ದೇಶದ ಶಾಂತಿ, ಸುವ್ಯವಸ್ಥೆ ಸಹಿತ ಜನಸಾಂದ್ರತೆಯನ್ನು ಗಮನದಲ್ಲಿಟ್ಟುಕೊಂಡು ದೇಶದ ಒಳಗಿರುವ ಅಕ್ರಮ ವಲಸಿಗರನ್ನು ಪುನಃ ಆಯಾ ರಾಷ್ಟ್ರಗಳಿಗೆ ಕಳುಹಿಸುವ ಕಾರ್ಯವಾಗಬೇಕಿದೆ. ದಶಕಗಳ ಹಿಂದೆ ದೇಶದಲ್ಲಿ ಬಾಂಗ್ಲಾ ವಲಸಿಗರ ಸಂಖ್ಯೆಯೂ ಅತ್ಯಧಿಕವಾಗಿದ್ದರೆ. ಇತ್ತೀಚಿನ ದಿನಗಳಲ್ಲಿ ರೋಹಿಂಗ್ಯಾ ಮುಸ್ಲಿಂ ವಲಸಿಗರ ಸಂಖ್ಯೆಯೂ ಹೆಚ್ಚಾಗಿರುವ ಬಗ್ಗೆ ಕೇಂದ್ರ ಗೃಹಖಾತೆ ಸಚಿವರು ರಾಜ್ಯಸಭೆಯಲ್ಲಿ ದನಿ ಮೊಳಗಿಸಿದ್ದಾರೆ.
ಕೇಂದ್ರ ಗೃಹಖಾತೆಯ ಮಾಹಿತಿ ಆಧಾರದಲ್ಲಿ ಮಯನ್ಮಾರಿನಿಂದ ಬಾಂಗ್ಲಾ ತಲುಪಿದ ರೋಹಿಂಗ್ಯಾರು ಭೂಮಾರ್ಗ ನಂತರ ಸಮುದ್ರ ಮಾರ್ಗವಾಗಿ ದೇಶದ ಪೂರ್ವ ಕರಾವಳಿಯನ್ನು ತಲುಪುತ್ತಾರೆ. ನಂತರ ಕರಾವಳಿಯ ತಮಿಳುನಾಡು, ಒಡಿಶಾ, ಕೇರಳ, ಕರ್ನಾಟಕ ರಾಜ್ಯಗಳತ್ತ ಮುಖ ಮಾಡುತ್ತಿದ್ದಾರೆ. ಹೀಗೆ ಈ ತನಕ ದೇಶದೊಳಗೆ ಹೊಕ್ಕ ರೋಹಿಂಗ್ಯಾ ಸಮುದಾಯದ ಸಂಖ್ಯೆ ಉತ್ತರ ಪ್ರದೇಶದಲ್ಲಿ ಹೆಚ್ಚಾಗಿದೆ. ಅಕ್ರಮ ವಲಸಿಗರು ರಸ್ತೆ ಬದಿಯಲ್ಲಿ ಸಣ್ಣ ಪುಟ್ಟ ಕೆಲಸದ ಮೂಲಕ ದಿನಗೂಲಿ ಕಾರ್ಮಿಕರಾಗಿ ದುಡಿಯುತ್ತಾರೆ. ಇಂತಹ ರೋಹಿಂಗ್ಯಾರ ಸಂಖ್ಯೆಯೂ ದೊಡ್ಡದಿದೆ. ಕರ್ನಾಟಕ ಸೇರಿದಂತೆ ದೇಶದ 12 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮ್ಯಾನ್ಮಾರ್ನಿಂದ ಬಂದ ವಲಸಿಗರು ಅಕ್ರಮವಾಗಿ ನೆಲೆಸಿದ್ದಾರೆ. ಇಂತಹ ಅಕ್ರಮ ವಲಸೆ ಹಾಗೂ ನೆಲೆಸುವಿಕೆಯ ಬಗ್ಗೆ ಕೇಂದ್ರ ಸರಕಾರ ಕರಾರುವಾಕ್ ಮಾಹಿತಿ ಸಂಗ್ರಹಿಸಲಿದೆ. ಬಿಹಾರ, ಪಶ್ಚಿಮ ಬಂಗಾಳ, ಜಮ್ಮು ಕಾಶ್ಮೀರ, ದೆಹಲಿಯಲ್ಲಿ ಅಕ್ರಮವಾಗಿ ರೋಹಿಂಗ್ಯಾಗಳು ನೆಲೆಸಿದ್ದಾರೆ ಎಂದು ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ನಿತ್ಯಾನಂದ ರಾಯ್ ಇತ್ತೀಚೆಗೆ ರಾಜ್ಯಸಭೆಯ ಅಧಿವೇಶನದಲ್ಲಿ ಮಾಹಿತಿ ನೀಡಿದ್ದಾರೆ.
