ಶಿರಸಿ: ಪ್ರಭು ಶ್ರೀರಾಮನ ಜನ್ಮಸ್ಥಾನವಾದ ಅಯೋಧ್ಯೆಯಲ್ಲಿ ರಾಮಮಂದಿರದ ನಿರ್ಮಾಣದ ಕಾರ್ಯ ಎಂದರೆ ಅದು ದೇಶದ ಸ್ವಾಭಿಮಾನವನ್ನು ಮತ್ತೆ ಕಟ್ಟಿ ನಿಲ್ಲಿಸಿದಂತೆ. ಅನೇಕ ಶತಮಾನಗಳ ಹೋರಾಟದ ಈ ಕಾರ್ಯಕ್ಕೆ ಪೂರ್ಣವಿರಾಮ ನೀಡುವ ಕೆಲಸ ಇದಾಗಿದೆ ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ನುಡಿದರು.
ಅವರು ಸೋಮವಾರ ಶ್ರೀಸ್ವರ್ಣವಲ್ಲೀಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಸಮಸ್ತ ದೇಶವಾಸಿಗಳ ಅರಾಧ್ಯ ದೈವವಾಗಿರುವ ಶ್ರೀರಾಮನ ರಾಮಧಾಮ ನಿರ್ಮಿಸಲು ಜನರ ಸಹಭಾಗಿತ್ವ ಅತ್ಯಗತ್ಯವಾಗಿದೆ. ರಾಮಂದಿರದ ಪುನರ್ ನಿರ್ಮಾಣಕ್ಕೆ ಜನರನ್ನು ಬೆಸೆಯುವ ಕೆಲಸ ಆಗಬೇಕಿದೆ. ಆ ಹಿನ್ನಲೆಯಲ್ಲಿ ಜ. 15 ರಿಂದ 20 ದಿನಗಳ ಕಾಲ ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ ನಡೆಯುತ್ತಿದೆ. ಈ ಅಭಿಯಾನದಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕು ಎಂದು ಅವರು ನುಡಿದರು.
ವಿಶ್ವ ಹಿಂದೂ ಪರಿಷತ್ ನ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ ಮಾತನಾಡಿ, ರಾಮ ಮಂದಿರ ಎಲ್ಲ ರಾಮಭಕ್ತರು ತೊಡಗಿಕೊಂಡು ಮಾಡುವ ಕಾರ್ಯವಾಗಿದ್ದು, ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನೇತೃತ್ವದಲ್ಲಿ ವಿಶ್ವ ಹಿಂದೂ ಪರಿಷತ್ ಇದರ ಮುಂದಾಳತ್ವವನ್ನು ವಹಿಸಿದೆ. ಸಂಘ ಪರಿವಾರದ ಕಾರ್ಯಕರ್ತರು ಈ ನಿಧಿ ಸಮರ್ಪಣಾ ಅಭಿಯಾನವನ್ನು ಗ್ರಾಮ ಗ್ರಾಮದ ಮನೆಗಳಿಗೆ ತಲುಪಿಸಲಿದ್ದಾರೆ ಎಂದರು.
5 ಕಾರ್ಯಕರ್ತರನ್ನು ಒಳಗೊಂಡ ತಂಡ ಈ ನಿಧಿ ಸಮರ್ಪಣಾ ಅಭಿಯಾನದಲ್ಲಿ ಇರುತ್ತದೆ. ಸಂಗ್ರಹಿತ ಮೊತ್ತವನ್ನು 48 ಗಂಟೆಯೊಳಗೆ ತೀರ್ಥಕ್ಷೇತ್ರ ಟ್ರಸ್ಟ್ ನ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ತನ್ನ ತಂಡದಲ್ಲಿ ಸಂಗ್ರಹವಾದ ಹಣವನ್ನು ಜಮಾ ಮಾಡುವ ಪ್ರತಿ ಕಾರ್ಯಕರ್ತರಿಗೆ ಹತ್ತಿರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಥವಾ ಬ್ಯಾಂಕ್ ಆಫ್ ಬರೋಡಾ ಅಥವಾ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ನೋಂದಣಿ ಸಂಖ್ಯೆ ನೀಡಲಾಗುತ್ತದೆ. ಹಣ ಸಂಗ್ರಹಣೆ, ಖಾತೆಗೆ ಪಾವತಿಸುವಲ್ಲಿ ವ್ಯವಸ್ಥೆಯು ಸಂಪೂರ್ಣ ಪಾರದರ್ಶಕವಾಗಿರುತ್ತದೆ. ಸಾರ್ವಜನಿಕರು ಮಂದಿರ ನಿರ್ಮಿಸಲು ತಮ್ಮದೇ ಆದ ಸಹಕಾರ ನೀಡುವಂತೆ ಕೋರಿದರು.
ದೇಶದಲ್ಲಿ 4 ಲಕ್ಷ ಹಳ್ಳಿಗಳನ್ನು, 11 ಕೋಟಿ ಕುಟುಂಬಗಳನ್ನು ತಲುಪಲಿದ್ದಾರೆ. ಕರ್ನಾಟಕ ರಾಜ್ಯದಲ್ಲಿ 27,500 ಹಳ್ಳಿಗಳನ್ನು, ಸುಮಾರು 90 ಲಕ್ಷ ರಾಮಭಕ್ತರನ್ನು ತಲುಪುವ, ಹಾಗೂ ರಾಮಮಂದಿರಕ್ಕೆ ಧನ ಸಂಗ್ರಹಿಸುವ ಯೋಜನೆಯನ್ನು ವಿಹಿಂಪ ಹಾಕಿಕೊಂಡಿದೆ.
