ಬೇಸಿಗೆ ಬಂತೆಂದರೆ ಸಾಕು ಹಲವು ಪ್ರದೇಶಗಳಲ್ಲಿ ಜಲಕ್ಷಾಮ ತಲೆದೋರುವುದು ಸರ್ವೇ ಸಾಮಾನ್ಯ ವಿಚಾರ. ಹಲವರಿಗೆ ನೀರಿನ ಮಹತ್ವವೇ ತಿಳಿದಿಲ್ಲ. ಮಳೆಗಾಲದಲ್ಲಿ ಸುರಿಯುವ ಮಳೆ ನೀರನ್ನು ಹೇಗೆ ಭೂಮಿಗೆ ಇಂಗಿಸುವುದು, ಹೇಗೆ ಅಂತರ್ಜಲ ವೃದ್ಧಿಯಾಗುವಂತೆ ಮಾಡುವುದು, ಹೇಗೆ ಬೇಸಿಗೆಯಲ್ಲಿಯೂ ನೀರಿಗೆ ಬರ ಬಾರದಿರುವ ಹಾಗೆ ಪೂರ್ವ ಯೋಜನೆ, ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳುವುದು, ಆ ಮೂಲಕ ಹೇಗೆ ನೀರಿನ ಸಮಸ್ಯೆಯನ್ನು ಪರಿಹರಿಸಿಕೊಳ್ಳುವುದು ಎಂಬುದರ ಬಗ್ಗೆ ಜನರು ಎಚ್ಚೆತ್ತುಕೊಳ್ಳುತ್ತಲೇ ಇಲ್ಲ. ಇಂತಹ ಕಾಲಘಟ್ಟದಲ್ಲಿ ದಕ್ಷಿಣ ಕನ್ನಡದ ಬಂಟ್ವಾಳ ತಾಲ್ಲೂಕಿನ ಅಡ್ಯನಡ್ಕ ಸಮೀಪದ ಅಮೈ ನಿವಾಸಿ ಮಹಾಲಿಂಗ ನಾಯ್ಕ ಅವರು ಏಳು ಅಡ್ಡ ಸುರಂಗಗಳನ್ನು ಕೊರೆದು ಜಲಕ್ಷಾಮಕ್ಕೆ ತಾವೇ ಪರಿಹಾರ ಕಂಡುಕೊಂಡಿದ್ದಾರೆ.
ಗುಡ್ಡ ಕೊರೆದು ಸುರಂಗ ನಿರ್ಮಾಣ ಮಾಡುವುದು ಸಣ್ಣ ಕೆಲಸವಲ್ಲ. ಅದರಲ್ಲಿಯೂ ನಿರಂತರ ಪರಿಶ್ರಮದ ಮೂಲಕ ಏಳು ಸುರಂಗಗಳನ್ನು ಕೊರೆದು ನೀರಿನ ಸಮಸ್ಯೆಯನ್ನು ಪರಿಹರಿಸಿಕೊಂಡಿದ್ದಾರೆ. ಆ ಮೂಲಕ ಬಂಟ್ವಾಳದ ಆಧುನಿಕ ಭಗೀರಥ ಎಂದೇ ಪ್ರಸಿದ್ಧರಾಗಿದ್ದಾರೆ. ಖಾಲಿ ಖಾಲಿ ಎನಿಸುತ್ತಿದ್ದ ಗುಡ್ಡವನ್ನು ತಮ್ಮ ಅವಿರತ ಶ್ರಮ, ನಿರಂತರ ಪ್ರಯತ್ನದ ಮೂಲಕ ಅರಳಿ ನಗುವಂತೆ ಮಾಡಿದ್ದಾರೆ. ಆ ಮೂಲಕ ನೀರಿಲ್ಲ ಎಂದು ಬೊಬ್ಬಿಡುವ ಜನರಿಗೆ ಹೀಗೂ ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಜೊತೆಗೆ ನಿರಂತರ ಶ್ರಮದ ಮೂಲಕ ಯಾವುದೂ ಅಸಾಧ್ಯವಲ್ಲ ಎಂಬುದನ್ನು ಜನರಿಗೆ ತೋರಿಸಿಕೊಟ್ಟಿದ್ದಾರೆ.
