ಕರ್ನಾಟಕ ಅನೇಕ ವೀರ ಪರಾಕ್ರಮಿಗಳು ಆಳಿದ ನೆಲ. ಇಲ್ಲಿನ ಪ್ರತಿಯೊಂದು ಪ್ರದೇಶಗಳೂ ಅನೇಕ ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿವೆ. ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಸಮುದ್ರ ತೀರವೂ ಅನೇಕ ವೀರೋಚಿತ ಯುದ್ಧಗಳನ್ನು ಕಂಡಿವೆ. ಇಲ್ಲಿನ ಕಲೆ, ವಾಸ್ತು ಶಿಲ್ಪಗಳೂ ಕೂಡಾ ಅತ್ಯಂತ ಭಿನ್ನವಾಗಿದ್ದು ಇತಿಹಾಸದಲ್ಲಿ ತನ್ನದೇ ಛವಿಯನ್ನು ಮೂಡಿಸಿರುವುದು ಕೂಡಾ ಅಷ್ಟೇ ಸತ್ಯ. ಬಸ್ರೂರು, ಎಂಬ ಕರಾವಳಿ ಕರ್ನಾಟಕದ ಪುಟ್ಟ ಊರು ತನ್ನಲ್ಲಿ ಅನೇಕ ಐತಿಹಾಸಿಕ ಘಟನೆಗಳ ಪುಟಗಳನ್ನು ಹೊಂದಿದೆ. 1665ರ ಫೆಬ್ರವರಿ 13 ರಂದು ಛತ್ರಪತಿ ಶಿವಾಜಿ ಮಹಾರಾಜರು ಪೋರ್ಚುಗೀಸರನ್ನು ಹಿಮ್ಮೆಟ್ಟಿಸಿ ಹೊಡೆಡೋಡಿಸಿದ ಐತಿಹಾಸಿಕ ಬಂದರನ್ನು ಹೊಂದಿರುವ ಪ್ರದೇಶವಿದು.
ಇತಿಹಾಸದಲ್ಲಿ ವಿಜಯನಗರ ಸಾಮ್ರಾಜ್ಯ, ಹೊಯ್ಸಳ ಅರಸರ ಆಳ್ವಿಕೆಯಲ್ಲಿ ವೈಭವವನ್ನು ಕಂಡಿದ್ದ ಈ ಪ್ರದೇಶದ ಗತ ವೈಭವವನ್ನು ಇಲ್ಲಿನ ವಾಸ್ತು ಶಿಲ್ಪಗಳು ಇಂದಿಗೂ ಸಾರುತ್ತಿವೆ. ಇಲ್ಲಿ ಪ್ರಮುಖವಾಗಿ ಎರಡು ಐತಿಹಾಸಿಕ ಕಂಚಿನ ಕಂಬಗಳು ಕಾಣಸಿಗುತ್ತಿದ್ದು ಒಂದು ಶೈವ ಮತ್ತೊಂದು ವೈಷ್ಣವ ಪಂಥಕ್ಕೆ ಸೇರಿದ ಕಂಬಗಳಾಗಿವೆ. ಇವುಗಳೆರಡೂ ಅತ್ಯುತ್ತಮ ವಾಸ್ತು ಶಿಲ್ಪ ಮತ್ತು ಸೂಕ್ಷ್ಮ ಕುಸುರಿ ಕೆತ್ತನೆಗಳನ್ನು ಹೊಂದಿವೆ.