ರೂ 10/-, ರೂ100/-, ರೂ 1000/- ದ ಮುದ್ರಿತ ಕೂಪನ್ ಗಳ ಸಹಾಯದಿಂದ ಧನಸಂಗ್ರಹ ನಡೆಯಲಿದೆ. ಇನ್ನು ರೂ. 2000/- ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತ ಅರ್ಪಿಸಿದ ಭಕ್ತರಿಗೆ ರಶೀದಿ ನೀಡಲಾಗುವುದು ಹಾಗೂ ಈ ಭಕ್ತರು ಭಾರತೀಯ ಆದಾಯ ತೆರಿಗೆ ಕಾಯ್ದೆಯ 80ಜಿ ಸೆಕ್ಷನ್ ಅಡಿಯಲ್ಲಿ ತೆರಿಗೆ ವಿನಾಯತಿಯ ಸೌಲಭ್ಯ ಪಡೆಯಬಹುದಾಗಿದೆ.
ಲಾರ್ಸನ್ ಅಂಡ್ ಟುಬ್ರೋ ಸಂಸ್ಥೆ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಮಂದಿರ ನಿರ್ಮಾಣ ಕಾರ್ಯಕ್ಕೆ ತನ್ನ ಅಭಿಯಂತರರನ್ನು ನಿಯೋಜಿಸಲಿದೆ. ಐಐಟಿ ಮುಂಬೈ, ಐಐಟಿ ದೆಹಲಿ, ಐಐಟಿ ಚೆನ್ನೈ , ಐಐಟಿ ಗುವಹಾಟಿ, ಸಿ ಬಿ ಆರ್ ಐ ರೂರ್ಕಿ ಹಾಗೂ ಲಾರ್ಸನ್ ಅಂಡ್ ಟುಬ್ರೋ ಸಂಸ್ಥೆ ಮಂದಿರದ ಅಡಿಪಾಯದ ನೀಲನಕ್ಷೆಯ ಕೆಲಸದಲ್ಲಿ ಈಗಾಗಲೇ ತೊಡಗಿದ್ದಾರೆ.
ಸಂಪೂರ್ಣ ಮಂದಿರ ಕಲ್ಲಿನ ಬ್ಲಾಕ್ ಗಳ ಸಹಾಯದಿಂದ ನಿರ್ಮಿತವಾಗಲಿದೆ. ಮಂದಿರದ ವಿಸ್ತೀರ್ಣ 2.7 ಎಕರೆ. 54,000 ಚದರ ಅಡಿಯ ಜಾಗದಲ್ಲಿ ಮಂದಿರ ನಿರ್ಮಾಣಗೊಳ್ಳಲಿದೆ. 360 ಅಡಿ ಉದ್ದ ಹಾಗೂ 235 ಅಡಿ ಅಗಲದ ಮಂದಿರದಲ್ಲಿ ಮೂರು ಅಂತಸ್ತು ಹಾಗೂ 5 ಮಂಟಪಗಳಿರುತ್ತವೆ. ನೆಲಮಾಳಿಗೆಯಲ್ಲಿ 160 ಕಂಬಗಳು, ಮೊದಲನೆಯ ಮಹಡಿಯಲ್ಲಿ 132 ಕಂಬಗಳು, ಎರಡನೆಯ ಮಹಡಿಯಲ್ಲಿ 74 ಕಂಬಗಳಿರುತ್ತವೆ.
ಮಂದಿರ ನಿರ್ಮಾಣದ ಜೊತೆಗೆ ಅಂತಾರಾಷ್ಟ್ರೀಯ ದರ್ಜೆಯ ಗ್ರಂಥಾಲಯ, ದಾಖಲಾತಿಗಳ ಭಂಡಾರ, ವಸ್ತು ಸಂಗ್ರಹಾಲಯ, ಸಂಶೋಧನಾ ಕೇಂದ್ರ, ಯಜ್ಞಶಾಲೆ, ವೇದ ಪಾಠಶಾಲೆ, ಸತ್ಸಂಗ ಭವನ, ಪ್ರಸಾದ ವಿನಿಯೋಗ ಸ್ಥಳ, ಧರ್ಮಶಾಲೆ, ಪ್ರದರ್ಶನಾಲಯ ಸೇರಿದಂತೆ ಹಲವು ಸೌಲಭ್ಯಗಳು ಮಂದಿರದ ಆವರಣದಲ್ಲಿ ನಿರ್ಮಾಣವಾಗಲಿವೆ.
ಕಾರ್ಯಕ್ರಮದಲ್ಲಿ ವಿಶ್ವಹಿಂದು ಪರಿಷತ್ ಕರ್ನಾಟಕ ಉತ್ತರ ಪ್ರಾಂತ ಉಪಾಧ್ಯಕ್ಷ ಗಂಗಾಧರ ಹೆಗಡೆ, ಅಭಿಯಾನದ ಶಿರಸಿ ವಿಭಾಗ ಪ್ರಮುಖ ದಿನೇಶ ಕುಮಾರ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಾಮರಸ್ಯ ಪ್ರಮುಖ ಸೀತಾರಾಮ ಭಟ್ಟ ಕೆರೇಕೈ, ಶ್ರೀಕಾಂತ ಅಗಸಾಲ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.