ಭಾರತದ ಮೊದಲ ಮಹಿಳಾ ಶಿಕ್ಷಕಿ ಎಂದು ಜನಪ್ರಿಯತೆ ಗಳಿಸಿದ ಸಾವಿತ್ರಿ ಬಾಯಿ ಪುಲೆ ಅವರು ಪ್ರಸ್ತುತ ಸಮಾಜದ ನೂರಾರು ಜನರಿಗೆ ಮಾದರಿ. ಸ್ತ್ರೀವಾದಿ, ಸಮಾಜ ಸುಧಾರಣೆಯ ಆಶಯದ ಜೊತೆಗೆ ಕಾಯಕ ಮಾಡಿದವರು. ಸಮಾಜದ ಣಹಾ ಪಿಡುಗಾದ ‘ಜಾತಿ ವ್ಯವಸ್ಥೆ’ ಯನ್ನು ಬುಡಸಮೇತ ಕಿತ್ತು ಹಾಕಬೇಕು ಎಂಬ ಸದಾಶಯದಿಂದ ಕೆಲಸ ಮಾಡಿದವರು. ಮಹಿಳೆ ಹೇಗೆ ಸಾಧನೆ ಮಾಡಬಹುದು ಎಂಬುದಕ್ಕೆ ಸ್ಪಷ್ಟ ಉದಾಹರಣೆಯಾಗಿ ನಿಂತವರು ಸಾವಿತ್ರಿ ಬಾಯಿ ಪುಲೆ. ದೇಶದ ಮೊದಲ ಮಹಿಳಾ ಶಿಕ್ಷಕಿಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸುತ್ತಾ..
ಹಲವು ವರ್ಷಗಳ ಹಿಂದೆ ಸಮಾಜದ ಮೇಲ್ಸ್ತರದಲ್ಲಿ ಗುರುತಿಸಿಕೊಂಡವರಿಗೆ, ಮೇಲ್ವರ್ಗದ ಜನರಿಗೆ ಮಾತ್ರವೇ ಶಿಕ್ಷಣ ಪಡೆಯುವ ಅವಕಾಶ ಇತ್ತು ಎಂಬುದಕ್ಕೆ ನಮಗೆ ಇತಿಹಾಸದಲ್ಲಿ ನಿದರ್ಶನಗಳು ಸಿಗುತ್ತವೆ. ಅಂತಹ ಕಾಲಘಟ್ಟದಲ್ಲಿ ಶಿಕ್ಷಣವನ್ನು ತಳವರ್ಗದವರಿಗೆ, ಸಮಾಜದ ಶೋಷಣೆಗೆ ಒಳಗಾದ ವರ್ಗಗಳಿಗೂ ತಲುಪಿಸುವಲ್ಲಿ ಸಾವಿತ್ರಿ ಬಾಯಿ ಪುಲೆ ಅವರು ಹಲವು ಕೆಲಸಗಳನ್ನು ಮಾಡಿದವರು. ಆ ಮೂಲಕ ತಳ ವರ್ಗಗಳಿಗೂ ಶಿಕ್ಷಣದ ನ್ಯಾಯ ದೊರಕಿಸಲು ಪ್ರಯತ್ನ ನಡೆಸಿದವರು ಅವರು. ಸಮಾಜ ಯಾರನ್ನು ಅಸ್ಪೃಶ್ಯತೆಯ ದೃಷ್ಟಿಯಿಂದ ನೋಡುತ್ತಿತ್ತೋ, ಅಂತಹ ಸಮುದಾಯದ ಬಾಲಕಿಯರನ್ನು ಗಮನದಲ್ಲಿಟ್ಟುಕೊಂಡು ಶಾಲೆಯನ್ನು ಹುಟ್ಟುಹಾಕುವ ಮೂಲಕ ಸುಧಾರಣೆಯತ್ತ ಒಂದು ಹೆಜ್ಜೆ ಮುಂದಿರಿಸಿದವರು ಸಾವಿತ್ರಿ ಬಾಯಿ ಪುಲೆ.
