ಜನವರಿ 30. ಇಂದು ಮಹಾತ್ಮರ ಬಲಿದಾನದ ದಿನ. ಪಾರತಂತ್ರ್ಯದ ವಿರುದ್ಧ ಸ್ವರಾಜ್ಯಕ್ಕಾಗಿ ನಡೆದ ಹೋರಾಟಕ್ಕೆ ಮಹಾತ್ಮನ ಯೋಗದಾನ ಕಡಿಮೆಯೇನಲ್ಲ. ಅವರ ಹೋರಾಟದ ದಾರಿಯ ಬಗ್ಗೆ ನೂರು ತಕರಾರುಗಳಿರಬಹುದು. ಹೋರಾಟದ ಸಂದರ್ಭಲ್ಲಿ ಅವರು ನಡೆದುಕೊಂಡ ರೀತಿ, ತೆಗೆದುಕೊಂಡ ಕೆಲವೊಂದು ತೀರ್ಮಾನಗಳ ಬಗ್ಗೆ ಸಾಕಷ್ಟು ಭಿನ್ನಾಭಿಪ್ರಾಯಗಳಿರಬಹುದು. ಹೀಗಿದ್ದರೂ ಮಹಾತ್ಮನ ವ್ಯಕ್ತಿತ್ವದ ಪ್ರಭೆಗೆ ಊನವಾಗದು. ಯಾಕೆಂದರೆ ಈ ಮಹಾತ್ಮಾ ಗಾಂಧಿ ಕೇವಲ ಸ್ವಾತಂತ್ರ್ಯ ಹೋರಾಟಗಾರನಷ್ಟೆ ಅಲ್ಲ. ಗಾಂಧಿ 20ನೇ ಶತಮಾನ ಕಂಡ ಶ್ರೇಷ್ಠ ಸಮಾಜ ಸುಧಾರಕ, ದಾರ್ಶನಿಕ, ಸತ್ಯಶೋಧಕ, ಮಾತ್ರವಲ್ಲದೆ , ‘ಹಿಂದೂ’ ಎನ್ನುವ ಅಸ್ಮಿತೆಯಡಿಯಲ್ಲಿ ಬದುಕು ರೂಪಿಸಿಕೊಂಡ ಸಂತ. ಗಾಂಧಿಯ ಜೀವನ ಪಥ ಅದು ಸನಾತನ ಹಿಂದೂ ಧರ್ಮದ ಬೆಳಕಿನಲ್ಲಿ ಬೆಳಗಿದ್ದು. ಹೀಗಾಗಿಯೇ ಗಾಂಧಿ ಮತ್ತೆ ಮತ್ತೆ ತನ್ನನ್ನು ತಾನೊಬ್ಬ ಸನಾತನಿ, ತಾನೊಬ್ಬ ಹಿಂದು ಎನ್ನುವುದನ್ನು ಯಾವ ಕೀಳರಿಮೆಯೂ ಇಲ್ಲದಂತೆ ಆತ್ಮಾಭಿಮಾನದಿಂದ ಹೇಳಿಕೊಂಡವರು, ಹಾಗೇ ಬದುಕಿದವರು.
ಗಾಂಧೀಜಿಯವರ ಹಿಂದುತ್ವ ಸ್ವಯಂ ಆಚರಣೆಯ ಸ್ವರೂಪದ್ದು. ಅವರ ಮಾತು-ನಡವಳಿಕೆ , ಅವರು ರೂಪಿಸಿದ ಚಳವಳಿ-ಹೋರಾಟಗಳಲ್ಲಿ ಹಿಂದುತ್ವದ ಛಾಯೇ ದಟ್ಟವಾಗಿದೆ. ಗಾಂಧಿಯಂಥ ವ್ಯಕ್ತಿತ್ವವೊಂದು ರೂಪುಗೊಳ್ಳಲು ಸಾಧ್ಯವಾದುದು ಹಿಂದುತ್ವದಿಂದಲೇ ಎನ್ನುವಷ್ಟು ಈ ಛಾಪಿದೆ. ಅವರ ಕುರಿತಾಗಿ ದೇಶ ವಿದೇಶಗಳಲ್ಲಿ ನಡೆದ ಅನೇಕ ಅಧ್ಯಯನಗಳು ಈ ಮಾತನ್ನು ಮತ್ತೆ ಮತ್ತೆ ಸಾಭೀತುಪಡಿಸಿದೆ. ಹೀಗಿದ್ದರೂ ಗಾಂಧಿಯ ಹಿಂದುತ್ವದ ಬಗ್ಗೆ, ಗಾಂಧಿ ತನ್ನನ್ನು ತಾನು ಯಾಕೆ ಹಿಂದೂ ಎಂದು ಹೇಳಿಕೊಂಡಿದ್ದುದರ ಬಗ್ಗೆ ಶೈಕ್ಷಣಿಕ ವಲಯದಲ್ಲಾಗಲೀ, ರಾಜಕೀಯ ವಲಯದಲ್ಲಾಗಲೀ ಹೆಚ್ಚು ಚರ್ಚೆ ನಡೆದಿಲ್ಲ. ಯಾಕೆಂದರೆ ನಮ್ಮ ದೇಶದಲ್ಲಿ ಬಹುಕಾಲ ಗಾಂಧಿ ಹೆಸರು ಬಳಕೆಯಾದುದು ರಾಜಕೀಯ ಅಧಿಕಾರ ಸ್ಥಾಪನೆಯ ಒಂದು ಕಟುಂಬದ ಕನಸಿನ ಈಡೇರಿಕೆಗಾಗಿ. ಸ್ವತಃ ಗಾಂಧಿಯ ಕನಸಿನಿಂದ ಹಲವು ಯೋಜನಗಳಷ್ಟು ದೂರ ಸರಿದಿದ್ದರೂ ಮತಗಳಿಕೆಗಾಗಿ ಗಾಂಧಿಯೇ ಇಂದಿಗೂ ಕಲ್ಪವೃಕ್ಷ , ಕಾಮದೇನು ಎಲ್ಲವೂ !
