ಸಾವಿರಾರು ವರ್ಷ ಬ್ರಿಟೀಷರ ಕ್ರೂರ ಆಡಳಿತದ ಬಳಿಕ ಭಾರತವು 1947 ರಲ್ಲಿ ಸ್ವಾತಂತ್ರ್ಯವನ್ನು ಪಡೆದುಕೊಂಡಿತು. ನೆನಪಿರಲಿ ಸ್ವಾತಂತ್ರ್ಯವನ್ನು ಯಾರೂ ದಾನವಾಗಿ ನೀಡಲಿಲ್ಲ. ಸಾವಿರಾರು ಜನ ದೇಶದ ಸ್ವಾತಂತ್ರಕ್ಕಾಗಿ ತಮ್ಮೆಲ್ಲಾ ಸುಖಗಳನ್ನು ಬದಿಗೊತ್ತಿ ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಿದ್ದರು. ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದ ಬಾಲಕರಿಂದ ಹಿಡಿದು ಕಾಲೇಜಿನಲ್ಲಿ ವ್ಯಾಸಂಗ ನಡೆಸುತ್ತಿದ್ದ ಯುವತಿಯರೂ ಸ್ವಾತಂತ್ರ್ಯಕ್ಕಾಗಿ ತಮ್ಮ ಕೌಟುಂಬಿಕ ಜೀವನವನ್ನೂ, ಸರಾಗ ಜೀವನವನ್ನೂ ತೊರೆದು ಹೋರಾಟದ ಕಷ್ಟಕರ ಮಾರ್ಗವನ್ನು ಆರಿಸಿಕೊಂಡಿದ್ದರು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬ್ರಿಟೀಷರಿಂದ ಬಂಧನಕ್ಕೊಳಗಾಗುವುದರ ಬದಲಾಗಿ ಸಾವನ್ನಪ್ಪುವುದೇ ಶ್ರೇಷ್ಠ ಎಂದು ಅನೇಕ ಕ್ರಾಂತಿಕಾರಿಗಳು ಸ್ವತಃ ಆತ್ಮಹತ್ಯೆಗೆ ಶರಣಾಗಿದ್ದರು. ಅಂತಹಾ ವೀರರಲ್ಲಿ ಒಬ್ಬರೇ ಬಂಗಾಳದ ಸಿಂಹಿಣಿ ಎಂದೇ ಪ್ರಸಿದ್ಧರಾಗಿದ್ದ “ಪ್ರೀತಿಲತಾ ವಡ್ಡೆದಾರ್”.
ಪ್ರೀತಿಲತಾ ವಡ್ಡೆದಾರ್ 5 ಮೇ 1911 ರಲ್ಲಿ ಬಂಗಾಳದ ಚಿತ್ತಗಾಂಗ್ನಲ್ಲಿ [ಈಗಿನ ಬಾಂಗ್ಲಾದೇಶ] ಜನಿಸಿದರು. ಚಿತ್ತಗಾಂಗ್ ಪುರಸಭೆಯ ಗುಮಾಸ್ತರಾಗಿದ್ದ ಜಗಬಂಧು ವಡ್ಡೆದಾರ್ ಮತ್ತು ಪ್ರತಿಭಾ ಮಯಿ ದಂಪತಿಗಳ 6 ಮಕ್ಕಳಲ್ಲಿ ಒಬ್ಬರಾಗಿದ್ದ ಪ್ರೀತಿಲತಾ ಒಂದು ಮಧ್ಯಮವರ್ಗದ ಕುಟುಂಬದ ಮಗಳಾಗಿದ್ದರು. ಗುಮಾಸ್ತರಾಗಿದ್ದ ಜಗಬಂಧು ತಮ್ಮ ಕೈಲಾದಷ್ಟರ ಮಟ್ಟಿಗೆ ತಮ್ಮ ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ಕೊಡಿಸಿದ್ದರು. ಪ್ರೀತಿಲತಾ ಚಿತ್ತಗಾಂಗ್ನ ಖಾಸ್ತಗೀರ್ ಬಾಲಕಿಯರ ಸರಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ನಡೆಸುತ್ತಿದ್ದಾಗ, ಉಷಾ ಎಂಬ ಶಿಕ್ಷಕಿಯೊಬ್ಬರು, ಕಥೆಗಳನ್ನು ಹೇಳುವ ಮೂಲಕ ತಮ್ಮ ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತೆಯ ಬೀಜವನ್ನು ಬಿತ್ತುತ್ತಿದ್ದರು. ಕಲ್ಪನಾ ದತ್ತಾ ಎಂಬ ಪ್ರೀತಿಲತಾ ಅವರ ಸಹಪಾಠಿ ತಮ್ಮ ಆತ್ಮಕಥೆಯಲ್ಲಿ “ಶಾಲಾ ದಿನಗಳಲ್ಲಿ ನಮಗೆ ನಮ್ಮ ಭವಿಷ್ಯದ ಬಗ್ಗೆ ಯಾವುದೇ ಸ್ಪಷ್ಟವಾದ ಕಲ್ಪನೆಗಳು ಇರಲಿಲ್ಲ. ಆದರೆ ಶಿಕ್ಷಕಿಯು ಝಾನ್ಸಿ ರಾಣಿ ಲಕ್ಷ್ಮಿ ಬಾಯಿಯ ಕಥೆಗಳನ್ನು ಉದಾಹರಣೆಯೊಂದಿಗೆ ಹೇಳುವಾಗ ನಾವು ಝಾನ್ಸಿ ರಾಣಿಯ ಕುರಿತಾಗಿ ಕಲ್ಪಿಸಿಕೊಳ್ಳುತ್ತಿದ್ದೆವು ಮತ್ತು ನಾವೆಲ್ಲಾ ನಿರ್ಭೀತರು ಎಂದು ಭಾವಿಸುತ್ತಿದ್ದೆವು.” ಎಂದು ಹೇಳುತ್ತಾರೆ.
ಕಲೆ ಮತ್ತು ಸಾಹಿತ್ಯವು ಪ್ರೀತಿಲತಾ ಅವರ ನೆಚ್ಚಿನ ವಿಷಯಗಳಾಗಿದ್ದವು. 1928 ರಲ್ಲಿ ಖಾಸ್ತಗೀರ್ ಶಾಲೆಯಿಂದ ಹೊರಬಂದ ಬಳಿಕ ಅವರು 1929 ರಲ್ಲಿ ಢಾಕಾದ ಈಡನ್ ಕಾಲೇಜ್ನಲ್ಲಿ ಪ್ರವೇಶ ಪಡೆದರು. ಮಧ್ಯಂತರ ಪರೀಕ್ಷೆಗಳಲ್ಲಿ ಢಾಕಾ ಪರೀಕ್ಷಾ ಮಂಡಳಿಯಿಂದ ಹಾಜರಾದ ಆ ವರ್ಷದ ಎಲ್ಲಾ ವಿದ್ಯಾರ್ಥಿಗಳಲ್ಲಿ ಪ್ರೀತಿಲತಾ ಪ್ರಥಮ ಸ್ಥಾನಿಯಾಗಿ ತೇರ್ಗಡೆ ಹೊಂದಿದರು. ಈಡನ್ ಗಾರ್ಡನ್ನ ವಿದ್ಯಾರ್ಥಿಯಾಗಿ ಅವರು ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. ದೀಪಾಲಿ ಸಂಘದ ಅಡಿಯಲ್ಲಿ ಲೀಲಾ ನಾಗ್ ನೇತೃತ್ವದ ಶ್ರೀ ಸಂಘ ಗುಂಪನ್ನು ಸೇರಿಕೊಂಡರು.
