ಮಾರ್ಕ್ಸ್ವಾದ ಜಗತ್ತಿನ ಸಮಸ್ಯೆಗಳಿಗೆ ಪರಿಹಾರವೇ? ಅಥವಾ ಮಾರ್ಕ್ಸ್ ವಾದವೇ ಜಗತ್ತಿನ ಸಮಸ್ಯೆಯೇ? ಹೀಗೊಂದು ಪ್ರಶ್ನೆಯನ್ನು ಗಂಭೀರವಾಗಿ ನಮಗೆ ನಾವೇ ಕೇಳಿಕೊಳ್ಳಬೇಕಾದ ಅಗತ್ಯವಿದೆ. ನಮ್ಮ ವೈಚಾರಿಕ ಜಗತ್ತು ಮಾರ್ಕ್ಸ್ವಾದದ ದಾಸ್ಯಕ್ಕೆ ಹೇಗೆ ಒಪ್ಪಿಸಿಕೊಂಡಿದೆಯೆಂದರೆ, ಮಾರ್ಕ್ಸ್ವಾದ ಎಂದರೇನೆಂದು ಅರಿಯದರವರೂ ಕೂಡ ಲೋಕದ ಖಾಯಿಲೆಗಳಿಗೆಲ್ಲಾ ಇದೇ ಪರಿಹಾರ ಎಂಬಂತೆ ನಂಬಿಸುತ್ತಿದ್ದಾರೆ. ಈ ನಿರೂಪಣೆಯ ಪರಿಣಾಮ,ತಮ್ಮ ನಂಬಿಕೆಯ ಸತ್ಯಾಸತ್ಯತೆಯ ಪರೀಕ್ಷೆಗೂ ಅವಕಾಶವಿಲ್ಲದ ಮೂಢನಂಬಿಕೆಯಾಗಿ ಬೆಳೆದಿದೆ ಎಂಬ ಅರಿವೂ ಇಲ್ಲವಾಗಿದೆ. ಭಯಾನಕ ಸಂಗತಿ ಎಂದರೆ ಹೀಗೆ ನಂಬಿದವರಲ್ಲಿ ಕೆಲವರು ಇಂದು ನಮ್ಮ ರಾಷ್ಟ್ರದ ಮುಂಚೂಣಿಯ ರಾಜಕಾರಣಿಗಳಾಗಿದ್ದಾರೆ, ಸರ್ಕಾರಿ ಇಲಾಖೆಗಳ ಉನ್ನತ ಅಧಿಕಾರಿಗಳಾಗಿದ್ದಾರೆ, ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರಾಗಿದ್ದಾರೆ,ಚಳವಳಿಗಳ ನೇತಾರರಾಗಿದ್ದಾರೆ.ಅವರೆಲ್ಲರೂ ತಾವೆಂದೂ ಪ್ರಾಯೋಗಿಕವಾಗಿ ಪರೀಕ್ಷಿಸಿಕೊಳ್ಳದ ಈ ಸಿದ್ಧಾಂತದಿಂದ ಜಗತ್ತಿನ ಸಮಸ್ಯೆಗಳನ್ನೆಲ್ಲಾ ಪರಿಹರಿಸಲು ಸಾಧ್ಯವೆಂಬಂತೆ ಬಿಂಬಿಸಿಕೊಂಡು ತಮ್ಮ ತಮ್ಮ ಕಾರ್ಯಕ್ಷೇತ್ರದ ನೆಲವನ್ನು ಹದಗೊಳಿಸುತ್ತಿದ್ದಾರೆ. ಹೀಗೆ ಹದಗೊಂಡ ನೆಲದಲ್ಲಿ ಬೆಳೆಯುವುದೇನು ಎಂಬ ಅರಿವು ಅವರಿಗೂ ಇಲ್ಲ ಎಂದರೆ ಆಶ್ಚರ್ಯವಾಗಬಹುದು.
