ಗುಜರಾತ್ನ ಕೆವಾಡಿಯಾ ಈಗ ಯಾವುದೋ ಕೇವಲ ಒಂದು ಸಣ್ಣ ನಗರವಾಗಿ ಉಳಿದಿಲ್ಲ, ಇದು ವಿಶ್ವದ ಅತಿದೊಡ್ಡ ಪ್ರವಾಸಿ ತಾಣಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಈ ಪ್ರದೇಶದಲ್ಲಿ ಸ್ಥಾಪನೆಯಾಗಿರುವ ಏಕತಾ ಪ್ರತಿಮೆ ಅತಿ ಹೆಚ್ಚು ಪ್ರವಾಸಿಗರನ್ನು ಈಗ ಆಕರ್ಷಿಸುತ್ತಿದೆ. ಈ ಮಾತನ್ನು ಪ್ರಧಾನಿ ನರೇಂದ್ರ ಮೋದಿ ಅವರೇ ಭಾನುವಾರ ತಿಳಿಸಿದ್ದಾರೆ. ಅಮೆರಿಕಾದ ಸುಪ್ರಸಿದ್ಧ ನ್ಯೂಯಾರ್ಕ್ ನಗರದಲ್ಲಿರುವ ಸ್ಟ್ಯಾಚು ಆಫ್ ಲಿಬರ್ಟಿಗಿಂತಲೂ ಹೆಚ್ಚು ಪ್ರವಾಸಿಗರನ್ನು ಇದು ಅಕರ್ಷಿಸುತ್ತಿದೆ. ಗುಜರಾತ್ನ ಕೆವಾಡಿಯಾಕ್ಕೆ ದೇಶದ ವಿವಿಧ ಪ್ರದೇಶಗಳನ್ನು ಸಂಪರ್ಕಿಸುವ ಎಂಟು ರೈಲುಗಳನ್ನು ನಿನ್ನೆ ಮೋದಿ ಉದ್ಘಾಟಿಸಿದ್ದಾರೆ. ಇದು ಕೆವಾಡಿಯಾಗೆ ಸಂಪರ್ಕವನ್ನು ಮತ್ತಷ್ಟು ಸುಲಲಿತಗೊಳಿಸಿದೆ.
ಒಂದು ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಬೆಳೆಸಿದರೆ ಆ ಇಡೀ ನಗರ ಯಾವ ರೀತಿಯಲ್ಲಿ ಅಭಿವೃದ್ಧಿ ಹೊಂದುತ್ತದೆ, ಹೇಗೆ ವಿಶ್ವದ ಗಮನವನ್ನು ಸೆಳೆಯುತ್ತದೆ ಎಂಬುದಕ್ಕೆ ಕೆವಾಡಿಯಾ ಉದಾಹರಣೆ. ಏಕತಾ ಪ್ರತಿಮೆ ಅಲ್ಲಿ ಸ್ಥಾಪನೆಯಾಗುವುದಕ್ಕೂ ಮುನ್ನ ಅದರ ಹೆಸರು ಕೂಡ ಹೆಚ್ಚಿನವರಿಗೆ ಗೊತ್ತಿರಲಿಲ್ಲ. ಆದರೀಗ ಕೆವಾಡಿಯಾಗೆ ಒಂದು ಬಾರಿ ಭೇಟಿ ನೀಡೋಣ ಎಂಬ ಆಸೆ ಅನೇಕರಲ್ಲಿ ಚಿಗುರೊಡೆಯುತ್ತಿದೆ.
ಏಕತಾ ಪ್ರತಿಮೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದ ನಂತರ 50 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಇಲ್ಲಿಗೆ ಬಂದಿದ್ದಾರೆ. ಕರೋನಾ ತಿಂಗಳುಗಳ ಬಳಿಕ ಇದೀಗ ಮತ್ತೆ ಅಲ್ಲಿ ಪ್ರವಾಸೋದ್ಯಮ ಗರಿಗೆದರಿದೆ. ಸಂಪರ್ಕ ಸುಧಾರಿಸಿದಂತೆ, ಕೆವಾಡಿಯಾಕ್ಕೆ ದಿನಕ್ಕೆ ಸುಮಾರು ಒಂದು ಲಕ್ಷ ಪ್ರವಾಸಿಗರು ಬರಬಹುದು ಎಂದು ನಿರೀಕ್ಷಿಸಲಾಗಿದೆ. ಪರಿಸರವನ್ನು ರಕ್ಷಿಸುತ್ತಲೇ ಆರ್ಥಿಕತೆ ಮತ್ತು ಪರಿಸರ ವಿಜ್ಞಾನದ ಯೋಜಿತ ಅಭಿವೃದ್ಧಿಗೆ ಕೆವಾಡಿಯಾ ಉತ್ತಮ ಉದಾಹರಣೆಯಾಗಿದೆ.
ಆರಂಭದಲ್ಲಿ ಕೆವಾಡಿಯಾವನ್ನು ಪ್ರಮುಖ ಪ್ರವಾಸಿ ತಾಣವಾಗಿ ರೂಪಿಸುವ ಬಗ್ಗೆ ಪ್ರಸ್ತಾಪ ಮಾಡಿದಾಗ ಹೆಚ್ಚಿನವರಿಗೆ ಅದೊಂದು ಕನಸು ಎಂಬಂತೆ ಭಾಸವಾಗಿತ್ತು, ಅದರೆ ಪ್ರಧಾನಿಯವರ ಇಚ್ಛಾಶಕ್ತಿಯ ಫಲವಾಗಿ ಕನಸು ನನಸಾಗಿದೆ.
