ಕೆಲ ದಿನಗಳ ಹಿಂದೆ ಬಿ. ಸಿ. ರೋಡ್ನ ನಾರಾಯಣಗುರು ಸಭಾಂಗಣದಲ್ಲಿ ಸಂಘದ ದೃಷ್ಟಿಯ ಬಂಟ್ವಾಳ ತಾಲೂಕಿನ ಕಾರ್ಯಕರ್ತರ ಅಯೋಧ್ಯೆಯ ಶ್ರೀ ರಾಮ ಮಂದಿರಕ್ಕೆ ನಿಧಿ ಸಂಗ್ರಹ ಅಭಿಯಾನ ಕುರಿತಾದ ಬೈಠಕ್ ಯೋಜನೆಯಾಗಿತ್ತು. ಬೈಠಕ್ ತೆಗೆದುಕೊಂಡ ಹಿರಿಯರು ಕೊನೆಗೆ ಈ ಒಟ್ಟು ಮಹಾಕಾರ್ಯಕ್ಕೆ ಮುಂದಿನ ಕೆಲ ತಿಂಗಳುಗಳ ಕಾಲ ಪೂರ್ಣ ಸಮಯ ಕೊಡುವ ದೊಡ್ಡ ಪ್ರಮಾಣದ ಕಾರ್ಯಕರ್ತರು ಬೇಕಾಗಿದ್ದಾರೆ. ನಿಮ್ಮಲ್ಲಿ ಇವತ್ತಿನಿಂದಲೇ ಪೂರ್ಣ ಸಮಯ ಕೊಡುವ ಕಾರ್ಯಕರ್ತರು ಎಷ್ಟು ಜನ ಇದ್ದೀರಿ ಎಂದು ಕೇಳಿದರು. ಆಗ ತಕ್ಷಣವೇ ಸಭೆಯ ಕೊನೆಯ ಸಾಲಿನಲ್ಲಿ ಕುಳಿತಿದ್ದ ಹಿರಿಯರೊಬ್ಬರು ತಮ್ಮ ಕೈ ಎತ್ತಿದರು. ಆ ಒಟ್ಟು ಸಭೆಯಲ್ಲಿ ಆ ಪ್ರಶ್ನೆಗೆ ಕೈ ಎತ್ತಿದ ಮೊದಲ ಮತ್ತು ಏಕೈಕ ವ್ಯಕ್ತಿ ಅವರಾಗಿದ್ದರು. ಅಂದು ಅಭಿಯಾನ ಪೂರ್ತಿ ಸಮಯ ಕೊಡುತ್ತೇನೆ ಎಂದು ಮಾತು ಕೊಟ್ಟು, ಇಂದು ನಮ್ಮನ್ನೆಲ್ಲ ದುಃಖ ಸಾಗರದಲ್ಲಿ ಮುಳುಗಿಸಿ ತಾ ನೇರ ಶ್ರೀರಾಮ ಸಾಯುಜ್ಯವನ್ನೇ ಸೇರಿ ಹೋದ ಮಹಾ ಪುರುಷ ಬೇರೆ ಯಾರು ಅಲ್ಲ ಮಂಗಳೂರು ವಿಭಾಗದ ವಿಭಾಗ ಗ್ರಾಮ ವಿಕಾಸ ಪ್ರಮುಖರಾದ ಶ್ರೀ ವೆಂಕಟರಾಮಣ ಹೊಳ್ಳರು.