ಮೊದಲೇ ಹೇಳಿದಂತೆ ಸಾವಿತ್ರಿ ಬಾಯಿ ಪುಲೆ ಅವರು ಮಹಿಳಾ ಉನ್ನತಿಗಾಗಿ, ಮಹಿಳೆಯರ ಸ್ಥಾನಮಾನವನ್ನು ಮೇಲ್ಸ್ತರಕ್ಕೇರಿಸುವ ಉದ್ದೇಶದೊಂದಿಗೆ ಕೆಲಸ ಮಾಡಿದ ಸಮಾಜ ಸುಧಾರಕಿ. ಅವರು ಮಹಿಳೆಯರು ಸಮಾಜದಲ್ಲಿ ಮುಂದಕ್ಕೆ ಬರಬೇಕಾದರೆ ಅವರ ಶೈಕ್ಷಣಿಕ ವಿಚಾರ, ಅವರ ಆರೋಗ್ಯ ಹೆಚ್ಚು ಪರಿಪೂರ್ಣವಾಗಿ ಇರಬೇಕು ಎಂದು ನಂಬಿದವರು. ಈ ಹಿನ್ನೆಲೆಯಲ್ಲಿ ಆರೋಗ್ಯದ ವಿಚಾರಕ್ಕೆ ಸಂಬಂಧಿಸಿದಂತೆಯೂ ಹಲವಾರು ಸುಧಾರಣಾ ನೀತಿಗಳನ್ನು ತಂದ ಕೀರ್ತಿ ಸಾವಿತ್ರಿ ಬಾಯಿ ಪುಲೆ ಅವರಿಗೆ ಸಲ್ಲುತ್ತದೆ.
ಆ ಕಾಲದಲ್ಲಿ ಸಮಾಜದಲ್ಲಿದ್ದ ಬಾಲ್ಯವಿವಾಹ ಎಂಬ ಪಿಡುಗನ್ನು ನಿರ್ಮೂಲನೆ ಮಾಡಲು, ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಸಾವಿತ್ರಿ ಅವರು ಧ್ವನಿ ಎತ್ತಿದವರು. ಹಾಗೆಯೇ ವಿಧವಾ ಪುನರ್ವಿವಾಹವನ್ನು ಸಹ ಇವರು ಬೆಂಬಲಿಸಿದವರು. ಭಾರತದ ಮಹಿಳೆಯರ ಸ್ಥಾನಮಾನವನ್ನು ಭದ್ರಗೊಳಿಸುವ ಮತ್ತು ಉನ್ನತೀಕರಿಸುವ ನಿಟ್ಟಿನಲ್ಲಿ ಸಾವಿತ್ರಿ ಬಾಯಿ ಪುಲೆ ಅವರು ನೀಡಿದ ಕೊಡುಗೆಯನ್ನು ಮರೆಯುವಂತಿಲ್ಲ. ಅದು ಸದಾ ಚಿರನೂತನವೇ ಸರಿ.
ಸಾವಿತ್ರಿ ಅವರು ಜನಿಸಿದ್ದು ಜ. 3, 1831 ರಂದು ಮಹಾರಾಷ್ಟ್ರದ ನೈಂಗಾವ್ ಎಂಬಲ್ಲಿ. ದೇಶದಲ್ಲಿ ಸಾಮಾನ್ಯ ಜನರಿಗೂ ಶಿಕ್ಷಣ ದೊರೆಯಬೇಕು ಮತ್ತು ಶೋಷಿತ ವರ್ಗಗಳಿಗೂ ಶಿಕ್ಷಣದ ಬೆಳಕು ಹರಿಯುವಂತಾಗಬೇಕು ಎಂಬ ಆಶಯದ ಜೊತೆಗೆ ಶಿಕ್ಷಣ ಕ್ರಾಂತಿ ಮಾಡಲು ಹೊರಟವರು ಈ ಮಹಾತಾಯಿ. ಅದರ ಜೊತೆಗೆ ಗರ್ಭಿಣಿ ವಿಧವೆಯರು ಮತ್ತು ಅತ್ಯಾಚಾರಕ್ಕೆ ಒಳಗಾದವರನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಭದ್ರತೆ ಒದಗಿಸುವ ಸದಾಶಯದ ಜೊತೆಗೆ ಬಲ್ಹತ್ಯಾ ಪ್ರತಿಬಂಧಕ ಗೃಹವನ್ನು ಇವರು ಆರಂಭಿಸಿ, ಅಲ್ಲಿ ಅವರಿಗೆ ರಕ್ಷಣೆ ನೀಡುತ್ತಾರೆ. ಆ ಮೂಲಕ ಶೋಷಣೆಗೆ ಒಳಗಾದ ಮಹಿಳೆಯರಿಗೆ ನೈಜಾರ್ಥದಲ್ಲಿ ರಕ್ಷಣೆ ನೀಡಲು, ಅವರಿಗೆ ಸಾಮಾಜಿಕ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿಯೂ ಸಾವಿತ್ರಿ ಅವರು ದಿಟ್ಟ ಹೆಜ್ಜೆ ಇರಿಸುತ್ತಾರೆ. ಆ ಕಾಲಕ್ಕೆ ಇದೊಂದು ಕ್ರಾಂತಿಯೇ ಸರಿ.
