ಕೊರೋನಾ ಸಂಕಷ್ಟದ ನಡುವೆಯೇ ದೇಶದ ಹಲವು ರಾಜ್ಯಗಳಲ್ಲಿ ಚುನಾವಣೆ, ಉಪ ಚುನಾವಣೆಗಳಿಗೆ ದಿನ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ವಿವಿಧ ಪಕ್ಷಗಳು ಭರ್ಜರಿ ಎಲೆಕ್ಷನ್ ಕ್ಯಾಂಪೇನ್ ಅನ್ನು ಅಬ್ಬರದಿಂದಲೇ ನಡೆಸುತ್ತಿವೆ. ಕೊರೋನಾ ಎಂಬುದು ಪ್ರಚಾರದಲ್ಲಿ ಸೇರಿರುವ ಜನಮಾನಸದ ಕಾಲ್ತುಳಿತಕ್ಕೆ ಸಿಕ್ಕಿ ಸತ್ತು ಹೋಗುವುದೇನೋ ಎಂಬಂತೆ ಭರ್ಜರಿ, ಅಬ್ಬರದ ಪ್ರಚಾರ ಕಾರ್ಯಗಳು ನಡೆಯುತ್ತಿರುವುದನ್ನೂ ನಾವು ಕಾಣಬಹುದಾಗಿದೆ.
ಇದೇ ಸಂದರ್ಭದಲ್ಲಿ ಭಾರತದಲ್ಲಿಯೂ ಕೊರೋನಾ ಎರಡನೇ ಅಲೆ ಬೀಸುವುದಕ್ಕೆ ಆರಂಭವಾಗಿದೆ. ಕೊರೋನಾ ಸೋಂಕಿನ ಭೀಕರತೆಯ ಅರಿವಾಗಿರುವ ಕೇಂದ್ರ, ರಾಜ್ಯ ಸರ್ಕಾರಗಳು ಹಲವು ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆಯೂ ಸೂಚಿಸುತ್ತಲೇ ಬಂದಿದೆ. ಆದರೆ ಅದರ ಪಾಲನೆಯನ್ನು ಜನಸಾಮಾನ್ಯರು ಬಿಡಿ, ನಮಗೆ ಮಾದರಿಯಾಗಬೇಕಾದ ನಾಯಕರು ಎಷ್ಟರ ಮಟ್ಟಿಗೆ ಅನುಸರಣೆ ಮಾಡುತ್ತಿದ್ದಾರೆ, ಅವರ ಹಿಂಬಾಲಕರಿಗೆ ನಿಯಮ ಪಾಲನೆ ಮಾಡುವಂತೆ ಎಷ್ಟರ ಮಟ್ಟಿಗೆ ಪ್ರೇರಣೆ ನೀಡುತ್ತಿದ್ದಾರೆ ಎಂಬುದರ ಬಗೆಗೂ ಆಲೋಚಿಸಬೇಕಾದ ಅನಿವಾರ್ಯತೆಯಲ್ಲಿ ನಾವಿದ್ದೇವೆ.
