ಬೆಳ್ತಂಗಡಿ : ಸುಮಾರು 30-40 ಅಡಿ ಅಗಲದ ಹಳ್ಳಕ್ಕೆ ಸಂಪರ್ಕ ಸೇತುವೆಯಾಗಿ ಹಾಕಿದ ಅಡಿಕೆ ಹಾಗೂ ಮರದ ಪಾಲದ(ಕಾಲು ಸಂಕ) ಮೇಲೆ ಭಯಾವರಿಸಿದ ಮೊಗದೊಂದಿಗೆ ಪುಟಾಣಿ ಮಕ್ಕಳು ಸರ್ಕಸ್ ಮಾಡುತ್ತಾ ಬರುವ ದೃಶ್ಯ ಎಂತವರನ್ನು ಒಮ್ಮೆ ಮೈ ಜುಮ್ಮೆನ್ನಿಸುತ್ತದೆ.
ತಾಲೂಕಿನ ಕಣಿಯೂರು ಮತ್ತು ಮಚ್ಚಿನ ಗ್ರಾಮ ಪಂಚಾಯತ್ಗಳ ಸಂಪರ್ಕಿಸುವ ಗುಂಪಕಲ್ಲು-ಬದನೋಡಿಯಲ್ಲಿ ಸೇತುವೆ ಹಾಗೂ ರಸ್ತೆಯ ಅಗತ್ಯವಿದೆ. ಪಿಲಿಗೂಡು ರಾಜ್ಯ ಹೆದ್ಧಾರಿಯಿಂದ 60ಮೀ ದೂರದಲ್ಲಿರುವ ಈ ಪ್ರದೇಶ ರಸ್ತೆಯು ಹದಗೆಟ್ಟಿದ್ದು ವಾಹನ ಸಂಚಾರಕ್ಕೆ ಅಯೋಗ್ಯವಾಗಿದೆ. ಪಿಲಿಗೂಡು-ಪಾಲಡ್ಕ-ಕುದ್ರಡ್ಕ ಸಂಪರ್ಕ ರಸ್ತೆಯಾಗಿದೆ. ಬದನೋಡಿ ಪರಿಸರದಲ್ಲಿ ಸುಮಾರು 100ಕ್ಕಿಂತಲೂ ಹೆಚ್ಚು ಮನೆಗಳಿದೆ. ಇಲ್ಲಿನ ಜನರು ಬೆಳ್ತಂಗಡಿಗೆ ಬರಲು ಮಳೆಗಾಲದಲ್ಲಿ ಸಂಪರ್ಕ ಕಡಿದರೆ ಸುತ್ತು ಬಳಸಿ ಬರಬೇಕು. ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾಥಿಗಳಿದ್ದಾರೆ. 7ನೇ ತರಗತಿಯ ಒಳಗಿನ ಸುಮಾರು 25 ಕ್ಕಿಂತಲೂ ಹೆಚ್ಚು ಮಕ್ಕಳು ಇಲ್ಲಿನ ಮರದ ಸೇತುವೆ ಮೇಲೆ ಸರ್ಕಸ್ ಮಾಡಿಕೊಂಡು ಜೀವದ ಹಂಗುತೊರೆದು ಬರಬೇಕು. ಅಂಗನವಾಡಿ ಕೇಂದ್ರಕ್ಕೆ ಹೋಗುವ ಮಕ್ಕಳನ್ನು ತಾಯಂದಿರು ಕಂಕಳಲ್ಲಿಟ್ಟುಕೊಂಡು ಸೇತುವೆ ದಾಟಬೇಕು. ಅಪಾಯದ ಮರದ ಪಾಪು ಆದಷ್ಟು ಶೀಘ್ರವಾಗಿ ಬದಲಾಗಬೇಕಾಗಿದೆ. ಸರಕಾರದಿಂದ ಟೆಂಡರ್ ಆದ ಕಾಮಗಾರಿ ಆಗಬೇಕಾಗಿದೆ.
ಸ್ಥಳೀಯರ ಹೋರಾಟ : ಇಲ್ಲಿನ ನಿವಾಸಿಗಳು ಹಲವಾರು ವರ್ಷಗಳಿಂದ ಹೋರಾಟವನ್ನು ಮಾಡುತ್ತಾ ಬಂದಿದ್ದರು. ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದ್ದಕ್ಕೆ ಲೆಕ್ಕವಿಲ್ಲ. ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ 2014-15 ರಲ್ಲಿ ಸೇತುವೆ ಹಾಗೂ ರಸ್ತೆ ಕಾಮಗಾರಿಗೆ ಟೆಂಡರ್ ಆಗಿದೆ. ಜಲ್ಲಿ, ಮರಳು ಬಂದು ಸ್ಟಾಕ್ ಮಾಡಲಾಗಿದೆ. ಮಳೆಗಾಲ ಶುರುವಾದ್ದರಿಂದ ಕಾಮಗಾರಿಯನ್ನು ಆರಂಭಿಸಿಲ್ಲ. ಮಳೆಗಾಲ ಕಳೆದ ತಕ್ಷಣ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದು ಸಂಬಂಧಪಟ್ಟ ಇಲಾಖೆ ತಿಳಿಸಿದೆ. ಅಲ್ಲದೆ ರಸ್ತೆ ಹಾಗೂ ಸೇತುವೆ ಖಾಸಗಿ ಜಾಗಗಳ ಮಧ್ಯೆ ಹಾದುಹೋಗುತ್ತಿದೆ. ಸಾರ್ವಜನಿಕರ ಸಹಕಾರ ದೊರೆತರೆ ಆದಷ್ಟು ಬೇಗ ಕಾಮಗಾರಿಯನ್ನು ಪೂರ್ಣಗೊಳಿಸಲು ಸಾಧ್ಯ.
