ಬಾಗಲಕೋಟೆ: ಕೊರೋನಾ ವಕ್ಕರಿಸಿಕೊಂಡ ಬಳಿಕ ಶಿಕ್ಷಣ ಕ್ಷೇತ್ರಕ್ಕೆ, ವಿದ್ಯಾರ್ಥಿಗಳಿಗೆ ಇನ್ನಿಲ್ಲದ ಸಮಸ್ಯೆ ಉಂಟಾಗಿದೆ. ಈ ವಿಚಾರವನ್ನು ಗಮನದಲ್ಲಿರಿಸಿಕೊಂಡು ಬಾಗಲಕೋಟೆಯ, ದನ್ನೂರಿನ ಸರ್ಕಾರಿ ಕಾಲೇಜೊಂದರ ಉಪನ್ಯಾಸಕಿ, ಇಳಕಲ್ ಪಟ್ಟಣದ ಪ್ರಿಯದರ್ಶಿನಿ ಎಂಬುವವರು ಮಹತ್ವದ ಸಾಧನೆಯೊಂದನ್ನು ಮಾಡಿದ್ದಾರೆ.
ಇತಿಹಾಸ ಉಪನ್ಯಾಸಕರಾಗಿರುವ ಇವರು ಅಂಬೇಡ್ಕರ್ ತತ್ವಗಳನ್ನು ಉಪದೇಶಿಸುವ ಬದಲು, ಅಳವಡಿಸಿಕೊಂಡು ತಮ್ಮ ಸುತ್ತಮುತ್ತಲಿನ ದುರ್ಬಲ, ಅಸಹಾಯಕ ವರ್ಗದವರನ್ನು ಗಮನದಲ್ಲಿರಿಸಿಕೊಂಡು ‘ಡಾ. ಬಾಬಾ ಸಾಹೇಬ್ ಅಂಬೇಡ್ಕರ್’ ಹೆಸರಿನಲ್ಲಿ ಪುಟ್ಟ ಗ್ರಂಥಾಲಯ ಒಂದನ್ನು ತೆರೆದಿದ್ದಾರೆ. ಓದುವ ಆಸಕ್ತಿ ಇದ್ದರೂ ಹಲವಾರು ಕಾರಣಗಳಿಂದ ಪುಸ್ತಕಗಳನ್ನು ಕೊಳ್ಳಲಾಗದವರಿಗೆ ಉಪಯೋಗವಾಗಲಿ ಎಂಬ ನಿಟ್ಟಿನಲ್ಲಿ ತಮ್ಮದೇ ಸ್ವಂತ ಹಣವನ್ನು ಉಪಯೋಗಿಸಿ ಈ ಲೈಬ್ರರಿಗೆ ಜೀವ ನೀಡಿದ್ದಾರೆ.
ತಮ್ಮ ಎಳವೆಯಿಂದಲೇ ಪುಸ್ತಕದ ಪ್ರೀತಿಯನ್ನು ಬೆಳೆಸಿಕೊಂಡು ಬಂದಿರುವ ಪ್ರಿಯದರ್ಶಿನಿ ಅವರ ಈ ಲೈಬ್ರರಿಯಲ್ಲಿ, ಅಂಬೇಡ್ಕರ್, ಬುದ್ಧ, ಬಸವ, ಲೋಹಿಯಾ, ಜ್ಯೋತಿ ಬಾ ಪುಲೆ, ಭಗತ್ ಸಿಂಗ್ ಸೇರಿದಂತೆ ಇನ್ನೂ ಅನೇಕ ಮಹನೀಯರ ಬಗೆಗಿನ ಪುಸ್ತಕಗಳು, ಮಹಿಳಾ ವಾದದ ಪುಸ್ತಕಗಳು ಸೇರಿದಂತೆ ಇನ್ನೂ ಅನೇಕ ಬಗೆಯ ಪುಸ್ತಕಗಳಿರುವುದನ್ನು ನಾವು ಕಾಣಬಹುದು. ಎಳೆಯರಿಂದ ಹಿಡಿದು ಹಿರಿಯರ ವರೆಗೂ ಓದಬಹುದಾದ ಮತ್ತು ಓದಲೇ ಬೇಕಾದ ಪುಸ್ತಕಗಳನ್ನು ಇವರ ಈ ಗ್ರಂಥಾಲಯದಲ್ಲಿ ನಾವು ಗಮನಿಸಬಹುದಾಗಿದೆ. ಈ ಗ್ರಂಥಾಲಯದ ಓದುಗರಾಗುವುದಕ್ಕೆ ಯಾವುದೇ ರೀತಿಯ ಸದಸ್ಯತನದ ಅಗತ್ಯವಿಲ್ಲ. ಬದಲಾಗಿ ಯಾರೇ ಆಗಲಿ ಓದುವ ಹಂಬಲವುಳ್ಳವರು ಈ ಗ್ರಂಥಾಲಯವನ್ನು ಬಳಕೆ ಮಾಡುವ ಮೂಲಕ ತಮ್ಮ ಜ್ಞಾನಾರ್ಜನೆ ಮಾಡಿಕೊಳ್ಳಬಹುದಾಗಿದೆ.