ಕೇರಳ, ಕರ್ನಾಟಕ ತಟಕ್ಕೂ ಆಗಮಿಸಿದ್ದ ರೋಹಿಂಗ್ಯಾ ವಲಸಿಗರ ಬೋಟ್
ದೇಶದ ಪೂರ್ವ ಕರಾವಳಿ ಮೂಲಕ ಆಗಮಿಸಿ ಅಕ್ರಮ ವಲಸಿಗರಾಗಿ ನೆಲೆಸುತ್ತಿರುವ ರೋಹಿಂಗ್ಯಾ ಜನರು ದೇಶದ ಪಶ್ಚಿಮ ಕರಾವಳಿಯತ್ತಲೂ ಮುಖ ಮಾಡಿದ್ದಾರೆ. ನಾಲ್ಕು ತಿಂಗಳ ಹಿಂದೆಯಷ್ಟೇ ರೋಹಿಂಗ್ಯಾ ವಲಸಿಗರನ್ನು ಹೇರಿದ್ದ ಬೋಟ್, ಪಶ್ಚಿಮ ಕರಾವಳಿಯ ಕೇರಳ ಕರ್ನಾಟಕ ರಾಜ್ಯ ಸಮೀಪಿಸಿದ ಬಗ್ಗೆ ಸುದ್ದಿಯಾಗಿತ್ತು. ಅಕ್ರಮ ವಲಸಿಗರ ಬಳಿ ಯಾವುದೇ ಅಧಿಕೃತ ದಾಖಲೆಗಳಿರುವುದಿಲ್ಲ, ಹಾಗಾಗಿ ವಲಸಿಗರ ಬಗ್ಗೆಯೂ ಮಾಹಿತಿ ಸಂಗ್ರಹ ಕಷ್ಟವಾಗುತ್ತದೆ. ಆದರೆ ಅಕ್ರಮ ವಲಸಿಗರನ್ನು ಗುರುತಿಸಿ ಹೊರದಬ್ಬುವ ಕಾರ್ಯವನ್ನು ಕೇಂದ್ರ ಗೃಹ ಇಲಾಖೆ ಮಾಡಲಿದೆ. ರಾಷ್ಟ್ರೀಯತೆಯ ಹೆಸರಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ, ದೇಶದ ಅಖಂಡತೆಗೆ ರೋಹಿಂಗ್ಯಾ ಅಕ್ರಮ ವಲಸಿಗರನ್ನು ಪತ್ತೆ ಹಚ್ಚಿ ಗಡಿಪಾರು ಮಾಡಲಾಗುವುದು ಎಂದು ಇಲಾಖೆ ಸ್ಪಷ್ಟಪಡಿಸಿದೆ. ಅಕ್ರಮವಾಗಿ ನೆಲೆಸಿರುವ ರೋಹಿಂಗ್ಯಾ ಪ್ರಜೆಗಳ ಗಡಿಪಾರು ಸಂಬಂಧ ಏಕೀಕೃತ ಸೂಚನೆಗಳನ್ನು 2014 ಮತ್ತು 2019 ರಲ್ಲಿ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ರವಾನಿಸಿದೆ.
ಬಾಂಗ್ಲಾ, ಬರ್ಮಾ ವಲಸಿಗರೇ ಹೆಚ್ಚು!