ಮುಖ್ಯವಾಗಿ ಚುನಾವಣೆಯ ಸಂದರ್ಭದಲ್ಲಿ ಎಲ್ಲಾ ಪಕ್ಷಗಳೂ ಮತಯಾಚನೆಗಾಗಿ ಗುಂಪುಗೂಡಿಕೊಂಡೇ ಹೋಗುವುದು, ಪ್ರಚಾರ ಸಭೆಗಳನ್ನು ನಡೆಸುವುದು ಹಿಂದಿನಿಂದಲೇ ನಡೆದುಕೊಂಡು ಬಂದ ಪದ್ಧತಿ. ಆದರೆ ಈ ಬಾರಿ ಪ್ರತಿಕೂಲ ಪರಿಸ್ಥಿತಿ ಇರುವುದರ ಅರಿವಿದ್ದೂ ಜನರನ್ನು ಗುಂಪುಗೂಡಿಸುವ ಮೂಲಕ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದನ್ನು ಮರೆಯುವುದು ಅಥವಾ ಮರೆತಂತೆ ನಟಿಸುವುದು, ಮಾಸ್ಕ್ ಧರಿಸದೇ ಪ್ರಚಾರ ಕಾರ್ಯಗಳಲ್ಲಿ ಭಾಗವಹಿಸುವುದು ಕಂಡು ಬರುತ್ತಿದೆ. ಕೊರೋನಾ ಹಿನ್ನೆಲೆಯಲ್ಲಿ ಪ್ರಚಾರ ಸಂದರ್ಭದಲ್ಲಿ ಅನುಸರಿಸಬೇಕಾದ ನಿಯಮಗಳ ಬಗ್ಗೆ ಚುನಾವಣಾ ಆಯೋಗ ನಿಯಮಗಳನ್ನು ಹೊರಡಿಸಿದ್ದರೂ ಕೆಲವೊಂದು ಪಕ್ಷಗಳು, ಜನರು ಈ ನಿಯಮಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿ ವರ್ತಿಸುತ್ತಿರುವುದು ಕಣ್ಣಿಗೆ ಕಾಣಿಸುತ್ತಿರುವ ಸತ್ಯ. ಹೀಗೆಯೇ ಮುಂದುವರಿದಲ್ಲಿ ಕೊರೋನಾ ಸೋಂಕು ವ್ಯಾಪಿಸುವ ಸಂಖ್ಯೆ ಕಡಿಮೆಯಾಗುವುದು ಹೇಗೆ ಸಾಧ್ಯ?
ಮಾಸ್ಕ್ ಧರಿಸುವಂತೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಸ್ವಚ್ಛತೆ ಸೇರಿದಂತೆ ಇನ್ನಿತರ ಕೊರೋನಾ ನಿಯಂತ್ರಣ ಕ್ರಮಗಳ ಬಗ್ಗೆ ಜನರನ್ನು ಎಚ್ಚರಿಸಬೇಕಾದ, ತಮ್ಮ ನಡೆಯ ಮೂಲಕವೇ ಜನರಿಗೆ ಮಾದರಿಯಾಗಬೇಕಾದ ನಾಯಕರೇ ದಾರಿ ತಪ್ಪಿದಲ್ಲಿ ಕೊರೋನಾ ನಿಯಂತ್ರಣ ಎಂಬುದು ಸಾಧ್ಯವಿದೆಯೇ? ಒಮ್ಮೆ ಯೋಚಿಸಿ ನೋಡಿ. ಹೆಚ್ಚಿನವರ ಮನೆಗಳಲ್ಲಿ 45 ವರ್ಷ ಮೇಲ್ಪಟ್ಟವರು, ಅನಾರೋಗ್ಯದಿಂದ ಬಳಲುತ್ತಿರುವವರು, ಮಕ್ಕಳು ಕಾಣ ಸಿಗುತ್ತಾರೆ. ಅಂತಹವರನ್ನು ಕೊರೋನಾ ಸೋಂಕಿನಿಂದ ಕಾಪಾಡಿಕೊಳ್ಳಬೇಕಾದರೆ ನಾವು ಎಚ್ಚರದಿಂದಿರಬೇಕು. ನಮ್ಮ ಸಾರ್ವಜನಿಕ ಜವಾಬ್ದಾರಿಗಳನ್ನು ಮರೆಯಬಾರದು. ಒಂದು ವೇಳೆ ಎಚ್ಚರ ತಪ್ಪಿದೆವು ಎಂದಾದಲ್ಲಿ ನಾವು ಮಾತ್ರವಲ್ಲದೆ ನಮ್ಮ ಸಂಪರ್ಕಕ್ಕೆ ಬರುವ ಇತರರೂ ಇದರಿಂದಾಗಿ ಸಮಸ್ಯೆ ಅನುಭವಿಸಬೇಕಾಗುತ್ತದೆ ಎಂಬ ಕನಿಷ್ಟ ಅರಿವನ್ನಾದರೂ ನಾವು ಹೊಂದಿರಬೇಕಾದ ಅನಿವಾರ್ಯತೆ ಇಂದಿನ ತುರ್ತು ಎನ್ನಬಹುದೇನೋ.
