ಉಳ್ಳಾಲ: ಸಮಾಜದಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕೆಲಸಗಳಿಗೆ ಸರಕಾರದೊಂದಿಗೆ ಜನರ ಸಹಭಾಗಿತ್ವವೂ ಅಗತ್ಯ. ನಾವು ಗಳಿಸುವುದರಲ್ಲಿ ಕಿಂಚಿತ್ತನ್ನು ಸಮಾಜ ಸೇವೆಯ ಮೂಲಕ ಕೊಡುಗೆ ನೀಡಿದರೆ ಉತ್ತಮ ಸಹಬಾಳ್ವೆಯ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ. ಇದೇ ರೀತಿಯಲ್ಲಿ ಜನರ ಸಹಕಾರದೊಂದಿಗೆ ಕುರ್ನಾಡು ಗ್ರಾಮ ಪಂಚಾಯಿತಿಯ ತೆಕ್ಕುಂಜೆಯಲ್ಲಿ ಮಾದರಿ ಹಿಂದೂ ರುದ್ರ ಭೂಮಿ ನಿರ್ಮಾಣಗೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರು ಹೇಳಿದರು.
ಅವರು ಗುರುವಾರ ಕುರ್ನಾಡು ಗ್ರಾಮ ಪಂಚಾಯಿತಿ, ಲಯನ್ಸ್ ಜಿಲ್ಲೆ 317 ಡಿ ಪ್ರಾಂತ್ಯ೭ ಹಾಗೂ ಹಿಂದು ರುದ್ರಭೂಮಿ ಅಭಿವೃದ್ಧಿ ಸಮಿತಿ ಆಶ್ರಯದಲ್ಲಿ ಕುರ್ನಾಡು ಗ್ರಾಮದ ತೆಕ್ಕುಂಜೆಯಲ್ಲಿ 25ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಸುಸಜ್ಜಿತ ಹಿಂದು ರುದ್ರಭೂಮಿಯ ಲೋಕಾರ್ಪಣೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹಿಂದೂ ರುದ್ರಭೂಮಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಆರೋಗ್ಯ ಸಚಿವ ಯು.ಟಿ.ಖಾದರ್, ಪ್ರತಿಯೊಂದು ಗ್ರಾಮದಲ್ಲೂ ರುದ್ರಭೂಮಿ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಆಯಾ ಗ್ರಾಮ ಪಂಚಾಯಿತಿಗಳು ರುದ್ರಭೂಮಿ ನಿರ್ಮಾಣಕ್ಕೆ ಪ್ರಥಮ ಆಧ್ಯತೆ ನೀಡಿ ಸರ್ಕಾರಿ ಜಮೀನು ಮೀಸಲಿರಿಸಬೇಕು.ಯಾವುದೇ ಧರ್ಮದ ರುದ್ರಭೂಮಿ, ಧಫನ ಭೂಮಿ ಅಭಿವೃದ್ಧಿಗೆ ಕನಿಷ್ಟ ಐದು ಲಕ್ಷ ಅನುದಾನ ನೀಡಲು ಸರ್ಕಾರದ ಮಟ್ಟದಲ್ಲಿ ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಮನುಷ್ಯ ಎಷ್ಟೇ ಸಿರಿವಂತನಾಗಿದ್ದರೂ ಕೊನೆಗೆ ಸ್ಮಶಾನಕ್ಕೆ ಬರುವುದು ಅನಿವಾರ್ಯ. ಆದರೆ ಈ ಬಗ್ಗೆ ಯಾರೂ ಚಿಂತಿಸದ ಕಾರಣ ರುದ್ರಭೂಮಿ ನಿರ್ಮಾಣದ ಸಂದರ್ಭ ಜನಪ್ರತಿನಿಧಿಗಳು ನೀಡುವ ಅನುದಾನಕ್ಕೆ ಕಾಯಬೇಕಾಗುತ್ತದೆ. ಪ್ರತಿಯೊಬ್ಬರೂ ಇಂತಹ ಕಾರ್ಯಗಳಿಗೆ ಕನಿಷ್ಟ ದೇಣಿಗೆ ನೀಡಿದಲ್ಲಿ ನಿರ್ವಹಣೆ ಸುಲಲಿತವಾಗಿ ಸಾಗುತ್ತದೆ ಎಂದರು.