ಭಾರತ ದೇಶದಲ್ಲಿ ಅಕ್ರಮವಾಗಿ ನೆಲೆಸಿರುವ ವಲಸಿಗರಲ್ಲಿ ಬಾಂಗ್ಲಾ ಮತ್ತು ಬರ್ಮಾ ದೇಶದಿಂದ ಬಂದವರೇ ಹೆಚ್ಚಾಗಿದ್ದಾರೆ. ಅಕ್ರಮ ಬಾಂಗ್ಲಾ ಪ್ರಜೆಗಳ ವಲಸೆ ವಿಚಾರವು ಅಸ್ಸಾಂ ರಾಜ್ಯದಲ್ಲಿ ಚುನಾವಣಾ ವಿಷಯವೂ ಆಗಿತ್ತು. ಪಶ್ಚಿಮ ಬಂಗಾಳದಲ್ಲೂ ಅಕ್ರಮ ಬಾಂಗ್ಲಾ ವಲಸಿಗರ ವಿಚಾರ ಕಳೆದ ಬಾರಿಯ ಚುನಾವಣಾ ವಸ್ತುವಾಗಿತ್ತು.
ಕಳವಳ ವ್ಯಕ್ತಪಡಿಸಿದ್ದ ವಿಶ್ವಸಂಸ್ಥೆ
ವರ್ಷದಿಂದ ವರ್ಷಕ್ಕೆ ಹೆಚ್ಚಳವಾದ ರೋಹಿಂಗ್ಯಾ ನಿರಾಶ್ರಿತರ ಬಗ್ಗೆ ವಿಶ್ವಸಂಸ್ಥೆಯೂ ಕಳವಳ ವ್ಯಕ್ತಪಡಿಸಿತ್ತು. ಬರ್ಮಾದಿಂದ ಹೊರದೂಡಲ್ಪಟ್ಟ ರೊಹಿಂಗ್ಯಾಗಳು ಸಮೀಪದ ಬಾಂಗ್ಲಾದೇಶ, ಮಲೇಶಿಯಾ, ಸಿಂಗಾಪುರ ಸಹಿತ ಆಗ್ನೇಯ ಏಷ್ಯಾ ರಾಷ್ಟ್ರಗಳತ್ತ ಮುಖ ಮಾಡಿದ್ದರು. ಈ ಮಧ್ಯೆ ಕೆಲ ಮಂದಿ ಭಾರತ ದೇಶದೊಳಗೂ ಅಕ್ರಮವಾಗಿ ನುಸುಳಿದ್ದಾರೆ.
ರಾಜ್ಯಗಳು ಎಚ್ಚೆತ್ತುಕೊಳ್ಳಬೇಕಿದೆ
ದಕ್ಷಿಣದ ಭಾರತದ ನಾಲ್ಕು ಪ್ರಮುಖ ರಾಜ್ಯಗಳು ಸೇರಿದಂತೆ ಉತ್ತರ ಭಾರತದ ಕೆಲ ರಾಜ್ಯ ಗೃಹ ಇಲಾಖೆಗಳು ವಲಸಿಗರನ್ನು ಪತ್ತೆ ಮಾಡಿ, ಮಾಹಿತಿ ಕ್ರೋಢೀಕರಿಸಿ, ಸ್ಥಳೀಯ ಪೋಲಿಸ್ ಇಲಾಖೆ ಮತ್ತು ಕೇಂದ್ರೀಯ ಗೃಹ ರಕ್ಷಕ ದಳದೊಂದಿಗೆ ಆ ಮಾಹಿತಿ ಹಸ್ತಾಂತರಿಸುವ ಮೂಲಕ ಇಂತಹ ವಲಸಿಗರನ್ನು ಗಡಿಪಾರು ಮಾಡುವ ಕಾರ್ಯಕ್ಕೆ ಮುಂದಾಗಬೇಕಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ಜಂಟಿ ಸಹಭಾಗಿತ್ವದಲ್ಲಿ ನಡೆಯಬೇಕಾದ ಕಾರ್ಯದ ಮೂಲಕ ವಲಸಿಗರನ್ನು ನಿರಾಧಾರಿಗಳನ್ನಾಗಿಸಬಹುದು.
✍️ವಿವೇಕಾದಿತ್ಯ ಕೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.