ನಮ್ಮನ್ನು ನಾವು ಅತಿಯಾದ ಆಧುನಿಕತೆಗೆ ತೆರೆದುಕೊಳ್ಳುವ ಭರದಲ್ಲಿ ನಮ್ಮತನವನ್ನೇ ಮರೆಯುತ್ತಿರುವುದು ಸುಳ್ಳಲ್ಲ. ನಮ್ಮ ದೇಶದ ಐತಿಹಾಸಿಕ ಮತ್ತು ಸಾಂಪ್ರದಾಯಕ ಆಚರಣಗಳೆಲ್ಲವೂ ಮೂಢನಂಬಿಕೆ ಮತ್ತು ಗೊಡ್ಡು ಸಂಪ್ರದಾಯ ಎಂದು ವಿದೇಶೀಯರು ಕಳಿಸಿದ್ದ ಪಾಠವನ್ನೇ ನಾವುಗಳು ಉರು ಹೊಡೆಯುತ್ತಿದ್ದೇವೆ. ನಮ್ಮ ಶ್ರದ್ದೆ ನಂಬಿಕೆ ಮತ್ತು ವಿಶ್ವಾಸಗಳಿಗೆ ಅಜ್ಞಾನ ಮತ್ತು ಗೊಡ್ಡು ಸಂಪ್ರದಾಯ ಎಂಬ ಹಣೆ ಪಟ್ಟಿಯನ್ನು ಹಚ್ಚುವ ಮೂಲಕ ಬ್ರಿಟೀಷರು ನಮ್ಮಲ್ಲಿ ಕೀಳರಿಮೆಯನ್ನು ತುಂಬಿದ್ದರು. ಅವರು ಮೇಲು ನಾವು ಕೀಳು ಎಂಬುದನ್ನು ನಮ್ಮ ಹೃದಯದಲ್ಲಿ ಬಿತ್ತಿ ನಾವು ಮುಂದುವರೆಯದಂತೆ ಮಾಡುವ ಸಂಚು ಅದಾಗಿತ್ತು. ಬ್ರಿಟೀಷರನ್ನು ಹೊಡೆದೋಡಿಸಿ ಅನೇಕ ದಶಕಗಳೇ ಕಳೆದರೂ ನಾವೂ ಇನ್ನೂ ಒಂದು ರೀತಿಯ ಮಾನಸಿಕ ದಾಸ್ಯದಲ್ಲಿ ಬದುಕುತ್ತಿರುವುದು ಸುಳ್ಳಲ್ಲ. ಇಂದಿಗೂ ನಾಮ್ಮ ಮನದಲ್ಲಿ ಅವರ ಆಚರಣೆಗಳು ಶ್ರೇಷ್ಠ, ಅವರಂತೆಯೇ ಅನುಕರಣೆ ಮಾಡಿ ನಡೆದುಕೊಳ್ಳುವುದರಲ್ಲೇ ಶ್ರೇಷ್ಠತನ ಮತ್ತು ಶ್ರೇಯಸ್ಸಿದೆ ಎಂಬ ಭ್ರಮೆಯಲ್ಲಿ ನಾವು ಬದುಕುತ್ತಿದ್ದೇವೆ ಎಂಬುದು ಕೂಡಾ ಅಷ್ಟೇ ಸತ್ಯ.
ಈ ಭ್ರಮೆಗೆ ಇನ್ನೊಂದು ಪ್ರಮುಖವಾದ ಉದಾಹರಣೆಯೇ ಹೊಸವರ್ಷದ ಆಚರಣೆ. ಹೌದು ಖಂಡಿತವಾಗಿಯೂ ಕ್ಯಾಲೆಂಡರ್ ಬದಲಾಗುತ್ತದೆ. 2020 ಕಳೆದು 2021 ಬರುತ್ತಿದೆ. ಲೋಕದಾದ್ಯಂತ ಜನರು ಇದೆ ಕ್ಯಾಲೆಂಡರ್ ಬಳಸುತ್ತಾರೆ ನಾವೂ ಇದನ್ನು ಒಪ್ಪಿಕೊಳ್ಳಬೇಕು. ಎಲ್ಲವೂ ಸರಿ. ಆದರೆ ನಾವು ನಮ್ಮತನವನ್ನು ಮರೆತು ಅದನ್ನೇ ನಮ್ಮತನ ಎಂದುಕೊಳ್ಳುವುದು ತಪ್ಪಲ್ಲವೇ? ಕ್ರಿಸ್ತನ ಜ್ಞಾನಕ್ಕೂ ಮುನ್ನ ನಮ್ಮ ಹಿರಿಯರು ವರುಷಗಳನ್ನು ಗುರುತಿಸುತ್ತಿರಲಿಲ್ಲವೇ? ಖಂಡಿತವಾಗಿಯೂ ಗುರುತಿಸುತ್ತಿದ್ದರು.” ವಿಕ್ರಮ ನಾಮ ಸಂವತ್ಸರ ಶಾಲಿವಾಹನ ಶಕವರ್ಷ” ಬಹುಷಃ ನಮ್ಮಲ್ಲಿ ಬಹುತೇಕರಿಗೆ ಇದರ ಕುರಿತು ತಿಳಿದಿರುವ ಸಾಧ್ಯತೆಗಳು ಅತ್ಯಲ್ಪ .
