ದೇಶದಲ್ಲಿ ಕರ್ನಾಟಕ ರಾಜ್ಯವು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸುತ್ತಿದೆ. ರಾಜ್ಯದಿಂದ 40% ಗಳಷ್ಟು ಎಂಜಿನಿಯರಿಂಗ್ ರಿಸರ್ಚ್ ಮತ್ತು ಡೆವಲಪ್ಮೆಂಟ್ ಆದಾಯ ದೇಶಕ್ಕೆ ಸಂದಾಯವಾಗುತ್ತಿದೆ. 2018 ರಿಂದೀಚೆಗೆ ರಾಜ್ಯದ ಇಆರ್ ಮತ್ತು ಡಿ ವಲಯ ಕ್ಷಿಪ್ರ ಪ್ರಗತಿಯನ್ನು ಸಾಧಿಸುತ್ತಿದೆ. ಇದರ ಸಂಯುಕ್ತ ವಾರ್ಷಿಕ ಬೆಳವಣಿಗೆ 12.8% ಗಳಿಷ್ಟಿವೆ. ಇದೇ ವೇಗದಲ್ಲಿ ಮುಂದುವರಿದರೆ ಮುಂದಿನ 4 ವರ್ಷಗಳಲ್ಲಿಯೇ ಅಂದರೆ 2025 ರ ಸಂದರ್ಭದಲ್ಲಿ ಈ ವಲಯ ಆರ್ಥಿಕವಾಗಿ 2 ಟ್ರಿಲಿಯನ್ ಡಾಲರ್ಗಳಷ್ಟು ಗುರಿಯನ್ನು ಸಾಧಿಸುವ ಸಾಧ್ಯತೆ ಇದೆ ಎಂಬುದು ತಜ್ಞರ ಅಭಿಪ್ರಾಯ. ಈ ವಲಯದ ಉಪವಲಯ, ಸಾಫ್ಟ್ವೇರ್ ಉತ್ಪನ್ನಗಳು ಸೇರಿದಂತೆ ಹಲವು ವಿಚಾರಗಳು ಗಮನಾರ್ಹವಾದ ಕೊಡುಗೆಗಳನ್ನು ನೀಡಿವೆ, ನೀಡುತ್ತಿವೆ.
ದೇಶದಲ್ಲಿ 900 ಕ್ಕೂ ಹೆಚ್ಚು ಆರ್ & ಡಿ ಮತ್ತು ಜಾಗತಿಕ ಸಾಮರ್ಥ್ಯ ಕೇಂದ್ರ (ಜಿಸಿಸಿ) ಗಳಿವೆ. ಈ ಸೇವಾ ಪೂರೈಕೆದಾರರು ವಿಶ್ವಾದ್ಯಂತ ನೂತನ ಪರಿಹಾರಗಳನ್ನು ಒದಗಿಸುವ ನಿಟ್ಟಿನಲ್ಲಿಯೂ ಸೇವೆ ನೀಡುತ್ತಿದ್ದಾರೆ. ಅಗ್ರ ವಿಶ್ವಮಾನ್ಯ 1000 ಕಂಪನಿಗಳಲ್ಲಿ 20% ಗಳಿಗಿಂತಲೂ ಹೆಚ್ಚು ಸೇವೆ ಸಲ್ಲಿಸುತ್ತಾರೆ. ಭಾರತದ ಆರ್ಥಿಕತೆಯ ಬೆಳವಣಿಗೆಯ ದೃಷ್ಟಿಯಿಂದ ಹೇಳುವುದಾದರೆ ಕರ್ನಾಟಕದ ಸ್ಥಾನವೂ ಬಲಗೊಂಡಿದೆ. ಆ ಕಾರಣದಿಂದಲೇ ರಾಜ್ಯವನ್ನು ‘ಭಾರತದ ನಾವೀನ್ಯತಾ ಶಕ್ತಿ ಕೇಂದ್ರʼ ಎಂದು ಪರಿಗಣಿಸಲಾಗಿದೆ. ಇಲ್ಲಿ 400 ಕ್ಕೂ ಅಧಿಕ ಪ್ರಮುಖ ಆರ್ & ಡಿ ಮತ್ತು ಜಿಸಿಸಿಗಳಿವೆ. (ಜಾಗತಿಕ ಸಾಮರ್ಥ್ಯ ಕೇಂದ್ರ). ರಾಜಧಾನಿ ಬೆಂಗಳೂರು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಟೆಕ್ ಹಬ್ ಆಗಿಯೂ ಮಾನ್ಯತೆಯನ್ನು