ಜೀವನದಲ್ಲಿ ಯಾವುದನ್ನಾದರೂ ಸಾಧಿಸಬೇಕು ಎಂದು ಶ್ರಮಪಟ್ಟು ಕೆಲಸ ಮಾಡುವವರನ್ನು ಯಶಸ್ಸು ಅಪ್ಪಿಕೊಳ್ಳುತ್ತದೆ. ಹೌದು, ಇದಕ್ಕೆ ಸಾಕ್ಷಿಯಾಗಿ ನಿಂತಿದ್ದಾರೆ ರಾಯಚೂರು ಜಿಲ್ಲೆಯ ಕವಿತಾ ಮಿಶ್ರಾ. ತಮ್ಮ ಸುಮಾರು 8 ಎಕರೆ ಬರಡು ಭೂಮಿಯಲ್ಲಿ ಬಂಗಾರದ ಬೆಳೆ ಬೆಳೆದು ಸಾಧಿಸುವ ಛಲ, ಹಂಬಲವಿದ್ದವನಿಗೆ ಸಾಧನೆ ಖಂಡಿತಾ ಸಾಧ್ಯ ಎಂಬುದಕ್ಕೆ ಮಾದರಿಯಾಗಿ ನಿಂತಿದ್ದಾರೆ.
ಮೂಲತಃ ಕೃಷಿ ಕುಟುಂಬದವರೇ ಆಗಿದ್ದ ಕವಿತಾ, ಕೈ ಕೆಸರು ಮಾಡಿಕೊಂಡು ಬಾಯಿ ಮೊಸರಾಗಲು ಪ್ರಯತ್ನ ನಡೆಸಿದ್ದು ತಮ್ಮ ಮದುವೆಯ ಬಳಿಕ ಸೈಕಾಲಜಿ ಮತ್ತು ಕಂಪ್ಯೂಟರ್ ಸೈನ್ಸ್ನಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದವರು. ಸುಶಿಕ್ಷಿತ ಹೆಣ್ಣುಮಗಳಾಗಿದ್ದ ಇವರು ಇನ್ಫೋಸಿಸ್ ಸಂಸ್ಥೆಯಲ್ಲಿ ಪ್ರೋಗ್ರಾಮರ್ ಆಗಿ ಕೆಲಸ ನಿರ್ವಹಿಸುತ್ತಿದ್ದವರು. ಮದುವೆಯ ಬಳಿಕವೂ ಕೆಲಸ ಮುಂದುವರಿಸಲು ಸಂಸ್ಥೆ ಅವಕಾಶ ನೀಡಿದರೂ, ತಮ್ಮ ಗಂಡನ ಮನೆಯಲ್ಲಿ ಎಲ್ಲರೂ ಕೃಷಿಯಲ್ಲೇ ತೊಡಗಿಸಿಕೊಂಡಿದ್ದ ಕಾರಣ ಅವರಿಗೂ ಕೆಲಸ ಬಿಟ್ಟು, ಕೃಷಿ ಕೆಲಸಗಳತ್ತ ಚಿತ್ತ ಹಾಯಿಸಬೇಕಾದ ಅನಿವಾರ್ಯತೆ ಎದುರಾಯಿತು. ಉದ್ಯೋಗ ಕ್ಷೇತ್ರದಲ್ಲಿ ಮುಂದುವರಿದು ಉತ್ತಮ ಸಾಧನೆ ಮಾಡಬೇಕೆಂಬ ಬಣ್ಣ ಬಣ್ಣದ ಕನಸು ಹೊತ್ತು ಗಂಡನ ಮನೆಗೆ ಬಂದವರಿಗೆ ಈ ಸ್ಥಿತ್ಯಂತರ ಆರಂಭದಲ್ಲಿ ಅಹಿತವಾಗಿತ್ತು. ಆದರೆ ಅವರ ಗಂಡ ಉಮಾಶಂಕರ್ ಅವರ ಆಶಯವೂ ಕೃಷಿಯೇ ಆಗಿತ್ತು. ಕೊನೆಗೆ ಕೃಷಿಯನ್ನೇ ಬದುಕನ್ನಾಗಿ ಕವಿತಾ ಬದಲಾಯಿಸಿಕೊಳ್ಳುತ್ತಾರೆ.