ತಾತ್ವಿಕವಾಗಿ ಮಾರ್ಕ್ಸ್ವಾದಕ್ಕೆ ಗೊತ್ತಿರುವುದು ನ್ಯುಮೋನಿಯಾಕ್ಕೆ ಚಿಕಿತ್ಸೆ ಕೊಡುವ ವಿದ್ಯೆ ಮಾತ್ರ ! ಹಾಗಾಗಿ ಅದು ಲೋಕದ ಜನರಿಗೆ ಕೇವಲ ಜ್ವರ ಮಾತ್ರ ಬಂದಿದ್ದರೆ, ಮೊದಲು ಜ್ವರವನ್ನು ನ್ಯುಮೋನಿಯಾ ಆಗಿ ಪರಿವರ್ತಿಸಿ, ಆನಂತರ ನ್ಯುಮೋನಿಯಾಗೆ ಚಿಕಿತ್ಸೆ ಕೊಡುತ್ತದೆ ! ಎನ್ನುವ ಅಭಿಪ್ರಾಯವಿದೆ. ಈ ಹೇಳಿಕೆ ಮೇಲ್ನೋಟಕ್ಕೆ ತಮಾಷೆಯಾಗಿ ಕಂಡರೂ ಮಾರ್ಕ್ಸ್ವಾದ ಜಗತ್ತನ್ನು ನೋಡುವುದೇ ವರ್ಗಸಂಘರ್ಷದ ಸಿದ್ಧಾಂತದ ಕಣ್ಪಟ್ಟಿಯೊಳಗಿನಿಂದಲೇ ಎನ್ನುವುದಂತೂ ಸತ್ಯ. ಹೀಗಾಗಿ ಅವರ ಬಳಿ ಚಿಕಿತ್ಸೆಗಾಗಿ ಯಾವ ರೋಗಿಯೇ ಬಂದರೂ, ರೋಗವನ್ನು ಮೊದಲು ಬಲವಂತದಿಂದ ನ್ಯುಮೋನಿಯಾವಾಗಿ ಉಲ್ಬಣಿಸುವಂತೆ ಮಾಡಿ, ಅದು ನ್ಯುಮೋನಿಯಾ ಆದ ಬಳಿಕ ಚಿಕಿತ್ಸೆ ಆರಂಭವಾಗುವುದು ! ವೈದ್ಯ ಲೋಕದಲ್ಲಿ ಪ್ರತಿಯೊಂದೂ ರೋಗಕ್ಕೂ ಬೇರೆ ಬೇರೆ ಚಿಕಿತ್ಸೆಯ ಕ್ರಮ ಇದೆ. ಹಾಗೇಯೇ ಸಮಾಜದಲ್ಲಿ ಪ್ರತಿ ಸಮಸ್ಯೆಗೂ ಬೇರೆ ಬೇರೆ ಪರಿಹಾರ ಸಾಧ್ಯವಿದೆ. ಆದರೆ ಈ ಅರಿವು ಮಾರ್ಕ್ಸ್ವಾದದಲ್ಲಿ ಇಲ್ಲ.ಇಂತಹ ಅರಿವಿನ ಕೊರತೆಯೇ ಈ ಸಿದ್ಧಾಂತಿಗಳ ಬಹುದೊಡ್ಡ ಮಿತಿ.
ಮಾರ್ಕ್ಸ್ವಾದ ಮನುಕುಲದ ಉದ್ಧಾರದ ದಾರಿಯಾಗಬಹುದೇ? ಮಾರ್ಕ್ಸ್ವಾದ ಸಮಾನತೆಯ ಕನಸನ್ನು ಸಾಕಾರಗೊಳಿಸುತ್ತದೆಯೇ? ಮಾರ್ಕ್ಸಿಸಂ ಒಂದು ವೈಜ್ಞಾನಿಕವಾದ ಸಿದ್ಧಾಂತವೇ? ಕಾರ್ಮಿಕ ಸರ್ವಾಧಿಕಾರ ಸಮಸ್ಯೆಗಳಿಗೆ ಪರಿಹಾರವೇ? ಕಾರ್ಲ್ ಮಾರ್ಕ್ಸ್ ಗೆ ಸಮಾಜ ಜೀವನದ ವಿಕಾಸವು ಜಡವಾಗಿ ಕಾಣಿಸಿದ್ದು ಏಕೆ? ಮಾನವ ಕುಲದ ಚರಿತ್ರೆಯೆಲ್ಲಾ ವರ್ಗಸಂಘರ್ಷದ ಚರಿತ್ರೆಯೇ? ಮಾರ್ಕ್ಸ್ ಪ್ರತಿಪಾದಿಸಿದ ಆರ್ಥಿಕ ಸಿದ್ಧಾಂತವು ಒಂದು ಶಾಸ್ತ್ರವಾಗಬಲ್ಲುದೇ? ಮಾರ್ಕ್ಸ್ವಾದ ಒಂದು ವಿಚಾರವಾದವೇ? ಇಂತಹ ನೂರಾರು ಪ್ರಶ್ನೆಗಳು ಪ್ರತಿಯೊಬ್ಬ ಜಿಜ್ಞಾಸುವಿನ ಮನಸಿನಲ್ಲೂ ಮೂಡುತ್ತದೆ. ಆದರೆ ಉತ್ತರವೆಲ್ಲಿದೆ? ಸಧ್ಯ ಈ ಪ್ರಶ್ನೆಗಳಿಗೆ ನೀಡುತ್ತಿರುವ ಉತ್ತರ ಸಮ್ಮೋಹನಗೊಳಿಸುವಂಥದ್ದೇ ವಿನಃ ಪ್ರಯೋಗ ಸಿದ್ಧವಾದುದಲ್ಲ. ಇಂತಹ ಸಮ್ಮೋಹನದ ಉತ್ತರಕ್ಕಿಂತ ನಮ್ಮ ಬುದ್ಧಿಯನ್ನು ಪ್ರಚೋದಿಸಬಲ್ಲ ವಿವರಣೆಗಳುಳ್ಳ ಕೃತಿಯೊಂದು ಕನ್ನಡದ ಓದುಗರಿಗೆ ಇತ್ತೀಚೆಗೆ ಲಭಿಸುವಂತಾಗಿದೆ. ತೆಲುಗು ಭಾಷೆಯಿಂದ ಶ್ರೀ ರಾಮನಾರಾಯಣ ಅವರು ಕನ್ನಡಕ್ಕೆ ಅನುವಾದಿಸಿದ “ ಮಾರ್ಕ್ಸ್ವಾದದಿಂದ ಮಾನವತೆಯತ್ತ” ಎಂಬ ಕೃತಿಯನ್ನು ಸಮೃದ್ಧ ಸಾಹಿತ್ಯ ಪ್ರಕಾಶನ ಸಂಸ್ಥೆಯವರು ಪ್ರಕಟಿಸಿದ್ದಾರೆ. ಈ ಕೃತಿ ಮಾರ್ಕ್ಸ್ವಾದದ ಮರು ಅಧ್ಯಯನಕ್ಕೆ ಮಹತ್ವದ ಆಕರವಾಗುವುದರಲ್ಲಿ ಸಂಶಯವಿಲ್ಲ. ಯಾಕೆಂದರೆ ಈ ಕೃತಿ ಮಾರ್ಕ್ಸ್ವಾದದ ದೂಷಣೆಗಾಗಿ ಬಂದಿಲ್ಲ. ಬದಲಾಗಿ ಈ ಕೃತಿ ಮಾರ್ಕ್ಸ್ನಿಂದ ಮಾವೋವರೆಗೆ ಗ್ರಹಿಸಿದ ವಾದದ ಮೂಲಸೂತ್ರಗಳ ಚರ್ಚೆಯನ್ನು ವಿಶ್ಲೇಷಿಸುತ್ತದೆ.
‘ಮಾರ್ಕ್ಸಿಸಂನ ಆಯಸ್ಸು ಎಂದೋ ಮುಗಿದಿದ್ದು ಈಗ ಅದು ಮೃತಶಿಶುವಿಗೆ ಸಮಾನವಾಗಿದೆ’ ‘ ಮಾಕ್ರ್ಸಿಸಂ ಒಂದು ಅಪ್ರಸ್ತುತ ತತ್ವಸಿದ್ಧಾಂತ’ , ‘ಮಾರ್ಕ್ಸ್ ನ ರಚನೆಗಳೆಲ್ಲವೂ ಕಸದ ಬುಟ್ಟಿಗೆ ಎಸೆಯಬಹುದಾದ್ದೇ ಹೊರತು ಬೇರೇತಕ್ಕೂ ಉಪಯೋಗವಿಲ್ಲದ್ದು’ ,’ಕಮ್ಯುನಿಸ್ಟ್ ವ್ಯವಸ್ಥೆಯಲ್ಲಿ ಮಾನವ ಒಂದು ನಿರ್ಜೀವ ಯಂತ್ರದ ಕೀಲಾಗುತ್ತಾನೆ’ ಎಂಬ ಜಗತ್ತಿನ ಸುಪ್ರಸಿದ್ದರ ಹೇಳಿಕೆಗಳಿಂದಾಗಲೀ, ಮಾರ್ಕ್ಸ್ವಾದದ ವಿಫಲ ಪ್ರಯೋಗದ ಚಾರಿತ್ರಿಕ ಘಟನೆಗಳ ವಿಮರ್ಶೆಗಳನ್ನಾಗಲಿ ವಿಶ್ಲೇಷಣೆಯ ಮಾನದಂಡವಾಗಿ ಬಳಸದೆ,ವಿಚಾರವಾದ ಮತ್ತು ಶಾಸ್ತ್ರೀಯ ವಿಜ್ಞಾನದ ಆಧಾರದ ಮೇಲೆ ಮಾರ್ಕ್ಸ್ವಾದಿ ಸಿದ್ಧಾಂತದ ಪ್ರಮಾಣ ರೇಖೆಗಳನ್ನೇ ಆಧಾರವಾಗಿಟ್ಟುಕೊಂಡು ರಚಿಸಿದ ಕೃತಿ ಇದು ಎನ್ನುವುದೆ ಇದರ ಹೆಗ್ಗಳಿಕೆ. 24 ಲೇಖನಗಳು ಇರುವ ಈ ಕೃತಿ ಮಾರ್ಕ್ಸ್ವಾದದ ಅಪ್ರಸ್ತುತತೆಯನ್ನೂ, ಮಾನವತಾವಾದವೇ ಜಗತ್ತಿಗೆ ಪರಿಹಾರವೆಂದೂ ನಿರೂಪಿಸುತ್ತಾ, ಭಾರತ ಜಗತ್ತಿಗೆ ನೀಡಿದ ಮಾನವತಾವಾದದ ಮಹಾ ಬೆಳಕನ್ನು ಎತ್ತಿತೋರಿಸುತ್ತಿದೆ.
