1983 ರಲ್ಲಿ ಮೊದಲ ಬಾರಿಗೆ ಇಂಟರ್ ನೆಟ್ ಅನ್ನು ಕಂಡುಹಿಡಿದು ಕಂಪ್ಯೂಟರ್ ಗಳನ್ನು ಪರಸ್ಪರ ಬೆಸೆಯುವ ತಂತ್ರಜ್ಞಾನವನ್ನು ಕಂಡುಹಿಡಿದಾಗ ನಂತರದ 38 ವರ್ಷಗಳಲ್ಲಿ ಪ್ರಪಂಚದಲ್ಲಿ ಇಂತಹ ಡಿಜಿಟಲ್ ಕ್ರಾಂತಿಯಾದೀತೆಂದು ಯಾರೂ ಊಹಿಸಿರಲಿಕ್ಕಿಲ್ಲ! ವಸುಧೈವ ಕುಟುಂಬಕಂ ಅನ್ನುವ ಮಾತುಗಳನ್ನು ಒಂದು ರೀತಿಯಲ್ಲಿ ಈ ಡಿಜಿಟಲ್ ಯುಗ ಸತ್ಯವಾಗಿಸುತ್ತಿದೆ. ಭಾರತದವು ಕೂಡಾ ಡಿಜಿಟಲ್ ಕ್ರಾಂತಿಗೆ ತನ್ನನ್ನು ತಾನು ಒಡ್ಡಿಕೊಂಡು ಬಹಳ ಬದಲಾವಣೆಗಳನ್ನು ಕಂಡಿದೆ. ಸರಕಾರದ ಯೋಜನೆಗಳು, ಬ್ಯಾಂಕಿಂಗ್, ವ್ಯಾಪಾರ ವಹಿವಾಟು, ಸಂವಹನ, ಶಿಕ್ಷಣ, ಮಾಧ್ಯಮ, ಸಾಮಾಜಿಕ ಮಾಧ್ಯಮ ಇವುಗಳೆಲ್ಲಾ ಡಿಜಿಟಲ್ ಮಾಧ್ಯಮಗಳ ಮೂಲಕ ನಡೆಯುತ್ತಿದೆ. ಕಳೆದ ಐದಾರು ವರ್ಷಗಳಲ್ಲಿ ಭಾರತೀಯರು ಡಿಜಿಟಲ್ ಲೋಕಕ್ಕೆ ತಮ್ಮನ್ನು ತಾವು ತೆರೆದುಕೊಂಡಿರುವ ರೀತಿ ಅನನ್ಯವಾದದ್ದು.
136 ಕೋಟಿ ಜನಸಂಖ್ಯೆಯ ಭಾರತ ದೇಶದಲ್ಲಿ ಸುಮಾರು 75.5 ಕೋಟಿ ಮಂದಿ ಇಂಟರ್ನೆಟ್ ಬಳಕೆದಾರರು ಇದ್ದಾರೆ ಎಂದು ಅಂದಾಜಿಸಲಾಗಿದೆ. ದೇಶದ 55.5% ಜನರು ಇಂಟರ್ನೆಟ್ ಬಳಕೆ ಮಾಡುತ್ತಿದ್ದಾರೆ. ಚೀನಾದಲ್ಲಿ ಸುಮಾರು 90 ಕೋಟಿ ಮಂದಿ ಇಂಟರ್ನೆಟ್ ಬಳಕೆ ಮಾಡುತ್ತಿದ್ದು ಜಾಗತಿಕವಾಗಿ ಅತೀ ಹೆಚ್ಚು ಇಂಟರ್ನೆಟ್ ಬಳಕೆದಾರರಿರುವ ದೇಶವಾಗಿ ಚೀನಾ ಮೂಡಿ ಬಂದರೆ, ಜಾಗತಿಕವಾಗಿ ಎರಡನೇ ಅತೀ ಹೆಚ್ಚು ಇಂಟರ್ನೆಟ್ ಬಳಕೆದಾರರಿರುವ ದೇಶ ಭಾರತ. ಭಾರತದಲ್ಲಿ ಸರಿಸುಮಾರು 45 ಕೋಟಿ ಮಂದಿ ಮೊಬೈಲ್ ಫೋನ್ ಇಂಟರ್ನೆಟ್ ಬಳಕೆದಾರರಿದ್ದಾರೆ. 2014 ರಲ್ಲಿ ಭಾರತದಲ್ಲಿ ಸರಿಸುಮಾರು 24 ಕೋಟಿ ಮೊಬೈಲ್ ಇಂಟರ್ನೆಟ್ ಬಳಕೆದಾರ ಇದ್ದರು. ಕಳೆದ 7 ವರ್ಷಗಳಲ್ಲಿ ಮೊಬೈಲ್ ಇಂಟರ್ನೆಟ್ ಬಳಕೆದಾರರ ಪ್ರಮಾಣದಲ್ಲಿ 87.5% ಹೆಚ್ಚಾಗಿದೆ. 