ಅದರಂತೆ ತಮ್ಮ ಗಂಡನ ಮನೆಯ 43 ಎಕರೆ ಕೃಷಿ ಭೂಮಿಯಲ್ಲಿ 8 ಎಕರೆ ಪ್ರದೇಶವನ್ನು ಕೃಷಿ ಕಾರ್ಯಕ್ಕಾಗಿ ಕವಿತಾ ಅವರಿಗೆ ನೀಡಲಾಯಿತು. ಬರಡು ಭೂಮಿ. ಯಾವ ಬೆಳೆಯನ್ನು, ಹೇಗೆ ಬೆಳೆಯುವುದು ಎಂಬ ಗೊಂದಲ ಆರಂಭದಲ್ಲಿ ಕವಿತಾ ಅವರಲ್ಲಿ ಮನೆ ಮಾಡಿತ್ತಾದರೂ, ಆ ಬಳಿಕ ಕೃಷಿಗೆ ಸಂಬಂಧಿಸಿದಂತೆ ಇರುವ ಅಧಿಕಾರಿಗಳ ಸಹಾಯದಿಂದ ಮತ್ತು ಜಮೀನಿನಲ್ಲಿ ಮೊದಲು ದಾಳಿಂಬೆ ಬೆಳೆ ಬೆಳೆಯುತ್ತಾರೆ. ಇದಕ್ಕಾಗಿ ಅವರು ತಮ್ಮ ತವರು ಮನೆಯಿಂದ ಮದುವೆಯ ಸಂದರ್ಭದಲ್ಲಿ ನೀಡಿದ್ದ ತಮ್ಮ ಒಡವೆಗಳನ್ನು ಮಾರಿ ಹಣ ಹೊಂದಿಸಿಕೊಳ್ಳುತ್ತಾರೆ. ದೈವ ದೇವರುಗಳ ದಯೆಯೋ ಎಂಬಂತೆ ದಾಳಿಂಬೆ ಬೆಳೆ ಇವರಿಗೆ ಉತ್ತಮ ಫಸಲು ನೀಡುತ್ತದೆ. ಅಲ್ಲಿಂದ ಹುಟ್ಟಿದ ಛಲ, ಹಠ ಇಂದು ಇವರ ಜಮೀನು ಸಂಪದ್ಭರಿತವಾಗಿ ಕಂಗೊಳಿಸುವಂತೆ ಮಾಡುವಲ್ಲಿ ಸಹಾಯ ಮಾಡಿದೆ ಎಂದರೆ ತಪ್ಪಾಗಲಾರದೇನೋ.
ಸುಮಾರು 11 ವರ್ಷಗಳ ಹಿಂದೆ ಕೃಷಿ ಕಾಯಕಕ್ಕೆ ಇಳಿದು ಬರಡು ಪ್ರದೇಶದಲ್ಲಿ ಬಂಗಾರ ಬೆಳೆದ ಕವಿತಾ ಅವರ ತೋಟದಲ್ಲಿ ಇಂದು ಶ್ರೀಗಂಧದ ಮರಗಳು ಸೇರಿದಂತೆ ಇನ್ನೂ ಅನೇಕ ಬಗೆಯ ಮರ ಗಿಡಗಳನ್ನು ನಾವು ಕಾಣಬಹುದು. ಇವರು ಕರ್ನಾಟಕ ಮತ್ತು ತೆಲಂಗಾಣದ ಹಲವು ಕೃಷಿಕರಿಂದ ಬೇರೆ ಬೇರೆ ವಿಧದ ಶ್ರೀಗಂಧದ ಮರಗಳನ್ನು ನೆಟ್ಟು ಬೆಳೆಸಿದ್ದಾರೆ. ಪ್ರಸ್ತುತ ನಾವು ಇವರ ತೋಟದಲ್ಲಿ ಸುಮಾರು 8 ಸಾವಿರಗಳಷ್ಟು ಹಣ್ಣಿನ ಮರಗಳನ್ನು ಕಾಣಬಹುದಾಗಿದೆ. 800 ಟೀಕ್.