ಮಾರ್ಕ್ಸ್ವಾದದಿಂದ ಮಾನವತೆಯತ್ತ ಚಲಿಸಬೇಕಾದರೆ ಇವೆರಡರ ತೌಲನಿಕ ವಿಶ್ಲೇಷಣೆಯೂ ಬಹುಮುಖ್ಯ. ಮಾನವತಾವಾದದ ಬೃಹತ್ ಕಲ್ಪನೆಯ ಮುಂದೆ ಮಾರ್ಕ್ಸ್ವಾದ ಹೇಗೆ ಒಂದು ಕುಬ್ಜ ಆಲೋಚನೆ ಎನ್ನುವುದನ್ನು ಉದಾಹರಣೆಯ ಸಹಿತವಾಗಿ ನಿರೂಪಿಸಲಾಗಿದೆ. ಶುದ್ಧವಿಜ್ಞಾನವನ್ನೂ ಬಿಡದಂತೆ ಆವರಿಸಿರುವ ಮಾರ್ಕ್ಸ್ವಾದದ ನಿರೂಪಣೆಯ ಪ್ರಭಾವವು ನಮ್ಮ ಎಲ್ಲಾ ಹಂತದ ಪಠ್ಯಪುಸ್ತಕಗಳಲ್ಲಿ, ಸರ್ಕಾರಿ ನೀತಿ ನಿರೂಪಣೆಗಳಲ್ಲಿ ಪ್ರತ್ಯಕ್ಷವಾಗಿಯೇ ಸೇರಿಕೊಂಡಿದೆ. ಯೌವನ ಕಳೆದ ಮೇಲೂ ಮಾರ್ಕ್ಸ್ವಾದ ಆಕರ್ಷಕವಾಗಿ ಕಾಣಿಸಿಕೊಳ್ಳುತ್ತಿದೆ ಎಂದರೆ ನಿನ್ನ ತಲೆಯಲ್ಲೇನೋ ಲೋಪವಿದೆ ಎಂಬ ಮಾತಿದೆ. ದುರದೃಷ್ಟವೆಂದರೆ ಯೌವನ ಕಳೆದ ಮೇಲೂ ನಮ್ಮ ತಲೆ ನಮ್ಮದಾಗಿ ಯೋಚಿಸಲಾರದಂತಹ ಮಾಯಾಜಾಲವಾಗಿ ಆವರಿಸಿದೆ. ನಮ್ಮ ತಲೆಯೊಳಗೆ ವ್ಯವಸ್ಥಿತವಾಗಿಯೇ ಮಾರ್ಕ್ಸ್ವಾದವನ್ನು ತುಂಬಿಸಲಾಗುತ್ತಿದೆ. ಶಿಕ್ಷಣದಲ್ಲೂ ಹಂತ ಹಂತವಾಗಿಯೇ ಮೆದುಳು ಸೇರಿದ ಈ ಆಫೀಮು ತನ್ನ ನಿರೀಕ್ಷಿತ ಫಲಕೊಡಲಾರಂಭಿಸುವುದೇ ಯೌವನದ ಅಂಚಿನಲ್ಲಿ. ಇದರ ಪರಿಣಾಮವಾಗಿ ಈ ವಾದ ಹೇಗೆ ಅವೈಜ್ಞಾನಿಕವಾಗಿದೆ ಎನ್ನುವ ಪ್ರಶ್ನೆಯ ಕಡೆಗೆ ನಮ್ಮ ಮನಸ್ಸು ಹೊರಳಿಕೊಳ್ಳುವ ಅವಕಾಶವೇ ಇಲ್ಲವಾಗಿದೆ.
ಜೀವರಾಶಿಯ ಉಗಮ, ಜಡ -ಚೈತನ್ಯಗಳ ಪರಿಕಲ್ಪನೆ, ಮನಸ್ಸು- ಮೆದುಳು ಕೆಲಸ ಮಾಡುವ ಬಗೆ ಮೊದಲಾದ ಸಂಗತಿಗಳ ಕುರಿತು 19 -20 ನೇ ಶತಮಾನದಲ್ಲಿ ನಡೆದ ವೈಜ್ಞಾನಿಕ ಅಧ್ಯಯನದ ಫಲಿತಗಳೆಲ್ಲವೂ ಮಾರ್ಕ್ಸ್ ನ ಸೈದ್ಧಾಂತಿಕ ಕಲ್ಪನೆಗಳನ್ನೆಲ್ಲಾ ತಲೆಕೆಳಗಾಗಿಸಿದೆ. ಮಾಕ್ರ್ಸಿಸ್ಟುಗಳ ಭೌತಿಕವಾದ ಅರ್ಥ ಕಳೆದುಕೊಂಡಿದೆ.ಸಮಾಜ ಜೀವನದ ವಿಕಾಸ ಕ್ರಮದ ಮಾರ್ಕ್ಸ್ ನ ಭೌತವಾದಿ ಜಡವ್ಯಾಖ್ಯಾನ ಅಪ್ರಸ್ತುತವಾಗಿಬಿಟ್ಟಿದೆ. ಮಾರ್ಕ್ಸ್ ನ ಜಡತ್ವವಾದಿ ಸಿದ್ಧಾಂತವನ್ನು ಚೈತನ್ಯವಾದವು ವೈಜ್ಞಾನಿಕವಾದ ಸಂಶೋಧನೆಗಳ ಮೂಲಕವೇ ತರ್ಕರಹಿತವೆಂದು ನಿರೂಪಿಸಿ, ಮಾನವನ ಅಗಾಧತೆಯನ್ನು ಕುಬ್ಜತ್ವಕ್ಕಿಳಿಸಿದ್ದ ಸಿದ್ದಾಂತವನ್ನು ಕಾಲಬಾಹಿರಗೊಳಿಸಿದೆ. ಮಾನವ ಚೈತನ್ಯಕ್ಕಿಂತ ಆರ್ಥಿಕ ವ್ಯವಸ್ಥೆಯಲ್ಲಿ ಸಮಾಜ ರೂಪುಗೊಳ್ಳುತ್ತದೆ, ಸಮಾಜದ ಬದಲಾವಣೆ ಉತ್ಪಾದನಾ ಸಂಬಂಧಗಳ ಬದಲಾವಣೆಯಲ್ಲಿ ಸಾಧ್ಯ ಎನ್ನುತ್ತಾ, ಹಳೆಯ ವ್ಯವಸ್ಥೆಯನ್ನು ಕಿತ್ತುಹಾಕಿ ಹೊಸ ವ್ಯವಸ್ಥೆಯ ದಾರಿಯಲ್ಲಿ ಸಾಗಬೇಕಾದರೆ ಹಿಂಸಾಮಾರ್ಗವನ್ನು ಬಿಟ್ಟು ಬೇರೆ ದಾರಿ ಇಲ್ಲ ಎಂದಿದ್ದ ಕಾರ್ಲ್ ಮಾರ್ಕ್ಸ್ ನ ಸಿದ್ಧಾಂತ ಆತನ ಕಣ್ಣೆದುರಿಗೆ ಸೋತುಹೋಯಿತು. ಎಲ್ಲವನ್ನೂ ಆರ್ಥಿಕ ಸೂತ್ರಗಳ ಮೂಲಕವೇ ನೋಡುವುದು ಅವಾಸ್ತವಿಕ ಎನ್ನುವುದು ಸ್ಪಷ್ಟವಾಯಿತು. ಆತನ ಆರ್ಥಿಕ ಸಿದ್ಧಾಂತಗಳಿಗೆ ತರ್ಕಬದ್ಧವಾದ ತಾತ್ವಿಕ ಆಧಾರಗಳಾಗಲೀ, ಶಾಸ್ತ್ರ-ವಿಜ್ಞಾನಗಳ ಆಧಾರಗಳಾಗಲೀ ಇರಲಿಲ್ಲ. ತಾರ್ಕಿಕ ಚಲನವಾದದ ಹೆಸರಿನಲ್ಲಿ ಪ್ರತಿಪಾದಿಸಲು ಹೊರಟ ಆತನ ಸಿದ್ಧಾಂತಕ್ಕೆ ಸ್ಪಷ್ಟತೆಯೇ ಇರಲಿಲ್ಲ. ವಾದ-ವಿವಾದ- ಸಂವಾದದ ಸೂತ್ರದಲ್ಲಿ ಸಂವಾದವು ಸಮನ್ವಯತೆಯ ರೂಪವಾಗುವ ಬದಲು ಸಂಘರ್ಷದ ಪರಿಣಾಮವಾಗುವುದು ಆತನ ಸೈದ್ಧಾಂತಿಕ ಅಸ್ಪಷ್ಟತೆಗೆ ಇನ್ನೊಂದು ನಿದರ್ಶನವಾಗಿದೆ. ಸಮಾನತೆಗಾಗಿ ಕ್ರಾಂತಿಯನ್ನೂ, ಕ್ರಾಂತಿಯ ಹೆಸರಿನಲ್ಲಿ ರಕ್ತದ ಕೋಡಿ ಹರಿಸುವುದನ್ನೂ ನಿರಾಕರಿಸದ ಮಾರ್ಕ್ಸ್ ನ ಸಿದ್ಧಾಂತವನ್ನು ವೈಜ್ಞಾನಿಕವೆನ್ನುವುದಾದರೂ ಹೇಗೆ? ಪ್ರಕೃತಿಯಲ್ಲಿ ಅತ್ಯಂತ ಸಹಜವಾಗಿರುವ ಸಮನ್ವಯತೆಯ ಸ್ವರೂಪವನ್ನೇ ಗುರುತಿಸಲು ಸಾಧ್ಯವಾಗದೆ, ಎಲ್ಲದರೊಳಗೂ ಸಂಘರ್ಷ, ವಿರೋಧವನ್ನಷ್ಟೇ ಕಾಣುವ ಮನಸನ್ನು ಸ್ವಸ್ಥ ಮನಸ್ಸು ಎಂದು ಗುರುತಿಸುವುದಾದರೂ ಹೇಗೆ? ಈ ಪ್ರಶ್ನೆಗಳೇ ಮಾರ್ಕ್ಸ್ವಾದದ ಶವಪೆಟ್ಟಿಗೆಗೆ ಬಡಿವ ಕೊನೆಯ ಮೊಳೆಗಳಾಗುತ್ತವೆ.