ಜೋರು ಮಳೆಯಿದ್ದರೆ ನಮಗೆ ಈ ಮರದ ಪಾಲವನ್ನು ದಾಡುವುದೇ ಕಷ್ಟ. ಒಂದು ಕೈಯಲ್ಲಿ ಛತ್ರಿ. ಇನ್ನೊಂದು ಕೈಯನ್ನು ಆಧಾರಕ್ಕಾಗಿ ಹಿಡಿದುಕೊಳ್ಳಬೇಕು. ಕಾಲು ಜಾರುತ್ತದೋ ಎಂಬ ಭಯ ಬೇರೆ. ದೊಡ್ಡವರು ಇದ್ದರೆ ಸ್ವಲ್ಪ ಭಯ ಹೋಗುತ್ತದೆ. ಇಲ್ಲವಾದರೆ ಯಾರಾದರೂ ಬರುತ್ತಾರೋ ಎಂದು ಕಾದು ದಾಟಬೇಕಾಗಿದೆ. ನಮ್ಮ ಕಷ್ಟವನ್ನು ಕೇಳುವವರು ಯಾರು.– ಶ್ರೀತೇಶ್, ಪಿಲಿಗೂಡು ಶಾಲೆಯ 5ನೇ ತರಗತಿ ವಿದ್ಯಾರ್ಥಿ.
ಹಲವಾರು ವರ್ಷಗಳಿಂದ ಸೇತುವೆಗಾಗಿ ಇಲ್ಲಿನ ಸ್ಥಳೀಯರಾದ ಮೋನಪ್ಪ ಗೌಡ ನೇತೃತ್ವದಲ್ಲಿ ಹೋರಾಟ ಮಾಡುತ್ತಿದ್ದೇವೆ. ಮಳೆಗಾಲದಲ್ಲಿ ಪಾಲದಿಂದ ನಡೆಯುವುದೆ ಕಷ್ಟ. ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ರಸ್ತೆ ಹಾಗೂ ಸೇತುವೆಗೆ ಟೆಂಡರ್ ಆಗಿದೆ. ಸೇತುವೆ ಕೆಲಸಕ್ಕೆ ಜಲ್ಲಿ, ಮರಳು ಬಂದಿದೆ. ಆದರೆ ಮಳೆಗಾಲ ಆರಂಭವಾಗಿದ್ದು ಕಾಮಗಾರಿ ಶುರುವಾಗಿಲ್ಲ. ಮಳೆಗಾಲ ಮುಗಿದ ತಕ್ಷಣ ಕಾಮಗಾರಿ ಆರಂಭಿಸಬೇಕು. -ವಸಂತ ಕುಮಾರ್, ಸ್ಥಳೀಯ ನಿವಾಸಿ.
ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ದೇವರಪಲ್ಕೆ-ಬದನೋಡಿ-ದೂಮಗಿರಿ ಕಾಲೋನಿ 2.91 ಕಿಮೀ ರಸ್ತೆಗೆ 2.62 ಕೋ. ರೂ. ಹಾಗೂ ಗುಂಪಕಲ್ಲು-ಬದನೋಡಿ ಸೇತುವೆಗೆ 74.27 ಲಕ್ಷ ರೂ, ಮಂಜೂರಾಗಿದೆ. ಮಳೆಗಾಲ ಆರಂಭವಾದ ಕಾರಣ ಸೇತುವೆ ಕಾಮಗಾರಿ ಮಾಡಲು ಆಗಲಿಲ್ಲ. ಮಳೆಗಾಲ ಮುಗಿದ ತಕ್ಷಣ ರಸ್ತೆಯ ಕಾಮಗಾರಿ ಹಾಗೂ ಹಳ್ಳದಲ್ಲಿ ನೀರು ಕಡಿಮೆಯಾದ ಕೂಡಲೇ ಸೇತುವೆ ಕೆಲಸ ಮಾಡಲಾಗುವುದು. ಕಾಮಗಾರಿ ಶೀಘ್ರವಾಗಿ ನಡೆಯಲು ಸಾರ್ವಜನಿಕರ ಸಹಕಾರ ಅಗತ್ಯ.-ಉದಯ ಕುಮಾರ್, ನಮ್ಮ ಗ್ರಾಮ-ನಮ್ಮ ರಸ್ತೆ ಇಂಜಿನಿಯರ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.