ಇತ್ತೀಚೆಗಷ್ಟೇ ನಮ್ಮ ವಿಜ್ಞಾನಿಗಳು ದೇಶವೇ ಹೆಮ್ಮೆಪಡುವಂತಹಾ ಸಾಧನೆಯೊಂದನ್ನು ಮಾಡಿದ್ದಾರೆ. ಆದರೆ ಪ್ರಪಂಚದ ಬಲಿಷ್ಠ ರಾಷ್ಟ್ರಗಳೆಲ್ಲವೂ ಕೋವಿಡ್-19ಗೆ ಔಷಧಿಯನ್ನು ಕಂಡು ಹುಡುಕಲು ಅವಿರತವಾಗಿ ಶ್ರಮಿಸುತ್ತಿರುವುದು ನಮಗೆಲ್ಲರಿಗೂ ತಿಳಿದಿದೆ. ಈ ಸಂದರ್ಭದಲ್ಲಿ ಭಾರತದ ಹೆಮ್ಮೆಯ ವೈದ್ಯ ವಿಜ್ಞಾನ ಸಂಸ್ಥೆಗಳಾದ ಭಾರತ್ ಬಯೋಟೆಕ್ ಹಾಗೂ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಕೋವಿಡ್ಗೆ ಲಸಿಕೆಯನ್ನು ಕಂಡುಹುಡುಕುವುದರಲ್ಲಿ ಸಫಲವಾಗಿದೆ. ಅನೇಕ ಪರೀಕ್ಷೆಗಳನ್ನು ನಡೆಸಿ, ಹಲವು ಸುತ್ತುಗಳಲ್ಲಿ ಪರೀಕ್ಷಿಸಿದ ಬಳಿಕವಷ್ಟೇ ಈ ಲಸಿಕೆಯನ್ನು ಸಾರ್ವಜನಿಕವಾಗಿ ಬಳಸಲು ಒಪ್ಪಿಗೆ ನೀಡಲಾಗಿದೆ. ವಿಜ್ಞಾನಿಗಳ ಸಾಧನೆಗೆ ಮೆಚ್ಚುಗೆ ಮತ್ತು ಹೆಮ್ಮೆಯನ್ನು ವ್ಯಕ್ತಪಡಿಸಿದ ಮಾನ್ಯ ಪ್ರಧಾನ ಮಂತ್ರಿಗಳು ದೇಶದ ಸಮಸ್ತ ನಾಗರೀಕರಿಗೆ ಈ ಲಸಿಕೆಯನ್ನು ಉಚಿತವಾಗಿ ನೀಡುವ ವಿಚಾರವನ್ನೂ ಮುಂದಿಟ್ಟರು. ಆದರೆ…
“ಒಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲು” ಎಂಬ ಗಾದೆ ಮಾತನ್ನು ನಾವೆಲ್ಲರೂ ಕೇಳಿದ್ದೇವೆ. ಈ ಗಾದೆ ಮಾತು ನಮ್ಮ ದೇಶದ ವಿರೋಧ ಪಕ್ಷದ ನಾಯಕರಿಗೆ ಸಂಪೂರ್ಣವಾಗಿ ಅನ್ವಯವಾಗುವುದು ಸುಳ್ಳಲ್ಲ. ಯಾಕೆಂದರೆ ಲಸಿಕೆಯ ಕುರಿತಾದ ಧನಾತ್ಮಕ ವಿಚಾರವು ಹೊರಬಂದ ಬಳಿಕ ವಿರೋಧ ಪಕ್ಷದ ನಾಯಕರ ನಾಯಕರು ಸ್ಪರ್ಧೆಗೆ ಬಿದ್ದಂತೆ ಬೇಜವಾಬ್ದಾರಿಯುತ ಮತ್ತು ಅಪ್ರಬುದ್ಧ ಹೇಳಿಕೆಗಳನ್ನು ನೀಡುವುದರಲ್ಲಿ ನಿರತರಾಗಿದ್ದಾರೆ. ಮೊದಲಿಗೆ ಸಮಾಜವಾದಿ ಪಕ್ಷದ ನಾಯಕರಾದ ಅಖಿಲೇಶ್ ಕುಮಾರ್ ಯಾದವ್ ಅವರ ಹೇಳಿಕೆಯನ್ನೇ ಗಮನಿಸೋಣ. “ಬಿಜೆಪಿಯ ಲಸಿಕೆಯ ಮೇಲೆ ನನಗೆ ನಂಬಿಕೆಯಿಲ್ಲ ಮತ್ತು ನಾನು ಈ ಲಸಿಕೆಯನ್ನು ಪಡೆಯುವುದಿಲ್ಲ. ಈ ಬಾರಿ ಸಮಾಜವಾದಿ ಪಕ್ಷವು ಅಧಿಕಾರಕ್ಕೆ ಬಂದರೆ ಉತ್ತರ ಪ್ರದೇಶದ ಎಲ್ಲರಿಗೂ ಉಚಿತವಾಗಿ ಲಸಿಕೆಯನ್ನು ನೀಡಲಾಗುತ್ತದೆ” ಎಂದಿದ್ದರು. ಉತ್ತರ ಪ್ರದೇಶದಂತಹ ಬೃಹತ್ ರಾಜ್ಯವೊಂದರ ಮುಖ್ಯಮಂತ್ರಿಯಂತಹ ಜವಾಬ್ದಾರಿಯುತ ಹುದ್ದೆಯನ್ನು ಅಲಂಕರಿಸಿದ್ದ ವ್ಯಕ್ತಿಯೊಬ್ಬರಿಂದ ಇಂತಹಾ ಬೇಜವಾಬ್ದಾರಿಯುತ ಹೇಳಿಕೆಯನ್ನು ನಿರೀಕ್ಷಿಸಲು ಸಾಧ್ಯವೇ?