ಸಾವಿತ್ರಿ ಅವರು ಅವರ ಪತಿ ಜ್ಯೋತಿ ಬಾಯಿ ಪುಲೆ ಅವರ ಸಹಕಾರ ಮತ್ತು ಪ್ರೋತ್ಸಾಹದ ಜೊತೆಗೆ ಪ್ರಾಥಮಿಕ ಶಿಕ್ಷಣವನ್ನು ಮನೆಯಲ್ಲಿಯೇ ಮುಗಿಸಿದವರು. ಬಳಿಕ ಏಳನೇ ತರಗತಿಯವರೆಗಿನ ಅಧ್ಯಯನವನ್ನು ಸ್ಕಾಟಿಷ್ ಮಿಷನರಿ ಶಾಲೆಯಲ್ಲಿ, ಆ ಬಳಿಕ ಹೆಚ್ಚಿನ ಶಿಕ್ಷಣವನ್ನು ಸಖರಂ ಯಶ್ವಂತ್ ಪರಂಜಪೆ ಮತ್ತು ಕೇಶವ ಶಿವರಾಂ ಭಾವಲ್ಕರ್ ಅವರಿಂದ ಪಡೆಯುತ್ತಾರೆ. ಆ ಬಳಿಕ ಬೋಧನಾ ಕೋರ್ಸ್ಗಳನ್ನು ಸಹ ಮುಗಿಸಿ ಬಳಿಕ ಜ್ಯೋತಿ ಬಾಯಿ ಪುಲೆ ಅವರ ಮಾರ್ಗದರ್ಶಕ ಸಗುನಾ ಬಾಯ್ ಜೊತೆ ಸೇರಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಆರಂಭಿಸುತ್ತಾರೆ. ಇದಕ್ಕಾಗಿ ತಾತ್ಯಾ ಸಾಹಿಬ್ ಭೀಡೆ ಅವರ ಮನೆಯಲ್ಲಿ ಶೈಕ್ಷಣಿಕ ಕಾರ್ಯಾರಂಭ ಆರಂಭಿಸಿ ವಾಡಾದಲ್ಲಿ ಭೀಡೆ ಶಾಲೆಯನ್ನು ಆರಂಭ ಮಾಡುತ್ತಾರೆ. ಜೊತೆಗೆ 1851 ರ ವೇಳೆಗೆ ಮಹಿಳಾ ಶಿಕ್ಷಣಕ್ಕೆ ಸಂಬಂಧಿಸಿದಂತೆ 3 ಶಾಲೆಗಳನ್ನು ಇವರು ತೆರೆಯುತ್ತಾರೆ. ಈ ಶಾಲೆಗಳಲ್ಲಿ ದಾಖಲೆಯ ಸಂಖ್ಯೆಯಲ್ಲಿ ಮಹಿಳೆಯರು ಶಿಕ್ಷಣ ಪಡೆಯುತ್ತಾರೆ. ಇದು ಸರ್ಕಾರಿ ಶಾಲೆಗಳಿಗಿಂತಲೂ ಹೆಚ್ಚಿನ ಯಶಸ್ಸು ಪಡೆದು, ಶೈಕ್ಷಣಿಕ ಕ್ಷೇತ್ರ ಮತ್ತು ಮಹಿಳಾ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸಾವಿತ್ರಿ ಭಾಯಿ ಪುಲೆ ಅವರಿಗೆ ಅಭೂತಪೂರ್ವ ಯಶಸ್ಸು ಗಳಿಸಿ ಕೊಡುತ್ತದೆ. ಆದರೆ ಆ ಕಾಲದ ಸಮಾಜ ಇವರ ಈ ಸುಧಾರಣಾ ಮನಸ್ಥಿತಿಯನ್ನು ಬೆಂಬಲಿಸಲಿಲ್ಲ. ಹಾಗೆಯೇ ಸ್ವತಃ ಇವರ ಪೋಷಕರಿಂದಲೂ ಇವರ ಈ ಮಹತ್ಕಾರ್ಯಕ್ಕೆ ಯಾವುದೇ ಬೆಂಬಲ ದೊರೆಯಲಿಲ್ಲ ಎಂಬುದು ಬೇಸರದ ಸಂಗತಿ.