ವರ್ತಮಾನದ ಭಾರತ ಗಾಂಧಿಯ ಬಗೆಗೆ ಹುಟ್ಟುಹಾಕಿದ ಅನೇಕ ಅಪನಂಬಿಕೆಯ ಮಾತುಗಳು ಅದ್ಯಯನದ ಕೊರತೆಯಿಂದ ಹುಟ್ಟಿದ್ದು, ಗಾಂಧಿಯ ಕುರಿತಾದ ವಾಸ್ತವಿಕ ಜ್ಞಾನದ ಕೊರತೆಯಿಂದ ಪ್ರಚಲಿತಕ್ಕೆ ಬಂದುದು. ಈ ಅಪನಂಬಿಕೆ ದೂರವಾಗಬೇಕಾದರೆ ಗಾಂಧಿ ಹೇಗೆ ಓರ್ವ ಹಿಂದು ಧರ್ಮದ ಅನುಯಾಯಿಯಾಗಿ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದರು ಎನ್ನುವುದನ್ನು ಅರಿತುಕೊಳ್ಳಬೇಕಿದೆ. ಅವರ ಸಮಗ್ರ ಬರವಣಿಗೆ ಚಿಂತನೆಗಳಲ್ಲಿ ಹಿಂದುತ್ವದ ಗ್ರಹಿಕೆಯ ಚಿತ್ರಣ ಸಿಗುತ್ತದೆ. ಸೆಕ್ಯುಲರಿಸಂನ ಮೋಹಕ್ಕೆ ಬಿದ್ದು ಗಾಂಧಿಯ ಪ್ರೇರಣೆಯ ಸ್ರೋತವಾಗಿದ್ದ ಹಿಂದುತ್ವದ ಕುರಿತ ಮಾತು ಸೋತಿತು. ಗಾಂಧಿಯನ್ನು ಅಲ್ಟ್ರಾ ಸೆಕ್ಯುಲರ್ ಎಂದು ಬಿಂಭಿಸುವ ಸಲುವಾಗಿ ಅವರು ಹಿಂದು ಧರ್ಮದ ಬಗೆಗೆ ಆಡಿದ್ದ ಮಹತ್ವದ ಮಾತು- ಚಿಂತನೆಗಳನ್ನು ಬದಿಗೆ ಸರಿಸಿದೆವು. ಈ ಪ್ರವೃತ್ತಿ ಎಷ್ಟು ವ್ಯಾಪಕವಾಗಿದೆ ಎಂದರೆ ಗಾಂಧಿ ರಾಮರಾಜ್ಯದ ಬಗೆಗೆ ಆಡಿದ್ದ ಮಾತುಗಳನ್ನು ಉಚ್ಚರಿಸುವುದೂ ಕೂಡ ಕೋಮುವಾದ ಎಂದು ಬಿಂಬಿಸಲ್ಪಡುವ ಅಪಾಯವಿದೆ. ಸರ್ವಪಳ್ಳಿ ರಾಧಾಕೃಷ್ಣನ್ ಗಾಂಧೀಜಿಯವರಿಗೆ ‘ ನಿಮ್ಮ ಧರ್ಮ ಯಾವುದು?’ ಎಂಬ ಪ್ರಶ್ನೆಯನ್ನೊಮ್ಮೆ ಕೇಳಿದ್ದರು. ಈ ಪ್ರಶ್ನೆಗೆ ಗಾಂಧಿ ನೀಡಿದ್ದ ಉತ್ತರವೊಂದೇ ಅವರಿಗೆ ಹಿಂದೂ ಧರ್ಮದ ಮೇಲಿದ್ದ ಅಭಿಮಾನಕ್ಕೆ ಸಾಕ್ಷಿಯಾಗಿ ಸಾಕಾಗಬಹುದು. “ ಹಿಂದೂ ಧರ್ಮವೇ ನನ್ನ ಧರ್ಮ; ನನ್ನ ದೃಷ್ಟಿಯಿಂದ ಅದೇ ಮಾನವ ಧರ್ಮವಾಗಿದೆ. ಮತ್ತು ಅದರಲ್ಲಿ ಎಲ್ಲ ಧರ್ಮಗಳ ಉತ್ತಮ ಗುಣಗಳು ಸಮಾವೇಶವಾಗಿದೆ” ಎಂದಿದ್ದರು.