ಇನ್ನು ರಾಷ್ಟ್ರದ ವಿರೋಧ ಪಕ್ಷದಲ್ಲಿರುವ ಕಾಂಗ್ರೆಸ್ ಪಕ್ಷದ ಶಾಸಕರೊಬ್ಬರ ಹೇಳಿಕೆಯನ್ನು ಗಮನಿಸಿ. “ಲಸಿಕೆಯನ್ನು ಪ್ರಧಾನಿ ಮೋದಿಯೇ ಮೊದಲು ಪಡೆಯಬೇಕು. ಮಾತ್ರವಲ್ಲದೆ, ತಯಾರಿಸಲ್ಪಟ್ಟ ಲಸಿಕೆಗಾಗಿ ಜನರು ಬಿಜೆಪಿಗೆ ಅಲ್ಲ ಕಾಂಗ್ರೆಸ್ ಪಕ್ಷಕ್ಕೆ ಧನ್ಯವಾದಗಳನ್ನು ಹೇಳಬೇಕು, ಏಕೆಂದರೆ ಸೆರಮ್ ಇನ್ಸ್ಟಿಟ್ಯೂಟ್ ಇಂಡಿಯಾ ಸಂಸ್ಥೆಯನ್ನು ಕಾಂಗ್ರೆಸ್ ಆಡಳಿತಾವಧಿಯಲ್ಲಿ ಸ್ಥಾಪಿಸಲಾಗಿತ್ತು”. ಪ್ರಧಾನಿ ಮೋದಿಜಿಯಾದಿಯಾಗಿ ಬಿಜೆಪಿ ಪಕ್ಷದ ಯಾವೊಬ್ಬ ನಾಯಕರೂ ಲಸಿಕೆಯನ್ನು ಬಿಜೆಪಿ ಪಕ್ಷದ ಕೊಡುಗೆ ಎಂಬುದಾಗಿ ಹೇಳಿಕೆಯನ್ನು ನೀಡಲಿಲ್ಲ. ಹೀಗಿದ್ದೂ ಜನರ ಚುನಾಯಿತ ಪ್ರತಿನಿಧಿಯಾಗಿ ಅಪ್ರಬುದ್ಧ ಹೇಳಿಕೆಯನ್ನು ನೀಡುವ ಉದ್ದೇಶವೇನು? ಇವೆಲ್ಲದರ ಮಧ್ಯೆ ತಮ್ಮ ಪಕ್ಷದ ನಾಯಕನನ್ನು ಸಮರ್ಥಿಸುವ ಭರದಲ್ಲಿ ಸಮಾಜವಾದಿ ಪಕ್ಷದ ಇನ್ನೊಬ್ಬ ನಾಯಕ ಕೋವಿಡ್ 19 ಲಸಿಕೆಯನ್ನು ಪಡೆಯುವುದರಿಂದ ನಪುಂಸಕತ್ವ ಬರುತ್ತದೆ ಎನ್ನುವ ಅತ್ಯಂತ ಬಾಲಿಶ ಹೇಳಿಕೆಯನ್ನೂ ನೀಡಿದರು.