ನಗರ ಪ್ರದೇಶಗಳ ಜೊತೆಗೆ ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗಗಳಲ್ಲಿಯೂ ಬೇಸಿಗೆ ಬಂತೆಂದರೆ ʼಬರದ ಬರೆʼ ಸರ್ವೇ ಸಾಮಾನ್ಯ ವಿಚಾರ ಎಂಬಂತಾಗಿದೆ. ಹೀಗಾದಾಗೆಲ್ಲಾ ‘ನೀರಿಲ್ಲ, ಸರ್ಕಾರ ಇದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸುತ್ತಿಲ್ಲ. ಸರ್ಕಾರದ ಬೇಜವಾಬ್ದಾರಿಯಿಂದಾಗಿ ಜನತೆ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆʼ ಎಂಬುದಾಗಿ ಬೊಬ್ಬೆ ಹೊಡೆಯುವವರ ನಡುವೆ, ಕಾಯಕವೇ ಕೈಲಾಸ, ನಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವುದಕ್ಕೆ ಪೂರಕವಾಗಿ ಸಾಧ್ಯವಾಗುವಂತಹ ಸಂದರ್ಭಗಳಲ್ಲಿ ನಾವೇ ಶ್ರಮ ಪಡುವುದು, ಇದು ಸಾಧ್ಯವಾಗದೆ ಹೋದಾಗ ಪರ್ಯಾಯಗಳನ್ನು ಹುಡುಕುವತ್ತ ದೃಷ್ಟಿ ನೆಡುವುದು ಹೇಗೆ ಎಂಬುದನ್ನು ಸಾರ್ವಜನಿಕರಿಗೆ ತೋರಿಸಿಕೊಟ್ಟವರು ಮಹಾಲಿಂಗ ನಾಯ್ಕರು ಎಂದರೂ ಅತಿಶಯವಾಗಲಾರದು. ಈ ಪ್ರಯತ್ನಗಳೆಲ್ಲ ಫಲ ಕೊಡದೇ ಹೋದಲ್ಲಿ ಮಾತ್ರವೇ ಸರ್ಕಾರವನ್ನು ಅವಲಂಬಿಸುವುದು ಮಾಡಿದಲ್ಲಿ ನಾವು ಇತರರಿಗೆ ಮಾದರಿಯಾಗುವುದರ ಜೊತೆಗೆ, ನಮ್ಮ ಅವಶ್ಯಕತೆಗೆಳನ್ನು ನಾವೇ ಪೂರೈಸಿಕೊಳ್ಳುವುದಕ್ಕೂ ಸಾಧ್ಯವಾಗುತ್ತದೆ.
ಮಹಾಲಿಂಗ ನಾಯ್ಕ ಅವರು ಕೊರೆದಿರುವ ಏಳು ಸುರಂಗಗಳಲ್ಲಿ, ಎರಡು ಮಾತ್ರ ಬಳಕೆಗೆ ಯೋಗ್ಯವಾಗಿವೆ. ಉಳಿದ ಐದು ಸುರಂಗಗಳು ಅವರ ಶ್ರಮಕ್ಕೆ ಫಲ ನೀಡಿಲ್ಲ. ಆರಂಭದಲ್ಲಿ ಕೊರೆದ ಸುರಂಗಗಳು ಫಲ ನೀಡದೇ ಹೋದಾಗ ಧೃತಿಗೆಡದೆ, ಕೈಚೆಲ್ಲಿ ಕುಳಿತುಕೊಳ್ಳದೆ ʼಮರಳಿ ಯತ್ನವ ಮಾಡುʼ ಎಂಬಂತೆ ಅವಿರತ ಶ್ರಮ ಪಟ್ಟಿದ್ದಾರೆ. ಅದರ ಪರಿಣಾಮವಾಗಿ ಅವರು ಕೊರೆದ ಎರಡು ಸುರಂಗಗಳಲ್ಲಿ ನೀರು ಸಿಕ್ಕಿದೆ. ಈ ನೀರನ್ನು ಹನಿ ನೀರಾವರಿ ವ್ಯವಸ್ಥೆಯ ಮೂಲಕ ಬಳಕೆ ಮಾಡುತ್ತಿದ್ದಾರೆ. ಮೊದಲ ಸುರಂಗ 30 ಮೀ., ಎರಡನೇಯದ್ದಯ 25 ಮೀಟರ್, ಮೂರನೇಯ ಸುರಂಗ 40 ಮೀಟರ್, ನಾಲ್ಕನೇಯ ಸುರಂಗ 25 ಮೀಟರ್ ಕೊರೆದರೂ ನೀರು ಸಿಕ್ಕಿರಲಿಲ್ಲ. ಆದರೆ ಅವರು ತಮ್ಮ ಪ್ರಯತ್ನವನ್ನು ನಿಲ್ಲಿಸಲಿಲ್ಲ. ಐದು ಸುರಂಗಗಳಲ್ಲಿ ನೀರು ದೊರೆಯದೇ ಹೋದಾಗಲೂ ಬೇಸರಿಸಲಿಲ್ಲ. ಬದಲಾಗಿ ಅದನ್ನೊಂದು ತಪಸ್ಸಿನಂತೆ ಪರಿಗಣಿಸಿ ಕಾರ್ಯ ಮುಂದುವರಿಸಿದ್ದಾರೆ. ಪರಿಣಾಮ ಕೊನೆಯ ಎರಡು ಸುರಂಗಗಳಲ್ಲಿ ಈ ಭಗೀರಥನ ಪ್ರಯತ್ನಕ್ಕೆ ಭಾಗೀರಥಿ ಒಲಿದಿದ್ದಾಳೆ. ನೀರು ಸಿಕ್ಕಿದೆ.