ಗಾಂಧಿ ಎಂಬ ಎತ್ತರದ ವ್ಯಕ್ತಿತ್ವ ರೂಪುಗೊಳ್ಳುವುದೇ ಹಿಂದೂ ಧರ್ಮದ ಚಿಂತನೆಗಳ ಅಡಿಯಲ್ಲಿ. ಅವರ ನಡವಳಿಕೆ ಹಿಂದುತ್ವದ ಉದಾತ್ತಾ ಸ್ವರೂಪವನ್ನು ಜಗತ್ತಿಗೆ ಪಸರಿಸುವ ಬಗೆಯದ್ದಾಗಿತ್ತು. ಋಷಿ ಪ್ರಣೀತ ಹಿಂದು ಧರ್ಮಕ್ಕೆ ಕಾಲಬಾಹಿರ ಸಂಗತಿಗಳು ಸೇರಿಕೊಂಡಿರುವ ಬಗೆಗೆ ವಿಷಾದವೂ, ಆ ವಿಷಾದದ ಜತೆಗೆ ತಾನು ಪ್ರಯತ್ನ ಪೂರ್ವಕವಾಗಿ ಅಂತಹ ಕಾಲಬಾಹಿರ ಸಂಗತಿಗಳ ನಿರ್ಮೂಲನೆ ಮಾಡಿ ಹಿಂದು ಧರ್ಮ ವಿಶ್ವಧರ್ಮವೇ ಆಗಿ ಉಳಿಯುವಂತೆ ಮಾಡಲು ಅವರ ಬದುಕು ಸತ್ಯಶೋಧನೆಯ ಹಾದಿಗಿಳಿದಿತ್ತು. ಅವರ ಚಟುವಟಿಕೆಗಳು, ಮಾತು -ಕಥೆಗಳು ಹಿಂದು ಧರ್ಮಕ್ಕೆ ಪರ್ಯಾಯವಾದ ಒಂದು ಹೊಸ ಚಿಂತನೆಯನ್ನು ಹುಟ್ಟುಹಾಕುವ ಸ್ವರೂಪದ್ದಾಗಿರಲಿಲ್ಲ. ಬದಲಿಗೆ ಯಾವ ದೋಷಗಳಿಂದ ಹಿಂದು ಧರ್ಮಕ್ಕೆ ಕಳಂಕ ಅಂಟಿದೆಯೋ, ಅಂತಹ ಕಳಂಕದಿಂದ ಧರ್ಮವನ್ನು ಮುಕ್ತಗೊಳಿಸಬೇಕೆನ್ನುವುದರ ಕಡೆಗಿತ್ತು. ಹೀಗಾಗಿ ‘ಯಾರು ಹಿಂದು?’ ಎನ್ನುವುದನ್ನು ಆಗಾಗ ಸ್ಪಷ್ಟಪಡಿಸುತ್ತಾರೆ. ಹಿಂದುವಿನ ಕರ್ತವ್ಯವನ್ನು ಎಚ್ಚರಿಸುತ್ತಾರೆ. ತನಗೆ ತಾನೇ ‘ನಾನೇಕೆ ಹಿಂದು?’ ಎನ್ನುವ ಪ್ರಶ್ನೆಗೆ ಉತ್ತರವಾಗಿ ಬದುಕಿ ತೋರಿಸುವ ಪ್ರಯತ್ನದ ಹಾದಿಯಲ್ಲಿದ್ದವರು.
ಗಾಂಧಿ ಹಿಂದು ಧರ್ಮದ ಬಗೆಗಿನ ತಮ್ಮ ಚಿಂತನೆಯನ್ನು ವ್ಯಕ್ತಪಡಿಸುವ ಕಾಲಕ್ಕೆ ಹಿಂದು ಧರ್ಮವೆಂದರೆ ಅಸ್ಪೃಶ್ಯತೆಯ ಆಚರಣೆಯ ಧರ್ಮ, ಅನಾಗರಿಕ ಧರ್ಮ, ಮೌಢ್ಯಗಳ ಧರ್ಮ ಎಂಬ ಪ್ರಚಾರ ಬಹು ಪ್ರಸಿದ್ಧವಾಗಿತ್ತು. ಈ ಪ್ರಚಾರಕ್ಕೆ ಎದುರಾಗಿ ಹಿಂದು ಧರ್ಮ ಅದಲ್ಲ ಎನ್ನುವುದನ್ನು ಸಾಬೀತು ಮಾಡುವ ಬಹುದೊಡ್ಡ ಜವಾಬ್ದಾರಿಯನ್ನು ಗಾಂಧಿ ಸ್ವೀಕರಿಸಿದ್ದರು. ಹೀಗಾಗಿ ಅವರ ಬದುಕು ಚಿಂತನೆಗಳು ಹಿಂದು ಧರ್ಮದ ಕುರಿತ ಅಪಪ್ರಚಾರಗಳಿಗೆ ನೀಡುವ ಉತ್ತರವೂ ಆಗಿತ್ತು. ಬಲು ಎಚ್ಚರದಿಂದ, ತನ್ನ ನಡವಳಿಕೆಯು ಶಾಸ್ತ್ರಸಮ್ಮತವಾದ ಉದಾತ್ತತೆಯ ಪ್ರಕಟೀಕರಣವಾಗುವಂತೆ ಅವರು ಬದುಕಿದ್ದರು. ಗಾಂಧೀಜಿಯವರ ಬದುಕಿನ ಫೀಲಾಸಪಿಕಲ್ ಸಂಕೇತಗಳೆಂದು ಪರಿಗಣಿಸಲಾದ ಸತ್ಯ, ಅಹಿಂಸೆ, ಬ್ರಹ್ಮಚರ್ಯ ಮೊದಲಾದ ಪ್ರಾಯೊಗಿಕ ಆಚರಣೆಗಳು ಅವರ ಪಾಲಿಗೆ ಹಿಂದುತ್ವದ ಲಾಂಛನಗಲಾಗಿದ್ದವು. ವರ್ಣದ ಹೆಸರಿನಲ್ಲಿ ಆಚರಿಸಲ್ಪತ್ತಿದ್ದ ಅಸ್ಪೃಶ್ಯತೆಯು, ವರ್ಣದ ಹೆಸರಿನಲ್ಲಿ ಹುಟ್ಟಿದ ಜಾತಿಯನ್ನು ಶ್ರೇಷ್ಟತೆಯ ಸಂಕೇತದಂತೆ ಬಳಸುತ್ತಿದ್ದ ಅಪಸವ್ಯಗಳಿಗೆ ಗಾಂಧಿ ಬಹಳ ಸ್ಪಷ್ಟವಾದ ಉತ್ತರವನ್ನು ನೀಡುತ್ತಾರೆ. ಯಾವುದು ಧರ್ಮ? ಯಾರು ಬ್ರಾಹ್ಮಣ? ಎನ್ನುವ ಪ್ರಶ್ನೆಗಳಿಗೆ ಗಾಂಧಿ ಕಂಡುಕೊಂಡಿದ್ದ ಉತ್ತರಗಳು ಧರ್ಮಶಾಸ್ತ್ರಗಳ ಸೂಕ್ಷ್ಮವಾದ ಗ್ರಹಿಕೆಯಿಂದ ಮೂಡಿದ್ದ ಚಿಂತನೆಗಳೆ ಆಗಿತ್ತು. ಈ ಕಾರಣದಿಂದ ಅವರ ಉತ್ತರಗಳಿಗೆ ಸಾರ್ವಕಾಲಿಕ ಸ್ವೀಕಾರಾರ್ಹತೆ ಇದೆ. ಉದಾಹರಣೆಗೆ ಯಾರು ಬ್ರಾಹ್ಮಣ ? ಎನ್ನುವ ಪ್ರಶ್ನೆಗೆ ಅವರು ಕಂಡುಕೊಂಡ ಉತ್ತರ “ಬ್ರಹ್ಮನನ್ನು ಅರಿತು ಅದನ್ನು ಬೇರೆಯವರಿಗೆ ತಿಳಿಸಿ ಹೇಳುವುದರಲ್ಲಿ ಕಾಲಕ್ಷೇಪ ಮಾಡುವವನು ಬ್ರಾಹ್ಮಣನು. ಆತನು ಸರ್ವಸ್ವವನ್ನು ಸಮಾಜಕ್ಕೆ ಅರ್ಪಿಸಿ , ಇತರ ಮಾನವ ಬಂಧುಗಳು ಕೊಟ್ಟಷ್ಟರಲ್ಲಿಯೇ ತೃಪ್ತನಾಗಿ ಚರಿತಾರ್ಥ ಸಾಗಿಸುವವನು.ಬ್ರಾಹ್ಮಣ ಕುಲದಲ್ಲಿ ಹುಟ್ಟಿದವನು ಬುದ್ಧಿ ಬಲಿತ ಬಳಿಕ ಬ್ರಾಹ್ಮಣರ ಲಕ್ಷಣಗಳನ್ನು ತೋರದಿದ್ದರೆ ಆತನು ಬ್ರಾಹ್ಮಣನಲ್ಲ.ತದ್ವಿರುದ್ಧವಾಗಿ ಇತರ ವರ್ಣಗಳಲ್ಲಿ ಹುಟ್ಟಿದವರೂ ಬ್ರಾಹ್ಮಣರ ವೃತ್ತಿಯನ್ನು ಅನುಸರಿಸುತ್ತಿದ್ದರೆ ಆತನು ಜನ್ಮತಃ ಬ್ರಾಹ್ಮಣನಲ್ಲದಿದ್ದರೂ ಜಗತ್ತು ಆತನನ್ನು ಬ್ರಾಹ್ಮಣನೆಂದೇ ಪರಿಗಣಿಸುವುದು” ಎನ್ನುತ್ತಾರೆ. ಜತೆಗೆ ಜಾತಿ, ಅಸ್ಪೃಶ್ಯತೆ ಹಿಂದು ಧರ್ಮಕ್ಕೆ ಅಂಟಿದ ಕಳಂಕ, ಅದನ್ನು ಹೋಗಲಾಡಿಸಬೇಕು ಎನ್ನುವುದು ಗಾಂಧಿಯ ಕನಸಾಗಿತ್ತು. ಗಾಂಧಿಯ ಈ ಎಲ್ಲಾ ಚಿಂತನೆಯ ಮೂಲ ಯಾವುದು ಎಂದು ನೋಡಿದರೆ ಪಶ್ಚಿಮದ ಶಿಕ್ಷಣವು ಹುಟ್ಟುಹಾಕಿದ ಉದಾತ್ತದೆ ಆಗಿರದೆ, ಅದು ಹಿಂದು ಧರ್ಮದೊಳಗಿನ ಆಚರಣೆಯಿಂದ ಕಂಡುಕೊಂಡಿದ್ದ ಬೆಳಕಾಗಿತ್ತು.
