ಪಡುಬಿದ್ರಿ: ರಾ.ಹೆ 66ರ ಪಡುಬಿದ್ರಿ ಪೇಟೆ ಬಳಿ ಚತುಷ್ಪಥ ಹೆದ್ದಾರಿ ಅಗಲೀಕರಣ ಕಾಮಗಾರಿಗೆ ಆದೇಶ ದೊರಕಿದ್ದರೂ ವೈಯಕ್ತಿಕ ಹಿತಾಸಕ್ತಿಗೆ ಮಣಿದು ಸರ್ಕಾರ ವಿಳಂಬ ನೀತಿ ಅನುಸರಿಸುವುದನ್ನು ವಿರೋಧಿಸಿ ದ.ಸಂ.ಸ (ಅಂಬೇಡ್ಕರ್ ವಾದ) ಪಡುಬಿದ್ರಿ ಗ್ರಾಮ ಶಾಖೆ ವತಿಯಿಂದ ಪ್ರತಿಭಟನೆ ನಡೆಯಿತು.
ಹಳೆಯ ಗುರುದೇವ್ ಸಿನಿಮಾ ಮಂದಿರದ ಹಿಂಭಾಗದ ದಲಿತ ಕಾಲನಿಯಿಂದ ಘೋಷಣೆ ಕೂಗುತ್ತಾ ಮೆರವಣಿಗೆ ಮೂಲಕ ಪಡುಬಿದ್ರಿ ಪೇಟೆಗೆ ಬಂದ ಪ್ರತಿಭಟನಾಕಾರರು, ಶೀಘ್ರ ಕಾಮಗಾರಿ ಆರಂಭಿಸದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ದ.ಸಂ.ಸ ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ಟರ್ ಪಡುಬಿದ್ರಿ ಪೇಟೆಯು ಯಾವುದೇ ವ್ಯಕ್ತಿಯ ಸೊತ್ತಲ್ಲ, ಅದು ಸಾರ್ವಜನಿಕ ಆಸ್ತಿ. ಸ್ಥಾಪಿತ ಹಿತಾಸಕ್ತಿಗಳಿಗೆ ಮಣಿದು ಕಾಮಗಾರಿ ವಿಳಂಬಗೊಳಿಸಿದಲ್ಲಿ ದ.ಸಂ.ಸ.ವು ಉಗ್ರ ಹೋರಾಟಕ್ಕೆ ಅಣಿಯಾಗಲಿದೆ. ಅದಕ್ಕೆ ಮುನ್ನ ಹೆದ್ದಾರಿ ಕಾಮಗಾರಿಯನ್ನು ತಕ್ಷಣ ಆರಂಭಿಸಬೇಕು ಎಂದರು.
ಇದೇ ವೇಳೆ ರಾ.ಹೆ ಪ್ರಾಧಿಕಾರ ಪರವಾಗಿ ಆರ್.ವಿ. ಕನ್ಸಲ್ಟೆಂಟ್ನ ನಾಗೇಶ್ವರ ರಾವ್ಗೆ ಪ್ರತಿಭಟನಾಕಾರರು ಮನವಿ ಅರ್ಪಿಸಿ ತಕ್ಷಣ ಕಾಮಗಾರಿ ಆರಂಭಕ್ಕೆ ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಯಿಸಿದ ನಾಗೇಶ್ವರ ರಾವ್ ’2016ರ ಜೂನ್ ಒಳಗೆ ಕಾಮಗಾರಿ ಸಂಪೂರ್ಣ ಮುಕ್ತಾಯಗೊಳ್ಳಲಿದೆ. ಹಲವು ತಾಂತ್ರಿಕ ದೋಷಗಳಿಂದ ಕಾಮಗಾರಿಗೆ ಹಿನ್ನಡೆ ಉಂಟಾಗಿದ್ದು ನಿಜ. ಅದಾಗ್ಯೂ 2 ಬಾರಿ ಕಾಮಗಾರಿ ಮುಂದುವರಿಕೆಗೆ ಅನುಮತಿ ಪಡೆಯಲಾಗಿದೆ. ಇದೀಗ ಪಡುಬಿದ್ರಿ ಸಹಿತ ಎಲ್ಲೆಡೆ ಕಾಮಗಾರಿಗೆ ಚಾಲನೆ ದೊರಕಲಿದೆ ಎಂದು ಹೇಳಿದರಲ್ಲದೆ ಮನವಿಯನ್ನು ಹೆದ್ದಾರಿ ಇಲಾಖಾ ಪ್ರಾಧಿಕಾರಕ್ಕೆ ನೀಡುವುದಾಗಿ ತಿಳಿಸಿದರು.
ಪಡುಬಿದ್ರಿ ಶಾಖಾ ಸಂಚಾಲಕ ಲೋಕೇಶ್ ಪಡುಬಿದ್ರಿ, ಜಿಲ್ಲಾ ಪ್ರಧಾನ ಸಂಚಾಲಕ ಎಸ್.ಎಸ್ ಪ್ರಸಾದ್ ತಾಲೂಕು ಪ್ರಧಾನ ಸಂಚಾಲಕ ಪರಮೇಶ್ವರ ಉಪ್ಪೂರು, ಜಿಲ್ಲಾ ಮಹಿಳಾ ಒಕ್ಕೂಟದ ಸಂಚಾಲಕಿ ವಿಮಾಲ ಅಂಚನ್, ಬೆಳಪು ಅಂಬೇಡ್ಕರ್ ಸೇವಾ ಸಮಿತಿ ಸಂಚಾಲಕ ಕೆ.ಕೊರಗ ಮತ್ತಿತರರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.