ಉನ್ನತ ಶಿಕ್ಷಣ ಪಡೆಯುವ ಉದ್ದೇಶದಿಂದ ಪ್ರೀತಿಲತಾ ಕಲ್ಕತ್ತಾಗೆ ತೆರಳಿ ಬೇಥೋನ್ ಕಾಲೇಜ್ನಲ್ಲಿ ಪ್ರವೇಶ ಪಡೆದರು. ಎರಡು ವರ್ಷಗಳ ಬಳಿಕ ಫಿಲಾಸಫಿ ಪದವಿ ಪಡೆದ ಪ್ರೀತಿಲತಾರ ಪ್ರಮಾಣ ಪತ್ರವನ್ನು ವಿದ್ಯಾಲಯದ ಬ್ರಿಟಿಷ್ ಅಧಿಕಾರಿಗಳು ತಡೆಹಿಡಿದಿದ್ದರು. 2012 ರಲ್ಲಿ ಪ್ರೀತಿಲತಾ ಮತ್ತು ಬೀನಾ ದಾಸ್ ಅವರ ಪದವಿ ಪ್ರಮಾಣ ಪತ್ರಗಳನ್ನು ಮರಣೋತ್ತರವಾಗಿ ನೀಡಿ ಗೌರವಿಸಲಾಯಿತು. ಕಲ್ಕತ್ತದಲ್ಲಿ ಶಿಕ್ಷಣ ಮುಗಿಸಿದ ಪ್ರೀತಿಲತಾ ಚಿತ್ತಗಾಂಗ್ಗೆ ಮರಳಿದರು. ಚಿತ್ತಗಾಂಗ್ಗೆ ಮರಳಿದ ಬಳಿಕ ಅವರು ನಂದನಕನನ್ ಅಪರ್ಣ ಚರಣ್ ಎಂಬ ಸ್ಥಳೀಯ ಇಂಗ್ಲಿಷ್ ಮಾಧ್ಯಮ ಮಾಧ್ಯಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ವೃತ್ತಿಯನ್ನು ಪ್ರಾರಂಭಿಸಿದರು.
ಭಾರತೀಯ ಸ್ವತಂತ್ರ ಚಳುವಳಿಯಲ್ಲಿ ಭಾಗಿಯಾಗಲು ನಿರ್ಧರಿಸಿದ ಪ್ರೀತಿಲತಾ ಕ್ರಾಂತಿಕಾರಿ ಸೂರ್ಯಸೇನ್ರ ಬಗ್ಗೆ ಕೇಳಿ ತಿಳಿದು, ಅವರ ಗುಂಪು ಸೇರಲು ಬಯಸಿದರು. 13 ಜೂನ್ 1932 ರಂದು ಪ್ರೀತಿಲತಾ ಅವರು ಧಾಲ್ಭಟ್ ಶಿಬಿರದಲ್ಲಿ ನಿರ್ಮಲಾ ಸೆನ್ರನ್ನು ಭೇಟಿಯಾದರು. ಕ್ರಾಂತಿಕಾರಿ ಬಿನೋದ್ ಚೌಧರಿ ಯವರು ಮಹಿಳೆಯರಿಗೆ ಗುಂಪಿನಲ್ಲಿ ಅವಕಾಶ ನೀಡುವುದನ್ನು ನಿರಾಕರಿಸಿ ಆಕ್ಷೇಪಿಸಿದರು. ಆದರೆ ಇತರ ಅನೇಕ ಕ್ರಾಂತಿಕಾರಿಗಳು ಮಹಿಳೆಯರು ಶಸ್ತ್ರಾಸ್ತ್ರಗಳನ್ನು ಸಾಗಿಸುವಾಗ ಅನುಮಾನ ಬರುವ ಸಾಧ್ಯತೆಗಳು ಕಡಿಮೆ ಎಂದು ವಾದಿಸಿದ ಕಾರಣದಿಂದಾಗಿ ಪ್ರೀತಿಲತಾ ಅವರಿಗೆ ಗುಂಪಿನಲ್ಲಿ ಭಾಗಿಯಾಗುವ ಅತ್ಯುತ್ತಮ ಸದವಕಾಶ ದೊರೆಯಿತು.