ಪಡೆದುಕೊಂಡಿದೆ. ಜಾಗತಿಕವಾಗಿ ಹೇಳುವುದಾದರೆ 4 ನೇ ಅತಿದೊಡ್ಡ ತಂತ್ರಜ್ಞಾನ ಕ್ಲಸ್ಟರ್ ಆಗಿ ಹೊರಹೊಮ್ಮಿದೆ. ನಾವೀನ್ಯತೆಯ ಅಲೆಯನ್ನು ಮುನ್ನಡೆಸಲು, ರಾಜ್ಯದ ‘ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಮತ್ತು ಎಸ್ & ಟಿ ಇಲಾಖೆʼ ಇತ್ತೀಚೆಗೆ ಎಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿ (ಎಂಜಿನಿಯರಿಂಗ್ ಆರ್ & ಡಿ) ನೀತಿ 2021 ನ್ನು ಪ್ರಕಟಿಸಿದೆ.
ಮಲ್ಟಿ ನ್ಯಾಷನಲ್ ಕಂಪೆನಿಗಳು, ಜಿಸಿಸಿಗಳು, ಎಂಜಿನಿಯರಿಂಗ್ ಸೇವಾ ಪೂರೈಕೆದಾರರನ್ನು ಆಕರ್ಷಿಸುವ ಮೂಲಕ ಭಾರತವನ್ನು ʼಇಆರ್ ಮತ್ತು ಡಿʼಗಾಗಿ ‘ಡೆಸ್ಟಿನೇಶನ್ ಆಫ್ ಚಾಯ್ಸ್’ ಎಂದು ಸ್ಥಾನದಲ್ಲಿರಿಸಲಾಗಿದೆ. ಎಂಜಿನಿಯರಿಂಗ್ ನಡುವಿನ ಅಂತರವನ್ನು ಕಡಿಮೆ ಮಾಡುವ ಮೂಲಕ ಉತ್ತಮವಾಗಿ ಸಂಪರ್ಕ ಹೊಂದಿದ ಪರಿಸರ ವ್ಯವಸ್ಥೆಯನ್ನು ಒದಗಿಸುವುದು ಈ ನೀತಿಯ ಮುಖ್ಯ ಉದ್ದೇಶವಾಗಿದೆ. ಪ್ರತಿಭೆ ಮತ್ತು ಅವಕಾಶಗಳನ್ನು ಸೃಷ್ಟಿಸುವುದಕ್ಕೂ ಈ ನೂತನ ನೀತಿಯಲ್ಲಿ ಮಹತ್ವ ನೀಡಲಾಗಿದೆ. ಇಆರ್ ಮತ್ತು ಡಿ ವಲಯದಲ್ಲಿ ಪರಿಣತ ಉದ್ಯೋಗಿಗಳಿಗೆ 50 ಸಾವಿರ ಹೊಸ ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಕಲ್ಪಿಸುವ ಗುರಿ ಸರ್ಕಾರ ಹೊಂದಿದೆ. ನಾವೀನ್ಯತೆಯನ್ನು ಉತ್ತೇಜಿಸುವ ಮೂಲಕ ಪ್ರಾದೇಶಿಕ ಆರ್ಥಿಕತೆಗಳನ್ನು ಬೆಳೆಸುವುದಕ್ಕೂ ಪೂರಕವಾದ ಅಂಶಗಳನ್ನು ಈ ನೀತಿಯಲ್ಲಿ ಉಲ್ಲೇಖಿಸಲಾಗಿದೆ. ಸಂಶೋಧನಾ-ಆಧಾರಿತ ಪರಿಣತ ಪ್ರತಿಭಾ ಪೂಲ್ ಅನ್ನು ಅಭಿವೃದ್ಧಿಪಡಿಸಲು ಮತ್ತು ಜ್ಞಾನ ಆರ್ಥಿಕತೆಯನ್ನು ಬೆಳೆಸಲು ನೀತಿಯು ಉದ್ದೇಶಿಸಿದೆ. ನೀತಿ ಅವಧಿಯಲ್ಲಿ ಭಾರತದ ಇಆರ್ ಮತ್ತು ಡಿ ಯ 45% ಕ್ಕಿಂತ ಹೆಚ್ಚು ಕೊಡುಗೆ ನೀಡುವುದಕ್ಕೂ ಇದು ರಾಜ್ಯಕ್ಕೆ ಶಕ್ತಿ ನೀಡಲಿದೆ.