ಗಾಂಧಿ ಹಿಂದು ಧರ್ಮವನ್ನು ಉಳಿದ ಮತಗಳ ಜತೆ ತುಲನಾತ್ಮಕವಾಗಿ ನೋಡುತ್ತಾರೆ. ಪಶ್ಚಿಮದ ಪಂಡಿತರು ಪ್ರತಿಪಾದಿಸಿದ ಮತದ ವ್ಯಾಖ್ಯಾನಕ್ಕೆ ಹಿಂದು ಧರ್ಮವನ್ನು ಒಗ್ಗಿಸಲು ಸಾಧ್ಯವಾಗದೆ, ಹಿಂದು ಧರ್ಮ ಒಂದು ಧರ್ಮವೇ ಅಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದವರ ಚಿಂತನೆಯ ಮಿತಿಯನ್ನು ಗುರುತಿಸುತ್ತಾರೆ. ಹಿಂದು ಧರ್ಮ ಉಳಿದ ಏಕದೇವತೋಪಾಸನೆಯ ಮತಗಳಂತೆ ಓರ್ವ ಸಂಸ್ಥಾಪಕ, ಒಂದು ಆಧಾರಗ್ರಂಥದ ಅದೀನವಾಗಿಲ್ಲ, ಇದೇ ಹಿಂದು ಧರ್ಮದ ವೈಶಿಷ್ಟ್ಯವೆಂದು ಸಾರುತ್ತಾರೆ. ‘ನಾನೇಕೆ ಹಿಂದು ?’ ಎಂದು ಕೇಳಿಕೊಂಡಾಗ ಅವರು ತಮಗೆ ತಾವೇ ಕಂಡುಕೊಂಡ ಉತ್ತರ ಬಹಳ ಅರ್ಥಪೂರ್ಣವಾದುದು. “ಹಿಂದುಸ್ತಾನದಲ್ಲಿ, ಹಿಂದು ಕುಲದಲ್ಲಿ ಜನಿಸಿ, ವೇದೋಪನಿಷತ್ತುಗಳನ್ನು ಒಪ್ಪಿ, ಅಹಿಂಸೆಯ ಪಾಲನೆ ಮಾಡುತ್ತಾ, ಗೋರಕ್ಷಣೆಗೆ ಬದ್ಧನಾಗಿರುವ, ಅಸ್ಪøಶ್ಯತೆಯನ್ನು ಆಚರಿಸದ, ಮೋಕ್ಷಕ್ಕಾಗಿ ತಹತಹಿಸುವ ಕಾರಣದಿಂದಲೇ ತಾನು ಹಿಂದು” ಎಂದು ಲೋಕಕ್ಕೆ ಸಾರಿ ಹೇಳುತ್ತಾರೆ. “ ಹಿಂದು ಧರ್ಮವು ಕೇವಲ ಮನುಷ್ಯ ಜಾತಿ ಒಂದೆಂದು ಭಾವಿಸದೆ ಸಕಲ ಜೀವಮಾತ್ರವೂ ಒಂದೇ ಎಂದು ಭಾವಿಸುತ್ತದೆ. ಈ ಧರ್ಮದಲ್ಲಿ ಸಮಾವಿಷ್ಟವಾದ ಗೋಪೂಜೆಯು ಮಾನವತೆಯ ಉತ್ಕ್ರಾಂತಿ ಕ್ರಮಕ್ಕೆ ಕೊಟ್ಟೊಂದು ಅದ್ವಿತೀಯ ದೇಣಿಗೆಯಾಗಿದೆ. ಜೀವ ಜಾತಿ ಒಂದೇ ಆಗಿರುವುದರಿಂದ ಎಲ್ಲದರಲ್ಲಿಯೂ ಪಾವಿತ್ರ್ಯವನ್ನು ಕಂಡು ಆ ಶದ್ಧೆಯನ್ನು ಜೀವನದಲ್ಲಿ ಅಳವಡಿಸಿಕೊಂಡ ಧರ್ಮ ಹಿಂದು ಧರ್ಮ” ಎನ್ನುತ್ತಾರೆ.
ಇಂತಹ ಹಿಂದು ಧರ್ಮದ ಮೇಲೆ ಬೇರೆ ಬೇರೆ ಕಾಲಘಟ್ಟದಲ್ಲಿ ಬೇರೆ ಬೇರೆ ರೀತಿಯ ಆಕ್ರಮಣಗಳು ನಡೆದರೂ ಅದು ಉಳಿದು ಬದುಕಿರುವುದೇ ವೈಶಿಷ್ಟ್ಯವೆನ್ನುತ್ತಾ, ಧರ್ಮಕ್ಕೆ ಗಂಡಾಂತರ ಬಂದಾಗ ಗಂಡಾಂತರದ ಕಾರಣಗಳನ್ನು ಸಂಶೋಧಿಸಿ ಪರಿಹಾರ ಕಂಡುಕೊಳ್ಳುವ ಪ್ರವೃತ್ತಿ ಹಿಂದು ಧರ್ಮದಲ್ಲಿದ್ದುದರಿಂದಲೇ ಈ ಧರ್ಮ ಉಳಿದಿದೆ. ಹಿಂದು ಧರ್ಮ ಇಲ್ಲಿಯವರೆಗೆ ಬಾಳಿ ಬದುಕಲು ಅದರಲ್ಲಿ ಅಂತಹ ಅತಿಶಯೋಕ್ತಿಯೋಂದಿರುವುದೊಂದೆ ಕಾರಣ. ಯಾಕೆಂದರೆ ಜಗತ್ತಿನ ಅತೀ ಪುರಾತನ , ನಾಗರಿಕತೆಗಳೆಲ್ಲಾ ಪರಕೀಯ ಆಕ್ರಮಣದಿಂದ ನಾಶವಾಗಿರುವ ಉದಾಹರಣೆಗಳೇ ಕಣ್ಮುಂದಿದೆ. ಆದರೆ ಪ್ರಾಚೀನ ಹಿಂದುಸ್ಥಾನವು ಇಂದಿಗೂ ಜೀವಂತವಾಗಿದೆ.ಈ ಜೀವಂತಿಕೆಗೆ ಮುಖ್ಯ ಕಾರಣ ಹಿಂದು ಧರ್ಮವು ಭೌತಿಕ ಸ್ವರೂಪದ್ದಾಗಿರದೆ, ಆದ್ಯಾತ್ಮಿಕ ಸ್ವರೂಪದ ಉನ್ನತ ಧ್ಯೇಯವನ್ನು ಇಟ್ಟುಕೊಂಡಿರುವುದೇ ಆಗಿದೆ ಎನ್ನುವ ಮಾತು ಗಾಂಧಿಯ ಧಾರ್ಮಿಕ ಗ್ರಹಿಕೆಯ ಸೂಕ್ಷ್ಮತೆಗೆ ಸಾಕ್ಷಿ.