ರಾಮಕೃಷ್ಣ ಬಿಸ್ವಾನ್ರಿಂದ ಸ್ಫೂರ್ತಿ ಪಡೆದ ಸೂರ್ಯಸೇನ್ ಮತ್ತು ಅವರ ಕ್ರಾಂತಿಕಾರಿಗಳ ಗುಂಪು ಚಿತ್ತಗಾಂಗ್ನ ಇನ್ಸ್ಪೆಕ್ಟರ್ ಕ್ರೇಗ್ರನ್ನು ಹತ್ಯೆಗಯ್ಯಲು ನಿರ್ಧರಿಸಿದರು. ಈ ಕಾರ್ಯಕ್ಕಾಗಿ ರಾಮಕೃಷ್ಣ ಬಿಸ್ವಾಸ್ ಮತ್ತು ಕಾಲಿಪದ ಚಕ್ರವರ್ತಿ ಅವರನ್ನು ನಿಯೋಜಿಸಲಾಗಿತ್ತು. ಆದರೆ ಗೊಂದಲದಿಂದ ಅವರಿಬ್ಬರೂ ಕ್ರೇಗ್ನ ಬದಲು ತಾರಿಣಿ ಮುಖರ್ಜಿಯನ್ನು ಹತ್ಯೆಗೈದರು. 2 ಡಿಸೆಂಬರ್ 1931 ರಂದು ಬಂಧನಕ್ಕೊಳಗಾದ ಬಿಸ್ವಾಸ್ರಿಗೆ ಮರಣ ದಂಡನೆಯ ಶಿಕ್ಷೆಯು ವಿಧಿಸಲ್ಪಟ್ಟರೆ, ಚಕ್ರವರ್ತಿಯನ್ನು ಅಂಡಮಾನ್ ಜೈಲಿಗೆ ಗಡೀಪಾರು ಮಾಡಲಾಯಿತು. ಕೋಲ್ಕತ್ತಾದ ಜೈಲಿಗೆ ಪಯಣಿಸಲು ಬೇಕಾದ ಹಣ ಬಿಸ್ವಾಸ್ರ ಸ್ನೇಹಿತರು ಮತ್ತು ಕುಟುಂಬದವರ ಬಳಿ ಇಲ್ಲದಿದ್ದ ಕಾರಣದಿಂದ, ಕೋಲ್ಕತ್ತಾದಲ್ಲಿ ವಾಸವಾಗಿದ್ದ ಪ್ರೀತಿಲತಾ ಅವರು ಅಲಿಪುರ್ ಕಾರಾಗೃಹಕ್ಕೆ ಹೋಗಿ ಬಿಸ್ವಾಸ್ರನ್ನು ಭೇಟಿ ಮಾಡಿದ್ದರು.
ಸೂರ್ಯಸೇನ್ರ, ಕ್ರಾಂತಿಕಾರಿ ಗುಂಪಿನಲ್ಲಿ ಶಾಮೀಲಾದ ಬಳಿಕ ಅವಕಾಶವನ್ನು ಬಳಸಿಕೊಂಡ ಪ್ರೀತಿಲತಾ ದೂರವಾಣಿ ಮತ್ತು ಟೆಲಿಗ್ರಾಫ್ ಕಚೇರಿಗಳ ಮೇಲೆ ದಾಳಿ, ಪೊಲೀಸರಿಗೆ ಮೀಸಲಾದ ಮಾರ್ಗಗಳನ್ನು ವಶಪಡಿಸಿಕೊಳ್ಳುವಂತ ಅನೇಕ ದಾಳಿಗಳಲ್ಲಿ ಭಾಗವಹಿಸಿದ್ದರು. ಜಲಾಲಾಬಾದ್ ಯುದ್ಧದಲ್ಲಿ ಅವರು ಕ್ರಾಂತಿಕಾರಿಗಳಿಗೆ ಸ್ಫೋಟಕಗಳನ್ನು ಪೂರೈಸುವ ಜವಾಬ್ದಾರಿಯನ್ನು ವಹಿಸಿಕೊಂಡರು. ಪಹರ್ತಾಲಿಯಲ್ಲಿ 1932 