ನವದೆಹಲಿ: ಭಾರತೀಯ ಯೋಧರು ಒಂದಲ್ಲ ಒಂದು ಸಮಾಜಸ್ನೇಹಿ ಕೆಲಸಗಳನ್ನು ಮಾಡುವ ಮೂಲಕ ಸುದ್ದಿಯಲ್ಲಿರುತ್ತಾರೆ. ಈ ಸಾಲಿಗೆ ಇದೀಗ ಐಟಿಬಿಪಿ ಮೂವರು ಯೋಧರು ಸಾಕ್ಷಿಯಾಗಿದ್ದಾರೆ. ವಿಶೇಷ ಭಾವನಾತ್ಮಕ ಘಟನೆಯ ಕಾರಣಕ್ಕಾಗಿ ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಪಡೆಯು ಈ ಮೂವರು ಯೋಧರಿಗೆ ಸ್ಮರಣಿಕೆ, ಪದಕಗಳನ್ನು ನೀಡಿ ಗೌರವಿಸಿದೆ.
ಕರ್ನಾಟಕದಿಂದ ಮೂವತ್ತು ವರ್ಷಗಳ ಹಿಂದೆ ನಾಪತ್ತೆಯಾದ ಕೆಂಚಪ್ಪ ಗೋವಿಂದಪ್ಪ ಅವರು ಸೈನಿಕರ ನೆರವಿನಿಂದ ಮರಳಿ ಮನೆ ಸೇರಿಕೊಂಡಿದ್ದಾರೆ. ಈ ಘಟನೆ ಉತ್ತರಾಖಂಡದ ಲೋಹ್ಘಾಟ್ನಲ್ಲಿ ನಡೆದಿದೆ. ಈ ವಿಶೇಷ ಘಟನೆಗೆ ಕಾರಣಕರ್ತರಾದ ಯೋಧರು ಭಾರತ- ಚೀನಾ ಗಡಿ ಕಾಯುವ ಐಟಿಬಿಪಿಯ 36 ನೇ ಬೆಟಾಲಿಯನ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಈ ಹೃದಯಸ್ಪರ್ಶಿ ಕಾರ್ಯಕ್ಕೆ ಐಟಿಬಿಪಿಯ ಮಹಾನಿರ್ದೇಶಕರು ಸ್ಮರಣಿಕೆ ಹಾಗೂ ಬೆಳ್ಳಿ ತಟ್ಟೆಯನ್ನು ನೀಡಿ ಗೌರವಿಸಿದ್ದಾರೆ. ಈ ಗೌರವವವನ್ನು ಅತ್ಯಪೂರ್ವ ಸೇವೆ ಸಲ್ಲಿಸಿದ ಯೋಧರಿಗೆ ಮಾತ್ರವೇ ನೀಡಲಾಗುತ್ತದೆ.
ಉತ್ತರಾಖಂಡದ ಲೋಹಘಾಟ್ ಸನಿಹದ ಚಲ್ತಿ ಹಳ್ಳಿಯಲ್ಲಿ, ಅತ್ಯಂತ ದುಸ್ಥಿತಿಯಲ್ಲಿದ್ದ ಕೆಂಚಪ್ಪ ಗೋವಿಂದಪ್ಪ ಅವರನ್ನು ಕಂಡ ಯೋಧ ರಿಯಾಜ್ ಸುಂಕದ್ ಅವರು ಅವರ ಪೂರ್ವಾಪರದ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಪ್ರಯತ್ನಿಸಿದಾಗ ಅವರಿಗೆ ಕನ್ನಡ ಬಿಟ್ಟು ಬೇರಾವ ಭಾಷೆಯೂ ಅರ್ಥವಾಗುವುದಿಲ್ಲ ಎಂದು ಅರಿವಾಗುತ್ತದೆ. ಅವರು ತಮಗೆ ಗೊತ್ತಿರುವ ಕನ್ನಡದ ಯೋಧರಿಂದ ಅವರ ಮಾಹಿತಿ ಕಲೆ ಹಾಕಿ, ವಿಡಿಯೋ ಮಾಡಿ ಶೇರ್ ಮಾಡುತ್ತಾರೆ. ಈ ವಿಡಿಯೋ ನೋಡಿದ ಕರ್ನಾಟಕದಲ್ಲಿನ ವಕೀಲರೊಬ್ಬರು ಅವರ ಗುರುತು ಹಿಡಿದು ಐಟಿಬಿಪಿಗೆ ಮಾಹಿತಿ ನೀಡಿದ್ದಾರೆ.
ಆ ಮಾಹಿತಿಯನ್ನಾಧರಿಸಿ ಯೋಧರು ಕರ್ನಾಟಕಕ್ಕೆ ರೈಲಿನ ಮೂಲಕ ಪ್ರಯಾಣಿಸಿ ಗೋವಿಂದಪ್ಪ ಅವರನ್ನು ಅವರ ಕುಟುಂಬಕ್ಕೆ ಸೇರಿಸಿದ್ದಾರೆ. ಗೋವಿಂದಪ್ಪನವರನ್ನು ಮನೆ ಸೇರಿಸಲು ಒಟ್ಟು 2000 ಕಿ.ಮೀ. ದೂರದ ದಾರಿಯನ್ನು ಈ ಯೋಧರು ಕ್ರಮಿಸಿದ್ದಾರೆ. ಗೋವಿಂದಪ್ಪ ಅವರು 1991 ರಲ್ಲಿ ಕೆಲಸ ಹುಡುಕುವ ನೆಪದಲ್ಲಿ ಉತ್ತರಾಖಂಡ ಹಳ್ಳಿಯನ್ನು ತಲುಪಿದ್ದರು. ಕನ್ನಡ ಬಿಟ್ಟು ಬೇರೆ ಭಾಷೆ ಬಾರದೆ ಹೊಟೇಲ್ ಒಂದರಲ್ಲಿ ಕೆಲಸ ಮಾಡಿ ಚಿಲ್ಲರೆ ಹಣ ಪಡೆಯುತ್ತಿದ್ದರು. ಭಾಷೆ ಬಾರದೆ ಕೆಲಸ ಅರಸಿ ಹೋದ ಇವರು 30 ವರ್ಷಗಳ ಬಳಿಕ ಮತ್ತೆ ಮನೆ ಸೇರಿದ್ದಾರೆ ಎನ್ನುವುದೇ ಸಂತಸದಾಯಕ ವಿಷಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.