ಹಾಗೆ ನೋಡಿದರೆ ಪ್ರತಿ ಕ್ಯಾಲೆಂಡರ್ ವರ್ಷದ ಕೊನೆಯ ತಿಂಗಳು ಯಾವತ್ತೂ ಸಿದ್ಧ, ಪ್ರಸಿದ್ಧರನ್ನು ತನ್ನೊಳಗೆ ಸೆಳೆದುಕೊಳ್ಳುವುದು ಒಂದು ರೀತಿಯಲ್ಲಿ ಪದ್ದತಿಯೇ ಆಗಿ ಬಿಟ್ಟಿದೆ. ಅದರಲ್ಲೂ ಈ ವರ್ಷ ಅಂತೂ ಜಗತ್ತಿನ ಪಾಲಿಗೆ ಒಂದು ಕರಾಳ ವರ್ಷವೇ ಸರಿ.. ಆದರೆ ಈ ಅಮಂಗಳಕರ ಸುದ್ದಿಯನ್ನು ಈ ಸಂಕ್ರಮಣದ ಮಂಗಳವಾರ ಮುಂಜಾವು ಕೇಳಬಹುದು ಎಂದು ಯಾರು ಊಹಿಸಲು ಸಾದ್ಯವಿರಲಿಲ್ಲ. ಆದರೆ ಅನಿವಾರ್ಯವಾಗಿ ಒಪ್ಪಲೇಬೇಕು, ನಂಬಲೇಬೇಕು. ಹೊಳ್ಳರು ಇನ್ನಿಲ್ಲ…
ಬಂಟ್ವಾಳ ತಾಲೂಕಿನ ಬಿ. ಸಿ. ರೋಡಿನ ರಂಗೋಲಿ ಹೋಟೆಲ್ನ ಪಕ್ಕದಲ್ಲಿರುವ ಒಂದು ಹಳೆ ಹಂಚಿನ ಮನೆ ಹೊಳ್ಳರೆಂಬ ಋಷಿ ತುಲ್ಯ ಜೀವದ ಆಡುಂಬೋಲ. ಶ್ರೀ ತಿಮ್ಮಪ್ಪಯ್ಯ ಹೊಳ್ಳರೆಂಬ ನಿವೃತ್ತ ಉಪಾಧ್ಯಾಯರ ಕಿರಿ ಪುತ್ರ ಇವರು. ಪ್ರಾಯಶಃ ಇನ್ನು ಕೆಲ ವರ್ಷಗಳಲ್ಲಿ ಹೀಗೆ ಒಬ್ಬ ಮನುಷ್ಯ ನಮ್ಮ ನಡುವೆ ಬದುಕಿದ್ದರು ಎಂದರೆ ನಂಬುವುದಕ್ಕೂ ಕಷ್ಟ. ಆ ಬಗೆಯ ಬದುಕು, ಜೀವನ ಹೊಳ್ಳರದಾಗಿತ್ತು. ಸರಳ ಜೀವನ ಅಂದರೆ ಏನು ಎಂಬುದಕ್ಕೆ ವಸ್ತುತಃ ಉದಾಹರಣೆಯಾಗಿದ್ದವರು ಅವರು. ಶುಭ್ರ ಬಿಳಿ ವಸ್ತ್ರ, ಬಗಲಲೊಂದು ಬಟ್ಟೆಯ ಚೀಲ. ಹಣೆಯಲ್ಲಿ ಶ್ರೀಗಂಧದ ತಿಲಕ, ಮುಖದ ತುಂಬಾ ಎಂದೂ ಮಾಸದ ಮುಗುಳು ನಗು ಇವಿಷ್ಟು ಹೊಳ್ಳರೆಂಬ ನಿತ್ಯ ಪ್ರವಾಸಿ ಮಹನೀಯರ ಬಾಹ್ಯ ನೋಟ.
