ಅಡಿಕೆ ಬಹುಪಯೋಗಿ ಎಂಬುದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ. ಅಡಿಕೆಯನ್ನು ಕೇವಲ ಬೀಡಾ, ಪಾನ್ ಮೊದಲಾದವುಗಳಿಗೆ ಮಾತ್ರ ಬಳಕೆ ಮಾಡಲಾಗುತ್ತಿದೆ ಎಂಬ ವಾದದ ನಡುವೆ, ಅಡಿಕೆಯ ಐಸ್ಕ್ರೀಂ, ಲಡ್ಡು, ಸ್ಯಾನಿಟೈಸರ್, ಅರೆಕಾ ಟೀ ಹೀಗೆ ಹತ್ತು ಹಲವು ವಿಧದ ವಸ್ತುಗಳನ್ನು ತಯಾರಿಸಿ, ಅಡಿಕೆ ಆಹಾರಕ್ಕೆ, ಸ್ವಚ್ಛತೆಯ ದೃಷ್ಟಿಯಿಂದಲೂ ಬಳಕೆ ಮಾಡಬಹುದು ಎಂಬುದನ್ನು ನಮ್ಮ ದೇಶದ ಯುವ ಸಂಶೋಧಕರು ಪತ್ತೆ ಮಾಡಿದ್ದು ಈಗ ಹಳೆಯ ವಿಷಯ. ಈಗ ಅಡಿಕೆಯಿಂದಲೇ ಯೋಧರು ಬಳಸುವ ಬುಲೆಟ್ಪ್ರೂಫ್ ಜಾಕೆಟ್ ನಿರ್ಮಾಣವೂ ಸಾಧ್ಯ ಎಂಬುದನ್ನು ಸಾಧಿಸಲು ಹೊರಟಿದ್ದಾರೆ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನ ನ್ಯಾನೋ ಮೆಟೀರಿಯಲ್ಸ್ ಆಂಡ್ ಡಿಸ್ಪ್ಲೇಸ್ ಕೇಂದ್ರದ ಮುಖ್ಯಸ್ಥ ಮತ್ತು ಪ್ರಾಧ್ಯಾಪಕ ಡಾ. ಗುರುಮೂರ್ತಿ ಹೆಗಡೆ ಅವರು.
ತಮ್ಮ ವಿದ್ಯಾರ್ಥಿಗಳ ನೆರವಿನೊಂದಿಗೆ ಈಗಾಗಲೇ ಅಡಿಕೆಯ ನ್ಯಾನೋಪಾರ್ಟಿಕಲ್ನಿಂದ ಎಪಾಕ್ಸಿ ಫೈಬರ್ ಗಾಜು, ನೀರಿನ ಪೈಪ್, ಬ್ಯಾಟರಿ, ನೀರು ಶುದ್ಧಕಾರಕ ಪರಿಕರ, ನೆಲ ಸ್ವಚ್ಛತಾ ದ್ರಾವಣ ಮೊದಲಾದ ವಿನೂತನ ವಿಚಾರಗಳನ್ನು ಸಿದ್ಧಪಡಿಸಿದ್ದಾರೆ. ಈ ಎಲ್ಲಾ ಸಂಶೋಧನೆಗಳಿಗೆ ಹಕ್ಕುಸ್ವಾಮ್ಯ (ಪೇಟೆಂಟ್) ಸಹ ಪಡೆದುಕೊಂಡಿರುವ ಇವರ ಸಂಶೋಧನಾ ಲೇಖನಗಳು ಅಂತರಾಷ್ಟ್ರೀಯ ಪತ್ರಿಕೆಗಳಲ್ಲಿಯೂ ಪ್ರಕಟಗೊಂಡಿವೆ.