ಏಕಾತ್ಮಭಾವವನ್ನೇ ತನ್ನ ಅಸ್ಮಿತೆಯನ್ನಾಗಿಸಿರುವ ಧರ್ಮ ಇರುವುದೇ ಆದಲ್ಲಿ ಅದು ಹಿಂದು ಧರ್ಮ ಮಾತ್ರ ಎನ್ನುವುದನ್ನು ಸ್ಷಷ್ಟವಾಗಿ ಹೇಳುತ್ತಾರೆ. ಗಾಂಧಿಯ ಬಹು ಮುಖ್ಯ ಕಾಳಜಿಗಳಲ್ಲೊಂದು ಗೋರಕ್ಷಣೆ. ಅವರು ಗೋರಕ್ಷಣೆ ಹಿಂದು ಧರ್ಮದ ಲಕ್ಷಣ ಎನ್ನುತ್ತಾರೆ. ಎಲ್ಲಿಯವರೆಗೆ ಹಿಂದು ಧರ್ಮವು ಗೋರಕ್ಷಣೆಯನ್ನು ಮಾಡುವುದೋ ಅಲ್ಲಿಯವರೆಗೆ ಅದು ಬದುಕುವುದೆನ್ನುವ ಭವಿಷ್ಯವಾಣಿಯನ್ನು ನುಡಿದಿದ್ದರು. ‘ಗೋವಿನ ರಕ್ಷಣೆಯೇ ಏಕೆ?’ ಎನ್ನುವ ಪ್ರಶ್ನೆಗೆ ಉತ್ತರಿಸುತ್ತಾ, “ ಗೋವು ಮನುಷ್ಯನಿಗೆ ಹೆಚ್ಚಾಗಿ ಪಳಗಿದ ಪ್ರಾಣಿ. ಎಲ್ಲಕ್ಕೂ ಹೆಚ್ಚಾಗಿ ಆಹಾರವನ್ನು ಕೊಡುವ ಪ್ರಾಣಿ.ಗೋವು ಎಂದರೆ ಧರ್ಮದ ಮೂರ್ತಿವಂತ ಕಾವ್ಯ.ಗೋವಿನ ರಕ್ಷಣೆ ಎಂದರೆ ಈಶ್ವರನ ಸರ್ವ ಮೂಖಸೃಷ್ಟಿಯ ರಕ್ಷಣೆ.ಗೋರಕ್ಷಣೆ ಹಿಂದು ಧರ್ಮವು ಜಗತ್ತಿಗೆ ಕೊಟ್ಟ ದೇಣಿಗೆ” ಎನ್ನುತ್ತಾರೆ. ಹೀಗಾಗಿಯೇ ಗಾಂಧಿ ಗೋರಕ್ಷಣೆಯು ಸ್ವರಾಜ್ಯದಷ್ಟೇ ಮಹತ್ವದ ವಿಚಾರ ಮಾತ್ರವಲ್ಲ, ಅದಕ್ಕಿಂತಲೂ ಹೆಚ್ಚಿನ ಸಂಗತಿ ಎಮದು ಪರಿಗಣಿಸಿದ್ದರು. ಗೋವಧೆಯನ್ನು ನಿಲ್ಲಿಸುವುದು ತನ್ನ ಪರಮ ಕರ್ತವ್ಯ ಎಂದು ಭಾವಿಸಿದ್ದ ಗಾಂಧಿ “ ಹಸುವನ್ನು ಉಳಿಸಲು ಪ್ರಾಣಹೋಮ ಮಾಡಲಾರದವನು ಹಿಂದು ಹೇಗಾದಾನು?” ಎಂದು ಕೇಳುತ್ತಾರೆ.