2014 ನೇ ಇಸವಿಯಲ್ಲಿ ಒಂದು ಗಿಗಾಬೈಟ್(ಜಿಬಿ) ಮೊಬೈಲ್ ಇಂಟರ್ನೆಟ್ ಬೆಲೆ ಸುಮಾರು 269 ರುಪಾಯಿಗಳಷ್ಟು ಇತ್ತು. ಅದೂ 3 ಜಿ ಡೇಟಾಗೆ. 2016 ರ ವರೆಗೆ ಪ್ರತೀ ವರ್ಷ ಭಾರೀ ಪ್ರಮಾಣದಲ್ಲಿ ಇಂಟರ್ನೆಟ್ ಡೇಟಾ ಬೆಲೆ ಏರುತ್ತಾ ಇತ್ತು. ಮೊಬೈಲ್ ಇಂಟರ್ನೆಟ್ ಬೆಲೆ ನಿಯಂತ್ರಣಕ್ಕೆ ಬಂದದ್ದು ರಿಲಾಯನ್ಸ್ ಕಂಪೆನಿಯು ಜಿಯೋವನ್ನು ಲಾಂಚ್ ಮಾಡಿದ ನಂತರವೇ. ರಿಲಾಯನ್ಸ್ ನಂತರ ಏರ್ಟೆಲ್, ವೊಡಾಫೋನ್-ಐಡಿಯಾಗಳೂ ತಮ್ಮ ಇಂಟರ್ನೆಟ್ ಬೆಲೆಯಲ್ಲಿ ಭಾರೀ ಕಡಿತವನ್ನು ಮಾಡಿದವು.
ಈಗ ಭಾರತದಲ್ಲಿ ಒಂದು ಜಿ ಬಿ 4 ಜಿ ಡಾಟಾದ ಬೆಲೆ ಕೇವಲ 4.40 ರುಪಾಯಿಗಳಷ್ಟು ಮಾತ್ರ. ಅಂದಿನ ಇಂಟರ್ನೆಟ್ ನ ಬೆಲೆಗೆ ಇಂದಿನ ಬೆಲೆಯನ್ನು ಹೋಲಿಕೆ ಮಾಡಿದರೆ 4 ಜಿ ಡಾಟಾದ ಬೆಲೆ ಸುಮಾರು 165 ಪಟ್ಟು ಕಡಿಮೆ ಆಗಿದೆ. ಈಗ ಜಗತ್ತಿನಲ್ಲೇ ಅತೀ ಕಡಿಮೆ ಬೆಲೆಗೆ ಇಂಟರ್ನೆಟ್ ಲಭ್ಯವಾಗುತ್ತಿರುವುದು ಭಾರತದಲ್ಲೇ! ಅಮೇರಿಕಾದಲ್ಲಿ ಒಂದು ಜಿಬಿ ಇಂಟರ್ನೆಟ್ ಬೆಲೆ 8 ಡಾಲರ್ ಗಳು(580 ರುಪಾಯಿಗಳು), ಇಂಗ್ಲೆಂಡ್ ನಲ್ಲಿ 1.4 ಡಾಲರ್ ಗಳು(90 ರುಪಾಯಿಗಳು) ಹಾಗೂ ಚೀನಾದಲ್ಲಿ ಒಂದು ಜಿಬಿ ಇಂಟರ್ನೆಟ್ ಬೆಲೆ 0.6 ಡಾಲರ್ ಗಳು (42 ರುಪಾಯಿಗಳು). ಭಾರತದಲ್ಲಿ ಕಡಿಮೆ ಬೆಲೆಗೆ ಇಂಟರ್ನೆಟ್ ಡಾಟ ಸಿಗುವುದರಿಂದ ಭಾರತೀಯರಲ್ಲಿ ಬಳಸಲ್ಪಡುತ್ತಿರುವ ಇಂಟರ್ನೆಟ್ ನ ಪ್ರಮಾಣವೂ ಹೆಚ್ಚಾಗಿದೆ. 2014 ರಲ್ಲಿ ಭಾರತದಲ್ಲಿ ಒಂದು ತಿಂಗಳಲ್ಲಿ ಬಳಸಲ್ಪಡುತ್ತಿದ್ದ ಮೊಬೈಲ್ ಇಂಟರ್ನೆಟ್ ಪ್ರಮಾಣ ಕೇವಲ 0.089 ಜಿಬಿ ಆಗಿದ್ದರೆ ಈಗ ಆ ಪ್ರಮಾಣ 12.1 ಜಿಬಿಗೆ ಎರಿದೆ.
2015 ನೇ ಇಸವಿಯಲ್ಲಿ ಭಾರತದಲ್ಲಿ ಜನರಿಗೆ ಸರಕಾರೀ ಸೇವೆಗಳು ಸುಲಭವಾಗಿ ಇಂಟರ್ನೆಟ್ ಮೂಲಕ ತಲುಪುವಂತಾಗಲು ಡಿಜಿಟಲ್ ಇಂಡಿಯಾ ಯೋಜನೆಯನ್ನು ಜಾರಿ ಮಾಡಲಾಯಿತು. ಪ್ರತೀ ಸರ್ಕಾರೀ ಕಚೇರಿಗಳನ್ನು ಅಂತರ್ಜಾಲದ ಮೂಲಕ ಬೆಸೆದು ಸಾರ್ವಜನಿಕರಿಗೆ ಆನ್ಲೈನ್ ಮೂಲಕ ಸಂಪರ್ಕಿಸಲು ಸಾಧ್ಯವಾಗುವ ವ್ಯವಸ್ಥೆಯನ್ನು ಮಾಡಲಾಯಿತು. ದೇಶದಲ್ಲಿ 1,54,096 ಗ್ರಾಮ ಪಂಚಾಯತ್ ಗಳಿಗೆ ಬ್ರಾಡ್ ಬ್ಯಾಂಡ್ ಮೂಲಕ ಹೈಸ್ಪೀಡ್ ಇಂಟರ್ನೆಟ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಬ್ರಾಡ್ ಬ್ಯಾಂಡ್ ಮೂಲಕ ಸಂಪರ್ಕವನ್ನು ಕಲ್ಪಿಸಲಾಗದ ಪಂಚಾಯತ್ ಗಳಿಗೆ ಸ್ಯಾಟಲೈಟ್ ಮೂಲಕ ನೇರ ಇಂಟರ್ನೆಟ್ ಸೌಲಭ್ಯವನ್ನು ಕೊಡಲಾಗುತ್ತಿದೆ. ಸರಕಾರದ 44 ಪ್ರಮುಖ ಸೇವೆಗಳು( ಮಿಷನ್ ಮೋಡ್ ಪ್ರಾಜೆಕ್ಟ್) ಆನ್ಲೈನ್ ಮೂಲಕ ಅಭಿಸುತ್ತಿವೆ. ಇದರಲ್ಲಿ 13 ಸೇವೆಗಳು ಕೇಂದ್ರ ಸರಕಾರಕ್ಕೆ ಸಬಂಧಪಟ್ಟವುಗಳು, 17 ಸೇವೆಗಳು ರಾಜ್ಯಗಳ ಮೂಲಕ ಜಾರಿಯಾಗುವಂತವುಗಳು ಹಾಗೂ 14 ಸೇವೆಗಳು ಕೇಂದ್ರ ಹಾಗೂ ರಾಜ್ಯಗಳ ಏಕೀಕೃತ ಸೇವೆಗಳಾಗಿವೆ. ಸರಕಾರದ ಮೈ ಗವರ್ನೆನ್ಸ್ ಅನ್ನುವ ಡಿಜಿಟಲ್ ವೇದಿಕೆ ಇದ್ದು ಇದರಲ್ಲಿ ಜನರು ಸರಕಾರಕ್ಕೆ ಸಲಹೆ ಸೂಚನೆಗಳು, ದೂರುಗಳನ್ನು ನೀಡಬಹುದು. ನಾಗರಿಕರು ನೀಡಿದ ದೂರಿಗೆ ನಿರ್ದಿಷ್ಟ ದಿವಸಗಳೊಳಗೆ ಉತ್ತರ ಹಾಗೂ ಪರಿಹಾರವನ್ನು ಒದಗಿಸುವ ವ್ಯವಸ್ಥೆ ಮೈ ಗವರ್ನೆನ್ಸ್ ನಲ್ಲಿದೆ. ಇದೀಗ ಮೈ ಗವರ್ನೆನ್ಸ್ ನಲ್ಲಿ 1.75 ಕೋಟಿ ನೋಂದಾಯಿತ ಸದಸ್ಯರು ಇದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ನಮೋ ಎನ್ನುವ ಆಪ್ ಇದ್ದು ಈ ಆಪ್ ನ ಮೂಲಕವೂ ಸರಕಾರಕ್ಕೆ ಸಲಹೆ ಹಾಗೂ ದೂರುಗಳನ್ನು ನೀಡಿ ಪರಿಹಾರಗಳನ್ನು ಪಡೆಯಬಹುದು. ಮೈ ಗ್ರೀವಿಯೆನ್ಸ್ ಅನ್ನುವ ಸರಕಾರದ ಇ ಪೋರ್ಟಲ್ ವ್ಯವಸ್ಥೆ ಇದ್ದು ವಿವಿಧ ಇಲಾಖೆ ಇಲಾಖೆಗಳಿಗೆ ಸಂಬಂಧಪಟ್ಟ ದೂರುಗಳನ್ನು ದಾಖಲಿಸಿ ಸಮರ್ಪಕ ಪರಿಹಾರವನ್ನು ಪಡೆದುಕೊಳ್ಳಬಹುದು.
