ರಾಮಕೃಷ್ಣ ಪರಮಹಂಸರು 19ನೇ ಶತಮಾನದಲ್ಲಿ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿದವರು. ಆಧ್ಯಾತ್ಮಿಕ ಜ್ಞಾನದಿಂದಲೇ ಹಿಂದೂ ಧರ್ಮವನ್ನು ಎತ್ತರಕ್ಕೇರಿಸಿದವರು. ಕಾಳಿ ಮಾತೆಯ ಭಕ್ತರಾಗಿ ಅದ್ವೈತ ವೇದಾಂತವನ್ನು, ಸಿದ್ದಾಂತವನ್ನು ಬೋಧಿಸಿದರು. ಎಲ್ಲ ಧರ್ಮಗಳೂ ಒಂದೇ ಗುರಿಯತ್ತ ನಮ್ಮನ್ನು ಒಯ್ಯುತ್ತವೆ ಎಂದು ನಂಬಿದ್ದರು. ತಾವು ಹಿಂದೂ ಧರ್ಮದೊಳಗಿನ ವಿಚಾರಗಳನ್ನು ಉತ್ಕೃಷ್ಟ ಸ್ಥಿತಿಗೆ ತಲುಪಿಸಿದರಲ್ಲದೆ, ತಮ್ಮ ಶಿಷ್ಯರನ್ನು ಸಮಾಜದ ಸೇವೆಗಾಗಿ ರೂಪಿಸಿ ಅವರ ಮೂಲಕ ಹಿಂದೂ ಸಮಾಜವನ್ನು ಮತ್ತಷ್ಟು ಸಧೃಡಗೊಳಿಸುವ ಕಾರ್ಯವನ್ನು ಮಾಡುತ್ತಾ ಬಂದರು.
ಬಂಗಾಳದ ಕಾಮಾರಪುಕುರ ಎಂಬ ಹಳ್ಳಿಯಲ್ಲಿ 18 ಫೆಬ್ರವರಿ 1836 ರಲ್ಲಿ ಶ್ರೀ ರಾಮಕೃಷ್ಣ ಪರಮಹಂಸರ ಜನನವಾಯಿತು. ಬಾಲ್ಯದಲ್ಲಿ ಅವರ ಹೆಸರು ಗದಾಧರ ಎನ್ನುವುದಾಗಿತ್ತು. ಮುಂದೆ ಅದು ಗುರು ತೋತಾಪುರಿ ಮಹಾರಾಜರ ಮಾರ್ಗದರ್ಶನದಲ್ಲಿ ಕಠೋರ ಸಾಧನೆಯನ್ನು ಮಾಡಿ ಪರಮಹಂಸ ಪದವಿಯನ್ನು ತಲುಪಿದರು. ಕೊನೆಗೆ ಅವರು ರಾಮಕೃಷ್ಣ ಪರಮಹಂಸ ಎಂದೇ ಜನಜನಿತರಾದರು. ಚಿಕ್ಕಂದಿನಿಂದಲೇ ಪರಮಹಂಸರಿಗೆ ದೇವರ ಪೂಜೆ, ಭಜನೆ, ಸತ್ಸಂಗ ಇವುಗಳಲ್ಲಿ ಅಭಿರುಚಿ ಇತ್ತು. ಕಾಳಿಮಾತೆಯ ಪರಮ ಭಕ್ತನಾಗಿದ್ದ ಪರಮಹಂಸರು ತಮ್ಮ ತಾರುಣ್ಯದಲ್ಲಿ ದಕ್ಷಿಣೇಶ್ವರಕ್ಕೆ ಬಂದು ಕಾಳಿಮಾತೆಯ ಉಪಾಸನೆಯಲ್ಲಿ ತೊಡಗಿಸಿಕೊಂಡರು.