ಅಸ್ಪೃಶ್ಯತೆಯನ್ನು ಮಹಾಪಾತಕವೆಂದು ಕರೆದಿದ್ದ ಗಾಂಧಿ ತನ್ನನ್ನು ತಾನು ಅಸ್ಪೃಶ್ಯತೆಯ ನೋವಿಗೆ ಒಳಗಾದವರ ಜತೆ ಗುರುತಿಸಿಕೊಳ್ಳುತ್ತಾರೆ. ಅದಕ್ಕಾಗಿಯೇ ತನ್ನನ್ನು ಅಸ್ಪøಶ್ಯ ಅಥವಾ ಭಂಗಿ ಎಂದು ಕರೆದುಕೊಳ್ಳುತ್ತಾರೆ. ಜತೆಗೆ ತನ್ನ ಈ ನಿಲುವಿನ ಹಿನ್ನೆಲೆಯನ್ನು ಸ್ಪಷ್ಟಪಡಿಸುತ್ತಾ, ಇದು ಆಧುನಿಕ ವಿದ್ಯಾಭ್ಯಾಸ ಪಡೆದ ಕಾರಣದಿಂದ ಉಂಟಾದ ನಿಲುವಲ್ಲ, ಬದಲಾಗಿ ತಾನೊಬ್ಬ ಸನಾತನಿ ಹಿಂದು ಆಗಿರುವ ಕಾರಣದಿಂದಲೇ ಸ್ವೀಕರಿಸಿದ ನಿಲುವು ಎಂದು ಅಸ್ಪೃಶ್ಯತೆಗೆ ಧರ್ಮಶಾಸ್ತ್ರ ಸಮ್ಮತಿ ಇಲ್ಲವೆಂದು ನಿರ್ಭಯವಾಗಿ ಸಾರುತ್ತಾರೆ.ಅಸ್ಪೃಶ್ಯತೆಯ ನಿವಾರಣೆಯನ್ನು ಒಂದು ಪ್ರಜ್ಞಾಪೂರ್ವಕ ಕ್ರಿಯೆಯಾಗಿ ಪರಿಭಾವಿಸಿದ್ದ ಗಾಂಧಿ, ಅಸ್ಪೃಶ್ಯತೆಯ ಆಚರಣೆಯ ಪಾಪಕ್ಕಾಗಿ ನಾವು ಪಶ್ಚಾತಾಪ ಪಟ್ಟು ಸ್ವತಃ ಸುಧಾರಿಸಿಕೊಂಡು ಶುದ್ಧರಾದರೆ ಮಾತ್ರ ಅದು ಹಿಂದು ಸಮಾಜ ಆತ್ಮಶುದ್ಧಿಗಾಗಿ ಮಾಡಿದ ಪ್ರಯತ್ನವಾಗಿ ಚರಿತ್ರೆಯಲ್ಲಿ ದಾಖಲಾಗುತ್ತದೆ. ಒಂದು ವೇಳೆ ಕೇವಲ ಕಾಲದ ಒತ್ತಡಕ್ಕೆ ಸಿಲುಕಿ ಅಸ್ಪೃಶ್ಯತೆಯನ್ನು ನಿವಾರಿಸಿಕೊಂಡರೆ ಅದರಿಂದ ಹಿಂದು ಧರ್ಮಕ್ಕೆ ಯಾವ ಪ್ರಯೋಜನವೂ ಇಲ್ಲ.ಈ ಪರೀಕ್ಷೆ ಹಿಂದು ಧರ್ಮ ಮತ್ತು ಹಿಂದು ಸಮಾಜದ ಅಸ್ತಿತ್ವದ ಪ್ರಶ್ನೆಯಾಗಿದೆ ಎನ್ನುತ್ತಾರೆ.
ಗಾಂಧಿಯ ಕಾಲಕ್ಕೆ ವಿದೇಶಿ ಕ್ರೈಸ್ತ ಮಿಷನರಿಗಳು ಭಾರತಕ್ಕೆ ಬಂದು ಇಲ್ಲಿನ ನೊಂದ ಜನರಿಗೆ ಆಮೀಷಗಳನ್ನೊಡ್ಡಿ ಮತಾಂತರಮಾಡುವ ಪ್ರವೃತ್ತಿ ಹೆಚ್ಚಾಗಿ ಕಾಣಿಸಲಾರಂಭಿಸಿತ್ತು. ಗಾಂಧಿ ಮಾನವದಯೆಯ ಮುಸುಕಿನಲ್ಲಿ ನಡೆಸುವ ಮತಾಂತರವನ್ನು ಯೋಗ್ಯತೆಯ ಲಕ್ಷಣವಲ್ಲ ಎಂದು ಸಾರುತ್ತಾರೆ. ಸೇವೆಗೆ, ಶಿಕ್ಷಣಕ್ಕೆ ಪ್ರತಿಯಾಗಿ ನಡೆಸುವ ಮತಾಂತರವನ್ನು ಕ್ರೌರ್ಯವೆಂದೇ ಭಾವಿಸಿದ್ದರು. ಮತಾಂತರ ಉಂಟುಮಾಡಲಾರಂಭಿಸಿದ ಗಂಭಿರ ಸಾಮಾಜಿಕ, ಧಾರ್ಮಿಕ ಸಮಸ್ಯೆಗಳ ಕಡೆಗೆ ಗಾಂಧಿ ದೇಶದ ಪ್ರಜ್ಞಾವಂತರ ಗಮನಸೆಳೆಯುತ್ತಾರೆ. ಧರ್ಮವನ್ನು ಧರ್ಮದ ದೃಷ್ಟಿಯಿಂದ ನೋಡದೆ, ರಾಜಕೀಯ ಆರ್ಥಿಕ ದೃಷ್ಟಿಯಿಂದ ನೋಡಲಾರಂಭಿಸಿದ್ದರ ಪರಿಣಾಮ ಅನ್ಯಮತಿಯರು ನಡೆಸುವ ಮತಾಂತರ ಒಂದು ವ್ಯಾಪಾರವಾಗಿದೆ.ಮತಾಂತರಗೊಳ್ಳುವವರಲ್ಲೂ ಧರ್ಮದ ಮರ್ಮವನ್ನು ಅರಿಯುವ ಉದ್ದೇಶಕ್ಕಿಂತಲೂ , ಲಾಭ ನಷ್ಟದ ಲೆಕ್ಕಾಚಾರವೇ ಅಧಿಕವೆಂದು ಭಾವಿಸುತ್ತಾರೆ. ಇಂತಹ ಮತಾಂತರದಿಂದ ಸಮಾಜದಲ್ಲಿ ನೈತಿಕ ಅದಃಪತನವಾಗುತ್ತದೆ. ಸಮಾಜದ ಸರ್ವಾಂಗೀಣ ಪ್ರಗತಿಗೆ ಹಾನಿಯಾಗುತ್ತದೆ ಎನ್ನುವ ಮಾತುಗಳನ್ನು ಗಾಂಧಿ ಅಂದೇ ನುಡಿದಿದ್ದರು.