ಹೊಸ ನೀತಿಯ ವ್ಯಾಪ್ತಿಯಲ್ಲಿ 5 ಪ್ರಮುಖ ಕ್ಷೇತ್ರಗಳಾದ ಏರೋಸ್ಪೇಸ್ ಮತ್ತು ಡಿಫೆನ್ಸ್, ಆಟೋ ಕಾಂಪೊನೆಂಟ್ಸ್ ಮತ್ತು ಎಲೆಕ್ಟ್ರಾನಿಕ್ ವೆಹಿಕಲ್, ಬಯೋಟೆಕ್ನಾಲಜಿ, ಫಾರ್ಮಾ ಮತ್ತು ಮೆಡಿಕಲ್ ಡಿವೈಸಸ್, ಸೆಮಿಕಂಡಕ್ಟರ್ಸ್ ಮತ್ತು ಟೆಲಿಕಾಂ ಮತ್ತು ಸಾಫ್ಟ್ವೇರ್ ಉತ್ಪನ್ನಗಳಿಗೆ ವಿಶೇಷ ಆದ್ಯತೆಯನ್ನು ನೀಡಲಾಗಿದೆ. ಈ ಹೊಸ ನೀತಿಯು ಕರ್ನಾಟಕ ಇನ್ನೋವೇಶನ್ ಟೆಕ್ನಾಲಜಿ ಸೊಸೈಟಿ ನೀತಿಗಳು, ಕಾರ್ಯಕ್ರಮಗಳು, ಯೋಜನೆಗಳು, ಪ್ರೋತ್ಸಾಹಕಗಳನ್ನು ನಿರ್ವಹಿಸುವುದು, ವ್ಯಾಪಾರ ಪ್ರದರ್ಶನಗಳು, ಸಮ್ಮೇಳನಗಳನ್ನು ಆಯೋಜಿಸುವುದು ಮತ್ತು ರಾಜ್ಯದಲ್ಲಿ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಲು ಅವಕಾಶಗಳನ್ನು ಈ ಮೂಲಕ ನೀಡಲಾಗಿದೆ. ಡಿಜಿಟಲ್ ಉದ್ಯಮಗಳ ಬೆಳವಣಿಗೆಗಳಿಗೂ ಇದು ರಾಜ್ಯದಲ್ಲಿ ಉದ್ಯಮಗಳಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸಲಿದೆ.