ವುಡ್ಗಳು, ಶ್ರೀಗಂಧದ ಜೊತೆಗೆ ದಾಳಿಂಬೆ, ಮಾವು, ಪೇರಳೆ, ಕಸ್ಟರ್ಡ್ ಆಪಲ್, ನೆಲ್ಲಿಕಾಯಿ, ನಿಂಬೆ, ಡ್ರಮ್ ಸ್ಟಿಕ್, ತೆಂಗು ಸೇರಿದಂತೆ ವಿವಿಧ ಜಾತಿಯ ಫಲ ನೀಡುವ ಹಣ್ಣುಗಳ ಹಾಗೂ ಇತರ ವಾಣಿಜ್ಯೋದ್ಯಮಗಳ ಮರಗಳನ್ನು ನಾವು ಕವಿತಾ ಮಿಶ್ರ ತೋಟದಲ್ಲಿ ಕಣ್ತುಂಬಿಕೊಳ್ಳಬಹುದಾಗಿದೆ. ಇವರು ತಮ್ಮ ಈ ಬಹುವಿಧ ಕೃಷಿಯಿಂದಲೇ ಪ್ರಸ್ತುತ ವಾರ್ಷಿಕ ಸುಮಾರು 20-30 ಲಕ್ಷ ವರಮಾನ ಗಳಿಸುತ್ತಿರುವುದಾಗಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಇನ್ನು ಇವರ ತೋಟದಲ್ಲಿ ನೀರಿನ ಕೊರತೆ ಇದೆ. ಬೋರ್ವೆಲ್ ಕೊರೆಯಲಾಗಿದೆ. ಆದರೆ ಬೋರ್ವೆಲ್ನಲ್ಲಿ ಕೇವಲ 2-3 ಇಂಚು ನೀರು ಸಿಕ್ಕಿದೆ. ಹಾಗಾಗಿ ಭತ್ತ, ರಾಗಿ ಮೊದಲಾದವುಗಳನ್ನು ಬೆಳೆಯುವುದು ಅಸಾಧ್ಯ. ಇದನ್ನು ಮನಗಂಡ ಕವಿತಾ ಹಣ್ಣಿನ ಬೆಳೆಗಳ ಮೂಲಕವೇ ಸುಂದರ ಮತ್ತು ಸಂಪದ್ಭರಿತ ಜೀವನ ಕಟ್ಟಿಕೊಂಡಿದ್ದಾರೆ ಎಂದು ನಿಸ್ಸಂಶಯವಾಗಿ ಹೇಳಬಹುದು. ಇನ್ನು ಗಂಧದ ಮರಗಳಿಗೆ ಬೇಡಿಕೆ ಹೆಚ್ಚು. ಈ ಹಿನ್ನೆಲೆಯಲ್ಲಿ ಅವುಗಳನ್ನು ನೆಟ್ಟು ಬೆಳೆಸಿದರಷ್ಟೇ ಸಾಲದು. ಬದಲಾಗಿ ಅವುಗಳ ನಿರ್ವಹಣೆ ಮತ್ತು ಅವುಗಳನ್ನು ಕಾಪಾಡಿಕೊಳ್ಳುವುದರತ್ತಲೂ ನಾವು ಚಿತ್ತ ಹರಿಸಬೇಕಾದದ್ದು ಅಗತ್ಯ. ಹಾಗಾಗಿ ತಮ್ಮ ಕೃಷಿ ಕ್ಷೇತ್ರದಲ್ಲಿನ ಗಂಧದ ಮರಗಳನ್ನು ಕಾಪಾಡಲು ಆ ಮರಗಳಿಗೆ ಮೈಕ್ರೋ ಚಿಪ್ ಸಿಸ್ಟಂ ಅಳವಡಿಸಿಕೊಂಡಿದ್ದಾರೆ. ಮರಗಳ್ಳರು ಮರಗಳಿಗೆ ಕೊಡಲಿ ತಾಕಿಸಿದ ತಕ್ಷಣವೇ ಇದು ಕವಿತಾ ಅವರಿಗೆ ಸಂದೇಶ ರವಾನೆ ಮಾಡುತ್ತದೆ. ಒಂದು ವೇಳೆ ತೋಟಕ್ಕೆ ತಲುಪುವ ಮೊದಲೇ ಮರ ಕಡಿದು ಸಾಗಿಸುವ ಯತ್ನ ನಡೆಸಿದರೆ ಸಹ ಜಿಪಿಎಸ್ ಮೂಲಕವೇ ಕಳ್ಳರನ್ನು ಪತ್ತೆ ಮಾಡುವುದೂ ಈ ಜಿಪಿಎಸ್ ನಿಂದ ಸಾಧ್ಯವಾಗುತ್ತದೆ ಎಂದು ಕವಿತಾ ತಿಳಿಸಿದ್ದಾರೆ.