ಗಾಂಧೀಜಿಯವರ ಈ ಎಲ್ಲಾ ಚಿಂತನೆಗಳನ್ನು ಅವರ ಬರಹಗಳಿಂದ ಆಯ್ದು ಕನ್ನಡದ ಓದುಗರಿಗೆ ಒಂದೆಡೆ ಲಭ್ಯವಾಗುವಂತೆ ಮಾಡಿದ ಒಂದು ಮಹತ್ವದ ಕೃತಿ ಶ್ರೀ ಮ.ಗ.ಶೆಟ್ಟಿ ಸಂಕಲಿಸಿದ “ ನಾನೇಕೆ ಹಿಂದು?” . ಮೋಹನದಾಸ ಕರಮಚಂದ ಗಾಂಧಿಯ ಧಾರ್ಮಿಕ ಚಿಂತನೆಗಳು ಮತ್ತು ಜೀವಿತ ಘಟನೆಗಳನ್ನು ಒಳಗೊಂಡಿರುವ ಈ ಕೃತಿಯನ್ನು ರಾಷ್ಟ್ರೋತ್ಥಾನ ಸಾಹಿತ್ಯ ಇತ್ತೀಚೆಗೆ ಮರು ಪ್ರಕಟಿಸಿದೆ. ಗಾಂಧಿಯ ಹೆಸರನ್ನು ಕೇಳಿದ ಕೂಡಲೇ ಕಾರಣವೇ ಇಲ್ಲದೆ ವಿರೋಧಿಸುವ, ನಿಂದಿಸುವ ಒಂದು ವರ್ಗ ಹಾಗೂ ಗಾಂಧಿಯನ್ನು ಕೇವಲ ಆರಾಧನಾ ಭಾವದಿಂದ ಕಂಡು ಪ್ರತಿಮೆಯಾಗಿಸಿ, ರಸ್ತೆಗೆ ಹೆಸರಾಗಿಸಿ ಅವರ ಚಿಂತನೆಗಳನ್ನು , ವಿಚಾರಗಳನ್ನು ವ್ಯವಸ್ಥಿತವಾಗಿ ಹತ್ಯೆಗೈದ ಇನ್ನೊಂದು ವರ್ಗ ಭಾರತದಲ್ಲಿದೆ. ಈ ಎರಡೂ ಗುಂಪುಗಳೂ ಗಾಂಧಿಯ ವಿಚಾರಗಳಿಂದ ದೂರವೇ ಇರುವವರು. ವರ್ತಮಾನದ ಅಗತ್ಯವಾಗಿ ಬಂದಿರುವ ಈ ಕೃತಿ ಮುಂದಿನ ಅಧ್ಯಯನಕ್ಕೆ ಒಂದು ಪೀಠಿಕೆಯಂತಿದೆ. ಭೌತಿಕ ರೂಪದ ಗಾಂಧಿಯನ್ನು ಹತ್ಯೆಗೈದ ದುರುಳ ಮನಸಿನ ವಿರುದ್ಧ ಇರುವ ಆಕ್ರೋಶವೇ ಗಾಂಧಿಯ ಚಿಂತನೆಯನ್ನು ಹತ್ಯೆಗೈದವರ ಮೇಲೂ ತೋರಿಸಬೇಕಾಗಿದೆ. ಯಾಕೆಂದರೆ ನಾವು ಕಳೆದುಕೊಂಡದ್ದು “ ಭಾರತದೇಶ ಮತ್ತು ಹಿಂದು ಧರ್ಮ – ಇದಲ್ಲದೇ ಬೇರೆ ದೇಶ, ಬೇರೆ ಧರ್ಮ ಯಾವುದೂ ಜನ್ಮಕೊಡಲು ಸಾಧ್ಯವಿಲ್ಲದಂಥ ಗಾಂಧಿಯನ್ನು” ಎನ್ನುವುದನ್ನು ಮರೆಯಬಾರದು.
✍️ ಡಾ. ರೋಹಿಣಾಕ್ಷ ಶಿರ್ಲಾಲು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.