ಇಂದು ರಾಷ್ಟ್ರೀಯ ಲಸಿಕಾ ದಿನ. ಪ್ರತಿವರ್ಷ ಮಾರ್ಚ್ 16 ರಂದು ಲಸಿಕಾ ದಿನವನ್ನು ಭಾರತದಲ್ಲಿ ಆಚರಣೆ ಮಾಡಲಾಗುತ್ತದೆ. ರಾಷ್ಟ್ರೀಯ ರೋಗನಿರೋಧಕ ದಿನ ಅಂತಲೂ ಇದನ್ನು ಕರೆಯಲಾಗುತ್ತದೆ. ಲಸಿಕೆಯ ಮಹತ್ವವನ್ನು ದೇಶಕ್ಕೆ ತಿಳಿಸಿ ಕೊಡುವ ಉದ್ದೇಶದಿಂದ ಈ ದಿನವನ್ನು 1995 ರಿಂದ ಆಚರಣೆಗೆ ತರಲಾಗಿದೆ. ಇದೇ ವರ್ಷದಿಂದ ಭಾರತವು ದೇಶದಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಆರಂಭ ಮಾಡಿದೆ. ಈ ವರ್ಷ ಕೋವಿಡ್ ಮಹಾಮಾರಿ ಕಾಣಿಸಿಕೊಂಡಿರುವುದರಿಂದ ಲಸಿಕಾ ದಿನಾಚರಣೆ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ. ಭಾರತವು ಕೋವಿಡ್ ವಿರುದ್ಧದ ಲಸಿಕೆ ಅಭಿಯಾನದಲ್ಲಿ ಮಹತ್ವದ ಪ್ರಗತಿಯನ್ನು ಸಾಧಿಸಿದ್ದು, ಈಗಾಗಲೇ ಮೂರು ಕೋಟಿ ಜನರಿಗೆ ಲಸಿಕೆಯನ್ನು ನೀಡಿದೆ. ಮಾತ್ರವಲ್ಲದೆ 71 ರಾಷ್ಟ್ರಗಳಿಗೆ ಭಾರತ ನಿರ್ಮಿತ ಲಸಿಕೆಯನ್ನು ಪೂರೈಕೆ ಮಾಡಿದೆ. ಭಾರತ ಲಸಿಕಾ ಕಾರ್ಯಕ್ರಮದಲ್ಲಿ ದಿಗ್ಗಜ ಎಂಬುದಕ್ಕೆ ಇದುವೇ ಸಾಕ್ಷಿ.
ಲಸಿಕೆಯು ಮನುಷ್ಯನಲ್ಲಿ ರೋಗನಿರೋಧಕ ಶಕ್ತಿಯನ್ನು ಸೃಷ್ಟಿ ಮಾಡಿ ಸಾಂಕ್ರಾಮಿಕ ವಿರುದ್ಧ ಆತನ ದೇಹ ಹೋರಾಡುವಂತೆ ಮಾಡುತ್ತದೆ. ಸಾಂಕ್ರಾಮಿಕ ರೋಗಗಳಿಂದ ಮನುಷ್ಯನನ್ನು ರಕ್ಷಿಸುವಲ್ಲಿ ಲಸಿಕೆಗಳು ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತವೆ. ಲಸಿಕೆ ಎಂದರೆ ವೈರಸ್ ಅಥವಾ ಬ್ಯಾಕ್ಟೀರಿಯಾದ ಕೊಲ್ಲಲ್ಪಟ್ಟ ಅಥವಾ ದುರ್ಬಲ ಅಂಶವಾಗಿದ್ದು, ಇದು ಯಾವುದೇ ಕಾಯಿಲೆಯನ್ನು ಉತ್ಪತ್ತಿ ಮಾಡುವುದಿಲ್ಲ ಬದಲಿಗೆ ರೋಗನಿರೋಧಕತೆಯನ್ನು ಕಾಪಾಡಿ ಮನುಷ್ಯನ ದೇಹಕ್ಕೆ ವಿರುದ್ಧ ಹೋರಾಡುವ ಶಕ್ತಿಯನ್ನು ನೀಡುತ್ತದೆ.
ಜಗತ್ತಿನಲ್ಲಿ ಪೋಲಿಯೋ ರೋಗವನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ರಾಷ್ಟ್ರೀಯ ಲಸಿಕಾ ದಿನವನ್ನು ಆರಂಭಿಸಲಾಯಿತು. ಈ ರೋಗವನ್ನು ಭೂಮಿ ಮೇಲಿನಿಂದ ಹೇಗೆ ನಿರ್ಮೂಲನೆ ಮಾಡುವುದು ಎಂಬುದರ ಬಗ್ಗೆ ಈ ದಿನ ಹೆಚ್ಚು ಗಮನ ನೀಡುತ್ತದೆ. ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮದ ವೆಬ್ಸೈಟ್ ಪ್ರಕಾರ, ಪ್ರತಿವರ್ಷ 172 ಮಿಲಿಯನ್ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡಲಾಗುತ್ತದೆ.
ಪೋಲಿಯೋ ಲಸಿಕೆ ಕಾರ್ಯಕ್ರಮದಡಿಯಲ್ಲಿ ಐದು ವರ್ಷದ ಕೆಳಗಿನ ಮಕ್ಕಳಿಗೆ ವರ್ಷಕ್ಕೆ ಎರಡು ಬಾರಿ ಮೌಖಿಕವಾಗಿ ಲಸಿಕೆ ಡೋಸ್ ಅನ್ನು ನೀಡಲಾಗುತ್ತದೆ. ಈ ಕಾರ್ಯಕ್ರಮ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿದ್ದು ಈಗಾಗಲೇ ಭಾರತ ಪೋಲಿಯೋ ಮುಕ್ತ ದೇಶವಾಗಿ ಹೊರಹೊಮ್ಮಿದೆ. ಈ ಬಗ್ಗೆ 2014ರಲ್ಲಿ ವಿಶ್ವಸಂಸ್ಥೆ ಘೋಷಣೆ ಮಾಡಿದೆ. ದೇಶದಲ್ಲಿ ಕೊನೆಯ ಪೋಲಿಯೋ ಪ್ರಕರಣ ಪತ್ತೆಯಾಗಿದ್ದು 2011ರ ಜನವರಿ 30 ಪಶ್ಚಿಮಬಂಗಾಳದಲ್ಲಿ. ಅಲ್ಲಿಂದ ಬಳಿಕ ಭಾರತದಲ್ಲಿ ಒಂದೇ ಒಂದು ಪೋಲಿಯೋ ಪ್ರಕರಣಗಳು ಪತ್ತೆಯಾಗಿಲ್ಲ.
ಈ ಬಾರಿಯ ಲಸಿಕೆ ದಿನಾಚರಣೆ ಕೊರೋನಾವೈರಸ್ ಹಿನ್ನಲೆಯಲ್ಲಿ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ. ವೈರಸ್ ವಿರುದ್ಧ ಲಸಿಕೆ ಪಡೆಯುವಂತೆ ಜನರನ್ನು ಪ್ರೇರೇಪಿಸುವುದು ಈಗ ಹೆಚ್ಚು ಅಗತ್ಯವಾಗಿದೆ. ಪ್ರತಿಯೊಬ್ಬ ನಾಗರಿಕನನ್ನೂ ಸಾಂಕ್ರಾಮಿಕದ ವಿರುದ್ಧ ಲಸಿಕೆ ಪಡೆಯುವಂತೆ ಮಾಡುವುದು ನಮ್ಮ ಕರ್ತವ್ಯವೂ ಹೌದು. ಈ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗೋಣ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.