ವಿಶೇಷವಾಗಿ ಬಂಟ್ವಾಳ ತಾಲೂಕಿನ ಒಂದು ತಲೆಮಾರಿನ ಆನೇಕ ಕಾರ್ಯಕರ್ತರನ್ನು ರೂಪಿಸಿದವರು, ಅವರನ್ನು ಸಂಘ ಅಥವಾ ಸಮಾಜದ ಕೆಲಸಕ್ಕೆ ಹಚ್ಚಿದವರು ಹೊಳ್ಳರು. ಪ್ರತಿಯೊಬ್ಬ ಕಾರ್ಯಕರ್ತನ ಮನೆ ಮನಗಳನ್ನು ತಲುಪಿದವರು ಅವರು. ವೈಯುಕ್ತಿಕವಾಗಿ ತನ್ನ ಮನೆ, ಮನೆಯವರ, ತನ್ನ ಆರೋಗ್ಯವೂ ಸೇರಿದಂತೆ ಹತ್ತಾರು ಸಮಸ್ಯೆಗಳು, ತೊಂದರೆಗಳು ಇದ್ದರೂ ಅವರ ಸಂಪರ್ಕ, ಪ್ರವಾಸ ಎಂದೂ ತಪ್ಪಿರಲಿಲ್ಲ. ಸಂಘ, ಸಮಾಜದ ಕೆಲಸವೇ ಅವರಿಗೆ ಎಲ್ಲವೂ ಆಗಿತ್ತು. ಎಲ್ಲಿಯವರೆಗೆ ಅಂದರೆ ಅವರ ಬದುಕಿನ ಕೊನೆ ಕ್ಷಣದ ತನಕವೂ. ಅವರ ಜೀವನದ ಕೊನೆಯ ನಿದ್ರೆಯೂ ಪುತ್ತೂರಿನ ಸಂಘ ಕಾರ್ಯಾಲಯ ಪಂಚವಟಿಯಲ್ಲಿ ಆಯಿತು ಎಂಬುದೇ ವಿಧಿ ಲಿಖಿತ. ಸೋಮವಾರ ಸಂಜೆ ಸುಳ್ಯದ ಸಮೀಪ ಒಂದು ಮೊದಲೇ ಯೋಜನೆಯಾಗಿದ್ದ ಒಂದು ಬೈಠಕ್ಗಾಗಿ ಅವರು ತೆರಳಿದ್ದರು. ಬೈಠಕ್ ಮುಗಿಸಿ ರಾತ್ರಿ ಪುತ್ತೂರು ಸಂಘ ಕಾರ್ಯಾಲಯಕ್ಕೆ ಬಂದು ಮಲಗಿ, ಮಂಗಳವಾರ ಬೇಗನೆ ಎದ್ದು ಬಿಸಿರೋಡಿನ ತನ್ನ ಮನೆಗೆ ಬರುವ ಮಧ್ಯೆ ರಸ್ತೆ ಅಪಘಾತಕ್ಕೆ ಅವರು ಬಲಿಯಾದರು. ಬಹುಶಃ ಅವಿಶ್ರಾಂತ ಅವರ ಬದುಕಿಗೆ ವಿಧಿಯೇ ಈ ರೀತಿಯಲ್ಲಿ ವಿಶ್ರಾಂತಿ ನೀಡಿತೇ? ಗೊತ್ತಿಲ್ಲ. ಆದರೆ ತಾವು ಜೀವಂತ ಇದ್ದಾಗಲೇ ತಮ್ಮ ಶರೀರವನ್ನು ದಾನ ಮಾಡಿದ್ದರೂ ಅವರ ಆ ಆಸೆ ಈಡೇರಲಿಲ್ಲ.