ಬಸ್ರೂರಿನಲ್ಲಿನ ವೆಂಕಟರಮಣ ದೇವಾಲಯದಲ್ಲಿನ ವೈಷ್ಣವ ಪಂಥದ ಕಂಚಿನ ಕಂಬವು ಅತ್ಯಂತ ಸುಂದರ ಹಾಗೂ ಸೂಕ್ಷ್ಮ ಕೆತ್ತನೆಗಳನ್ನು ಹೊಂದಿದೆ. ಕಂಬದ ಕೆಲಭಾಗದಲ್ಲಿ ಕೂರ್ಮಾವತಾರ, ಹಾಗೂ ಆಮೆಯು ಆನೆಯನ್ನು ಹೊತ್ತಿರುವ ಸುಂದರ ಶಿಲ್ಪವನ್ನು ಕೆತ್ತಲಾಗಿದೆ. ಎರಡನೇ ಪೆಟ್ಟಿಕೆಯಲ್ಲಿ ಆನೆಯು ತನ್ನ ಮೇಲೆ ಪಲ್ಲಕ್ಕಿಯನ್ನು ಹೊತ್ತು ಮಾವುತನೊಂದಿದೆ ಹೆಜ್ಜೆ ಹಾಕುತ್ತಿರುವ ಶಿಲ್ಪವಿದೆ. ಮೂರನೇ ಪೆಟ್ಟಿಕೆಯಲ್ಲಿ ಶ್ರೀ ಕೃಷ್ಣನ ಬಾಲ್ಯದ ಲೀಲೆಯನ್ನು ವರ್ಣಿಸುವ ಗೋಪಿಕಾ ವಸ್ತ್ರಪಹರಣದ ಕೆತ್ತನೆಗಳಿವೆ. ಕೈ ಮುಗಿದಿರುವ ಗರುಡ, ವೀರಾಂಜನೇಯ, ಗರುಡ ಇತ್ಯಾದಿ ಕೆತ್ತನೆಗಳನ್ನು ಅತ್ಯಂತ ಚಿಕ್ಕದಾಗಿಯೂ ನಾಜೂಕಾಗಿಯೂ ರಚಿಸಲಾಗಿದೆ. ಮಾತ್ರವಲ್ಲದೆ ದಕ್ಷಿಣ ಕರ್ನಾಟಕದ ಖ್ಯಾತ ಐತಿಹಾಸಿಕ ವಾಸ್ತುಶಿಲ್ಪ ತಜ್ಞರಾದ ಡಾ. ಪಿ ಗುರುರಾಜ್ ಅವರ ಪ್ರಕಾರ ಈ ಸ್ಥಂಭವು 15 ಅಥವಾ 16ನೇ ಶತಮಾನಕ್ಕೆ ಸೇರಿದ್ದು 500 ವರ್ಷಗಳ ಇತಿಹಾಸವನ್ನು ಹೊಂದಿದೆ. ಇದೇ ಪ್ರದೇಶದಲ್ಲಿನ ಶೈವ ಸ್ಥಂಭದ ಕುರಿತಾಗಿ ʼಸ್ಟಡಿ ಆಫ್ ತುಳುವ ಹಿಸ್ಟರಿʼ ಪುಸ್ತಕದಲ್ಲಿ ಈ ಕುರಿತಾದ ಉಲ್ಲೇಖವಿದ್ದು, ಎರಡೂ ಸ್ಥಂಭಗಳ ಸಾಮ್ಯತೆಗಳನ್ನು ಗಮನಿಸುವಾಗ ವೈಷ್ಣವ ಸ್ಥಂಭವೂ 500 ವರ್ಷಗಳ ಇತಿಹಾಸವನ್ನು ಹೊಂದಿರುವುದು ಸ್ಪಷ್ಟವಾಗುತ್ತದೆ. ಇಲ್ಲಿ ಪ್ರತೀ ವರ್ಷ ಸ್ಥಂಭದಲ್ಲಿ ದೀಪಗಳನ್ನು ಬೆಳಗುವ ಮೂಲಕ ವಿಜೃಂಭಣೆಯಿಂದ ಆಚರಿಸುವ ಸಂಪ್ರದಾಯವಿದೆ.
ಇದೀಗ ಯುವ ಬ್ರಿಗೇಡ್ ತಂಡವು ಐತಿಹಾಸಿಕ ಪ್ರದೇಶಗಳನ್ನು ಗುರುತಿಸಿ ʼರೆಲ್ಲೋ ಫ್ಲೆಕ್ಸ್ʼಗಳನ್ನು ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕರ್ನಾಟಕದ ಧ್ವಜದ ಕೆಂಪು ಮತ್ತು ಹಳದಿ ಬಣ್ಣಗಳನ್ನು ಹೊಂದಿರುವ ಫಲಕವನ್ನು ವೆಂಕಟರಮಣ ದೇವಾಲಯದಲ್ಲಿನ ಕಂಚಿನ ಸ್ಥಂಭಕ್ಕೆ ಅಳವಡಿಸುವ ಕಾರ್ಯಕ್ರಮ ಇದೇ ಭಾನುವಾರ ನಡೆಯಲಿದೆ. ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು, ಶ್ರೀ ಬಿ. ಅಪ್ಪಣ್ಣ ಹೆಗ್ಡೆ ಹಾಗೂ ಅರ್ಚಕರು ಶ್ರೀಧರ ಭಟ್ ಇವರ ಉಪಸ್ಥಿತಿಯಲ್ಲಿ ನಡೆಯಲಿದೆ.
✍️ ದೀಪಾ ಜಿ. ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.