ಕೇಸರಿ ಸನ್ಯಾಸಿ ಸ್ವಾಮಿ ವಿವೇಕಾಂದರು ದೇವರನ್ನು ಕಂಡವರು ಯಾರು ಎಂದು ಅನ್ವೇಷಿಸಲು ಹೊರಟಾಗ ಅವರಿಗೆ ರಾಮಕೃಷ್ಣ ಪರಮಹಂಸರು ಉತ್ತರವಾದರು. ಕೊನೆಗೆ ರಾಮಕೃಷ್ಣರ ಅಪ್ಪಟ ಶಿಷ್ಯರಾದರು ಕೂಡ. ರಾಮಕೃಷ್ಣರು ದೇವರನ್ನು ಸಾಕ್ಷಾತ್ಕಾರ ಮಾಡಿಕೊಂಡಿದ್ದಾರೆ. ಅವರ ಭಕ್ತಿಯನ್ನು ಮೆಚ್ಚಿ ಕಾಳಿ, ರಾಮ, ಕೃಷ್ಣ, ಹನುಮಂತ ಮೊದಲಾದ ದೇವತೆಗಳ ದರ್ಶನವನ್ನು ಕೂಡ ಪಡೆದಿದ್ದರು ಎನ್ನುವ ಉಲ್ಲೇಖಗಳನ್ನೂ ನಾವು ಅವರಿಗೆ ಸಂಬಂಧಿಸಿದಂತೆ ಇರುವ ಪುಸ್ತಕಗಳಿಂದ ತಿಳಿದುಕೊಳ್ಳಬಹುದಾಗಿದೆ.
ಗುರು ಶಿಷ್ಯ ಪರಂಪರೆಯಲ್ಲಿ ಶ್ರೇಷ್ಠರಾಗಿ ನಿಲ್ಲುವ ರಾಮಕೃಷ್ಣ ಪರಮಹಂಸರು ಮತ್ತು ಸ್ವಾಮಿ ವಿವೇಕಾನಂದ ಅವರು ಈ ಸಮಾಜಕ್ಕೆ ಧಾರೆಯೆರೆದು ಕೊಟ್ಟ ಆದರ್ಶಗಳು, ಮೌಲ್ಯಗಳು ಅಷ್ಟಿಷ್ಟಲ್ಲ. ಪರಮಹಂಸರು ಹೇಳಿದ ಧಾರ್ಮಿಕ ವಿಚಾರಗಳನ್ನು ಲೋಕಕ್ಕೆ ಪಸರಿಸಿ ಹಿಂದೂ ಧರ್ಮದ ಮೇಲಿನ ವಿದೇಶಿಗರ ದೃಷ್ಟಿಕೋನವನ್ನು ಬದಲಾಯಿಸಿದ ಸ್ವಾಮಿ ವಿವೇಕಾಂದರು ಪರಮಹಂಸರ ಕುರಿತು ಹೀಗೆ ಹೇಳುತ್ತಾರೆ. ʼಭಾರತೀಯರ 5000 ವರ್ಷಗಳ ಆಧ್ಯಾತ್ಮಿಕ ಜೀವನವನ್ನು ತಮ್ಮ 51 ವರ್ಷ ಜೀವಿತಾವಧಿಯಲ್ಲಿ ಬದುಕಿ ತೋರಿಸಿದವರು ರಾಮಕೃಷ್ಣ ಪರಮಹಂಸರು. ಇವರ ಜೀವನ ದ್ವೈತ, ಅದ್ವೈತ, ವಿಶಿಷ್ಟಾದ್ವೈತಗಳ ತ್ರಿವೇಣಿ. ಭಗವಂತನನ್ನು ಹಲವಾರು ಭಾವಗಳಲ್ಲಿ ಕಂಡು ಪ್ರೀತಿಸಿದರು. ಜ್ಞಾನ, ಭಕ್ತಿ, ಯೋಗ ಇಲ್ಲಿ ಸಂಧಿಸಿವೆ. ಇವರ ಜೀವನವೇ ಒಂದು ದೊಡ್ಡ ವಿಶ್ವಧರ್ಮ ಸಮ್ಮೇಳನʼ. ರಾಮಕೃಷ್ಣರು ತಮ್ಮ ಜೀವಿತಾವಧಿಯಲ್ಲಿ ಎಲ್ಲಾ ಮತ, ಪಂಗಡಗಳ ಸಾರವನ್ನು ಅರಿಯಲು ಪ್ರಯತ್ನಿಸಿದರು. ಎಲ್ಲವೂ ದೇವರೆನ್ನುವ ಒಂದು ಕಲ್ಪನೆಯಡಿ ಕಾಣದ ಒಂದು ರೂಪವನ್ನು ಪೂಜಿಸುತ್ತಿದ್ದಾರೆ. ಹಿಂದೂ ತತ್ವದ ಮುಖೇನ ಅವರು ಹೊರಡಿಸಿದ ವಿಚಾರಧಾರೆಗಳು ವಿಶ್ವದ ಮನಸ್ಸನ್ನು ಏಕಜಾಗೃತಗೊಳಿಸಿವೆ.