ಅದಾದ ಬಳಿಕ ಭಾರತದ ಮೊದಲ ಮಹಿಳಾ ಮುಸ್ಲಿಂ ಶಿಕ್ಷಕಿ ಎಂದು ಖ್ಯಾತಿ ಪಡೆದ ಫಾತಿಮಾ ಬೇಗಂ ಶೇಖ್ ಜೊತೆಗೆ ಕೈಜೋಡಿಸಿ ಫಾತಿಮಾ ಮನೆಯಲ್ಲಿಯೇ ಶಾಲಾರಂಭ ಮಾಡುತ್ತಾರೆ. ಎರಡು ಶೈಕ್ಷಣಿಕ ಟ್ರಸ್ಟ್ಗಳು, ಸ್ಥಳೀಯ ಮಹಿಳಾ ಶಾಲೆ, ಪುಣೆ ಮತ್ತು ಸೊಸೈಟಿ ಫಾರ್ ಪ್ರೊಮೋಟಿಂಗ್ ದಿ ಎಜುಕೇಶನ್ ಆಫ್ ಮಹರ್ಸ್, ಮಾಂಗ್ಸ್ ಹಾಗೂ ಎಟ್ಸೆಟೆರಾಸ್ ಅನ್ನು ಸಹ ತಮ್ಮ ಪತಿಯ ಸಹಕಾರದೊಂದಿಗೆ ಸಾವಿತ್ರಿ ಬಾಯಿ ಪುಲೆ ಆರಂಭಿಸುತ್ತಾರೆ. ಜ್ಯೋತಿ ಬಾಯಿ ಪುಲೆ ಮತ್ತು ಸಾವಿತ್ರಿ ಬಾಯಿ ಪುಲೆ ಅವರು ತಮ್ಮ ಜೀವಿತಾವಧಿಯಲ್ಲಿ 18 ಶಾಲೆಗಳನ್ನು ತೆರೆಯುವ ಮೂಲಕ ಶೈಕ್ಷಣಿಕ ವಿಚಾರದಲ್ಲಿ ಮಹಾ ಸಾಧನೆ ಮೆರೆದಿದ್ದಾರೆ. ಆ ಮೂಲಕ ದೇಶದಲ್ಲಿ ಆ ಕಾಲಘಟ್ಟದಲ್ಲಿಯೇ ಶಿಕ್ಷಣ ಕ್ರಾಂತಿ ಮಾಡಿ ಮಾದರಿಯಾದ ದಂಪತಿಗಳು ಎಂಬುದರಲ್ಲಿಯೂ ಯಾವುದೇ ಸಂದೇಹವಿಲ್ಲ.