“ಶಾಲಿವಾಹನ ಶಕೆ” ಸಾಮಾನ್ಯವಾಗಿ ಇದನ್ನು ಭಾರತೀಯರ ಕಾಲಮಾಪನ ಅಥವಾ ಭಾರತೀಯ ಕ್ಯಾಲೆಂಡರ್ ಎಂದೇ ಕರೆಯಲಾಗುತ್ತದೆ. ಶಾಲಿವಾಹನ ಶಕೆಯನ್ನು ಗೌತಮಿ ಪುತ್ರ ಶಾತಕರ್ಣಿ ಪ್ರಾರಂಭಿಸಿದರು ಎನ್ನಲಾಗುತ್ತದೆ. ಇವರ ಕಾಲಮಾನ ಕೃಷ್ಟ ಶಕ 78 ಎನ್ನಲಾಗುತ್ತದೆ. ಶಕೆ ಎಂದರೆ ಐತಿಹಾಸಿಕವಾಗಿ ಪ್ರಮುಖವಾದ ಸಮಯ ಮತ್ತು ಇತಿಹಾಸದ ಸುವರ್ಣ ಅವಧಿ. ಭಾರತವನ್ನಾಳಿದ ಅತ್ಯಂತ ಪ್ರಬಲ ರಾಜವಂಶವಾದ ಶಾತವಾಹನರ ಕಾಲಘಟ್ಟದಲ್ಲಿ ಪ್ರಾರಂಭಿಸಲಾಯಿತು. ರಾಜ ಗೌತಮೀಪುತ್ರ ಸಾತಕರ್ಣಿಯ ಆಳ್ವಿಕೆಯು ಶಾಲಿವಾಹನರ ಸುವರ್ಣ ಅವಧಿಯಾಗಿತ್ತು ಹಾಗೂ ಅನೇಕ ಯುದ್ಧಗಳಲ್ಲಿ ಗೆದ್ದು ವಿಜಯಗಳ ಸರಮಾಲೆಯನ್ನೇ ಹೊತ್ತ ಸುವರ್ಣಾವಧಿಯಾಗಿತ್ತು.
ನಮಗೆ ಅರಿವಿಲ್ಲದಿರುವ ಮತ್ತೊಂದು ವಿಚಾರವೆಂದರೆ ಈ ಶಕೆ ಅಥವಾ ಶಾಲಿವಾಹನ ಶವರ್ಷವನ್ನು ಆಧರಿಸಿ ಕ್ಯಾಲೆಂಡರ್ ಅನ್ನು ಕೂಡಾ ರಚಿಸಲಾಗುತ್ತದೆ. ಈ ಕ್ಯಾಲೆಂಡರ್ ನ ಲೆಕ್ಕಾಚಾರವನ್ನು ಸೂರ್ಯನ ಚಲನೆಗೆ ಅನುಗುಣವಾಗಿ ಲೆಕ್ಕಾಚಾರದೊಂದಿಗೆ ರಚಿಸಲಾಗುತ್ತದೆ. ಸಾಮಾನ್ಯ ಕ್ಯಾಲೆಂಡರ್ ನಂತೆಯೇ 365 ದಿನಗಳು ಮತ್ತು 12 ತಿಂಗಳುಗಳನ್ನೂ ಇದು ಒಳಗೊಂಡಿದೆ. ಚೈತ್ರಮಾಸದ ಸಂಕ್ರಾಂತಿಯಂದು ಪ್ರಾರಂಭಗೊಳ್ಳುವ ಈ ಕ್ಯಾಲೆಂಡರ್ನಲ್ಲಿ ಚೈತ್ರ, ವೈಶಾಖ,ಜೇಷ್ಠ, ಆಷಾಢ,ಶ್ರಾವಣ, ಭದ್ರಾ, ಅಷ್ವಿನ್, ಕಾರ್ತಿಕಾ, ಅಗ್ರಹಾಯಾನ, ಪೌಷಾ, ಮಾಘಾ ಮತ್ತು ಪಾಲ್ಗುನಾ ಹೀಗೆ 12 ಮಾಸಗಳಿವೆ. ಚೈತ್ರಮಾಸವು ಸಾಮಾನ್ಯವಾಗಿ 30 ದಿನಗಳನ್ನು ಹೊಂದಿದ್ದು ಅಧಿಕ ವರ್ಷಗಳಲ್ಲಿ 31 ದಿನಗಳಿರುತ್ತವೆ.