ಡಿಜಿ ಲಾಕರ್ ಅನ್ನುವ ಅಪ್ಲಿಕೇಶನ್ ಸಾರ್ವಜನಿಕರಿಗೆ ಲಭ್ಯವಿದ್ದು ಇದರ ಮೂಲಕ ಜನರು ತಮ್ಮ ಆಧಾರ್, ಡ್ರೈವಿಂಗ್ ಲೈಸೆನ್ಸ್, ಪಾನ್ ಕಾರ್ಡ್, ವಾಹನಗಳ ದಾಖಲೆಗಳು, ಮಾರ್ಕ್ ಕಾರ್ಡ್, ಇನ್ಶೂರೆನ್ಸ್ ಮೊದಲಾದವುಗಳನ್ನು ತಮ್ಮ ಮೊಬೈಲ್ ಫೋನ್ ಗಳಲ್ಲೇ ಸಂಗ್ರಹಿಸಿಡಬಹುದು. ಡಿಜಿ ಲಾಕರ್ ಮೂಲಕ ಹಾಜರುಪಡಿಸಲಾಗುವ ದಾಖಲೆಗಳನ್ನು ಐ ಟಿ ಆಕ್ಟ್ 2000 ರಲ್ಲಿ ಸೂಚಿಸಿದಂತೆ ಮೂಲ ದಾಖಲೆಗೆ ದಾಖಲೆಗಳಿಗೆ ಸರಿಸಮಾನವಾಗಿ ಪರಿಗಣಿಸಲಾಗುತ್ತದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ನಿಯಂತ್ರಿಸಲ್ಪಡುತ್ತಿರುವ ನ್ಯಾಷನಲ್ ಪೇಯ್ಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾ( ಎನ್ ಸಿ ಪಿ ಐ) ಆನ್ಲೈನ್ ಮೂಲಕ ತ್ವರಿತ ಪಾವತಿ ಮಾಡುವ ಭಾರತ್ ಇಂಟರ್ಫೇಸ್ ಫಾರ್ ಮನಿ( ಭೀಮ್) ಅಪ್ಲಿಕೇಶನ್ ಗಳನ್ನು ರೂಪಿಕರಿಸಲಾಗಿದೆ. ಇವುಗಳನ್ನು ಯುನಿಫೈಡ್ ಪೇಯ್ಮೆಂಟ್ ಇಂಟರ್ಫೇಸ್ (ಯುಪಿಐ) ವ್ಯವಸ್ಥೆಎಂದು ಕರೆಯಲಾಗುತ್ತದೆ. ಭಾರತದಲ್ಲಿ 15.8 ಕೋಟಿಗೂ ಹೆಚ್ಚು ಸಂಖ್ಯೆಯ ಭೀಮ್ ಯುಪಿಐ ಬಳಕೆದಾರರಿದ್ದಾರೆ. ಭಾರತದ 213 ಬ್ಯಾಂಕ್ ಗಳು ಭೀಮ್ ಯು ಪಿಐ ಮೂಲಕ ತ್ವರಿತ ಹಣ ವರ್ಗಾವಣೆ ಹಾಗೂ ಪಾವತಿ ವ್ಯವಸ್ಥೆಯನ್ನು ಮಾಡಿವೆ. ಕ್ಯು ಆರ್ ಕೋಡ್ ಗಳನ್ನು ಸ್ಕ್ಯಾನ್ ಮಾಡುವುದರ ಮೂಲಕವೂ ಪಾವತಿ ಮಾಡಬಹುದಾಗಿದೆ. ಯುಪಿಐಗಳ ಮೂಲಕ ತಿಂಗಳೊಂದಕ್ಕೆ ಸರಾಸರಿ 150 ಕೋಟಿ ಬಾರಿ ಹಣದ ವರ್ಗಾವಣೆ ನಡೆಯುತ್ತಿದ್ದು, ತಿಂಗಳಿಗೆ 3 ರಿಂದ 4 ಲಕ್ಷ ಕೋಟಿ ರುಪಾಯಿಗಳ ವಹಿವಾಟು ನಡೆಯುತ್ತಿದೆ. ಸಂಪೂರ್ಣ ಭಾರತೀಯವಾಗಿರುವ ಡೆಬಿಟ್ ಕಾರ್ಡ್ ರುಪೇ ಕಾರ್ಡ್ ಗಳನ್ನು 60 ಕೋಟಿ ಭಾರತೀಯರು ಬಳಸುತ್ತಿದ್ದಾರೆ.