ಇನ್ನು ಈ ನೂತನ ಕೈಗಾರಿಕಾ ನೀತಿಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನ ಹೊರತಾದಂತೆ ಎರಡನೇ ಹಂತದ ನಗರಗಳಲ್ಲಿಯೂ ಉದ್ಯಮ, ಕೈಗಾರಿಗಳನ್ನು ಆರಂಭಿಸುವುದು, ಅಲ್ಲಿನ ಜನರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಮುಖ್ಯವಾಗಿ ಉದ್ಯಮಶೀಲ. ಕೈಗಾರಿಕಾ ಸ್ನೇಹಿ ಪ್ರದೇಶಗಳನ್ನಾಗಿ ಮಾಡುವ ನಿಟ್ಟಿನಲ್ಲಿಯೂ ಸರ್ಕಾರ ವಿಶೇಷ ಕ್ರಮಗಳನ್ನು ಕೈಗೊಂಡಿದೆ. ಆ ಮೂಲಕ ದೇಶೀಯ ಕೈಗಾರಿಕೆಗಳನ್ನು ಆಕರ್ಷಿಸುವ ಜೊತೆಗೆ ವಿದೇಶೀ ಹೂಡಿಕೆಗಳನ್ನೂ ರಾಜ್ಯದಲ್ಲಿ ಉದ್ಯಮಗಳನ್ನು ಆರಂಭ ಮಾಡುವಂತೆ ಸೆಳೆಯುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬೆಂಗಳೂರನ್ನು ಹೊರತುಪಡಿಸಿದಂತೆ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ಲ್ಯಾಬ್ಗಳ ಸ್ಥಾಪನೆಗೆ, ಡಿಜಿಟಲ್ ಹೆಲ್ತ್ ಗೆ ಸಂಬಂಧಿಸಿದಂತಹ ಉತ್ಪಾದನೆಗಳನ್ನು ಪ್ರೋತ್ಸಾಹಿಸುವುದಕ್ಕೆ, ಸ್ಮಾರ್ಟ್ ಸಿಟಿ, ಸ್ಮಾರ್ಟ್ ಗ್ರಿಡ್, ನವೀಕರಿಸಬಹುದಾದ ಇಂಧನಗಳಂತಹ ಉದಯೋನ್ಮುಖ ಕೈಗಾರಿಕೆಗಳ ಆರಂಭಕ್ಕೆ ಇದು ಸಾಕ್ಷಿಯಾಗಲಿದೆ. ಪ್ರತಿ ಘಟಕಗಳಿಗೆ ಯೋಜನಾ ವೆಚ್ಚಕ್ಕೆ 80% ಅನುದಾನವನ್ನು ಸಹ ನೀಡಲಾಗುತ್ತದೆ ಎಂದು ಈ ನೂತನ ನೀತಿಯಲ್ಲಿ ಸರ್ಕಾರ ಉಲ್ಲೇಖಿಸಿದೆ.
ಬಿಯಾಂಡ್ ಬೆಂಗಳೂರು ಎಂಬ ಕಲ್ಪನೆಯಡಿಯಲ್ಲಿ ಐಒಟಿ, ಬ್ಲಾಕ್ಚೇನ್, ರೊಬೊಟಿಕ್ಸ್, ಡಿಜಿಟಲ್ ಟ್ವಿನ್, ಅಡ್ವಾನ್ಸ್ಡ್ ಮ್ಯಾನ್ಯೂಫ್ಯಾಕ್ಚರಿಂಗ್ ಮತ್ತು ವರ್ಚುವಲ್ ರಿಯಾಲಿಟಿ ಮುಂತಾದ ಅತ್ಯಾಧುನಿಕ ತಂತ್ರಜ್ಞಾನಗಳನ್ನು ನಿಯಂತ್ರಿಸುವ ನವೀನ ಕೊಡುಗೆಗಳನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸುವ ಭರವಸೆಯನ್ನೂ ಸರ್ಕಾರ ನೀಡಿದೆ. ಇಆರ್ ಮತ್ತು ಡಿ ಫಂಡ್ ‘ಅನುಮೋದಿತ ಆರ್ & ಡಿ ಯೋಜನೆಗಳಿಗೆ’ ಭಾಗಶಃ ಮತ್ತು ಷರತ್ತುಬದ್ಧ ಅನುದಾನವನ್ನು ಸರ್ಕಾರ ಒದಗಿಸಲಿದೆ. ಅನುಮೋದಿತ ಆರ್ & ಡಿ ವೆಚ್ಚದ 40% ರಷ್ಟು ಷರತ್ತುಬದ್ಧ ಅನುದಾನವನ್ನು ರಾಜ್ಯ ಒದಗಿಸಲಿದೆ. ಬೆಂಗಳೂರಿನ ಆಚೆ 3 ವಿವಿಧ ಸ್ಥಳಗಳಲ್ಲಿರುವ ಮೂರು ಘಟಕಗಳಿಗೆ ಸಂಬಂಧಿಸಿದಂತೆ ರಾಜ್ಯವು ಅನುಮೋದಿತ ಬಜೆಟ್ನ 40% ರಷ್ಟು ರೂ. 50 ಕೋಟಿ ರೂ. ಗಳನ್ನು ಒದಗಿಸಲಿದೆ ಎಂದು ಈ ನೂತನ ನೀತಿಯು ಹೇಳುತ್ತದೆ.
