ದೇಶದ ಸಿಲಿಕಾನ್ ಸಿಟಿ ಎಂದು ಕರೆಸಿಕೊಳ್ಳುವ ಬೆಂಗಳೂರಿನ ಯಲಹಂಕದ ದ್ವೈ ವಾರ್ಷಿಕ ಏರೋ-ಇಂಡಿಯಾ ವೈಮಾನಿಕ ಪ್ರದರ್ಶನ ಭಾರತದ ಹೆಮ್ಮೆಯ ಸಂಕೇತ. ಈ ಬಾರಿ 13 ನೇ ಸಾಲಿನ ಏರೋ-ಇಂಡಿಯಾ ಆರಂಭಗೊಂಡಿದ್ದು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಿದ್ದಾರೆ.
ಮೂರು ದಿನಗಳ ಕಾಲ ನಡೆಯುವ ಅಭೂತಪೂರ್ವ ವೈಮಾನಿಕ ಪ್ರದರ್ಶನದಲ್ಲಿ ದೇಶದ ಹೆಮ್ಮೆಯ ಸಂಸ್ಥೆಯಾದ ಡಿ.ಆರ್.ಡಿ.ಒ ಮೂಲಕ ಅಭಿವೃದ್ಧಿ ಕಂಡ ಯುದ್ಧ ವಿಮಾನ ಸಹಿತ ಹೆಲಿಕಾಪ್ಟರ್ ಗಳು ಪ್ರದರ್ಶನಗೊಳ್ಳಲಿವೆ. ದೇಶ, ವಿದೇಶಗಳಿಂದ ವೈಮಾನಿಕ ಕವಾಯತ್ತನ್ನು ಕಣ್ತುಂಬಿಸಿಕೊಳ್ಳಲು ಉತ್ಸುಕರು, ನೇತಾರರು, ಉದ್ಯಮಿಗಳು ಆಗಮಿಸುತ್ತಾರೆ. ದೇಶಕ್ಕೆ ರಫೇಲ್ ಯುದ್ಧ ವಿಮಾನಗಳನ್ನು ನೀಡಿದ ಫ್ರಾನ್ಸ್, ಜರ್ಮನ್ ಮೂಲದ ಆಧುನಿಕ ಯುದ್ಧ ವಿಮಾನಗಳು ಸಹಿತ ಐರೋಪ್ಯ ರಾಷ್ಟ್ರಗಳ ನಾಗರಿಕ ವಿಮಾನಗಳ ಪ್ರದರ್ಶನಗಳು ಏರೋ ಇಂಡಿಯಾದಲ್ಲಿ ಈ ಹಿಂದೆ ನಡೆದಿದೆ. ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನ ಎಂದು ಬಿಂಬಿತವಾದ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ದೇಶದ ರಕ್ಷಣಾ ಇಲಾಖೆ ಸಹಯೋಗದಲ್ಲಿ ನಡೆಯುತ್ತದೆ. ದೇಶದ ರಕ್ಷಣಾ ಪಡೆಗಾಗಿ ಯುದ್ಧ ವಿಮಾನ ತಯಾರಿ ಸಂಸ್ಥೆ -ಡಿ.ಆರ್.ಡಿ.ಒ- (ಭಾರತೀಯ ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆ), ಎಚ್.ಎ.ಎಲ್(ಭಾರತೀಯ ವೈಮಾನಿಕ ನಿಗಮ) ಜಂಟಿ ಆಶ್ರಯದಲ್ಲಿ ಭೂಸೇನೆ, ವಾಯುಸೇನೆ, ನೌಕಾಸೇನೆಯ ವಿಶೇಷ ಯುದ್ಧ ವಿಮಾನ, ಹೆಲಿಕಾಪ್ಟರ್ ಪೈಲಟ್ ವಿವಿಧ ಆಕರ್ಷಕ ಕವಾಯತಿನಲ್ಲಿ ಭಾಗವಹಿಸುತ್ತಾರೆ.
ಈ ಬಾರಿಯ ಏರೋ ಇಂಡಿಯಾ ಹೈಬ್ರಿಡ್ ಏರ್ ಶೋ ಮೂಲಕ ಗಮನಸೆಳೆಯಲಿದ್ದು, ಆಗಸದಲ್ಲೂ, ಪರದೆಯ ಮೇಲೂ ನೋಡುವ ಅವಕಾಶ ಕಲ್ಪಿಸಲಾಗಿದೆ.