ಪರಸ್ಪರ ವಿರುದ್ಧಶಕ್ತಿಗಳ ಸಂಘರ್ಷದಿಂದಲೇ ಪ್ರಗತಿ ಸಾಧ್ಯವೆನ್ನುವ ಸಿದ್ಧಾಂತ ಮಾಡಲು ಹೊರಟ ಮಾರ್ಕ್ಸ್ ಗೆ ವಿಕಾಸ ಕ್ರಿಯೆ ಮತ್ತು ವಿನಾಶ ಕ್ರಿಯೆಗಳ ನಡುವಿನ ವ್ಯತ್ಯಾಸವೂ ತಿಳಿದಿರಲಿಲ್ಲ ಎಂದರೆ ಆಶ್ಚರ್ಯ ಪಡಬೇಕಾಗಿಲ್ಲ. ಬೀಜ ಮೊಳಕೆಯೊಡೆಯುವ ಪ್ರಕ್ರಿಯೆಲ್ಲಿ ಬೀಜ ನಾಶಗೊಳ್ಳುವುದಿಲ್ಲ, ಬದಲಿಗೆ ಬೀಜದಲ್ಲಿರುವ ಅದರ ಅಂಗಗಳೇ ಚಿಗುರು ಮೊಳಕೆಯೊಡೆಯಲು ಕಾರಣವಾಗುತ್ತದೆ ಎನ್ನುವ ಸೃಷ್ಟಿಯ ಸಾಮಾನ್ಯ ತತ್ವವನ್ನು ಗ್ರಹಿಸುವಲ್ಲಿಯೇ ವಿಫಲವಾದ ಸಿದ್ಧಾಂತವಿದು. ಲೋಕವನ್ನು , ಪ್ರಕೃತಿಯನ್ನು ಪರಸ್ಪರ ವಿರುದ್ಧಶಕ್ತಿಗಳೆಂದು ಗುರುತಿಸಿ ಮಾಡಿದ ವ್ಯಾಖ್ಯಾನಗಳನ್ನು ಹೇಗೆ ವೈಜ್ಞಾನಿಕವೆನ್ನುವುದು? ಸಂಘರ್ಷದಿಂದಲೇ ಪ್ರಗತಿ ಎಂದು ಭ್ರಮಿಸಿದ ಸಿದ್ಧಾಂತಕ್ಕೆ ಲೋಕ ಬದುಕಿನ ಭಾಗವಾದ ಸೌಹಾರ್ಧತೆ, ಸಮನ್ವಯ ಅರ್ಥವಾಗುವುದಾದರೂ ಹೇಗೆ ಸಾಧ್ಯ? ಇಂದಿಗೂ ಮಾರ್ಕ್ಸ್ವಾದದ ಭಾಷೆ ಸಮನ್ವಯದ್ದಲ್ಲ, ಅದು ಸಂಘರ್ಷದ್ದು, ಅದು ಹಿಂಸೆಯದ್ದು. ಅದು ವಿನಾಶದ್ದು ಆಗಿದೆಯೆಂದರೆ ಅದರ ದೋಷದ ಮೂಲ ಅದರ ಸಿದ್ಧಾಂತದಲ್ಲಿಯೇ ಇದೆ. ಹೀಗಾಗಿಯೇ ಇಂದಿಗೂ ನಮ್ಮ ದೇಶವನ್ನೂ ಒಳಗೊಂಡಂತೆ ಜಗತ್ತಿನಾದ್ಯಂತ ಬೀದಿ ಹೋರಾಟಗಾರನಿಂದ ತೊಡಗಿ ಪಾರ್ಲಿಮೆಂಟ್ ಪ್ರವೇಶಿಸಿದ ಮಾರ್ಕ್ಸಿಸ್ಟ್ ಗಳವರೆಗಿನ ಭಾಷೆಯೂ ಸಂಘರ್ಷದ , ಒಡಕಿನ ಭಾಷೆಯೇ ಆಗಿದೆ.ಅದು ಅವರ ಅರಿವಿನ ಕೊರತೆಯಲ್ಲ.ಕಳೆಯನ್ನೇ ಬಿತ್ತಿ ಬೆಳೆಯನ್ನು ನಿರೀಕ್ಷಿಸುವುದಾದರೂ ಹೇಗೆ?
