ಬೆಳ್ತಂಗಡಿ : ಮಕ್ಕಳ ಸಾಧನಾ ಪಥಕ್ಕೆ ಶಾಂತಿವನಟ್ರಸ್ಟ್ ಪ್ರಕಾಶಿಸುತ್ತಿರುವ ಪುಸ್ತಕಗಳು ಅತ್ಯಂತ ಸಹಕಾರಿಯಾಗಿವೆ. ಉತ್ತಮ ಪುಸ್ತಕಗಳನ್ನು ಓದುವುದರಿಂದ ಆದರ್ಶ ವ್ಯಕ್ತಿತ್ವ ನಿರ್ಮಾಣವಾಗುತ್ತದೆ ಎಂದು ಕಾರ್ಪೋರೇಶನ್ ಬ್ಯಾಂಕ್ನ ಅಧ್ಯಕ್ಷರು ಹಾಗೂ ಆಡಳಿತ ನಿರ್ದೇಶಕರಾದ ಎಸ್.ಆರ್, ಬನ್ಸಾಲ್ ಹೇಳಿದರು.
ಧರ್ಮಸ್ಥಳದಲ್ಲಿ ಬುಧವಾರ ಶಾಂತಿವನ ಟ್ರಸ್ಟ್ನ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ಆಶ್ರಯದಲ್ಲಿ ಪ್ರಕಟಿಸಲಾದ ಜ್ಞಾನ ಸಿಂಧು (ಪ್ರಾಥಮಿಕ ಶಾಲೆ) ಮತ್ತು ಜ್ಞಾನ ಬಂಧು (ಪ್ರೌಢಶಾಲೆ) ಪುಸ್ತಕಗಳನ್ನು ಮಹೋತ್ಸವ ಸಭಾ ಭವನದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಹುಟ್ಟು-ಸಾವಿನ ಮಧ್ಯೆ ಇರುವ ಅಲ್ಪಾವಧಿಯಲ್ಲಿ ನಾವು ಸಾಧ್ಯವಾದಷ್ಟು ಮಾನವೀಯ ಮೌಲ್ಯಗಳೊಂದಿಗೆ ಸತ್ಕಾರ್ಯಗಳನ್ನು ಮಾಡಬೇಕು. ಇಂದಿನ ಮಕ್ಕಳು ಮುಂದಿನ ಸಮಾಜದ ಸಭ್ಯ, ಸುಸಂಸ್ಖೃತ ನಾಗರಿಕರಾಗಿ ರೂಪುಗೊಳ್ಳಬೇಕು. ಪಾರದರ್ಶಕ ಜೀವನ ನಡೆಸಬೇಕು. ಬಿಂದುವಿನಲ್ಲಿ ಸಿಂಧುವನ್ನು ತುಂಬಿರುವ ನೈತಿಕ ಪುಸ್ತಕಗಳು ಆದರ್ಶ ವ್ಯಕ್ತಿತ್ವ ನಿರ್ಮಾಣಕ್ಕೆ ಪ್ರೇರಣೆ ಮತ್ತು ಮಾರ್ಗದರ್ಶನ ನೀಡುತ್ತವೆ. ಇಂತಹ ಉತ್ತಮ ಪುಸ್ತಕಗಳನ್ನು ಓದಿ ಅದರಲ್ಲಿರುವ ನೀತಿ-ನಿಯಮಗಳನ್ನು ಜೀವನದಲ್ಲಿ ಅನುಸರಿಸುವುದರಿಂದ ನಮ್ಮ ಉಜ್ವಲ ಭವವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂದು ಅವರು ಸಲಹೆ ನೀಡಿದರು.