ಇನ್ನು ಇವರ ಕೃಷಿ ಭೂಮಿಗೆ ಮಳೆಗಾಲದಲ್ಲಿ ನಾಲ್ಕು ತಿಂಗಳು ಮಳೆಯಿಂದ ಇಂಗಿಸಲಾದ ನೀರನ್ನು ಬಳಕೆ ಮಾಡಿದರೆ ಉಳಿದ ಎಂಟು ತಿಂಗಳಲ್ಲಿ ಬೋರ್ ನೀರನ್ನೇ ಬಳಕೆ ಮಾಡಲಾಗುತ್ತದೆ. ಭೂಮಿ ತಾಯಿಯ ಮೇಲೆ ವಿಪರೀತ ನಂಬಿಕೆ ಹೊಂದಿರುವ ಕವಿತಾ ಅವರು, ನಮ್ಮನ್ನು ಯಾರೇ ಕೈ ಬಿಡಬಹುದು. ಆದರೆ ನಂಬಿದ ಭೂಮಿ ತಾಯಿ ಕೈ ಬಿಡುವುದು ಸಾಧ್ಯವೇ ಇಲ್ಲ ಎಂಬುದರಲ್ಲಿ ಅಪರಿಮಿತ ನಂಬಿಕೆ ಇರಿಸಿದ್ದಾರೆ. ಹಾಗೆಯೇ ತಮ್ಮ ಕೃಷಿ ಭೂಮಿಗೆ ಸಾವಯವ ಗೊಬ್ಬರಗಳಾದ ಹಸುವಿನ ಸೆಗಣಿ, ಕುರಿ ಗೊಬ್ಬರವನ್ನೇ ಬಳಕೆ ಮಾಡುತ್ತಿರುವುದಾಗಿಯೂ ಅವರು ತಿಳಿಸಿದ್ದಾರೆ. ಇನ್ನು ತಮ್ಮ ತೋಟಗಳಿಗೆ ಯಾವುದೇ ರೀತಿಯ ಕೀಟ ನಾಶಕಗಳನ್ನು ಬಳಕೆ ಮಾಡುವುದಿಲ್ಲ. ಬದಲಾಗಿ ತೋಟದಲ್ಲಿ ವಾಸಿಸುವ ಪ್ರಾಣಿ, ಪಕ್ಷಿ, ಹಾವು ಮೊದಲಾದವುಗಳೇ ಕ್ರಿಮಿ, ಕೀಟ ಅಥವಾ ಇನ್ಯಾವುದೇ ಸಮಸ್ಯೆಯಿಂದ ತೋಟವನ್ನು ರಕ್ಷಣೆ ಮಾಡುತ್ತದೆ ಎಂದು ಕವಿತಾ ತಿಳಿಸಿದ್ದಾರೆ. ಹಾಗೆಯೇ ಕಳ್ಳಕಾರರಿಂದ ಕೃಷಿ ರಕ್ಷಣೆಗೆಂದೇ ಸಮರ್ಥ ನಾಯಿಗಳನ್ನು ಸಹ ಸಾಕುತ್ತಿದ್ದೇವೆ. ಅವುಗಳೇ ಎಲ್ಲವನ್ನೂ ನಿಭಾಯಿಸುವುದಾಗಿಯೂ ಅವರು ಮಾಹಿತಿ ನೀಡಿದ್ದಾರೆ.