ಇನ್ನು ಈಗಾಗಲೇ ಇವರು ಅಡಿಕೆಯನ್ನು ಬಳಕೆ ಮಾಡಿಕೊಂಡು ತಯಾರು ಮಾಡಿರುವ ವಿವಿಧ ವಸ್ತುಗಳನ್ನು ರಾಜ್ಯ ಸರ್ಕಾರದ ನೆರವಿನಿಂದ ಮಾರುಕಟ್ಟೆಗಳಿಗೆ ಪರಿಚಯಿಸುವುದಕ್ಕೂ ಪೂರಕ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಡಿಕೆ ಕಾರ್ಯಪಡೆಗೆ ಮಾದರಿಗಳ ಪ್ರದರ್ಶನ, ದಾಖಲಾತಿಗಳನ್ನು ನೀಡುವುದು ಮೊದಲಾದ ಪ್ರಕ್ರಿಯೆಗಳನ್ನೂ ಪೂರ್ಣಗೊಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಅಡಿಕೆಯ ನ್ಯಾನೋ ಪಾರ್ಟಿಕಲ್ಸ್ ಬಳಸಿಕೊಂಡು ಮದ್ದುಗುಂಡುಗಳು, ನೀರಿನ ಬಾಟಲ್ಗಳು, ಮೊಬೈಲ್ ಗ್ಲಾಸ್ಗಳು ಸೇರಿದಂತೆ ಇನ್ನೂ ಹಲವಾರು ವಸ್ತುಗಳನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಇವರ ಸಂಶೋಧನೆಗಳು ಸಾಗಿವೆ. ಡಿಆರ್ಡಿಒ ಸಹಯೋಗವನ್ನು ಪಡೆದುಕೊಂಡು ಅಡಿಕೆಯಿಂದ ಬುಲೆಟ್ಪ್ರೂಫ್ ಜಾಕೆಟ್ಗಳನ್ನು ಸಿದ್ಧಪಡಿಸಲು ಗುರುಮೂರ್ತಿ ಮತ್ತವರ ಬಳಗ ಸಿದ್ಧತೆ ನಡೆಸುತ್ತಿದೆ.
10 ವರ್ಷಗಳ ಕಾಲ ವಿದೇಶದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಡಾ. ಗುರುಮೂರ್ತಿ, ಕಳೆದ 5 ವರ್ಷಗಳಿಂದ ತಾಯ್ನಾಡಿಗೆ ಆಗಮಿಸಿ, ಇಂತಹ ಹಲವು ಸಂಶೋಧನೆಗಳನ್ನು ನಡೆಸುವುದರಲ್ಲಿ ಕಾರ್ಯ ಪ್ರವೃತ್ತರಾಗಿದ್ದಾರೆ. ಆರಂಭದಲ್ಲಿ ಅಡಿಕೆ ಸಿಪ್ಪೆಯನ್ನು ಬಳಸಿ ಸಂಶೋಧನೆ ನಡೆಸಲಾಯಿತು. ಆದರೆ ಅದು ಫಲ ನೀಡಲಿಲ್ಲ. ಬಳಿಕ ಅಡಿಕೆಯನ್ನು ಪುಡಿ ಮಾಡಿ ಸಾವಿರ ಡಿಗ್ರಿಯಲ್ಲಿ ನ್ಯಾನೋ ಪಾರ್ಟಿಕಲ್ ಆಗಿ ಪರಿವರ್ತನೆ ಮಾಡಲಾಯಿತು. ಮೊದಲು ಈ ನ್ಯಾನೋ ಪಾರ್ಟಿಕಲ್ನಿಂದ ಬ್ಯಾಟರಿ ತಯಾರಿಸಲಾಯಿತು. ಅದಾದ ಬಳಿಕ ಇನ್ನೂ ಹಲವು ವಸ್ತುಗಳನ್ನು ತಯಾರಿಸಿ ಅದರಲ್ಲಿ ಯಶಸ್ಸು ಗಳಿಸಿದೆ ಗುರುಮೂರ್ತಿ ಮತ್ತವರ ತಂಡ.