ಓರ್ವ ಸೂಫಿ ಸಂತರು ರಾಮಕೃಷ್ಣ ಪರಮಹಂಸರ ಬಗ್ಗೆ ʼರಾಮಕೃಷ್ಣರು ವಿಶ್ವ ಪುರುಷರು. ಅವರಲ್ಲಿ ಏನೋ ವಿಶೇಷವಾದ ಶಕ್ತಿ ಇದೆ. ಆದರೆ ಅವರನ್ನು ಒಂದು ವರ್ಗಕ್ಕೆ ಸೀಮಿತಗೊಳಿಸಲು ಸಾಧ್ಯವಿಲ್ಲ, ಪರಮಹಂಸರು ಎಲ್ಲಾ ಧರ್ಮಗಳನ್ನು ಪ್ರತಿನಿಧಿಸಿದ್ದರು ಹೀಗಾಗಿ ರಾಮಕೃಷ್ಣರನ್ನು ವರ್ಗೀಕರಿಸಲು ಸಾಧ್ಯವಿಲ್ಲʼ ಎಂದು ಹೇಳಿದ್ದಾರೆ. ಆ ಮೂಲಕ ಅವರನ್ನು ವಿಶ್ವ ಪುರುಷ, ವ್ಯಕ್ತಿ ಶಕ್ತಿ ಎಂಬ ನೆಲೆಯಲ್ಲಿ ವ್ಯಾಖ್ಯಾನಿಸಿದ್ದಾರೆ.
ಪರಮಹಂಸರ ಶಿಷ್ಯರಾದ ಸ್ವಾಮಿ ವಿವೇಕಾನಂದರು ತಮ್ಮ ಗುರುಗಳ ಹೆಸರಿನಲ್ಲಿ ಸ್ಥಾಪಿಸಿದ ರಾಮಕೃಷ್ಣ ಮಿಶನ್ ಇಂದಿಗೂ ಅವರ ವಿಚಾರಧಾರೆಗಳನ್ನು ಗಟ್ಟಿಗೊಳಿಸುತ್ತಾ, ಸಮಾಜದಲ್ಲಿನ ಅಂಕು ಡೊಂಕುಗಳನ್ನು ಸರಿಪಡಿಸುತ್ತಾ, ದೀನ ದಲಿತರಿಗಾಗಿ ಶ್ರಮಿಸುತ್ತಾ ಸಮಾಜಕ್ಕೆ ದಾರಿ ತೋರುವ ಕೆಲಸವನ್ನು ಮಾಡುತ್ತಿದೆ. ಶ್ರೀ ರಾಮಕೃಷ್ಣ ಪರಮಹಂಸರು ಈ ಸಮಾಜಕ್ಕೆ ಕೊಟ್ಟು ಹೋದ, ಬಿಟ್ಟು ಹೋದ ಆದರ್ಶಗಳನ್ನು ಪಾಲಿಸಿಕೊಂಡು, ಅವರ ಮೌಲ್ಯಗಳನ್ನು ಎತ್ತಿ ಹಿಡಿಯುವ, ಆ ಮೂಲಕ ಸ್ವಸ್ಥ ಸಮಾಜ ನಿರ್ಮಾಣ ಮಾಡುವ ಕೈಂಕರ್ಯದಲ್ಲಿ ನಾವೂ ತೊಡಗಿಸಿಕೊಳ್ಳಬೇಕಾಗಿದೆ. ಇದೇ ರಾಮಕೃಷ್ಣ ಪರಮಹಂಸರಿಗೆ ನಾವು ನೀಡಬಹುದಾದ ನಿಜವಾದ ಗೌರವ.
✍️ವಿಶ್ವಾಸ್ ಅಡ್ಯಾರ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.