ಇನ್ನು ಕೃಷಿ ಉತ್ಪನ್ನಗಳ ಮಾರಾಟಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ಕವಿತಾ, ಹೈದರಾಬಾದ್-ಗೋವಾ ನಡುವಿನ ದಾರಿಯಲ್ಲಿ 15 ದಿನಗಳ ಕಾಲ ಸ್ಟಾಲ್ ಹಾಕುವ ಮೂಲಕ ಕೃಷಿ ಉತ್ಪನ್ನಗಳ ಮಾರಾಟ ನಡೆಸುವುದಾಗಿ ತಿಳಿಸಿದ್ದಾರೆ. ಹಾಗೆಯೇ ತಮ್ಮದೇ ಜಮೀನಿನ ಮುಂದೆಯೂ ಕೃಷಿ ಉತ್ಪಾದನೆಗಳನ್ನು ಮಾರಾಟ ಮಾಡುವುದಾಗಿ ಅವರು ತಿಳಿಸಿದ್ದಾರೆ. ಸಸಿಗಳನ್ನು ಕಸಿ ಕಟ್ಟುವ ಮೂಲಕವೂ ರೈತರಿಗೆ ಮಾರಾಟ ಮಾಡುವ ಕೆಲಸವನ್ನು ಕವಿತಾ ಮಾಡುತ್ತಿದ್ದಾರೆ. ಇವರಲ್ಲಿ ಮಾರಾಟ ಮಾಡಲಾಗುವ ಹಣ್ಣುಗಳಿಗೆ ಬೆಂಗಳೂರು ಮಾರುಕಟ್ಟೆಯ ದರವನ್ನೇ ನಿಗದಿ ಮಾಡಲಾಗುತ್ತದೆ.
ಇನ್ನು ನೂತನವಾಗಿ ಕೃಷಿಗೆ ಕಾಲಿರಿಸಲು ಬಯಸುವ ಜನರನ್ನು ಗಮನದಲ್ಲಿಟ್ಟುಕೊಂಡು ಕವಿತಾ ಅವರಿಗೆ ಆರಂಭಿಕ ಸಹಾಯವಾಗಿ ಸಲಹೆ, ಸೂಚನೆಗಳನ್ನು ನೀಡುವ ಕೆಲಸಕ್ಕೂ ಕೈ ಹಾಕಿದ್ದಾರೆ. ಭಾನುವಾರಗಳಲ್ಲಿ ಅನೇಕ ಜನರು ಇವರ ಕಾರ್ಯಕ್ಷೇತ್ರಕ್ಕೆ ಭೇಟಿ ನೀಡಿ ಕೃಷಿ ಭೂಮಿಯನ್ನು ನೋಡುವ, ಕಲಿಯುವ ಕೆಲಸವನ್ನು ಸಹ ಮಾಡುತ್ತಿದ್ದಾರೆ. ಇವರೊಂದಿಗೆ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ಬಯಸುವವರು 8861789787 ಸಂಖ್ಯೆ ಗೆ ಕರೆ ಮಾಡಿ ಮಾತನಾಡಬಹುದಾಗಿದೆ.
ಯಶಸ್ಸು ಯಾರಪ್ಪನ ಮನೆಯ ಸ್ವತ್ತೂ ಅಲ್ಲ. ಸೋಲು-ಗೆಲುವು, ಯಶಸ್ಸು-ಸೋಲಿನ ಲೆಕ್ಕಾಚಾರ ಹಾಕುತ್ತಾ ಕುಳಿತರೆ ಯಶಸ್ಸು ದೊರೆಯಲಾರದರು. ಅದರ ಬದಲು ಆದದ್ದಾಗಲಿ. ಒಂದು ಕೈ ನೋಡೇ ಬಿಡೋಣ ಎಂದು ತಾವಂದುಕೊಂಡತ್ತ ಧುಮುಕಿದರೆ ವಿಜಯ ಮಾಲೆ ಕೊರಳಿಗೆ ಬೀಳುತ್ತದೆ. ಹಲವು ಜನರ ಬದುಕಿಗೂ ನಾವು ಮಾದರಿಗಳಾಗುತ್ತೇವೆ. ಇದಕ್ಕೆ ಜ್ವಲಂತ ಸಾಕ್ಷಿ ಕವಿತಾ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.