ರಸ್ತೆಗಳ ಸಂಪರ್ಕ, ರಸ್ತೆ ದೀಪ, ರೈಲು, ಪ್ರವಾಸಿ ಸೌಕರ್ಯಗಳಿಲ್ಲದ ಕಾರಣ ಯೋಜನೆ ಕನಸಿನಂತೆ ಕಂಡಿತ್ತು. ಈಗ ಕೆವಾಡಿಯಾ ಎಲ್ಲಾ ಸೌಕರ್ಯಗಳೊಂದಿಗೆ ಸಂಪೂರ್ಣ ಹೈಟೆಕ್ ಆಗಿ ಮಾರ್ಪಟ್ಟಿದೆ. ಸರ್ದಾರ್ ವಲ್ಲಭಾಭಾಯ್ ಅವರ ಸ್ಮರಣಾರ್ಥ ನಿರ್ಮಿಸಲಾದ ಬೃಹತ್ ಪ್ರತಿಮೆ ಮಾತ್ರವಲ್ಲದೇ, ಸರ್ದಾರ್ ಸರೋವರ, ವಿಶಾಲವಾದ ಸರ್ದಾರ್ ಪಟೇಲ್ ಝೂಲಾಜಿಕಲ್ ಪಾರ್ಕ್, ಆರೋಗ್ಯ ವನ ಮತ್ತು ಜಂಗಲ್ ಸಫಾರಿ ಮತ್ತು ಪೋಶನ್ ಪಾರ್ಕ್ ಇಲ್ಲಿನ ಆಕರ್ಷಣೆಗಳಾಗಿವೆ.
ಕೆವಾಡಿಯಾದಲ್ಲಿ ಗ್ಲೋ ಗಾರ್ಡನ್, ಏಕ್ತಾ ಕ್ರೂಸ್ ಮತ್ತು ವಾಟರ್ ಸ್ಪೋರ್ಟ್ಸ್ ಕೂಡ ಇದೆ ಮತ್ತು ಪ್ರವಾಸೋದ್ಯಮ ಹೆಚ್ಚುತ್ತಿರುವ ಕಾರಣ ಇಲ್ಲಿನ ಆದಿವಾಸಿ ಯುವಕರಿಗೆ ಉದ್ಯೋಗ ಸಿಗುತ್ತಿದೆ ಮತ್ತು ಸ್ಥಳೀಯ ಜನರು ಆಧುನಿಕ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಇಲ್ಲಿನ ಏಕ್ತಾ ಮಾಲ್ನಲ್ಲಿ ಸ್ಥಳೀಯ ಕರಕುಶಲ ವಸ್ತುಗಳಿಗೆ ಹೊಸ ಅವಕಾಶಗಳಿವೆ. ಆದಿವಾಸಿ ಗ್ರಾಮಗಳಲ್ಲಿ ಹೋಂ ಸ್ಟೇಗಾಗಿ ಸುಮಾರು 200 ಕೊಠಡಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಬೆಳೆಯುತ್ತಿರುವ ಪ್ರವಾಸೋದ್ಯಮವನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಪಡಿಸಿರುವ ಕೆವಾಡಿಯಾ ರೈಲು ನಿಲ್ದಾನ ಕೂಡ ಬುಡಕಟ್ಟು ಆರ್ಟ್ ಗ್ಯಾಲರಿ ಮತ್ತು ವೀಕ್ಷಣಾ ಗ್ಯಾಲರಿಯನ್ನು ಹೊಂದಿದೆ, ಅಲ್ಲಿಂದ ಪ್ರತಿಮೆಯ ಏಕತೆಯನ್ನು ಕೂಡ ನೋಡಬಹುದಾಗಿದೆ. ಇಲ್ಲಿ ರೈಲು ಸೌಲಭ್ಯ ಕೂಡ ಹೈಟೆಕ್ ಅಗುತ್ತಿದೆ. ಅಹಮದಾಬಾದ್-ಕೆವಾಡಿಯಾ ಜನತಾಬ್ಡಿ ಸೇರಿದಂತೆ ಹಲವು ಮಾರ್ಗಗಳಲ್ಲಿ ಆಕರ್ಷಕ ‘ವಿಸ್ಟಾ-ಡೋಮ್ ಕೋಚು’ ರೈಲುಗಳು ಸಂಚರಿಸಲಿವೆ.
ಒಟ್ಟಿನಲ್ಲಿ ಇಚ್ಛಾಶಕ್ತಿ ಇದ್ದರೆ ಅಂದುಕೊಂಡ ಕಾರ್ಯವನ್ನು ಸಾಧಿಸಬಹುದು ಎಂಬುದಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಕೆವಾಡಿಯಾ ಪ್ರವಾಸೋದ್ಯಮ ಯೋಜನೆಯೇ ಸಾಕ್ಷಿ. ಕೆವಾಡಿಯಾ ಎಂಬ ಸಣ್ಣ ನಗರ ಇಂದು ವಿಶ್ವ ಭೂಪಟದಲ್ಲಿ ಮಹತ್ವದ ಸ್ಥಾನ ಪಡೆದಿದೆ ಎಂದರೆ ಅದಕ್ಕೆ ಅಲ್ಲಿ ಬೆಳೆಯುತ್ತಿರುವ ಪ್ರವಾಸೋದ್ಯಮ ಸಾಕ್ಷಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.