ಉಳ್ಳವರು ಮತ್ತು ಇಲ್ಲದವರು ಎಂಬ ಕುರುಡಾದ ವಿಂಗಡನೆ ಸಮಾಜದ ಕಪ್ಪು ಬಿಳುಪಿನ ಚಿತ್ರಣದಂತಾಯಿತು. ಶೋಷಿತ ಮತ್ತು ಶೋಷಕ ಎನ್ನುವುದಕ್ಕೆ ಸರಳರೇಖಾತ್ಮಕ ವಿವರಣೆ ನೀಡಲು ಸಾಧ್ಯವೇ? ಕಾರ್ಮಿಕ ಸರ್ವಾಧಿಕಾರಿ ಪ್ರಭುತ್ವದ ಕ್ರಾಂತಿಕಾರಿ ಪರಿಕಲ್ಪನೆಯನ್ನು ಮಂಡಿಸುವ ಮಾರ್ಕ್ಸ್ವಾದದಲ್ಲಿ ಮನುಷ್ಯ ಕೇವಲ ಆರ್ಥಿಕ ಪ್ರಾಣಿಯಷ್ಟೇ ಆಗಿರುವುದರಿಂದ ಆತನ ಸ್ವಾತಂತ್ರ್ಯ, ನ್ಯಾಯ ಎನ್ನುವುದು ಆಧ್ಯತೆಯ ವಿಷಯವಲ್ಲ.ಯಾಕೆಂದರೆ ಮೂಲತಃ ಅದೊಂದು ಸರ್ವಾಧಿಕಾರಿ ಸಿದ್ಧಾಂತವೇ ಹೊರತು ಪ್ರಜಾಪ್ರಭುತ್ವವಾದಿ ಮಾದರಿದ್ದಲ್ಲ.ನಮ್ಮ ದೇಶದಲ್ಲಿ ಮಾರ್ಕ್ಸ್ವಾದಿಗಳಿಗೆ ಪ್ರಜಾಪ್ರಭುತ್ವ ಎನ್ನುವುದು ಸರ್ವಾಧಿಕಾರ ಸ್ಥಾಪನೆಯ ಮೆಟ್ಟಿಲೇ ವಿನಹ ಪ್ರಜಾಪ್ರಭುತ್ವ ಅವರ ಜೀವಾಳವಲ್ಲ. ಈ ಕಾರಣದಿಂದಲೇ ಬಾಬಾಸಾಹೇಬ ಅಂಬೇಡ್ಕರ್ ಕಮ್ಯುನಿಸಂನ್ನು ಕಾಡ್ಗಿಚ್ಚು ಎಂದಿದ್ದು. ಸ್ವಾತಂತ್ರ್ಯಕ್ಕೆ ಜಾಗವಿಲ್ಲದ ಸರ್ವಾಧಿಕಾರಿ ವ್ಯವಸ್ಥೆ ಎಂದಿದ್ದು.
ಇಂದು ನಡೆಯುತ್ತಿರುವ ವೈಜ್ಞಾನಿಕ ಅಧ್ಯಯನಗಳ ಫಲವಾಗಿ ಮಾರ್ಕ್ಸ್ ನ ಸಿದ್ಧಾಂತಕ್ಕೆ ಯಾವ ಬೆಲೆಯೂ ಉಳಿದಿಲ್ಲ. ಯಾವ ಡಾರ್ವಿನ್ನ ಜೀವವಿಕಾಸ ಸಿದ್ಧಾಂತದ ಆಧಾರದಲ್ಲಿ ಕಾರ್ಲ್ ಮಾರ್ಕ್ಸ್ ನ ವಾದವು ನಿಂತಿತ್ತೋ, ಅಂತಹ ತಳಪಾಯವಾದ ಜೀವವಿಕಾಸ ಸಿದ್ಧಾಂತವೇ ಕಾಲದ ಪರೀಕ್ಷೆಯಲ್ಲಿ ಅರ್ಥಹೀನಗೊಂಡ ಮೇಲೆ ಮಾರ್ಕ್ಸ್ ವಾದ ಹೇಗೆ ತಾನೆ ವೈಜ್ಞಾನಿಕವಾಗಿ ಉಳಿಯಲು ಸಾಧ್ಯ? ವಿಕಾಸದ ಪರಿಕಲ್ಪನೆಯ ಮೂಲಕ ಜಗತ್ತನ್ನು ನಾಗರೀಕ – ಅನಾಗರಿಕ ಎಂದು ವಿಂಗಡಿಸಿ ಅನಾಗರಿಕರನ್ನು ನಾಗರಿಕತೆಯ ಕಬಂಧಬಾಹುವಿಗೆ ಒಪ್ಪಿಸಿದ, ಪಶ್ಚಿಮ ಶ್ರೇಷ್ಟತೆಯ ಪ್ರತಿಪಾದನೆಯ ಮೂಲವಿರುವುದಾದರೂ ಎಲ್ಲಿ ಎಂದು ಕೇಳಬೇಡವೇ? ಸೂಕ್ಷ್ಮವಾಗಿ ನೋಡಿದರೆ ಇಂದು ನಮ್ಮ ಬುದ್ದಿಜೀವಿಗಳ ಲೋಕದ ಒಂದು ಮೌಢ್ಯ ಎಂದೇ ಪರಿಗಣಿಸಬಹುದು. ಲೆನಿನ್, ಮಾವೋ, ಸ್ಟಾಲಿನ್ ಮೊದಲಾದ ಮಾನವ ರೂಪದ ಕ್ರೋರ ರಾಕ್ಷಸರನ್ನು ಜಗತ್ತಿಗೆ ನೀಡಿದ್ದು ಇದೇ ಮಾರ್ಕ್ಸ್ವಾದ. ಅವರುಗಳು ತೋರಿದ ಕ್ರೌರ್ಯವನ್ನು ಸೈದ್ಧಾಂತಿಕ ಕ್ರೌರ್ಯ ಎನ್ನಬಹುದೇ ಹೊರತು ವೈಯಕ್ತಿಕ ದೌರ್ಬಲ್ಯ ಎನ್ನಲಾಗದು. ಇಂತಹ ಸೈದ್ಧಾಂತಿಕ ದೋಷಕ್ಕೆ ಜಗತ್ತು ಸಾಕ್ಷಿಯಾಗಿದ್ದು ಒಂದೆಡೆಯಾದರೆ, ನಮ್ಮ ದೇಶದಲ್ಲಿ ಇಂದಿಗೂ ನಡೆಸಿಕೊಂಡು ಬರುತ್ತಿರುವ ಹತ್ಯಾ ರಾಜಕಾರಣವನ್ನು ನೋಡಿದರೆ ಅವರ ಸೈದ್ಧಾಂತಿಕ ವಿಫಲತೆಗೆ ಮತ್ತೊಂದು ಉದಾಹರಣೆಯೇ ಬೇಕಾಗಿಲ್ಲ.