ಮುಂದಿನ ದಿನಗಳಲ್ಲಿ ಲೋಹದ ಗುಂಡುಗಳ ಬದಲಾಗಿ ಅಡಿಕೆಯ ಗುಂಡುಗಳು, ಬುಲೆಟ್ಪ್ರೂಫ್ ಜಾಕೆಟ್ಗಳನ್ನು ಸಿದ್ದಪಡಿಸುವುದಕ್ಕೂ ತಯಾರಿ ನಡೆಸಲಾಗಿದೆ. ಇದರ ಪರಿಣಾಮಗಳ ಬಗೆಗೂ ಅಧ್ಯಯನ ನಡೆಸಲಾಗಿದೆ. ಹಾಗೆಯೇ ರಸ್ತೆಗಳಿಗೆ ಹಾಕುವ ಡಾಂಬರಿನ ಜೊತೆಗೆ ಅಡಿಕೆಯ ನ್ಯಾನೋ ಪಾರ್ಟಿಕಲ್ ಬಳಸಿ ಪ್ರಯೋಗ ನಡೆಸಲಾಗಿದೆ. ಇದನ್ನು ಸಿಮೆಂಟ್ ಜೊತೆಗೆ ಬಳಸಿ ನಿರ್ಮಾಣ ಕಾರ್ಯದಲ್ಲಿಯೂ ಉಪಯೋಗಿಸುವುದು ಸಾಧ್ಯವಿದೆ. ಅಡಿಕೆಯಿಂದ ತಯಾರಾದ ಎಲ್ಲಾ ವಸ್ತುಗಳೂ ಈಗಿರುವ ವಸ್ತುಗಳಿಗಿಂತ 30 ಶೇ. ಹೆಚ್ಚು ಪರಿಣಾಮಕಾರಿ ಎಂಬುದನ್ನೂ ಅಧ್ಯಯನದ ಮೂಲಕ ಕಂಡುಕೊಳ್ಳಲಾಗಿದೆ ಎಂದು ಗುರುಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಗುರುಮೂರ್ತಿ ಅವರ ತಂಡ ಅಡಿಕೆಯಿಂದ ಎಪಾಕ್ಸಿ ಗಾಜನ್ನು ತಯಾರು ಮಾಡಿದೆ. ಈ ಗಾಜು 200 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ತಡೆದುಕೊಳ್ಳುವ ಶಕ್ತಿ ಹೊಂದಿದೆ. ಹಾಗೆಯೇ ಇದರ ಮೇಲೆ ಗೆರೆಗಳ ಸಹ ಬೀಳುವುದಿಲ್ಲ. ಬಾಳಿಕೆಯೂ ಹೆಚ್ಚು. ಈ ಗಾಜನ್ನು ಬಾಗಿಲುಗಳಲ್ಲಿ, ಮನೆಗಳ ಮುಂದೆ ಹಾಕುವ ಪಾರದರ್ಶಕ ಮೇಲು ಹಾಸು, ಶಾಲೆಗಳಲ್ಲಿ ಬಳಸುವ ಬೋರ್ಡ್ಗಳಲ್ಲೂ ಉಪಯೋಗಿಸಬಹುದು. ಔಷಧೋದ್ಯಮಗಳಲ್ಲಿಯೂ ಅಡಿಕೆಯ ನ್ಯಾನೋ ಪಾರ್ಟಿಕಲ್ ಬಳಕೆ ಹೆಚ್ಚು ಪೂರಕ ಎಂದು ಡಾ ಗುರುಮೂರ್ತಿ ಅವರು ತಿಳಿಸಿದ್ದಾರೆ.
ಹಿಂದೆಲ್ಲಾ ಅಡಿಕೆ ಆರೋಗ್ಯಕ್ಕೆ ಮಾರಕವಾದ ಪಾನ್ ಗಳಲ್ಲಿ, ಬೀಡಾಗಳಲ್ಲಿ ಮಾತ್ರ ಬಳಕೆ ಮಾಡಲಾಗುತ್ತದೆ ಎಂಬ ಆರೋಪವಿತ್ತು. ಈ ಕಾರಣಕ್ಕೆ ಹಲವು ಮಂದಿ ಅಡಿಕೆಯನ್ನು ದ್ವೇಷಿಸುತ್ತಿದ್ದರು. ಆದರೆ ಅಡಿಕೆ ಬಹಳಷ್ಟು ಉಪಕಾರಿ, ಅಡಿಕೆಯಿಂದ ಆಹಾರ ತಯಾರಿ, ಅಡಿಕೆಯನ್ನು ಬಳಕೆ ಮಾಡಿ ವಿವಿಧ ವಸ್ತುಗಳನ್ನು ತಯಾರಿಸಬಹುದು ಎಂಬುದನ್ನು ಇತ್ತೀಚಿನ ಹಲವು ಮಂದಿ ಯುವ ಸಂಶೋಧಕರು, ವಿಜ್ಞಾನಿಗಳು ಪ್ರಯೋಗಗಳ ಮೂಲಕವೇ ಜಗತ್ತಿಗೆ ತಿಳಿಸಿಕೊಡುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ.
https://www.facebook.com/watch/?v=421728812246889
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.