ಡೈರೆಕ್ಟ್ ಬೆನೆಫಿಟ್ ಟ್ರಾನ್ಸ್ಫರ್(ನೇರ ಲಾಭ ವರ್ಗಾವಣೆಯ) ಮೂಲಕ ಸರಕಾರೀ ಸಹಾಯಧನ, ಸಬ್ಸಿಡಿ, ಪೆನ್ಷನ್ ಮೊದಲಾದವುಗಳು ಫಲಾನುಭವಿಗಳ ಖಾತೆಗಳಿಗೆ ನೇರ ವರ್ಗಾವಣೆಯಾಗುತ್ತಿದೆ. ಜಾಮ್ ಹೆಸರಿನ, ಜನಧನ್ ಅಕೌಂಟ್, ಅಧಾರ್ ಹಾಗೂ ಮೊಬೈಲ್ ನಂಬರ್ ಗಳನ್ನು ಪರಸ್ಪರ ಬೆಸೆದು(ಜೆ ಎ ಎಮ್) ಫಲಾನುಭಾವಿಗಳ ಬ್ಯಾಂಕ್ ಖಾತೆಗೆ ಸಹಾಯಧನವನ್ನು ನೇರವಾಗಿ ವರ್ಗಾಯಿಸುವ ವ್ಯವಸ್ಥೆಯು, ಸಹಾಯಧನವು ಸ್ವಲ್ಪವೂ ಸೋರಿಕೆಯಾಗದೆ ನೇರವಾಗಿ ಫಲಾನುಭವಿಗಳಿಗೆ ಸಂಪೂರ್ಣವಾಗಿ ದೊರಕುವಂತೆ ಮಾಡಿದೆ. ಈ ವರ್ಷ ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮೂಲಕ 9 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ವಾರ್ಷಿಕವಾಗಿ ತಲಾ 6000 ರುಪಾಯಿಗಳಂತೆ 54,000 ಕೋಟಿ ರುಪಾಯಿಗಳನ್ನು ವರ್ಗಾಯಿಸಲಾಗಿದೆ. ಕರೋನಾ ಸಂದಿಗ್ಧ ಕಾಲದಲ್ಲಿ ಜನಧನ್ ಖಾತೆ ಹೊಂದಿರುವ 42 ಕೋಟಿ ಬಡವರ ಬ್ಯಾಂಕ್ ಖಾತೆಗಳಿಗೆ ತಿಂಗಳೊಂದಕ್ಕೆ ತಲಾ 500 ರುಪಾಯಿಗಳಂತೆ 6 ತಿಂಗಳುಗಳ ಕಾಲ ಸಹಾಯಧನವನ್ನು ಜಮಾ ಮಾಡಲಾಗಿದೆ. ಒಟ್ಟು 69,820 ಕೋಟಿ ರುಪಾಯಿಗಳನ್ನು ಗರೀಬ್ ಕಲ್ಯಾಣ್ ಯೋಜನೆಯಡಿಯಲ್ಲಿ ವಿತರಣೆ ಮಾಡಲಾಗಿದೆ.ಈಗ ಪಡಿತರ ವಸ್ತುಗಳ ವಿತರಣೆ, ವಿದ್ಯಾರ್ಥಿವೇತನ, ರಸಗೊಬ್ಬರ ಸಬ್ಸಿಡಿ, ವೃದ್ಧರು ಹಾಗೂ ದಿವ್ಯಾಂಗರ ಪೆನ್ಷನ್, ಮೊದಲಾದವುಗಳು ಡಿಜಿಟಲ್ ಮಾಧ್ಯಮದ ಮೂಲಕವಾಗುತ್ತಿದೆ. ಸರಕಾರವು ಬಿಡುಗಡೆ ಮಾಡುವ ಎಲ್ಲಾ ರೀತಿಯ ಅನುದಾನಗಳು ಹಾಗೂ ಸಬ್ಸಿಡಿಗಳು ನಗದು ಮುಖೇನ ಆಗದೆ ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾವಣೆಗೊಳ್ಳುವುದರಿಂದ ಲಂಚ, ಭ್ರಷ್ಟಾಚಾರ, ಸೋರಿಕೆಗಳು ಬಹಳಷ್ಟು ಕಡಿಮೆಯಾಗಿದೆ.