ರಲ್ಲಿ ನಡೆದ ಯುರೋಪಿಯನ್ ಕ್ಲಬ್ನ ಮೇಲೆ ನಡೆಸಿದ ದಾಳಿಯಲ್ಲೂ ಅವರ ಪಾತ್ರ ಪ್ರಮುಖವಾಗಿತ್ತು. ಈ ಕ್ಲಬ್ನ ಮುಂದೆ “ನಾಯಿಗಳು ಮತ್ತು ಭಾರತೀಯರಿಗೆ ಪ್ರವೇಶವಿಲ್ಲ” ಎಂಬ ಫಲಕವನ್ನು ಹಾಕಲಾಗಿತ್ತು. ಈ ದಾಳಿಯ ಕೇವಲ 7 ದಿನಗಳ ಮೊದಲು ಕಲ್ಪನಾ ದತ್ತಾ ಪೊಲೀಸರ ಬಂಧನಕ್ಕೊಳಗಾಗಿದ್ದರು. ಈ ಕಾರಣದಿಂದಾಗಿ ದಾಳಿಯ ನಾಯಕತ್ವವನ್ನು ಪ್ರೀತಿಲತಾರಿಗೆ ವಹಿಸಲಾಯಿತು. ಶಸ್ತ್ರಾಸ್ತ್ರ ತರಬೇತಿಗಾಗಿ ಕೋಟೋವಾಲಿ ಸೀ ಸೈಡ್ಗೆ ತೆರಳಿದ್ದ ಪ್ರೀತಿಲತಾ ದಾಳಿಯ ಯೋಜನೆಯನ್ನು ಅಲ್ಲಿಯೇ ರೂಪಿಸಿದರು.
23 ಸೆಪ್ಟೆಂಬರ್ 1932 ರಂದು ಕ್ಲಬ್ನ ಮೇಲೆ ದಾಳಿ ನಡೆಸಲು ನಿರ್ಧರಿಸಲಾಗಿತ್ತು. ಪಂಜಾಬಿ ಪುರುಷನಂತೆ ವೇಷ ಧರಿಸಲಿದ್ದ ಪ್ರೀತಿಲತಾ, ಲುಂಗಿ ಮತ್ತು ಶರ್ಟ್ ಧರಿಸಿದ್ದ ಪನ್ನಾ ಸೆನ್, ಸುಶೀಲ್ ಡೇ ಮತ್ತು ಮಹೇಂದ್ರ ಚೌಧರಿ ಶರ್ಟ್ ಮತ್ತು ಧೋತಿ ಧರಿಸಿದ್ದ ಕಾಳಿ ಶಂಕರ್ ಡೇ, ಶಾಂತಿ ಚಕ್ರವರ್ತಿಯೊಂದಿಗೆ ಸುಮಾರು 10.45 ಕ್ಕೆ ಕ್ಲಬ್ ಅನ್ನು ತಲುಪಿದರು. ಮೂರು ಗುಂಪುಗಳಾಗಿ ವಿಂಗಡಿಸಲ್ಪಟ್ಟ ಕ್ರಾಂತಿಕಾರಿಗಳು ತಮ್ಮ ದಾಳಿಯನ್ನು ಪ್ರಾರಂಭಿಸಿದ್ದರು, ಈ ಸಂದರ್ಭದಲ್ಲಿ ಕ್ಲಬ್ನಲ್ಲಿ ರಿವಾಲ್ವರ್ ಹೊಂದಿದ್ದ ಪೊಲೀಸರು ಪ್ರತಿ ದಾಳಿಯನ್ನೂ ನಡೆಸಿದರು. ಈ ಗಲಭೆಯ ಸಂದರ್ಭದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದರೆ 4 ಪುರುಷರು ಮತ್ತು 7 ಮಹಿಳೆಯರು ಗಾಯಗೊಂಡರು.