ಸಂಘದ ಯಾವುದೇ ಬಗೆಯ ವರ್ಗ, ಶಿಬಿರಗಳನ್ನು ಅವರಿಲ್ಲದೆ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಅನ್ನುವಷ್ಟು ಅವರ ಒಳಗೊಳ್ಳುವಿಕೆ ಆ ಕಾರ್ಯಕ್ರಮಗಳಲ್ಲಿ ಇರುತಿತ್ತು. ಅದು ದೊಡ್ಡದ್ದಾಗಿರಲಿ, ಸಣ್ಣದಾಗಿರಲಿ ಅದರ ಒಟ್ಟು ಯಶಸ್ಸು ಅಷ್ಟೇ ಅವರ ಲಕ್ಷ್ಯವಾಗಿತ್ತು. ತಮ್ಮದಾಗಿಯ ಎಲ್ಲವನ್ನು ಅದಕ್ಕೆ ಧಾರೆ ಎರೆದು ಅದನ್ನು ಯಶಸ್ಸುಗೊಳಿಸುತ್ತಿದ್ದರು. ಅವರೊಬ್ಬ ನಿತ್ಯ ಪ್ರವಾಸಿ, ಕೊನೆ ಕ್ಷಣದ ತನಕವೂ…
ಕಳೆದ ವರ್ಷ ಪುತ್ತೂರಿನಲ್ಲಿ ನಡೆದ ವಿಭಾಗದ ಭಜನಾ ಮಂಗಲದ ಯೋಜನೆ ಇರಬಹುದು, ಕೊರೋನಾ ನಂತರ ಮಂಗಳೂರು ವಿಭಾಗದ ಆನೇಕ ಕಡೆಗಳಲ್ಲಿ ಅತ್ಯಂತ ಯಶಸ್ವಿಯಾಗಿ ನಡೆದ ವೃತ್ತಿ ನೈಪುಣ್ಯ ವರ್ಗಗಳು ಇರಬಹುದು ಅವುಗಳ ಯಶಸ್ಸಿನಲ್ಲಿ ಬಹು ದೊಡ್ಡ ಪಾಲು ಶ್ರೀ ವೆಂಕಟರಾಮಣ ಹೊಳ್ಳರದು. ಹಾಗೆಂದೂ ಅವರೆಲ್ಲೂ ಅದಕ್ಕಾಗಿ ತಮ್ಮ ಹಕ್ಕು ಸ್ಥಾಪಿಸಿದವರಲ್ಲ. ತನಗೆ ಕೊಟ್ಟ ಜವಾಬ್ದಾರಿಯನ್ನು ಎಷ್ಟು ಚೆನ್ನಾಗಿ ನಿರ್ವಹಿಸಬೇಕು ಎನ್ನುವುದು ಅಷ್ಟೇ ಅವರ ಮುಂದಿದ್ದ ಗುರಿಯಾಗಿತ್ತು. ಅದರ ಮುಂದಿನದಲ್ಲ…
ವಾಸ್ತವವಾಗಿ ಶ್ರೀ ವೆಂಕಟರಮಣ ಹೊಳ್ಳರು ಸಂಘದ ಪ್ರಚಾರಕರಲ್ಲ. ಒಬ್ಬ ಗೃಹಸ್ಥ ಕಾರ್ಯಕರ್ತರು. ಆದರೆ ಅವರ ಒಟ್ಟು ಬದುಕು, ಜೀವನ, ಸಾಧನೆ ಒಬ್ಬ ಪೂರ್ಣಾವಧಿ ಪ್ರಚಾರಕರಿಗೂ ಆದರ್ಶವಾಗಿತ್ತು. ಸಂಘದ ಹಿರಿಯರು ಆನೇಕ ಬಾರಿ ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆಯವರಿಗೆ ಸ್ಫೂರ್ತಿ ತುಂಬುವ ಕಾರಣಕ್ಕೆ ಅವರ ಜೀವನವನ್ನು ಉದಾಹರಿಸುತ್ತಿದ್ದರು. ತಾವು ಬದುಕಿದ್ದಾಗಲೇ ಹೀಗೆ ಆದರ್ಶವಾದವರು ಹೊಳ್ಳರು. ಸ್ವಂತಕ್ಕಾಗಿ ಏನನ್ನೂ ಸಂಪಾದಿಸದ, ಬಯಸದ ಶುದ್ಧ ನೈಷ್ಠಿಕ ಬ್ರಹ್ಮಚಾರಿ ಅವರು. ಹೊರಗಡೆ ಸಮಾಜದ ಸೇವೆ, ಮನೆಗೆ ಬಂದಾಗ ಮನೆಯವರ ಸೇವೆ, ತಂದೆ, ಅಣ್ಣ, ಅಕ್ಕ ಹೀಗೆ ತಮ್ಮ ಮನೆಯವರ ಸೇವೆಗೆ ಸದಾ ತನ್ಮಯರು.. ಉಳಿಕೆಯ ಸಮಯ ತಮ್ಮ ಕಿರು ತೋಟದ ಕೆಲಸ. ಅದರ ಮಧ್ಯೆ ತನ್ನನ್ನು ಬಿಟ್ಟುಬಿಡದೆ ಕಾಡುತಿದ್ದ ಅಸ್ತಮಾ, ಮೂಲವ್ಯಾಧಿಯಂತಹ ಕಾಯಿಲೆಗಳ ಉಪಚಾರ.