ನೀರಿಗಾಗಿ ಮೂರು ಕಿ. ಮೀ. ನಡೆಯಬೇಕಾಗಿದ್ದ ಸಂದರ್ಭದಲ್ಲಿ ಬಾವಿ ಕೊರೆಸಲು ಆರ್ಥಿಕ ಸ್ಥಿತಿಯೂ ಸರಿಯಾಗಿಲ್ಲದ್ದರಿಂದ ಸುರಂಗ ಕೊರೆಯುವ ಸಾಹಸವನ್ನು ಮಹಾಲಿಂಗ ನಾಯ್ಕು ಮಾಡಿದ್ದಾರೆ. ಅರ್ಧ ದಿನ ಕೂಲಿ ಕೆಲಸ, ಮತ್ತರ್ಧ ದಿನ ಮತ್ತು ರಾತ್ರಿ ವೇಳೆಯಲ್ಲಿ ದೀಪದ ಬೆಳಕಿನಲ್ಲಿಯೇ ಸುರಂಗವನ್ನು ಕೊರೆಯುವ ಮೂಲಕ ಮಹತ್ವದ ಸಾಧನೆ ಮಾಡುವ ಮೂಲಕ ಆದರ್ಶರಾಗಿದ್ದಾರೆ. 62 ಮೀಟರ್ ಉದ್ದದ 6 ನೇ ಸುರಂಗದಲ್ಲಿ ಗಂಗೆ ಮಹಾಲಿಂಗ ನಾಯ್ಕರ ಮನೆ ಬಾಗಿಲಿಗೆ ಬಂದಿದ್ದಾಳೆ. ಅವರ ಏಕಾಂಗಿ ಪ್ರಯತ್ನಕ್ಕೆ ಫಲ ಸಿಕ್ಕಿದೆ. ಈ ನೀರನ್ನು ಸಂಗ್ರಹಿಸಲು ಮಣ್ಣಿನ ಟ್ಯಾಂಕ್ ನಿರ್ಮಿಸಿ, ತೋಟ ಮಾಡುವ ಕನಸನ್ನೂ ಇದೀಗ ಶ್ರೀಯುತರು ನೆರವೇರಿಸಿಕೊಂಡಿದ್ದಾರೆ. ಗುಡ್ಡವನ್ನು ಸಮತಟ್ಟು ಮಾಡಿ ಸುಂದರವಾದ ಅಡಿಕೆ, ತೆಂಗು, ಬಾಳೆ ತೋಟವನ್ನು ಮಾಡಿದ್ದಾರೆ. ಆರಂಭದಲ್ಲಿ ಬರಡಾಗಿದ್ದ ಮಹಾಲಿಂಗ ನಾಯ್ಕರ ಜಾಗವೀಗ ಹಸಿರಿನಿಂದ ಕಂಗೊಳಿಸುತ್ತಿದೆ.
ಸಾಧನೆ ಮಾಡುವ ಹಠ ನಮ್ಮಲ್ಲಿದ್ದರೆ ಅಸಾಧ್ಯ ಎಂಬುದು ಯಾವುದೂ ಇಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ ಮಹಾಲಿಂಗ ನಾಯ್ಕರ ಈ ಪ್ರಯತ್ನ. ಅವರ ಸಾಧನೆಗೆ ನಮ್ಮದೊಂದು ಸಲ್ಯೂಟ್.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.