾಮಾಜಿಕ ಕಾಳಜಿಯನ್ನು ಹತ್ತಿರದಿಂದ ಕಂಡ ಇವರು ಉಪ್ಪಿನ ಸತ್ಯಾಗ್ರಹದಲ್ಲೂ ಭಾಗವಹಿಸಿ ಸೇವಾದಳದ ಸಕ್ರಿಯ ಕಾರ್ಯಕರ್ತೆಯಾದರು. ಅಖಿಲ ಭಾರತೀಯ ಮಹಿಳಾ ಸಮಾವೇಶದ ಮೂಲಕ ಪ್ರಭಾವಿತರಾಗಿದ್ದ ಕಮಲಾದೇವಿ ನಂತರ ಸ್ತ್ರೀಯರ ಸಮಾಜಿಕ ಸ್ವಾತಂತ್ರ್ಯಕ್ಕಾಗಿ ದನಿ ಮೊಳಗಿಸಿದರು. ಮುಂಬೈಯಲ್ಲಿ ನಡೆದ ಉಪ್ಪಿನ ಸತ್ಯಾಗ್ರಹ ಚಳುವಳಿಯಲ್ಲಿ ಭಾಗವಹಿಸಿದ್ದ ಕಮಲಾದೇವಿ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಮಳಿಗೆಯಲ್ಲಿ ಉಪ್ಪು ಮಾರಾಟ ಚಳುವಳಿಯ ಅಣುಕು ಪ್ರದರ್ಶನ ಮಾಡಿದ್ದರು, ಮಾತ್ರವಲ್ಲ ಬಂಧನಕ್ಕೂ ಒಳಗಾದರು. ದೇಶ ವಿಭಜನೆಯ ಸಂದರ್ಭ ನಿರಾಶ್ರಿತರ ಪರವಾಗಿ ಬಹಳಷ್ಟು ಶ್ರಮಿಸಿದ ಇವರು, ನಿರಾಶ್ರಿತರ ಸ್ವಾವಲಂಬನೆಗೋಸ್ಕರ ಹಲವು ಕ್ರಿಯಾತ್ಮಕ ಚಟುವಟಿಕೆಗಳನ್ನು ಕೈಗೊಂಡರು. ಚನ್ನೈ ಕೇಂದ್ರಿತ ಕ್ರಾಫ್ಟ್ ಕೌನ್ಸಿಲ್ ಆಫ್ ಇಂಡಿಯಾ (ಭಾರತೀಯ ಕರಕುಶಲ ವಸು ತಯಾರಿಕಾ ಸಮಿತಿ) ಸ್ಥಾಪನೆಗೂ ಇವರೇ ಪ್ರೇರಣೆಯಾಗಿದ್ದರು.
ಓರ್ವ ಬರಹಗಾರ್ತಿಯಾಗಿಯೂ ಮಹಿಳೆಯರ ಕಾಳಜಿ ಬಗ್ಗೆ ಹಲವು ಲೇಖನಗಳನ್ನು ಬರೆದಿದ್ದರು. ಹಲವು ಸಂಗ್ರಾಮ, ಸಾಮಾಜಿಕ ಬದಲಾವಣೆಯ ಹೋರಾಟಗಳಲ್ಲಿ ಸಕ್ರಿಯರಾಗಿದ್ದ ಚಟ್ಟೋಪಾಧ್ಯಾಯ 1988 ರಲ್ಲಿ ಅಸುನೀಗಿದರು. ದೇಶ ಇಂದಿಗೂ ಕಮಲಾದೇವಿಯವರ ಸಾಮಾಜಿಕ ಸೇವೆಯನ್ನು ಸ್ಮರಿಸುತ್ತಿದೆ. ಅವರು ಆರಂಭಿಸಿದ ಸಂಸ್ಥೆಗಳು ದೇಶದ ಪ್ರತಿಷ್ಠಿತ ಸಂಸ್ಥೆಗಳಾಗಿವೆ.
✍️ ವಿವೇಕಾದಿತ್ಯ ಕೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.