ಒಟ್ಟಿನಲ್ಲಿ ಇಡೀ ತಮ್ಮ ಬದುಕನ್ನು ನೆರಳಿತ್ತು, ಹಣ್ಣು ಕೊಟ್ಟು ಹಸಿವು ಹಿಂಗಿಸುವ ವೃಕ್ಷದಂತೆ, ಹರಿಯುವ ನದಿಯಂತೆ, ತಾನು ಕಸವನ್ನೇ ತಿಂದರೂ ಲೋಕಕ್ಕೆ ಅಮೃತವನ್ನೀಯುವ ಗೋವಿನಂತೆ ಬಾಳಿದವರು ಹೊಳ್ಳರು.
ಅವರು ಸಂತನಂತೆ ಲೋಕ ಸುತ್ತಿದರೂ, ಕಾಲಿಗೆ ಚಪ್ಪಲಿಯನ್ನು ಧರಿಸುತ್ತಿರಲಿಲ್ಲ. ಅದರ ಅಗತ್ಯ ಇರಲಿಲ್ಲ. ಹಾಗೆ ನೋಡಿದರೆ ಅವರು ಉಪಯೋಗಿಸುತ್ತಿದ್ದ ಬೈಕ್ ಆಗಲಿ, ಇತ್ತೀಚಿನ ಕೆಲ ಸಮಯಗಳಿಂದ ಬಳಸುತ್ತಿದ್ದ ಮೊಬೈಲ್ ಆಗಲಿ ಅದು ಅವರಿಗೆ ಬೇಕು ಎಂದು ಅಲ್ಲ, ಕಾರ್ಯಕರ್ತರ ಒತ್ತಡ ಮತ್ತು ಸಂಘ ಕಾರ್ಯದ ಇವತ್ತಿನ ಅನಿವಾರ್ಯದ ಕಾರಣಕ್ಕೆ ಅವರು ಅದನ್ನು ಬಳಸುತ್ತಿದ್ದು. ಒಂದು ರೀತಿಯ ಯಾವುದಕ್ಕೂ ಅಂಟಿಕೊಳ್ಳದ ಪದ್ಮ ಪತ್ರದಂಥಹ ಬದುಕು ಜೀವನ.. ಸೇವೆ ಎಂಬ ಯಜ್ಞದಲ್ಲಿ ಸಮಿಧೆಯಂತೆ ಉರಿದರು..
ಯಾವ ಪ್ರಚಾರ, ಪ್ರಶಂಸೆ, ಅಧಿಕಾರ, ಸಂಪತ್ತು ಈ ಯಾವುದನ್ನು ಅಪೇಕ್ಷಿಸದೆ ಕೇವಲ ಆತ್ಮ ಸಂತೋಷ ಮತ್ತು ಜೀವ ಪರ ಭಾವದಿಂದ ಸಮಾಜ ಪುರುಷನ ಅಭಂಗ ಪೂಜೆಯಲ್ಲಿ ಸದಾ ನಿರತವಾಗಿದ್ದ ಮಹಾ ಪುಷ್ಪವೊಂದು ತಾಯಿ ಭಾರತಿಯ ಪಾದ ಕಮಲಗಳಲ್ಲಿ ಲೀನವಾಗಿದೆ. ಅವರ ಬದುಕು ಜೀವನ ಎಂದೆಂದೂ ನಮಗೆ ಚಿರ ಸ್ಫೂರ್ತಿಯ ಸೆಲೆ. ಅವರ ಕಾಲದಲ್ಲಿ ನಾವು ಇದ್ದೆವು ಎಂಬುದೇ ನಮ್ಮ ಪಾಲಿಗೆ ಧನ್ಯತೆಯ ವಿಷಯ..
✍️ ಚಂದ್ರಶೇಖರ ಕೈಯಬೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.