ಕಲ್ಬುರ್ಗಿ: ನಗರದಲ್ಲಿ ಆರಂಭವಾಗಿರುವ ಶ್ರೀ ಮಾಧವ ಗೋ ಶಾಲೆಗೆ ISO 9001-2015 ಪ್ರಮಾಣ ಪತ್ರ ದೊರೆತಿದೆ. ಆ ಮೂಲಕ ಐಎಸ್ಒ ಪ್ರಮಾಣ ಪತ್ರ ಪಡೆದ ರಾಜ್ಯದ ಎರಡನೇ ಗೋಶಾಲೆ ಎಂಬ ಕೀರ್ತಿಗೆ ಭಾಜನವಾಗಿದೆ.
ಈ ಗೋಶಾಲೆ ಉದ್ಯೋಗ, ವಿಷಮುಕ್ತ ಅನ್ನ, ಸ್ವಾವಲಂಬನೆಯ ಪರಿಕಲ್ಪನೆಯಲ್ಲಿ ಆರಂಭವಾಗಿದೆ. ಗೋವುಗಳಿಗೆ ಗುಣಮಟ್ಟದ ಚಿಕಿತ್ಸೆ, ಸ್ವಚ್ಛತೆ, ಆರೈಕೆ, ದೇಸೀ ಗೋ ತಳಿ ಅಭಿವೃದ್ಧಿ, ಪಂಚಗವ್ಯ ಉತ್ಪನ್ನಗಳಲ್ಲಿ ಅಚ್ಚುಕಟ್ಟುತನ, ಸಮರ್ಥ ನಿರ್ವಹಣೆ ಮೊದಲಾದ ವಿಚಾರಗಳ ಬಗ್ಗೆ ಮೌಲ್ಯಮಾಪನ ನಡೆಸಿರುವ ಅಂತರರಾಷ್ಟ್ರೀಯ ಪ್ರಮಾಣೀಕರಣ ಸಂಸ್ಥೆ ಈ ಪ್ರಮಾಣ ಪತ್ರ ನೀಡಿದೆ ಎಂದು ಗೋಶಾಲೆಯ ಮಹೇಶ ಬೀದರಕರ ಅವರು ತಿಳಿಸಿದ್ದಾರೆ.
ಈ ಗೋ ಶಾಲೆಗೆ 20121 ರ ಜ. 14 ಕ್ಕೆ ನಾಲ್ಕು ವರ್ಷ ತುಂಬಲಿದೆ. ಬೀಡಾಡಿ ದನಗಳಿಗೆ ಚಿಕಿತ್ಸೆ ನೀಡುತ್ತಿದ್ದ ಮಹೇಶ್ ಮತ್ತು ಅವರ ಸಂಗಡಿಗರು ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳನ್ನು ಪೊಲೀಸರ ಜೊತೆ ಸೇರಿ ರಕ್ಷಿಸುತ್ತಿದ್ದರು. ಆದರೆ ಬೀಡಾಡಿ ಗೋವುಗಳನ್ನು ಇರಿಸಲು ಗೋಶಾಲೆ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಈ ಗೋಶಾಲೆ ಯನ್ನು ಆರಂಭ ಮಾಡಲಾಗಿದೆ. ಗೋವಿನ ಮಹತ್ವ ತಿಳಿಸಿಕೊಡುವ ಹಿನ್ನೆಲೆಯಲ್ಲಿ ಗೋ ಶಾಲೆ ಆರಂಭ ಮಾಡಿರುವುದಾಗಿ ಮಹೇಶ್ ತಿಳಿಸಿದ್ದಾರೆ.
ಈ ಗೋಶಾಲೆಯಲ್ಲಿ ಗೊಡ್ಡು ಹಸುಗಳನ್ನು ಸಹ ಆರೈಕೆ ಮಾಡಲಾಗುತ್ತಿದೆ. ಮಹಾರಾಷ್ಟ್ರದ ದೇವಲಾಪುರದಲ್ಲಿರುವ ಗೋಶಾಲೆ ಯವರು ಗೋ ಮೂತ್ರ ಮತ್ತು ಗೋ ಆಧಾರಿತ ಉತ್ಪನ್ನಗಳ ಮೇಲೆ ಆರು ಪೇಟೆಂಟ್ ಸಹ ಪಡೆದುಕೊಂಡಿದ್ದಾರೆ. ಇಲ್ಲಿ ಉತ್ಕೃಷ್ಟ ಗುಣಮಟ್ಟದ ದೇಶೀಯ ಎರೆಹುಳು ಗೊಬ್ಬರವನ್ನು ಸಹ ತಯಾರಿಸಲಾಗುತ್ತದೆ. ಹಾಲು ಕೊಡುವ ದನಗಳ ಜೊತೆಗೆ, ಹಾಲು ಕೊಡದ ಹಸುಗಳಿಗೂ ಈ ಗೋಶಾಲೆಯಲ್ಲಿ ಆರೈಕೆ ನಡೆಯುತ್ತಿದೆ. ಅದರೊಂದಿಗೆ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಗೋವುಗಳನ್ನು ಉಚಿತವಾಗಿ ನೀಡಲಾಗುತ್ತದೆ. ಆದರೆ ಅವುಗಳನ್ನು ಪಡೆದುಕೊಂಡವರಿಗೆ ಆ ಹಸುಗಳು ಬೇಡವಾದಲ್ಲಿ ಅವುಗಳನ್ನು ಮತ್ತೆ ಮಾಧವ ಗೋಶಾಲೆಗೇ ತಂದು ಬಿಡಬೇಕು ಎಂಬ ಷರತ್ತಿನ ಮೇಲೆ ಅವುಗಳನ್ನು ನೀಡಲಾಗುತ್ತದೆ ಎಂದು ಗೋ ಶಾಲೆಯ ಮೂಲಗಳು ತಿಳಿಸಿವೆ.
ಸದ್ಯ ಈ ಗೋಶಾಲೆಯಲ್ಲಿ 93 ಹಸುಗಳಿವೆ. ಗೋ ಭಕ್ತರ ನೆರವಿನಿಂದ ಈ ಗೋಶಾಲೆ ಮೈಲಿಗಲ್ಲು ಸಾಧಿಸಿದೆ ಎಂದು ಸಂಬಂಧಿಸಿದ ಮೂಲಗಳು ತಿಳಿಸಿವೆ. ಅಲ್ಲದೆ ಇಲ್ಲಿ ಬಾಲಕಿಯರ ಶಿಕ್ಷಣಕ್ಕೆ ಗುರುಕುಲ, 10 ಹಾಸಿಗೆಗಳುಳ್ಳ ಪಂಚಗವ್ಯ ಆಸ್ಪತ್ರೆ, ಗೋ ಆಧಾರಿತ ತರಬೇತಿ ಕೇಂದ್ರ, ಗೋವಿಗೆ ಸಂಬಂಧಿಸಿದಂತೆ ಗ್ರಂಥಾಲಯ ಮೊದಲಾದವುಗಳು ಇರುವುದಾಗಿಯೂ ಗೋಶಾಲೆಯ ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.