ಲಯನ್ ಜಿಲ್ಲಾ 317ಡಿ ಗವರ್ನರ್ ಎಚ್.ಎಸ್.ಮಂಜುನಾಥ ಮೂರ್ತಿ ತಂಗುದಾಣ ಹಾಗೂ ದಾಸ್ತಾನು ಕಟ್ಟಡ ಉದ್ಘಾಟಿಸಿದರು. ಜಿ.ಪಂ. ಸದಸ್ಯ ಸಂತೋಷ್ ಕುಮಾರ್ ರೈ ದಾನಿಗಳ ನಾಮಫಲಕ ಅನಾವರಣಗೊಳಿಸಿದರು. ಇದೇ ಸಂದರ್ಭದಲ್ಲಿ ರುದ್ರಭೂಮಿ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ ಕುರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವದಾಸ್ ಭಂಡಾರಿ ದಂಪತಿಯನ್ನು ಸನ್ಮಾನಿಸಲಾಯಿತು.
ಜಿ.ಪಂ.ಸದಸ್ಯೆ ಮಮತಾ ಗಟ್ಟಿ, ಲಯನ್ಸ್ ಜಿಲ್ಲಾ-1 ಉಪಗವರ್ನರ್ ಕವಿತಾ ಎಸ್.ಶಾಸ್ತ್ರಿ, ಜಿಲ್ಲಾ-2 ಅರುಣ್ ಶೆಟ್ಟಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಡಿಪು ವಲಯ ಮೇಲ್ವಿಚಾರಕ ಜನಾರ್ದನ್, ಲಯನ್ಸ್ ಕ್ಲಬ್ ಲಯನ್ಸ್ ಅಧ್ಯಕ್ಷ ವಿಜೇಶ್ ನಾಯ್ಕ್, ತಾ.ಪಂ.ಮಾಜಿ ಉಪಾಧ್ಯಕ್ಷ ಚಂದ್ರಹಾಸ ಕರ್ಕೇರ, ಕುರ್ನಾಡು ಗ್ರಾ.ಪಂ.ಮಾಜಿ ಅಧ್ಯಕ್ಷ ಪ್ರಶಾಂತ್ ಕಾಜವ, ಕುರ್ನಾಡು ದತ್ತಾತ್ರೇಯ ಅನುದಾನಿತ ಶಾಲೆಯ ಸಂಚಾಲಕ ಗಣೇಶ್ ನಾಯ್ಕ್, ಲಿಂಗಪ್ಪ ಕಾಜವ, ಲಯನ್ಸ್ ಉಡುಪಿ ಜಿಲ್ಲಾ ಗವರ್ನರ್ ಸುರೇಶ್ ಪ್ರಭು, ಕೆ.ಸಿ.ಪ್ರಭು, ಕುರ್ನಾಡು ಗ್ರಾ.ಪಂ.ಪಿಡಿಓ ನಳಿನಿ ಬಿ., ರುದ್ರಭೂಮಿ ಅಭಿವೃದ್ಧಿ ಸಮಿತಿ ಕೋಶಾಧಿಕಾರಿ ಸೂಫಿ ಕುಂಞಿ, ಉಪಾಧ್ಯಕ್ಷ ಗೋಪಾಲ ಬಂಗೇರ, ಮಾಜಿ ಗ್ರಾ.ಪಂ.ಅಧ್ಯಕ್ಷ ಝುಬೇರ್, ಜಲೀಲ್ ಮೋಂಟುಗೋಳಿ, ಲೋಲಾಕ್ಷಿ ಹಾಗೂ ಪ್ರೇಮಲತಾ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.