ಕರೋನಾವನ್ನು ತಡೆಗಟ್ಟುವ ಉದ್ದೇಶದಿಂದ ಸರಕಾರವು ಬಿಡುಗಡೆ ಮಾಡಿದ ಆರೋಗ್ಯ ಸೇತು ಎನ್ನುವ ಆಪ್ ದೇಶದ 17.2 ಕೋಟಿ ಜನರು ಬಳಸುತ್ತಿದ್ದಾರೆ. ಕರೋನ ಜಾಗೃತಿಯನ್ನು ಮೂಡಿಸುವುದು ಹಾಗೂ ಸಮೀಪದಲ್ಲಿ ಇರುವ ಕರೋನಾ ಬಾಧಿತರ ಮಾಹಿತಿ ಕೊಡುವುದು ಆರೋಗ್ಯ ಸೇತುವಿನ ಆರಂಭಿಕ ಉದ್ದೇಶವಾಗಿತ್ತು. ಈಗ ಆರೋಗ್ಯ ಸೇತುವಿನಲ್ಲಿರುವ್ ಕೋವಿನ್ ಅನ್ನುವ ಲಿಂಕ್ ಮೂಲಕ ಕರೋನಾ ವ್ಯಾಕ್ಸಿನೇಶನ್ ನೊಂದಣಿಯನ್ನು ಮಾಡಬಹುದು. ಕೋವಿನ್ ಮೂಲಕ ಜನರು ಬಹಳ ಸುಲಭವಾಗಿ ಲಸಿಕೆಗೆ ಆನ್ಲೈನ್ ನೊಂದಣಿ ಮಾಡುವ ವ್ಯವಸ್ಥೆಯು ಎಲ್ಲ ಬಳಕೆದಾರರ ಶ್ಲಾಘನೆಗೆ ಒಳಗಾಗಿದೆ.
ದೇಶದೊಳಗಿನ ಬಹುಹುತೇಕ ವ್ಯಾಪಾರ ವಹಿವಾಟುಗಳು ಆನ್ಲೈನ್ ಮೂಲಕವೇ ನಡೆಯುತ್ತಿದೆ. ಪೇಟಿಯಂ, ಗೂಗುಲ್ ಪೇ, ಫೋನ್ ಪೇ, ಅಮೆಝಾನ್ ಪೇ, ಭೀಮ್, ಮೊಬಿಕ್ವಿಕ್ ಮೊದಲಾದಲಾದ ಹಣ ವರ್ಗಾವಣ ಆಪ್ ಗಳು ಈಗ ಭಾರತದಲ್ಲಿ ತುಂಬಾ ಜನಪ್ರಿಯವಾಗಿವೆ. 2019 ನೇ ಇಸವಿಯಲ್ಲಿ 289 ಶತಕೋಟಿ ಡಾಲರ್ ಗಳಷ್ಟು(20 ಲಕ್ಷ ಕೋಟಿ ರುಪಾಯಿಗಳಷ್ಟು) ಹಣ ಪೇಮೆಂಟ್ ಆಪ್ ಗಳ ಮೂಲಕ ಸಂದಾಯವಾಗಿದೆ. ಭಾರತೀಯರು ಆನ್ಲೈನ್ ಶಾಪಿಂಗ್ ಗಳಿಗೂ ದೊಡ್ಡಮಟ್ಟಿಗೆ ತೆರೆದುಕೊಳ್ಳುತ್ತಿದ್ದಾರೆ. ಅಮೆಝಾನ್, ಫ್ಲಿಪ್ಕಾರ್ಟ್,ಮಿಂತ್ರಾ, ಸ್ನ್ಯಾಪ್ ಡೀಲ್, ಟಾಟಾ ಕ್ಲಿಕ್, ರಿಲಾಯನ್ಸ್ , ಕ್ಲಬ್ ಫ್ಯಾಕ್ಟರಿ, ಶಾಪ್ ಕ್ಲೂ ಮೊದಲಾದದ ಸಂಸ್ಥೆಗಳು ದೊಡ್ಡ ಮಟ್ಟಿನ ಆನ್ಲೈನ್ ವ್ಯಾಪಾರವನ್ನು ಮಾಡುತ್ತಿವ.,