ಇವಷ್ಟೇ ಅಲ್ಲದೆ ಶೈಕ್ಷಣಿಕ ಸಂಶೋಧನೆಯ ಕೈಗಾರಿಕಾ ಅನ್ವಯಿಕೆಯನ್ನು ಬೆಂಬಲಿಸುವ ಸಲುವಾಗಿ, ಶೈಕ್ಷಣಿಕ ಕೌಶಲ್ಯ ಮತ್ತು ಎಂಜಿನಿಯರಿಂಗ್ ಆರ್ & ಡಿ ಉದ್ಯಮದ ಅಗತ್ಯತೆಯ ಮಧ್ಯೆ ಇರುವ ಅಂತರವನ್ನು ತೊಡೆದುಹಾಕುವ ನಿಟ್ಟಿನಲ್ಲಿ ಸರ್ಕಾರ ಕೈಗಾರಿಕಾ ಆಧಾರಿತ ಕೋರ್ಸ್ಗಳಿಗೆ ಪ್ರತಿ ವಿದ್ಯಾರ್ಥಿಗೆ 10,000 ರೂ. ಮತ್ತು ಪ್ರಯೋಗಾಲಯಗಳನ್ನು ಸ್ಥಾಪಿಸಲು ಕಾಲೇಜು / ವಿಶ್ವವಿದ್ಯಾಲಯಕ್ಕೆ 1.25 ಕೋಟಿ ರೂ. ನೆರವನ್ನು ಒದಗಿಸುವ ಭರವಸೆಯನ್ನೂ ನೀಡಿದೆ. ಉದ್ಯಮಗಳ ಸಮಸ್ಯೆಗಳನ್ನು ಪರಿಹರಿಸಲು ಸಂಬಂಧಿತ ಪರಿಹಾರಗಳು ಮತ್ತು ಪ್ರೋತ್ಸಾಹಗಳನ್ನು ನೀಡುವುದಕ್ಕೂ ಈ ನೂತನ ನೀತಿಯಲ್ಲಿ ಆದ್ಯತೆ ನೀಡಲಾಗಿದೆ. ಸಂಶೋಧನಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವಂತೆ ಯುವಕರನ್ನು ಪ್ರೋತ್ಸಾಹಿಸುವ ವಾತಾವರಣವನ್ನು ಸೃಷ್ಟಿಸುವ ಚಿಂತನೆಯನ್ನೂ ಈ ನೀತಿ ಒಳಗೊಂಡಿದ್ದು, ಈ ನೂತನ ನೀತಿ ರಾಜ್ಯದ ಇಆರ್ ಮತ್ತು ಡಿ ಕ್ಷೇತ್ರವನ್ನು ಮತ್ತಷ್ಟು ಉನ್ನತಿಗೇರಿಸಲು ಪೂರಕವಾಗುವುದರಲ್ಲಿ ಎರಡು ಮಾತಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.