ಕ್ಯಾಲೆಂಡರ್ ಸುಧಾರಣಾ ಸಮಿತಿಯು 1957ರಲ್ಲಿ ಈ ಕ್ಯಾಲೆಂಡರ್ ಅನ್ನು ರಾಷ್ಟ್ರೀಯ ಕ್ಯಾಲೆಂಡರ್ ಎಂದು ಸ್ವೀಕರಿಸಿತು. ಶಕೆಯನ್ನು ಅನುಕರಿಸಿದ ಕ್ಯಾಲೆಂಡರ್ ಸುಧಾರಣಾ ಸಮಿತಿಯ ನೇತೃತ್ವವನ್ನು ಪ್ರಖ್ಯಾತ ಭೌತಶಾಸ್ತ್ರಜ್ಞರಾದ ಡಾ.ಮೇಘನಾದ್ ಅವರು ವಹಿಸಿದ್ದರು. ಶಕೆಯನ್ನು ಅನುಸರಿಸಿರುವ ಈ ಕ್ಯಾಲೆಂಡರ್ ಭಾರತದ ಇತಿಹಾಸದೊಂದಿದೆ ಅತ್ಯಂತ ಗಾಢವಾದ ಸಂಬಂಧವನ್ನು ಹೊಂದಿದ್ದು, ಭಾರತದ ಅನೇಕ ಐತಿಹಾಸಿಕ ಪುಸ್ತಕಗಳು ರಚನೆಗಳು ಮತ್ತು ಶಾಸನಗಳಲ್ಲಿ ಶಾಲಿವಾಹನ ಶಕೆಯನ್ನೇ ಬಳಸಲಾಗುತ್ತಿತ್ತು ಮತ್ತು ಇದು ಮೌರ್ಯರು ಮತ್ತು ಗುಪ್ತರ ಆಳ್ವಿಕೆಯ ಸುವರ್ಣ ಘಟ್ಟದ ಕಥೆಗಳನ್ನು ಸಾರುತ್ತವೆ. ಇಷ್ಟು ಮಾತ್ರವಲ್ಲದೆ ಭಾರತದ ಗಡಿಗಳನ್ನೂ ದಾಟಿ ಆಗ್ನೇಯ ಏಷ್ಯಾದ ಜಾವಾ, ಬಾಲಿ ಮತ್ತು ಇಂಡೋನೇಷ್ಯಾದ ಹಿಂದೂಗಳು ಇದನ್ನು ಬಳಸುತ್ತಿದ್ದರೂ. ನಮ್ಮಲ್ಲೇ ಅನೇಕರಿಗೆ ಇದರ ಬಗ್ಗೆ ಅರಿವಿಲ್ಲದಿರುವುದು ಖೇದಕರ ವಿಚಾರ.
ನಮಗೆ ಅರಿಯದೆ ಇರುವ ಇನ್ನೊಂದು ವಿಚಾರವೆಂದರೆ ಮಹಾರಾಷ್ಟ್ರ , ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಭಿನ್ನವಾದ ಶಕೆಯಾ ಕ್ಯಾಲೆಂಡರ್ ಅನ್ನು ಉಪಯೋಗಿಸಲಾಗುತ್ತಿದ್ದು ಅದರಲ್ಲಿ 1943 ಇಸವಿಯು 2021ರ ಏಪ್ರಿಲ್ 13ರಿಂದ ಪ್ರಾರಂಭವಾಗುತ್ತದೆ. ಉತ್ತರ ಭಾರತದಲ್ಲಿ ಸಾಂಪ್ರದಾಯಕ ಹಿಂದೂ ಹೊಸವರ್ಷವು ಚೈತ್ರ ಶುಕ್ಲ ಪ್ರತಿಪಾದದಂದು ಪ್ರಾರಂಭವಾತ್ತದೆ ಮತ್ತು ಈ ವಿಧಾನವನ್ನು ವಿಕ್ರಮ ನಾಮ ಸಂವತ್ಸರ ಎಂದು ಕರೆಯಲಾಗುತ್ತಿದ್ದು, 2021 ಇಸವಿಯು ವಿಕ್ರಮ ನಾಮ ಸಂವತ್ಸರದ ಪ್ರಕಾರ 2078ನೇ ವರ್ಷವಾಗಿದೆ. ಗುಜರಾತ್ ನಲ್ಲಿ ದೀಪಾವಳಿಯ ಮರುದಿನವನ್ನು ಹೊಸ ವರ್ಷವನ್ನಾಗಿ ಆಚರಿಸುವ ಸಂಪ್ರದಾಯವಿದೆ. ಕರ್ನಾಟದಲ್ಲಿ ನಾವು ಯುಗಾದಿಯಂದು ಆದರದಿಂದ ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತೇವೆ.