ಪ್ರಿಯದರ್ಶಿನಿ ಅವರು ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ವಿಚಾರದಲ್ಲಿ ಪಿ ಎಚ್ಡಿ ಪದವಿ ಪಡೆದವರಾಗಿದ್ದು, ಓದುವ ಹವ್ಯಾಸವನ್ನು ತಮ್ಮ ತಂದೆಯಿಂದಲೇ ರೂಢಿಸಿಕೊಂಡು ಬಂದವರು. ಜೊತೆಗೆ ಇವರು ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಇರುವ ಪುಸ್ತಕಗಳನ್ನು ಓದುವಲ್ಲಿಯೂ ವಿಶೇಷ ಆಸಕ್ತಿ ಹೊಂದಿದವರಾಗಿದ್ದಾರೆ.
ಇನ್ನು ಇವರ ಈ ಲೈಬ್ರರಿ ಆರಂಭದ ಮುಖ್ಯ ಕಾರಣದ ಕಡೆಗೆ ಗಮನ ಹರಿಸಿದರೆ, ಯುವಜನತೆ ಇಂದು ತಾಂತ್ರಿಕತೆಯ ಮೂಲಕವೇ ಜ್ಞಾನ ಸಂಪಾದನೆಯ ಮಾರ್ಗ ಹುಡುಕಿಕೊಳ್ಳುತ್ತಿದ್ದಾರೆ. ಆದರೆ ಪುಸ್ತಕಗಳನ್ನು ಓದುವುದರಿಂದ ಸಿಗುವ ಜ್ಞಾನ ಇಂಟರ್ನೆಟ್ ನೀಡಲು ಸಾಧ್ಯವಿಲ್ಲ. ಮೊಬೈಲ್ಗೆ ತಮ್ಮನ್ನು ಹೆಚ್ಚು ಒಗ್ಗಿಸಿಕೊಂಡಿರುವ ಮಕ್ಕಳು ಪುಸ್ತಕದ ಓದಿನಿಂದ ವಿಮುಖರಾಗುತ್ತಿದ್ದಾರೆ. ಅವರನ್ನು ಮತ್ತೆ ಓದಿನತ್ತ ಸೆಳೆಯಲು ಲೈಬ್ರರಿ ಆರಂಭಿಸಲಾಗಿದೆ. ತಮ್ಮೂರಿನ ವಿದ್ಯಾರ್ಥಿಗಳು ಇದರ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳುವಂತಾಗಲು ಅವರ ಹೆತ್ತವರ ಜೊತೆಗೂ ಚರ್ಚೆ ನಡೆಸಲಾಗಿದೆ ಎಂದು ಪ್ರಿಯದರ್ಶಿನಿ ತಿಳಿಸಿದ್ದಾರೆ.
ಆರಂಭದಲ್ಲಿ ಸಂಜೆ ಹೊತ್ತು ಮಾತ್ರವೇ ತೆರೆಯುತ್ತಿದ್ದ ಲೈಬ್ರರಿ ಸದ್ಯ ಮಕ್ಕಳ ಒಳಗೊಳ್ಳುವಿಕೆಯ ಕಾರಣದಿಂದ ಬೆಳಗ್ಗಿನಿಂದಲೇ ಕಾರ್ಯ ನಿರ್ವಹಿಸುವಂತಾಗಿದೆ. ಬೆಳಗ್ಗೆ 7 ಗಂಟೆಯಿಂದ 9 ರ ವರೆಗೆ, ಸಂಜೆ 5 ರಿಂದ 9 ರ ವರೆಗೆ ಪ್ರಸ್ತುತ ಈ ಲೈಬ್ರರಿ ತೆರೆದಿರುತ್ತದೆ. ಸದ್ಯ ಈ ಲೈಬ್ರರಿಗೆ ದಿನಪತ್ರಿಕೆಗಳನ್ನು ಸಹ ಹಾಕಲಾಗುತ್ತಿದೆ. ಹಾಗೆಯೇ ಈ ಲೈಬ್ರರಿಯಲ್ಲಿ ಮಕ್ಕಳಿಂದ ವಯಸ್ಕರ ವರೆಗೆ ಓದಬಹುದಾದ ಪುಸ್ತಕಗಳನ್ನು ಪ್ರಿಯದರ್ಶಿನಿ ಇರಿಸಿದ್ದಾರೆ.
ಒಟ್ಟಿನಲ್ಲಿ ಅಂಬೇಡ್ಕರ್ ಆಶಯವನ್ನು ಕೇವಲ ಬೋಧನೆಗಷ್ಟೇ ಸೀಮಿತ ಮಾಡದೆ, ಅದನ್ನು ಸಮರ್ಥವಾಗಿ ಅಳವಡಿಸಿಕೊಳ್ಳುವ ದೃಷ್ಟಿಯಿಂದಲೂ ಪ್ರಿಯದರ್ಶಿನಿ ಅವರು ಪ್ರಯತ್ನ ನಡೆಸಿರುವುದು ಇತರರಿಗೂ ಮಾದರಿಯೇ ಸರಿ. ಪ್ರತಿ ಹಳ್ಳಿ ಹಳ್ಳಿಗೂ ಇಂತಹ ಒಂದು ಲೈಬ್ರರಿಯನ್ನು ಹೊಂದುವ ಗುರಿಯನ್ನು ಹೊತ್ತಿರುವ ಪ್ರಿಯದರ್ಶಿನಿ ಅವರ ಕನಸು ನನಸಾಗಲಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.