ಮಾನವತೆಗೂ ಮಾರ್ಕ್ಸ್ವಾದಕ್ಕೂ ಎಂದೂ ಕೂಡಿಬರಲು ಸಾಧ್ಯವಿಲ್ಲ. ಮಾನವ ಹಕ್ಕಿನ ಬಗ್ಗೆ ಮಾತನಾಡುವ, ಪರಿಸರ ಹೋರಾಟವನ್ನು ಕಟ್ಟುವ, ದಮನಿತರ ಪರವಾಗಿ ಆಂದೋಲನ ನಡೆಸುವ ಮುಖವಾಡ ತೊಟ್ಟುಕೊಳ್ಳುವ ಮಾರ್ಕ್ಸ್ವಾದದ ನಿಜಮುಖ ತಿಳಿಯಬೇಕಾದರೆ ಒಮ್ಮೆ ಅವರು ಆಳಿದ ದೇಶಗಳನ್ನು, ಅಲ್ಲಿನ ಮರಣದ ಕೋಣೆಗಳನ್ನು, ಜೈಲುಗಳನ್ನು ನೋಡಿದರೆ ಸಾಕು. ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ಇವರು ತಮ್ಮ ಸಿದ್ಧಾಂತದ ಆಳ್ವಿಕೆ ಇರುವ ದೇಶದಲ್ಲಿ ಮನಸಿನ ಮಾತುಗಳನ್ನಾಡಿದ ವ್ಯಕ್ತಿ ದಿನ ಕಳೆಯುವುದರೊಳಗೆ ಕಣ್ಮರೆಯಾದರೆ ಅದರ ಬಗ್ಗೆ ಮಾತನಾಡುವುದಿಲ್ಲ. ಆದರೆ ಭಾರತದ ಜೈಲಿನಲ್ಲಿರುವ ಭಯೋತ್ಪಾಕನ ಬಿಡುಗಡೆಗೆ ಆಂದೋಲನ ನಡೆಸುತ್ತಾರೆ. ಸೈನಿಕರ ಬಂದೂಕಿನ ನಳಿಗೆಯಲ್ಲಿ ಹಕ್ಕಿ ಗೂಡು ಕಟ್ಟುವ ಬಗ್ಗೆ ಮಾತನಾಡುವ ಇವರು ಕಾಡಿನೊಳಗೆ ಅವಿತು ಕುಳಿತು ಅಮಾಯಕರ ಬಲಿಪಡೆಯುವುದು ಜನತಾ ನ್ಯಾಯಲಯವಾಗುತ್ತದೆ ! ದೇಶದ ಅಭಿವೃದ್ಧಿಯ ಕನಸಿಗೆ ಹೆಗಲು ಕೊಡಬೇಕಾಗಿದ್ದವರ ಹೆಗಲಿನಲ್ಲಿ ಬಂದೂಕು ತೂಗುವುದು ರಾಜ್ಯವಳಿದು ಕಾರ್ಮಿಕ ಸರ್ವಾಧಿಕಾರ ಸ್ಥಾಪನೆಯ ಮಹತ್ಕಾರ್ಯವಾಗುತ್ತದೆ. ಅದಕ್ಕೆ ಮಾರ್ಕ್ಸ್ನ ಹೆಸರು, ಸಿದ್ಧಾಂತ ಮೂಲ ಪಾಠವಾಗುತ್ತದೆ ಎನ್ನುವುದನ್ನು ಅರ್ಥಮಾಡಿಕೊಂಡರೆ ಮಾನವತೆಯತ್ತ ಸಾಗಬೇಕಾದ ಅನಿವಾರ್ಯತೆ ಏನು ಎನ್ನುವುದೂ ಸ್ಪಷ್ಟವಾಗುತ್ತದೆ. ಅಂತಹದ್ದೊಂದು ಅರಿವನ್ನು ಮೂಡಿಸುವ ಕೃತಿಯ ಆಶಯವನ್ನು ಯುವಜನರಿಗೆ ತಲುಪಿಸಬೇಕಾಗಿದೆ.
✍️ಡಾ.ರೋಹಿಣಾಕ್ಷ ಶಿರ್ಲಾಲು
ಸಹಾಯಕ ಪ್ರಾಧ್ಯಾಪಕ,
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರ್ಗಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.