ಭಾರತದಲ್ಲಿ ಜನರಿಗೆ ಸಿದ್ಧ ಆಹಾರ ವಸ್ತುಗಳ ಪೂರೈಕೆಯ ಆಪ್ ಗಳೂ ಬಹಳ ಜನಪ್ರಿಯವಾಗುತ್ತಿದೆ. ಸ್ವಿಗ್ಗಿ, ಝೊಮ್ಯಾಟೋ, ಫೂಡ್ ಪಾಂಡಾ, ಊಬರ್ ಈಟ್ಸ್, ಡೆಲಿವೆರೋ ಮೊದಲಾದ 16 ಆಪ್ ಆಧಾರಿತ ಆಹಾರ ಪೂರೈಕೆಯ ವ್ಯವಸ್ಥೆ ಇಲ್ಲಿವೆ. ಓಲಾ, ಊಬರ್, ಎರು ಕ್ಯಾಬ್ಸ್, ಕಾರ್ ಜೋನ್ ರೆಂಟ್, ಸವಾರಿ ರೆಂಟಲ್ಸ್, ಟ್ಯಾಬ್ ಕ್ಯಾಬ್, ಝೂಮ್ ಕಾರ್ ಮೊದಲಾದ ಆಪ್ ಆಧಾರಿತ ಟ್ಯಾಕ್ಸಿ ಸೇವೆಯನ್ನು ಜನರು ಬಳಸಿಕೊಳ್ಳುತ್ತಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲೂ ಡಿಜಿಟಲ್ ತಂತ್ರಜ್ಞಾನ ಬಳಕೆಯಾಗುತ್ತಿದೆ. ಬೈಜೂಸ್, ಅನ್ ಅಕ್ಯಾಡೆಮಿ, ವೇದಾಂತು, ಟಾಪರ್, ವಯಿಟ್ ಹ್ಯಾಟ್ ಜೂನಿಯರ್ ಮೊದಲಾದ ಶೈಕ್ಷಣಿಕ ಆಪ್ ಗಳು ಬಹಳ ಚಾಲ್ತಿಯಲ್ಲಿವೆ. ಕರೋನಾ ಲಾಕ್ಡೌನ್ ಸಂದರ್ಭದಲ್ಲಂತೂ ಈ ಆಪ್ ಗಳು ಮುಂಚೂಣಿಯಲ್ಲಿದ್ದವು. ಝೂಮ್ ಮೀಟಿಂಗ್, ಗೂಗುಲ್ ಮೀಟ್, ಜಿಯೋ ಮೀಟ್ ಮೊದಲಾದ ಆಪ್ ಗಳು ಆನ್ಲೈನ್ ಮೀಟಿಂಗ್ ಹಾಗೂ ಪಾಠ ಪ್ರವಚನಗಳಿಗೆ ಬಳಕೆಯಾಗುತ್ತಿವೆ. ಹೈವೇ ಟೋಲ್ ಶುಲ್ಕವು ಈಗ ಫಾಸ್ಟ್ಯಾಗ್ ಅನ್ನುವ ಡಿಜಿಟಲ್ ಮಾಧ್ಯಮದಲ್ಲಿ ನಡೆಸಲ್ಪಡುತ್ತಿದ್ದು 2 ಕೋಟಿಗಿಂತಲೂ ಹೆಚ್ಚು ವಾಹನಗಳಲ್ಲಿ ಫಾಸ್ಟ್ಯಾಗ್ ಅನ್ನು ಅಳವಡಿಸಿಕೊಳ್ಳಲಾಗಿದೆ. ಫಾಸ್ಟ್ಯಾಗ್ ಮೂಲಕ ಆನ್ಲೈನ್ ಟೋಲ್ ಸಂಗ್ರಹ ಆರಂಭವಾದ ನಂತರ ಟೋಲ್ ಸಂಗ್ರಹದಲ್ಲಿ 27% ಏರಿಕೆಯಾಗಿದೆ. ಈಗ ದೇಶದಲ್ಲಿ ದಿನವೊಂದಕ್ಕೆ 104 ಕೋಟಿ ರುಪಾಯಿಗಳಷ್ಟು ಟೋಲ್ ಚಾರ್ಜ್ ಸಂಗ್ರಹವಾಗುತ್ತಿದೆ. ನಗದು ಮೂಲಕ ಟೋಲ್ ಸಂಗ್ರಹವಾಗುತ್ತಿದ್ದ ಕಾಲದಲ್ಲಿ ದಿನವೊಂದಕ್ಕೆ ಸುಮಾರು 80 ಕೋಟಿ ರುಪಾಯಿಗಳು ಮಾತ್ರ ಸಂಗ್ರಹವಾಗುತ್ತಿತ್ತು. ದಿನವೊಂದರಲ್ಲಿ 25 ಕೋಟಿ ರುಪಾಯಿಗಳಷ್ಟು ಹಣವು ಸೋರಿಕೆಯಾಗುವುದನ್ನು ಫಾಸ್ಟ್ಟ್ಯಾಗ್ ವ್ಯವಸ್ಥೆಯು ತಡೆಗಟ್ಟಿದೆ. ವಾಹನಗಳು ಟೋಲ್ ಬೂತ್ ನ ಸರದಿಯಲ್ಲಿ ಕಾಯುವುದೂ ತಪ್ಪಿದೆ.