ಇಂತಹಾ ಹೇಳಿಕೆಗಳು ಯಾವ ಸಂದೇಶವನ್ನು ನೀಡುತ್ತದೆ? ಮೋದಿಜಿ ಪ್ರಧಾನಿಯಾದ ಬಳಿಕ ಅವರ ಜನಪ್ರಿಯತೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ದೇಶವು ಯಾವುದೇ ಸಂಕಷ್ಟಕ್ಕೆ ಸಿಲುಕಿದರೂ ಅವರು ಧೃಢ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಜನರ ಮನವನ್ನು ಗೆಲ್ಲುವುದು ಮಾತ್ರವಲ್ಲದೆ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವುದರಲ್ಲೂ ಯಶಸ್ವಿಯಾಗುತ್ತಾರೆ. ಅವರ ಒಂದೇ ಒಂದು ವೈಫಲ್ಯಕ್ಕಾಗಿ 6 ವರುಷಗಳಿಂದ ಕಾಯುತ್ತಾ ಕುಳಿತಿರುವ ವಿರೋಧ ಪಕ್ಷಗಳು ಅಂತಹಾ ಅವಕಾಶ ಸಿಗದೇ ಹತಾಶೆಯಿಂದ ಬಾಲಿಶವಾಗಿ ವರ್ತಿಸುತ್ತಿದ್ದಾರೆ. ಭಾರತೀಯ ಯೋಧರ ಮೇಲೆ ನಡೆದ ದಾಳಿಗೆ ಪ್ರತೀಕಾರವನ್ನು ತೀರಿಸುವ ದಿಟ್ಟ ನಿರ್ಧಾರವನ್ನು ಮೋದಿಜಿ ಕೈಗೊಂಡರು. ಅದನ್ನು ಭಾರತೀಯ ಸೇನೆಯು ಸಮರ್ಥವಾಗಿ ಕಾರ್ಯರೂಪಕ್ಕೆ ತಂದಿತು. ಇಂತಹ ಸಂದರ್ಭದಲ್ಲಿ ಈ ಐತಿಹಾಸಿಕ ಸರ್ಜಿಕಲ್ ಸ್ಟ್ರೈಕ್ ಯಶಸ್ವಿಯಾದ ಸಮಯದಲ್ಲಿ ಭಾರತೀಯ ಸೇನೆಯ ಬೆನ್ನಿಗೆ ನಿಂತು ಹೆಮ್ಮೆಯಿಂದ ಬೆನ್ನು ತಟ್ಟುವ ಬದಲಾಗಿ ಸಂಪೂರ್ಣ ಕಾರ್ಯಾಚರಣೆಯನ್ನೇ ಸಂಶಯದ ದೃಷ್ಟಿಯಿಂದ ನೋಡಿ ಕಾರ್ಯಾಚರಣೆಗೆ ಸಾಕ್ಷ್ಯವನ್ನು ಕೇಳಿತು .ಈ ರೀತಿಯಾಗಿ ವಿರೋಧ ಪಕ್ಷಗಳು ಸೇನೆಯನ್ನು, ಯೋಧರನ್ನು ಮತ್ತು ಅವರ ಸಾಮರ್ಥ್ಯವನ್ನು ಅನುಮಾನಿಸಿತು ಮತ್ತು ಅವಮಾನಿಸಿತು.
ಕಳೆದ ಬಾರಿ ಭಾರತದ ಹೆಮ್ಮೆಯ ಇಸ್ರೋ ವಿಜ್ಞಾನಿಗಳು ಚಂದ್ರಯಾನ -2 ನಡೆಸಿದ ಸಂದರ್ಭದಲ್ಲಿ ನಡೆದ ಕೊನೆಯ ವಿಫಲತೆಯ ಸಂದರ್ಭದಲ್ಲೂ ಕಾಂಗ್ರೆಸ್ ನ ಕೆಲವು ನಾಯಕರು ವಿಜ್ಞಾನಿಗಳ ಶ್ರಮವನ್ನು ಶ್ಲಾಘಿಸುವ ಬದಲಾಗಿ ಮೋದಿಜಿಯನ್ನೂ ವಿಫಲತೆಯನ್ನೂ ಹಂಗಿಸುವುದರಲ್ಲಿ ನಿರತರಾಗಿದ್ದರು. ಈ ಬಾರಿಯೂ ವಿರೋಧ ಪಕ್ಷದ ನಾಯಕರು ಲಸಿಕೆಯ ಕುರಿತಾದ ಅಪನಂಬಿಕೆಯ ಮಾತುಗಳನ್ನು ಆಡುತ್ತಾ ವಿಜ್ಞಾನಿಗಳನ್ನೂ, ವೈದ್ಯರನ್ನೂ ಅಪಮಾನಿಸುತ್ತಿದ್ದಾರೆ. ವಿರೋಧ ಪಕ್ಷವು ಪ್ರಜಾ ಪ್ರಭುತ್ವದಲ್ಲಿ ಪ್ರಾಮುಖ್ಯತೆಯನ್ನು ಹೊಂದಿದೆ. ಆಡಳಿತ ಪಕ್ಷವು ತಪ್ಪು ಮಾಡಿದಾಗ ವಿರೋಧ ಪಕ್ಷವು ಎಚ್ಚರಿಸುವ ಕೆಲಸವನ್ನು ಮಾಡಬಕು ನಿಜ. ಆದರೆ ವಿರೋಧಿಸುವ ಭರದಲ್ಲಿ ದೇಶದ ಹೆಮ್ಮೆಯ ವಿಜ್ಞಾನಿಗಳನ್ನು, ಯೋಧರನ್ನು, ವೈದ್ಯರನ್ನು ಅಪಮಾನಿಸುವುದು ಎಷ್ಟರ ಮಟ್ಟಿಗೆ ಸರಿ? ವಿರೋಧ ಪಕ್ಷದಲ್ಲಿದ್ದಾಗಲೂ ಇಂದಿರಾಗಾಂಧಿ ತೆಗೆದುಕೊಂಡ ಉತ್ತಮ ನಿರ್ಧಾರಗಳನ್ನು ಬೆಂಬಲಿಸಿ ಆಕೆಯನ್ನು ದುರ್ಗೆ ಎಂದು ಕರೆದಿದ್ದ ಅಟಲ್ ಬಿಹಾರಿ ವಾಜಪೇಯಿ, ವಿರೋಧ ಪಕ್ಷದಲ್ಲಿದ್ದರೂ ದೇಶದ ಪ್ರಧಾನಿಯನ್ನು ಪಾಕಿಸ್ತಾನದ ಪ್ರಧಾನಿ ಅಪಮಾನಿಸಿದಾಗ ಸಿಡಿದೆದ್ದಿದ್ದ ಮೋದಿಜಿಯಂತಹಾ ಸರಳ ಸಜ್ಜನ ರಾಜಕಾರಣಿಗಳ ದೇಶದಲ್ಲಿ, ಆಡಳಿತ ಪಕ್ಷವನ್ನು ವಿರೋಧಿಸಬೇಕೆನ್ನುವ ಕಾರಣಕ್ಕೆ ದೇಶದ ಹೆಮ್ಮೆಯನ್ನೇ ಅಪಮಾನಿಸುವ ರಾಜಕಾರಣಿಗಳು ನಾಯಕರಾಗುತ್ತಿರುವುದು ದುರಂತವಲ್ಲವೇ?
ರಾಜಕೀಯಕ್ಕೂ ಪಾವಿತ್ರತೆಯಿದೆ. ಮೋದಿಜಿಯವರ ಹೆಚ್ಚುತ್ತಿರುವ ಜನಪ್ರಿಯತೆಯಿಂದ ಅಸೂಯೆ ಪಡುತ್ತಿರುವ ಅಪ್ರಬುದ್ಧ ನಾಯಕರು, ವಿವೇಕ ಶೂನ್ಯರಂತೆ ನಡೆದುಕೊಳ್ಳುತ್ತಾ, ದಿನಕ್ಕೊಂದರಂತೆ ಬಾಲಿಶ ಹೇಳಿಕೆಗಳನ್ನೂ ನೀಡುತ್ತಾ ರಾಜಕೀಯ ಧರ್ಮಕ್ಕೆ ಅಪಮಾನ ಮಾಡುತ್ತಿದ್ದಾರೆ. ವಿರೋಧವಿರಲಿ ಆದರೆ ಅದು ಸೈದ್ಧಾಂತಿಕವಾಗಿರಲಿ, ದೇಶದ ಹೆಮ್ಮೆಯನ್ನು ಹೆಚ್ಚಿಸಲು ಅವಿರತವಾಗಿ ಶ್ರಮಿಸುವ ವಿಜ್ಞಾನಿಗಳನ್ನು, ಯೋಧರನ್ನು ಅಪಮಾನಿಸುವ, ಅನುಮಾನಿಸುವಷ್ಟು ಕೀಳು ಮಟ್ಟದ ವಿರೋಧಗಳಿಂದ ರಾಜಕೀಯದ ಪಾವಿತ್ರತೆಗೂ ಧಕ್ಕೆ ತರುವ ರಾಜಕಾರಣಿಗಳು ತಮ್ಮ ಕುರಿತಾಗಿ ಆತ್ಮ ವಿಮರ್ಶೆ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ನಮಗನಿಸುತ್ತದೆ.. ನಿಮಗನಿಸುವುದಿಲ್ಲವೇ?
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.