ಗುಂಡೇಟಿನಿಂದ ಗಾಯಗೊಂಡ ಪ್ರೀತಿಲತಾ ಬಂಧನಕ್ಕೆ ಒಳಗಾಗಲು ಇಚ್ಛಿಸದೆ ಪೊಟ್ಯಾಷಿಯಂ ಸೈನೈಡ್ ಅನ್ನು ನುಂಗಿ ಆತ್ಮಹತ್ಯೆಗೆ ಶರಣಾದರು. ಘಟನೆಯ ಮರುದಿನ ಅವರ ಶವವನ್ನು ಗುರುತಿಸಿದ ಪೊಲೀಸರು, ಮೃತ ಶರೀರದ ಪರಿಶೀಲನೆಯನ್ನು ನಡೆಸುವಾಗ ದಾಳಿಯ ಸಂಯೋಜನೆಯ ಕರಡು, ರಾಮಕೃಷ್ಣ ಬಿಸ್ವಾಸ್ರ ಫೋಟೋ ಮತ್ತು ಗುಂಡುಗಳನ್ನು ಸಂಗ್ರಹಿಸಿದರು.
ದೇಶದ ಸ್ವಾತಂತ್ರಕ್ಕಾಗಿ ತಮ್ಮ ಸರ್ವೋಚ್ಚ ಬಲಿದಾನವನ್ನು ನೀಡಿದ್ದ ವೀರ ವನಿತೆ, ಬಂಗಾಳದ ಸಿಂಹಿಣಿಯ ಸ್ಮರಣೆಗಾಗಿ
ಪ್ರೀತಿಲತಾ ವಡ್ಡೆದಾರ್ ಕಾಲೇಜ್
ಪ್ರೀತಿಲತಾ ಹಾಲ್, ಚಿತ್ತಗಾಂಗ್ ಮಹಾವಿದ್ಯಾಲಯ
ಪ್ರೀತಿಲತಾ ಹಾಲ್, ಜಹಾಂಗೀರ್ ನಗರ ವಿಶ್ವವಿದ್ಯಾಲಯ
ಪ್ರೀತಿಲತಾ ವಡ್ಡೆದಾರ್ ಪ್ರಾಥಮಿಕ ಶಾಲೆ, ಚಿತ್ತಗಾಂಗ್
ಖಂತುರ ಪ್ರೀತಿಲತಾ ಶಿಕ್ಷಾ ನಿಕೇತನ್, ಗೋರಬಾಡದಂಗ್, ಪಶ್ಚಿಮ ಬಂಗಾಳ
ಪ್ರೀತಿಲತಾ ವಡ್ಡೆದಾರ್ ಹಾಲ್ ಆಫ್ ರೆಸಿಡೆನ್ಸ್, ನಾಸ್ಟಿಯೋನ್ಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ದುರ್ಗಾಪುರ್
ಇವುಗಳನ್ನು ನಿರ್ಮಿಸಲಾಯಿತು.
“ಪ್ರೀತಿಲತಾ ಯುವ ಉತ್ಸಾಹಿ ಮತ್ತು ಧೈರ್ಯಶಾಲಿ, ಅವಳು ತುಂಬಾ ಉತ್ಸಹದಿಂದ ಕೆಲಸ ಮಾಡುತ್ತಿದ್ದಳು ಮತ್ತು ಬ್ರಿಟೀಷರನ್ನು ಭಾರತದಿಂದ ಓಡಿಸಲು ನಿರ್ಧರಿಸಿದ್ದಳು” ಎಂದು ಸ್ವತಃ ಕ್ರಾಂತಿಕಾರಿಯಾದ ಬಿನೋದ್ ಬಿಹಾರಿ ಚೌಧರಿ ಅವರು ಹೇಳಿದ್ದಾರೆ. ಆದರೆ ಇಂತಹಾ ವೀರ ಮಹಿಳೆಯ ಸಾಹಸಗಳ ಬಗ್ಗೆ ಬಹುತೇಕ ಭಾರತೀಯರು ಅರಿತಿಲ್ಲ. ನಾವು ಅವರ ಶೌರ್ಯ ಸಾಹಸಗಳನ್ನು ಮರೆಯಬಾರದು. ಸ್ವಾತಂತ್ರ ಸೇನಾನಿಗಳ ತ್ಯಾಗ ಬಲಿದಾನಗಳನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಲ್ಲವೇ?
✍️ ದೀಪಾ ಜಿ. ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.