ಬೆಂಗಳೂರು: ಸರ್ವರಿಗೂ ಸಮಾನತೆ ದೊರಕಿಸಿಕೊಡುವ ದೂರದೃಷ್ಟಿಯ ಕೇಂದ್ರ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ್ದಾರೆ. ಇದರಿಂದ ದೇಶದ ಅಭಿವೃದ್ಧಿ ಖಚಿತ ಎಂದು ರಾಜ್ಯದ ವಸತಿ ಸಚಿವ ವಿ.ಸೋಮಣ್ಣ ಅವರು ತಿಳಿಸಿದರು.
ಮಲ್ಲೇಶ್ವರದ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಕೇಂದ್ರ ಬಜೆಟ್ 2021ರ ಕುರಿತ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಜೆಟ್ನಡಿ ಕರ್ನಾಟಕದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೂ ಆದ್ಯತೆ ಕೊಡಲಾಗಿದೆ. ಇದರಿಂದ ಉದ್ಯೋಗ ಸೃಷ್ಟಿಯೂ ಆಗಲಿದೆ ಎಂದರು. 33 ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದು, 1,197 ಕಿ.ಮೀ.ಗೆ ಸಂಬಂಧಿಸಿ 10,904 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. 2021-22ರಲ್ಲಿ ಕರ್ನಾಟಕದಲ್ಲಿ 1,16,144 ಕೋಟಿ ರೂಪಾಯಿಯ ಮೂಲ ಸೌಕರ್ಯ ವ್ಯವಸ್ಥೆ ನಿರ್ಮಾಣಗೊಳ್ಳಲಿದೆ. ಎರಡನೇ ಹಂತದ ಬೆಂಗಳೂರು ಮೆಟ್ರೋ ನಿರ್ಮಾಣ ಕಾಮಗಾರಿಗೆ 14,788 ಕೋ ರೂ. ಬಿಡುಗಡೆಯಾಗಿದೆ. ಬೆಂಗಳೂರು ಉಪನಗರ ಯೋಜನೆಗೆ 23,093 ಕೋಟಿ ರೂಪಾಯಿ, ಕರ್ನಾಟಕದಲ್ಲಿ ರೈಲ್ವೆ ಯೋಜನೆಗಳಿಗೆ 4,870 ಕೋಟಿ ರೂಪಾಯಿ ಅನುದಾನ, ತುಮಕೂರು ವಸಂತ ನರಸಾಪುರದಲ್ಲಿ ಕೈಗಾರಿಕಾ ಕಾರಿಡಾರ್ (ಸಣ್ಣಸಣ್ಣ ಕೇಂದ್ರಗಳ) ನಿರ್ಮಾಣಕ್ಕೆ 7,725 ಕೋಟಿ ರೂ ವೆಚ್ಚ ಮಾಡಲಾಗುತ್ತಿದೆ. ಇದರಿಂದ 2.8 ಲಕ್ಷ ಉದ್ಯೋಗಾವಕಾಶ ಲಭಿಸಲಿದೆ ಎಂದು ವಿವರಿಸಿದರು.
ರೈತರ ಕಲ್ಯಾಣಕ್ಕೆ, ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಈ ಬಜೆಟ್ನಲ್ಲಿ ಆದ್ಯತೆ ನೀಡಲಾಗಿದೆ. ಮನೆ ಮನೆಗೂ ಶುದ್ಧ ನೀರು ಒದಗಿಸಲಾಗುವುದು. ಮಹಿಳಾ ಮತ್ತು ಮಕ್ಕಳ, ನಗರ ಪ್ರದೇಶಗಳ ಜಲ್ ಜೀವನ್ ಯೋಜನೆ, ಮೂಲ ಸೌಕರ್ಯ ಅಭಿವೃದ್ಧಿ, ಎಕ್ಸ್ಪ್ರೆಸ್ ಹೆದ್ದಾರಿ ಮೊದಲಾದವುಗಳಿಗೂ ಅನುದಾನ ಮೀಸಲಿಡಲಾಗಿದೆ. ಭಾರತೀಯ ರೈಲ್ವೆ ಮುಂದಿನ ದಿನಗಳಲ್ಲಿ ಅಭಿವೃದ್ಧಿಯ ಇಂಜಿನ್ ಆಗಲಿದೆ. ʼಮೇಕ್ ಇನ್ ಇಂಡಿಯʼ ಯೋಜನೆಯಡಿ 2030ರ ವೇಳೆಗೆ ಭವಿಷ್ಯದ ರೈಲ್ವೆಯನ್ನು ಸುಸಜ್ಜಿತಗೊಳಿಸಲಾಗುವುದು. ಉಜ್ವಲ ಯೋಜನೆಯಡಿ ಇನ್ನೂ 1 ಕೋಟಿ ಮಹಿಳೆಯರಿಗೆ ಸಬ್ಸಿಡಿ ಸಹಿತ ಉಚಿತ ಅಡುಗೆ ಅನಿಲದ ಸಂಪರ್ಕ ನೀಡಲಾಗುವುದು. ದೇಶಿಯ ಉತ್ಪಾದನೆಗೆ ಉತ್ತೇಜನ ನೀಡಿ ಆತ್ಮನಿರ್ಭರ ಭಾರತಕ್ಕೆ ಬೆಂಬಲ ನೀಡಲಾಗುವುದು. 75 ವರ್ಷ ದಾಟಿದ ಹಿರಿಯ ನಾಗರಿಕರಿಗೆ ಪಿಂಚಣಿ ಮತ್ತು ಬಡ್ಡಿ ಆದಾಯಕ್ಕೆ ಸಂಬಂಧಿಸಿ ಆದಾಯ ವಿವರ ಸಲ್ಲಿಕೆಯಿಂದ (ಐಟಿಆರ್) ವಿನಾಯಿತಿ ನೀಡಲಾಗುತ್ತಿದೆ ಎಂದರು.
ಈ ಸಂದರ್ಭ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ವಿಭಾಗ ಪ್ರಭಾರಿ ಗೋಪಿನಾಥ ರೆಡ್ಡಿ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಬಿ. ನಾರಾಯಣ, ಮಾಧ್ಯಮ ವಿಭಾಗದ ರಾಜ್ಯ ಸಂಚಾಲಕ ಕರುಣಾಕರ ಖಾಸಲೆ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.