ಸಕಲೇಶಪುರದ ಸಾಹಿತಿಗಿರಿಮನೆ ಶ್ಯಾಮರಾವ್ ಶುಭಾಶಂಸನೆ ಮಾಡುತ್ತಾ, ಇಂದು ಶಿಕ್ಷಣವೆಂದರೆ ಹಣಸಂಪಾದನೆಗಾಗಿಯೇಇದೆ ಎಂಬ ಭಾವನೆ ಇದೆ. ಶಾಲೆಯ ಪುಸ್ತಕಗಳಿಗೆ ಹೊರತಾದಜ್ಞಾನವೇ ಹೆಚ್ಚು ಪ್ರಯೋಜನಕ್ಕೆ ಬರುವುದು. ವಿಜ್ಞಾನದ ಹಿಂದೆ ಜ್ಞಾನದ ಪರಿಜ್ಞಾನವಿದ್ದಾಗ ಜೀವನ ಸಾರ್ಥಕವಾಗುತ್ತದೆ. ಸ್ವಾಭಾವಿಕ ಜ್ಞಾನ ನಶಿಸಿ ಹೋಗುತ್ತಿರುವ ಇಂದಿನ ಕಾಲದಲ್ಲಿ ಉತ್ತಮ ಪುಸ್ತಕಗಳನ್ನು ಓದಿ ನಮ್ಮ ಜ್ಞಾನಕ್ಷಿತಿಜವನ್ನು ವಿಸ್ತರಿಸಿಕೊಳ್ಳಬೇಕು ಎಂದ ಅವರು ಜನಹಿತಕಾರಿ ಕೆಲಸಗಳು ಎಲ್ಲಿ ನಡೆಯುತ್ತವೆಯೋ ಅಲ್ಲಿ ದೈವೀ ಶಕ್ತಿ ಇರುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಶಾಲಾ ಶಿಕ್ಷಣದ ಜತೆಗೆಜೀವನ ಮೌಲ್ಯಗಳನ್ನೂ ಪಡೆದುಕೊಳ್ಳಬೇಕು.ಮಕ್ಕಳೇ ತಮ್ಮಉಜ್ವಲ ಭವಿಷ್ಯವನ್ನುರೂಪಿಸುವ ಹರಿಕಾರರಾಗಬೇಕು. ಆದುದರಿಂದ ಹಂಸಕ್ಷೀರ ನ್ಯಾಯದಂತೆ ದುರ್ಗುಣಗಳನ್ನು ತ್ಯಜಿಸಿ ಸದ್ಗುಣಗಳನ್ನು ಮೈಗೂಡಿಸಿಕೊಂಡು ಜೀವನ ಮೌಲ್ಯಗಳನ್ನು ಅಳವಡಿಸಿ ಸಭ್ಯ, ಸುಸಂಸ್ಖೃತ ನಾಗರಿಕರಾಗಿ ರೂಪುಗೊಳ್ಳಬೇಕು.ಜೀವನದ ಸವಾಲುಗಳನ್ನು ಹಾಗೂ ಸಮಸ್ಯೆಗಳನ್ನು ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಎದುರಿಸಿ ಆದರ್ಶಜೀವನ ನಡೆಸಬೇಕು ನೀವೇ ನಿಮ್ಮ ಭವಿಷ್ಯದ ರೂವಾರಿಗಳು ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಪರಿವೀಕ್ಷಣಾಧಿಕಾರಿ ಮಂಗಳೂರಿನ ರಾಧಾಕೃಷ್ಣ ಭಟ್, ಡಿ. ಹರ್ಷೇಂದ್ರಕುಮಾರ್ ಉಪಸ್ಥಿತರಿದ್ದರು. ಟ್ರಸ್ಟ್ ಕಾರ್ಯದರ್ಶಿ ಬಿ.ಸೀತಾರಾಮ ತೋಳ್ಪಡಿತ್ತಾಯ ಸ್ವಾಗತಿಸಿದರು. ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ನಿರ್ದೇಶಕ ಶಶಿಕಾಂತ ಜೈನ್ ವಂದಿಸಿದರು. ಆಯುಷ್ ವಿಭಾಗದ ಆಡಳಿತಾಧಿಕಾರಿ ಮಂಜುನಾಥ್ ಎಂ.ಎನ್. ಕಾರ್ಯಕ್ರಮ ನಿರ್ವಹಿಸಿದರು.
ಶಾಂತಿವನಟ್ರಸ್ಟ್ ಆಶ್ರಯದಲ್ಲಿ ಈ ವರೆಗೆ 38 ನೈತಿಕ ಪುಸ್ತಕಗಳ 16,89,400 ಪ್ರತಿಗಳನ್ನು ಪ್ರಕಟಿಸಿ ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ. ಉಡುಪಿ, ದಕ್ಷಿಣಕನ್ನಡ, ಉತ್ತರಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಶಾಲಾ ವಿದ್ಯಾರ್ಥಿಗಳಿಗೆ ನೈತಿಕ ಪುಸ್ತಕಗಳನ್ನು ವಿತರಿಸಲಾಗುವುದುಎಂದು ಹೆಗ್ಗಡೆಯವರು ಪ್ರಕಟಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.