ಬೇವು ಮತ್ತು ಬೆಲ್ಲವನ್ನು ಸೇವಿಸಿ ಹೊಸ ವರ್ಷವನ್ನು ಸಡಗರದಿಂದಲೂ ಸಂಭ್ರಮದಿಂದಲೂ ಬರಮಾಡಿಕೊಳ್ಳುವುದಲ್ಲವೇ ನಮ್ಮ ಸಂಪ್ರದಾಯ. ವಾತಾವರಣದಲ್ಲಿ ಅದು ಹಲವಾರು ಬದಲಾವಣೆಗೆ ಪ್ರಕೃತಿಯು ತನ್ನನ್ನು ತಾನು ತೆರೆದುಕೊಳ್ಳುವ ಸಮಯವದು. ಚಳಿಗಾಲದಲ್ಲಿ ಹಣ್ಣೆಲೆಗಳು ಉದುರಿ ಬರಡಾಗಿದ್ದ ಮರದಲ್ಲಿ ಹೊಸ ಚಿಗುರುಗಳು ಮೂಡಿ ಸಂಪೂರ್ಣ ಪ್ರಕೃತಿಯೇ ತಿಳಿ ಹಸಿರು ಸೀರೆ ಹೊದ್ದು ನಿಂತಿರುವುದನ್ನು ನೋಡುವುದೇ ಒಂದು ಸೊಗಸು. ಹಳೆಯದಾದದ್ದು ಇಲ್ಲದಾದಾಗ ಅತಿಯಾಗಿ ದುಃಖಿಸಬಾರದು ಅದರ ಹಿಂದೆ ಹೊಸ ಚಿಗುರು ಮೂಡಿ ಸಂತಸವನ್ನು ತರುತ್ತದೆ, ದುಃಖದ ಹಿಂದೆ ಸುಖವಿದೆ ಎಂದು ಪ್ರಕೃತಿಯು ತಿಳಿ ಹೇಳುತ್ತಲೇ ಕಷ್ಟವು ಕಹಿ ಮತ್ತು ಸುಖವು ಸಿಹಿ ಎಂದು ಭ್ರಮಿಸಿ ಬದುಕುವ ನಮಗೆ ಜೀವನದ ಕಹಿ ಮತ್ತು ಸಿಹಿಗಳೆರಡನ್ನೂ ಸಮನಾಗಿ ಸ್ವೀಕರಿಸಿ ಎಂದು ಹಿರಿಯರು ಬೇವು ಮತ್ತು ಬೆಲ್ಲವನ್ನು ನೀಡಿ ಆಶೀರ್ವದಿಸುವ ಸುಂದರ ದಿನವದು. ಬೆಳಗ್ಗೆ ಮೂಡುವ ಸೂರ್ಯನು ಹೇಗೆ ಕತ್ತಲನ್ನು ಸರಿಸಿ ಬೆಳಕನ್ನು ತರುತ್ತಾನೋ ಅಂತೆಯೇ ಬೆಳಗಿನ ಕಿರಣಗಳೊಂದಿಗೆ ಹೊಸ ವರುಷವನ್ನೂ ಹೊಸ ಆಶಯಗಳನ್ನೂ ಕನಸುಗಳನ್ನೂ ಹುರುಪನ್ನೂ ತರುತ್ತಾನೆ. ಹಬ್ಬಗಳನ್ನು ಆಚರಣೆಗಳ ಮಹತ್ವವನ್ನು ಆಚರಿಸಿದಾಗ ಇನ್ನಷ್ಟು ಸಂಭ್ರಮ ಮತ್ತು ಸಂತೋಷ ಜೊತೆಗೂಡುತ್ತದೆ. ಇನ್ನೊಂದು ಸಂಪ್ರದಾಯದಲ್ಲಿರುವ ಉತ್ತಮವಾದ ವಿಚಾರಗಳನ್ನು ಅರಿಯುವುದು ತಪ್ಪಲ್ಲ. ಆದರೆ ನಮ್ಮ ಸಂಪ್ರದಾಯವನ್ನು ಮೊದಲು ಅರಿಯೋಣ. ಅತಿಯಾದ ಅನುಕರಣೆ ಮತ್ತು ನಮ್ಮದೆಲ್ಲವೂ ತಪ್ಪು ಮತ್ತು ಪಾಶ್ಚಾತ್ಯರು ನೀಡಿದ್ದೆಲ್ಲವೂ ಸರಿ ಎಂಬ ಭ್ರಮೆಯಿಂದ ಹೊರಬಂದು, ಬೌದ್ಧಿಕವಾಗಿಯೂ ಆತ್ಮನಿರ್ಭರ ಭಾರತವನ್ನು ನಿರ್ಮಿಸೋಣ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.