ಬೆಳ್ತಂಗಡಿ : ಬಾಹ್ಯ ಶುದ್ಧತೆಗಿಂತ ಅಂತರಂಗ ಶುದ್ದತೆ ಇದ್ದರೆ ಮಾತ್ರ ಸೌಹಾರ್ದತೆ ಮೂಡಲು ಸಾಧ್ಯ ಎಂದು ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಲಾರೆನ್ಸ್ ಮುಕ್ಕುಯಿ ಹೇಳಿದರು. ಅವರು ಗುರುವಾರ ಹಳೆಕೋಟೆ ವಾಣಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಗಣದಲ್ಲಿ ಸೌಹಾರ್ದ ವೇದಿಕೆ ಬೆಳ್ತಂಗಡಿ ತಾಲೂಕು ವತಿಯಿಂದ ನಡೆದ ಸ್ವಚ್ಛ ಭಾರತ- ಸೌಹಾರ್ದ ಭಾರತ ಎಂಬ ತಾಲೂಕು ಮಟ್ಟದ ಪ್ರೌಢಶಾಲಾ ಮಕ್ಕಳ ಭಾಷಣ ಸ್ಪರ್ಧೆಯ ಸಮಾರೋಪದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಮ್ಮ ದೇಶದಲ್ಲಿ ಆಚರಣೆ, ಭಾಷೆಗಳಲ್ಲಿ ವಿಭಿನ್ನತೆ ಇದ್ದರೂ ಪರಸ್ಪರ ಗೌರವಿಸುವ ಪರಂಪರೆ ಅನಾದಿಕಾಲದಿಂದಲೂ ಇದೆ. ಆದರೆ ಈ ಪರಂಪರೆಯನ್ನು ಕಲುಷಿತಗೊಳಿಸುವ ಕಾರ್ಯ ನಡೆಯುತ್ತಿದೆ. ಸೌಹಾರ್ದತೆಯ ಮನೋಭಾವವನ್ನು ಮುಂದುವರಿಸಿಕೊಂಡು ಹೋಗಬೇಕು. ಪ್ರತಿ ಮಕ್ಕಳಲ್ಲಿ ಪ್ರತಿಭೆ ಇದ್ದೇ ಇದೆ. ಮಕ್ಕಳ ವ್ಯಕ್ತಿತ್ವ ವಿಕಸನವಾದಾಗ ಶ್ರೇಷ್ಠ ನಾಗರಿಕರಾಗಲು ಸಾಧ್ಯ. ಯುವ ಪೀಳಿಗೆ ಎಚ್ಚೆತ್ತುಕೊಳ್ಳಬೇಕು ಎಂಬ ದೃಷ್ಟಿಯಿಂದ ಸೌಹಾರ್ದ ವೇದಿಕೆ ಇಂತಹ ಕಾರ್ಯಕ್ರಮನ್ನು ಹಮ್ಮಿಕೊಂಡಿದೆ ಎಂದರು.
ಶಿಕ್ಷಣ ತಜ್ಞರಾದ ರಘುನಾಥ ರೈ, ನಾವುಜಿರೆ, ವೀರೇಶ್ವರ ಫಡ್ಕೆ ತೀರ್ಪುಗಾರರಾಗಿದ್ದರು. ವೇದಿಕೆಯಲ್ಲಿ ವಾಣಿ ಕಾಲೇಜಿನ ಪ್ರಾಚಾರ್ಯ ಯದುಪತಿ ಗೌಡ, ವಾಣಿ ಆಂಗ್ಲ ಮಾಧ್ಯಮ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಲಕ್ಷ್ಮೀನಾರಾಯಣ, ವೇದಿಕೆಯ ಸದಸ್ಯ ಭೋಜರಾಜ ಪಡಂಗಡಿ ಉಪಸ್ಥಿತರಿದ್ದರು. ಫಾ|ಬಿನೋಯ್ ಜೋಸೆಫ್ ಸ್ವಾಗತಿಸಿದರು. ವೇದಿಕೆಯ ಕಾರ್ಯದರ್ಶಿ ವಿಠಲ ಶೆಟ್ಟಿ ವಿಜೇತರ ಹೆಸರುಗಳನ್ನು ಪ್ರಕಟಿಸಿದರು. ಸದಸ್ಯ ಸೆಬಾಸ್ಟಿನ್ ಮುಂಡಾಜೆ ವಂದಿಸಿದರು. ಶಿಕ್ಷಕ ಲಕ್ಷ್ಮಣ ಗೌಡ ಕಾರ್ಯಕ್ರಮ ನಿರ್ವಹಿಸಿದರು.
ತಾಲೂಕಿನ 12 ಪ್ರೌಢಶಾಲೆಗಳಿಂದ 22 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಸ್ಡಿಎಂ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದ ವಿದ್ಯಾರ್ಥಿನಿ ಪೂರ್ಣಿಮಾ(ಪ್ರಥಮ); ವಾಣಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಜಿತಿನ್ (ದ್ವಿತೀಯ); ಎಸ್ಡಿಎಂ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಶ್ರದ್ದಾ ಹಾಗೂ ಎಸ್ಡಿಎಂ ಪ್ರೌಢಶಾಲೆ ಬೆಳ್ತಂಗಡಿ ವಿದ್ಯಾರ್ಥಿನಿ ಅನನ್ಯ(ತೃತೀಯ)
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.