ಬೆಂಗಳೂರು: ನೈಜ ಜೀವನದ ಕಥೆಯನ್ನಾಧರಿಸಿ ತಯಾರಾಗಲಿರುವ ಚಿತ್ರವೊಂದರಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಅವರು ನಟಿಸಲಿದ್ದಾರೆ.
ಕೊರೋನಾ ಸಂದರ್ಭದಲ್ಲಿ ಶಿವಮೊಗ್ಗದ ಬಡ ಕುಟುಂಬದ ಹುಡುಗಿ ತನುಜಾಳಿಗೆ ನೀಟ್ ಪರೀಕ್ಷೆ ಬರೆಯಲು ಅನುಕೂಲ ಮಾಡಿಕೊಡುವ ಮೂಲಕ ಸಚಿವ ಡಾ ಸುಧಾಕರ್ ಅವರು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರರಾಗಿದ್ದರು. ಈ ಘಟನೆಯನ್ನಿಟ್ಟುಕೊಂಡು ನಿರ್ದೇಶಕ ಹರೀಶ್ ಎಂ ಡಿ ಹಳ್ಳಿ ಅವರು ಸಿನೆಮಾ ಚಿತ್ರಕಥೆಯೊಂದನ್ನು ನಿರ್ದೇಶಿಸಲು ಮುಂದಾಗಿದ್ದು, ಈ ಚಿತ್ರದಲ್ಲಿ ಪಾತ್ರ ನಿರ್ವಹಿಸಲು ಸಚಿವರಲ್ಲಿ ಮನವಿ ಮಾಡಲಾಗಿದೆ. ಅವರು ಚಿತ್ರತಂಡದ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾಗಿಯೂ ತಿಳಿಸಿದ್ದಾರೆ.
ಕೊರೋನಾ ಸಂದರ್ಭದಲ್ಲಿ ಲಾಕ್ಡೌನ್ ಎಫೆಕ್ಟ್ನಿಂದಾಗಿ ಶಿವಮೊಗ್ಗದ ತನುಜಾ ಎಂಬ ವಿದ್ಯಾರ್ಥಿಯೂ ಸೇರಿದಂತೆ ಹಲವು ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ 2020 ರಲ್ಲಿ ನಡೆದ ನೀಟ್ ಪರೀಕ್ಷೆಗೆ ಹಾಜರಾಗುವುದು ಅಸಾಧ್ಯವಾಗಿತ್ತು. ಇದನ್ನು ಮನಗಂಡ ಸುಪ್ರೀಂ ಕೋರ್ಟ್ ಮತ್ತೆ ನೀಟ್ ಪರೀಕ್ಷೆ ನಡೆಸಲು ಸೂಚಿಸಿತ್ತು. ಆದರೆ ಕೊರೋನಾ ಸೋಂಕು ತಗುಲಿದ್ದ ತನುಜಾ ಅವರಿಗೆ ನೀಟ್ ಪರೀಕ್ಷೆ ಬರೆಯುವುದು ಸಾಧ್ಯವಾಗಿರಲಿಲ್ಲ. ಈ ವಿಚಾರವನ್ನು ತನುಜಾ ತನ್ನ ಶಿಕ್ಷಕರ ಮೂಲಕ ಸ್ಥಳೀಯ ಪತ್ರಕರ್ತರಿಗೆ ತಿಳಿಸಿದ್ದರು. ಅವರು ಅದನ್ನು ಸಚಿವ ಸುಧಾಕರ್ ಅವರಿಗೆ ಮತ್ತು ಶಿಕ್ಷಣ ಇಲಾಖೆಗೆ ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದರು.
ಈ ಸಂದರ್ಭದಲ್ಲಿ ಸಚಿವರು ಈ ವಿಚಾರವನ್ನು ನೀಟ್ ಪರೀಕ್ಷೆ ಆಯೋಜಿಸುವ ದೆಹಲಿಯ ನೀಟ್ ನಿರ್ದೇಶಕರ ಜೊತೆಗೆ ಸಮಾಲೋಚನೆ ನಡೆಸಿ, ಅವರನ್ನು ಒಪ್ಪಿಸಿ ಮತ್ತೆ ತನುಜಾಗೆ ನೀಟ್ ಪರೀಕ್ಷೆ ಬರೆಯುವುದಕ್ಕೆ ಪೂರಕ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದ್ದರು. ಈ ಘಟನೆಯನ್ನಾಧರಿಕೊಂಡು ಸಿನೆಮಾ ತಯಾರಾಗುತ್ತಿದೆ. ಇದರಲ್ಲಿ ನೈಜ ಘಟನೆಯಲ್ಲಿ ವಿದ್ಯಾರ್ಥಿನಿಗೆ ನ್ಯಾಯ ಒದಗಿಸಿದ ಸಚಿವ ಸುಧಾಕರ್ ಅವರೇ ಚಲನಚಿತ್ರದಲ್ಲಿಯೂ ವಿದ್ಯಾರ್ಥಿನಿಗೆ ಸಹಾಯ ಮಾಡುವ ಸಚಿವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತನುಜಾ ಪಾತ್ರದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದಲ್ಲಿ ಪಾತ್ರ ಮಾಡಿದ್ದ ಸಪ್ತಾ ಪಾವೂರ್ ಕಾಣಿಸಿಕೊಳ್ಳಲಿರುವುದಾಗಿಯೂ ನಿರ್ದೇಶಕ ಹರೀಶ್ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.