ಈ ನಡುವೆ ಅಬ್ಬರದ ಪ್ರಚಾರಗಳಲ್ಲಿ ಯಾವ ನಿಯಮಗಳನ್ನೂ ಅನುಸರಿಸದೇ ಭಾಗವಹಿಸುವ ಜನಸಾಮಾನ್ಯ ಅರಿತುಕೊಳ್ಳಬೇಕಾದ ಮುಖ್ಯ ವಿಚಾರವೆಂದರೆ, ನಾಯಕರೆನಿಸಿಕೊಂಡವರ ಆರ್ಥಿಕ ಶಕ್ತಿ ಉತ್ತಮವಾಗಿರುತ್ತದೆ. ಅವರಿಗೆ ಅನಾರೋಗ್ಯ, ಮಾರಣಾಂತಿಕ ಕಾಯಿಲೆಗಳು ಬಂದಲ್ಲಿ ಅದಕ್ಕೆ ಪೂರಕವಾದ ಅಗತ್ಯ ಚಿಕಿತ್ಸೆಗಳನ್ನು ತಕ್ಷಣದಲ್ಲಿಯೇ ಪಡೆದುಕೊಳ್ಳಲು ಸಹ ಶಕ್ತಿಯೂ ಇರುತ್ತದೆ. ಜೊತೆಗೆ ಅವರ ಅವಶ್ಯಕತೆಗನುಗುಣವಾಗಿ ಆಸ್ಪತ್ರೆಗಳೂ ಇವೆ. ಅದರೆ ಬಡವರಿಗೆ, ಮಧ್ಯಮ ವರ್ಗದ ಜನರಿಗೆ ಹಾಗಲ್ಲ. ʼತಲೆಗಿದ್ದರೆ ಕಾಲಿಗಿಲ್ಲʼ ಎಂಬಂತೆ ಬದುಕುವ ಶ್ರೀಸಾಮಾನ್ಯರೂ ನಮ್ಮಲ್ಲಿದ್ದಾರೆ. ಆ ದಿನ ದುಡಿದರೆ ಅಂದಿನ ಊಟಕ್ಕೆ ದಾರಿಯಾಗುತ್ತದೆ ಎಂಬ ವರ್ಗವೂ ನಮ್ಮಲ್ಲಿದೆ. ಹೇಳಿ ಸ್ವಾಮಿ, ಇಂತಹ ಬಡ ಜನರಿಗೆ ಕೊರೋನಾ ಅಥವಾ ಇನ್ಯಾವುದೇ ಕಾಯಿಲೆಗಳು ಬಂದರೆ ಅದರ ಹೊಣೆ ಹೊತ್ತುಕೊಳ್ಳುವವರು ಯಾರು?
ಗುಂಪುಗೂಡದಿದ್ದ ಮಾತ್ರಕ್ಕೆ, ಮಾಸ್ಕ್ ಧರಿಸದೇ ಇರುವ ಕಾರಣಕ್ಕೆ ಮಾತ್ರವೇ ಸೋಂಕು ಬರುತ್ತದೆಯೇ? ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿದವರಿಗೆ ಕೊರೋನಾ ಬರುವುದಿಲ್ಲವೇ ಎಂಬ ಪ್ರಶ್ನೆಗಳೂ ಮೂಡುತ್ತವೆ ಅಲ್ಲವೇ. ಅನಿರೀಕ್ಷಿತವಾಗಿ ಬರುವುದು ಬೇರೆ ವಿಚಾರ. ಅಪಾಯವನ್ನು ನಾವಾಗಿಯೇ ಮೈಮೇಲೆ ಎಳೆದುಕೊಳ್ಳುವುದು ಬೇರೆ ಸಂಗತಿ. ಆದ್ದರಿಂದ ಚುನಾವಣಾ ಪ್ರಚಾರ ಸೇರಿದಂತೆ ಇನ್ನಿತರ ಎಲ್ಲಾ ಸಭೆ, ಸಮಾರಂಭಗಳಲ್ಲಿ ಕೊರೋನಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವ ಮೂಲಕ ನಾವೂ ಸುರಕ್ಷಿತರಾಗಿರೋಣ. ಜೊತೆಗೆ ನಮ್ಮವರ ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿಯೂ ಅಗತ್ಯ ಎಚ್ಚರ ವಹಿಸೋಣ.
✍️ ಭುವನ ಬಾಬು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.