ಈಗ ಮಾಹಿತಿ ತಂತ್ರಜ್ಞಾನವನ್ನು ಹೊರತುಪಡಿಸಿದ ಕ್ಷೇತ್ರಗಳೇ ಇಲ್ಲ. ಭಾರತದಲ್ಲಿರುವ ಬಹುತೇಕ ಸ್ಟಾರ್ಟ್-ಅಪ್ ಗಳು(ನವೋದ್ಯಮಗಳು) ಮಾಹಿತಿ ತಂತ್ರಜ್ಞಾನಾಧಾರಿತವಾಗಿದೆ. ಈಗ ದೇಶದಲ್ಲಿರುವ ಎಲ್ಲಾ 37 ಯುನಿಕಾರ್ನ್ ಸ್ಟಾರ್ಟ್ ಅಪ್(ಶತಕೋಟಿ ಡಾಲರ್ ಮೌಲ್ಯವನ್ನು ಮೀರಿದ ಸ್ಟಾರ್ಟ್ ಅಪ್ ಗಳು) ಡಿಜಿಟಲ್ ಮಾಧ್ಯಮದ ಮೂಲಕವೇ ನಡೆಯುತ್ತಿರುವುದು. ಸಾಮಾಜಿಕ ಮಾಧ್ಯಮದ ಬಳಕೆಯಲ್ಲೂ ಭಾರತೀಯರು ಬಹಳ ಮುಂದಿದ್ದಾರೆ. ಇಲ್ಲಿ 53 ಕೋಟಿ ಜನರು ವಾಟ್ಸಾಪ್, 48.8 ಕೋಟಿ ಮಂದಿ ಯೂಟ್ಯೂಬ್, 41 ಕೋಟಿ ಮಂದಿ ಫೇಸ್ ಬುಕ್, 21 ಕೋಟಿ ಇನ್ಸ್ಟಾಗ್ರಾಂ ಹಾಗೂ 1.75 ಕೋಟಿ ಜನರು ಟ್ವೀಟರ್ ಗಳನ್ನು ಬಳಸುತ್ತಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಭಾರತೀಯರು ಡಿಜಿಟಲ್ ಜಗತ್ತಿಗೆ ತಮ್ಮನ್ನು ತಾವು ತೆರೆದುಕೊಳ್ಳುತ್ತಿದ್ದಾರೆ. ಡಿಜಿಟಲ್ ಇಂಡಿಯಾದಿಂದಾಗಿ ಸರಕಾರವು ಜನರ ಬಳಿಗೆ ಬಂದಿದೆ, ವ್ಯಾಪಾರ ಹಾಗೂ ಇತರ ಸೇವೆಗಳು ಮೊಬೈಲ್ ಮೂಲಕ ಅಂಗೈಯಿಂದಲೇ ನಿಯಂತ್ರಿಸಲ್ಪಡುತ್ತಿವೆ. ಭಾರತದಲ್ಲಿ ದೊರಕುತ್ತಿರುವ ಅಗ್ಗದ ಬೆಲೆಯ ಇಂಟರ್ನೆಟ್ ಡಾಟಾವೂ ಭಾರತದ ಡಿಜಿಟಲ್ ಇಂಡಿಯಾದ ಕನಸನ್ನು ಸಾಕಾರಗೊಳಿಸುತ್ತಿದೆ.
ಗಣೇಶ್ ಭಟ್ ವಾರಣಾಸಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.