ಏರೋ ಇಂಡಿಯಾ ಮೂಲಕ ಸ್ವದೇಶಿ ತಂತ್ರಜ್ಞಾನದ ಪರಿಚಯ, ಸಹಿತ ತಾಂತ್ರಿಕತೆಯ ಪರಸ್ಪರ ಹಂಚಿಕೆ ಸಾಧ್ಯವಾಗುತ್ತದೆ. ವಿದೇಶಿ ವೈಮಾನಿಕ ತಂತ್ರಜ್ಞರು ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಭಾರತದ ವೈಮಾನಿಕ ಆತ್ಮನಿರ್ಭರತೆಯನ್ನು ಪ್ರಶಂಸಿಸಲಿದ್ದಾರೆ. ಈ ಬಾರಿಯ ಏರೋ ಇಂಡಿಯಾದಲ್ಲಿ ಡಿ.ಆರ್.ಡಿ.ಒ ಸಂಸ್ಥೆಯು ಸ್ವದೇಶಿ ನಿರ್ಮಿತ ಯುದ್ಧ ವಿಮಾನಗಳ ಆತ್ಮನಿರ್ಭರ ಕವಾಯತನ್ನು ಪ್ರದರ್ಶಿಸಲಿದೆ.
ಸೂರ್ಯ ಕಿರಣ್, ಸಾರಂಗ್ ಹೆಲಿಕಾಪ್ಟರ್ ತಂಡವು ಈ ಬಾರಿಯ ಆಕರ್ಷಣೆ.
ಉಳಿದಂತೆ ವಾಯುಪಡೆಯ ಸುಖೋಯ್, ರುದ್ರ, ಡಸಾಲ್ಟ್ ರಾಫೆಲ್, ಮಿಗ್, ಡೋರ್ನಿಯರ್ ಯುದ್ಧ ವಿಮಾನ ಹಾಗೂ ಹೆಲಿಕಾಪ್ಟರ್ ಪ್ರದರ್ಶಿಸಲ್ಪಡಲಿವೆ.
2019 ಸಾಲಿನ ಏರೋ ಇಂಡಿಯಾ ಶೋ ವನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಉದ್ಘಾಟಿಸಿದ್ದರು. ರನ್ ವೇ ಟು ಬಿಲಿಯನ್ ಒಪರ್ಚುನಿಟೀಸ್ ಎಂಬ ಧ್ಯೇಯವನ್ನಿಟ್ಟಿದ್ದ ಪ್ರದರ್ಶನದಲ್ಲಿ 600 ಭಾರತೀಯ ಮತ್ತು 300 ರಷ್ಟು ವಿದೇಶಿ ಗಣ್ಯರು ಭಾಗವಹಿಸಿದ್ದರು.
ಅಮೇರಿಕಾದ ಗ್ಲೋಬ್ ಮಾಸ್ಟರ್-111, ಯುರೋಫೈಟರ್, ಸ್ವೀಡನ್ ಮೂಲದ ಸಾಬ್ ಗ್ರಿಫೆನ್ ವಿಮಾನಗಳ ಹಾರಾಟ ಪ್ರದರ್ಶನ ಏರ್ಪಟ್ಟಿತ್ತು.
ವಿಶ್ವಕ್ಕೆ ಮಾದರಿ ಎನಿಸಿರುವ ಏರೋ ಇಂಡಿಯಾ ವೈಮಾನಿಕ ಹಾರಾಟ ಪ್ರದರ್ಶನ 26 ವರ್ಷದ ಹಿಂದೆ ಆರಂಭಗೊಂಡಿತ್ತು. ಅಂದು ರಕ್ಷಣಾ ಸಚಿವರಾಗಿದ್ದ ಜಾರ್ಜ್ ಫರ್ನಾಂಡಿಸ್ ಏರೋ ಇಂಡಿಯಾ ಪ್ರದರ್ಶನಕ್ಕೆ ವಿಶೇಷ ಆಸಕ್ತಿ ಹೊಂದಿದ್ದರು. ನಾಗರಿಕ ವಿಮಾನಯಾನ ಸಚಿವಾಲಯವು ಏರೋ ಇಂಡಿಯಾ ಕಾರ್ಯಕ್ರಮಕ್ಕೆ ಹೆಚ್ಚಿನ ಒಲವು ತೋರಿತ್ತು. ಸ್ವದೇಶಿ ಹಾಗೂ ವಿದೇಶಿ ಯುದ್ಧ ವಿಮಾನ ಹಾಗೂ ನಾಗರಿಕ ವಿಮಾನಗಳ ಬಗ್ಗೆಗಿನ ಮಾಹಿತಿ ವಿನಿಯಮದ ಭಾಗವಾಗಿರುವ ವಿಚಾರ ಸಂಕಿರಣಗಳು ಏರೋ ಇಂಡಿಯಾ ವಿಶೇಷತೆಗಳಲ್ಲೊಂದು.
ಈ ಬಾರಿಯ ಆತ್ಮನಿರ್ಭರದ ವೈಮಾನಿಕ ಹಾರಾಟವು ಹೊಸ ಛಾಪನ್ನು ಮೂಡಿಸಲಿ. ಮೇಕ್ ಇನ್ ಇಂಡಿಯಾದ ಮೆರುಗು ಹೆಚ್ಚಲಿ.
✍️ ವಿವೇಕಾದಿತ್ಯ ಕೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.