ಪುಲೆ ದಂಪತಿಗಳ ಮರಣದ ಬಳಿಕ ಅವರು ಕಟ್ಟಿದ ಶಾಲೆಗಳನ್ನು ಫಾತಿಮಾ ಬೇಗಂ ಶೇಖ್ ಅವರು ನೋಡಿಕೊಳ್ಳುತ್ತಾರೆ. ಸಾವಿತ್ರಿ ಅವರು ಮಹಿಳಾ ಶಿಕ್ಷಣದ ಸುಧಾರಕಿ ಮಾತ್ರವಲ್ಲ. ಬದಲಾಗಿ ಅವರೊಬ್ಬ ಕವಯಿತ್ರಿಯೂ ಹೌದು. ಅವರ ಗೋ, ಗೆಟ್ ಎಜುಕೇಶನ್ ಎಂಬ ಸಾಹಿತ್ಯದಲ್ಲಿ ಕೇವಲ ಶಿಕ್ಷಣ ಒಂದರಿಂದಲೇ ಕೆಳಜಾತಿಯವರ ಮೇಲೆ ಮೇಲ್ಜಾತಿಯವರು ನಡೆಸುವ ದಬ್ಬಾಳಿಕೆ ದಮನ ಮಾಡಲು ಸಾಧ್ಯ ಎಂಬ ಆಶಯವನ್ನು ನಾವು ಕಾಣಬಹುದಾಗಿದೆ. ದಂಪತಿಗಳು ಪ್ಲೇಗ್ ಸಾಂಕ್ರಾಮಿಕ ರೋಗ ಕಾಣಿಸಿಕೊಂಡ ಸಂದರ್ಭದಲ್ಲಿ ರೋಗ ಬಾಧಿತರನ್ನು ನೋಡಿಕೊಳ್ಳುವ ಸಲುವಾಗಿ ಪುಣೆಯ ಸಮೀಪ ಕ್ಲಿನಿಕ್ ಒಂದನ್ನು ತೆರೆಯುತ್ತಾರೆ. ಆ ಬಳಿಕ ಪ್ಲೇಗ್ ಸೋಂಕು ತಗುಲಿ ಸಾವಿತ್ರಿ ಬಾಯಿ ಪುಲೆ ಮತ್ತು ಅವರ ದತ್ತು ಪುತ್ರ ಯಶ್ವಂತ್ ಅವರು ನಿಧನರಾಗುತ್ತಾರೆ. 1897 ರ ಮಾರ್ಚ್ 10 ರಂದು ಮಹಿಳಾ ಸಬಲೀಕರಣ ,ಶಿಕ್ಷಣ ಮತ್ತು ಸಮಾಜ ಸುಧಾರಣೆಯ ದೃಷ್ಟಿಯಿಂದ ಕೆಲಸ ಮಾಡಿದ ಮಾಣಿಕ್ಯ ‘ ಸಾವಿತ್ರಿ ಬಾಯಿ ಪುಲೆ’ ಅವರು ಕಾಯ ಬಿಡುತ್ತಾರೆ. ಆದರೆ ಅವರು ಮಾಡಿದ ಸಮಾಜಸ್ನೇಹಿ ಕಾರ್ಯಗಳು ಇಂದಿಗೂ ಜೀವಂತ, ಮಾದರಿ ಮತ್ತು ಸ್ತುತ್ಯರ್ಹವೇ ಸರಿ.
ಕಾಯವಿಲ್ಲ. ಆದರೆ ಸಾವಿತ್ರಿ ಬಾಯಿ ಪುಲೆ ಅವರು ಮಾಡಿದ ಕೆಲಸಗಳು ಮಾತ್ರ ಇಂದಿಗೂ ಪ್ರಸ್ತುತವಾಗಿವೆ. ಜಾತಿಪದ್ಧತಿ ಎಂಬ ಭೂತ ಹೆಚ್ಚು ಬಲಿಷ್ಠವಾಗಿದ್ದ ಸಂದರ್ಭದಲ್ಲಿಯೇ ಅದರ ವಿರುದ್ಧ ಹೋರಾಡಿದ, ಮಹಿಳಾ ಶಿಕ್ಷಣ, ಆರೋಗ್ಯದ ಮೇಲೆ ಹೆಚ್ಚಿನ ಕಾಳಜಿ ವಹಿಸಿದ ಸಾವಿತ್ರಿ ಅವರು ಇಂದಿನ ಸಮಾಜಕ್ಕೂ ಮಾದರಿಯೇ ಸರಿ. ಅವರ ಹೆಸರಿನಲ್ಲಿ ಆಚರಣೆಯಾಗುತ್ತಿರುವ ರಾಷ್ಟ್ರೀಯ ಶಿಕ್ಷಕರ ದಿನಾಚರಣೆಯೂ ಅರ್ಥಪೂರ್ಣವೇ ಹೌದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.