ರಾಜ್ಯದ ಜನರಿಗೆ ಸುಗಮ ಸಂಚಾರ, ಪ್ರಯಾಣಕ್ಕೆ ಸಹಕಾರಿಯಾಗಿದ್ದ, ಆ ಮೂಲಕ ಇಡೀ ದೇಶದಲ್ಲೇ ‘ದಿ ಬೆಸ್ಟ್’ ಮಾದರಿ ಸಾರಿಗೆ ಸಂಸ್ಥೆ ಎಂಬ ಕೀರ್ತಿಗೆ ಭಾಜನವಾಗಿದ್ದ ರಾಜ್ಯ ಸಾರಿಗೆ ಸಂಸ್ಥೆ ‘ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ’ ಯ ನೌಕರರು ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ಕಳೆದ ನಾಲ್ಕು ದಿನಗಳಿಂದ ಏಕಾಏಕಿ ಮುಷ್ಕರ ಆರಂಭಿಸಿದ್ದಾರೆ. ಇನ್ನೇನು ತಮ್ಮ ಬೇಡಿಕೆಗಳಲ್ಲಿ ಹಲವನ್ನು ಸರ್ಕಾರ ಈಡೇರಿಸುವ ಭರವಸೆ ನೀಡಿದೆ ಎಂದಾದ ಬಳಿಕ ಇಂದಿನಿಂದ ಮುಷ್ಕರ ಹಿಂಪಡೆದು ಕರ್ತವ್ಯಕ್ಕೆ ಹಾಜರಾಗುವುದಕ್ಕೂ ಸಾರಿಗೆ ನೌಕರರು ಸಿದ್ಧತೆ ನಡೆಸಿದ್ದರು.
ಇದರ ನಡುವೆ ‘ರೈತ ಮುಖಂಡ’ ಎಂದು ಹಸಿರು ಶಾಲು ಹಾಕಿಕೊಂಡು ಹಲವು ಮುಷ್ಕರಗಳಲ್ಲಿ ಪಾಲ್ಗೊಳ್ಳುವ ಕೋಡಿಹಳ್ಳಿ ಚಂದ್ರಶೇಖರ್ ಎಂಬವರು ಸಾರಿಗೆ ನೌಕರರ ಮುಷ್ಕರದಲ್ಲಿಯೂ ಮೂಗು ತೂರಿಸಿ, ಸರ್ಕಾರದ ವಿರುದ್ಧ ನೌಕರರನ್ನು ಎತ್ತಿ ಕಟ್ಟುವ ಪ್ರಯತ್ನ ನಡೆಸುತ್ತಾರೆ. ಅದರಲ್ಲಿ ಯಶಸ್ಸು ಸಹ ಕಾಣುತ್ತಾರೆ. ನಿನ್ನೆಯಷ್ಟೇ ಸಾರಿಗೆ ನೌಕರರಿಗೆ ಸಂಬಂಧಿಸಿದ ಸಂಘಗಳ ಮುಖಂಡರ ಜೊತೆಗೆ ಸರ್ಕಾರ ಮಾತುಕತೆ ನಡೆಸಿ, ನೌಕರರ ಸುಮಾರು ಒಂಬತ್ತಕ್ಕೂ ಅಧಿಕ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ ಬಳಿಕ ನೌಕರರು ಮುಷ್ಕರ ಹಿಂಪಡೆದು ಮತ್ತೆ ಸೇವೆಯನ್ನು ಆರಂಭಿಸಲು ಮುಂದಾಗಿದ್ದರು. ಆದರೆ ಇದೀಗ ಕೋಡಿಹಳ್ಳಿ ಚಂದ್ರಶೇಖರ್ ಎಂಬವರು ಮತ್ತೆ ಕಡ್ಡಿ ಅಲ್ಲಾಡಿಸಿ ನೌಕರರು ಬಸ್ ಬೀದಿಗಿಳಿಸದಂತೆ ಮಾಡಿದ್ದಾರೆ ಎಂಬುದು ದುರಾದೃಷ್ಟ.
ಇಲ್ಲಿ ಸಾರಿಗೆ ನೌಕರರ ಬವಣೆ, ಅವರಿಗೆ ಬೇಕಾದ ಅಗತ್ಯತೆಗಳು, ಅವರ ಬೇಡಿಕೆಗಳನ್ನು ಸರ್ಕಾರದ ಮುಂದಿಡುವ ಎಲ್ಲಾ ವಿಚಾರಗಳೂ ಸರಿಯೇ. ಸಾರಿಗೆ ನೌಕರರ ನೋವನ್ನು ಪರಿಹರಿಸಬೇಕಾದದ್ದು ಸರ್ಕಾರದ ಆದ್ಯ ಮತ್ತು ಆದ್ಯತೆಯ ಕರ್ತವ್ಯ. ಆ ಮಟ್ಟಿನ ಸೇವೆಯನ್ನು ಸಾರಿಗೆ ಇಲಾಖೆ ಸಾರ್ವಜನಿಕ ವಲಯಕ್ಕೆ ನೀಡುತ್ತಾ ಬಂದಿದೆ. ಇನ್ನು ಸರ್ಕಾರ ಸಹ ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸುವ ನೆಲೆಯಲ್ಲಿ ಭರವಸೆ ನೀಡಬೇಕಾದದ್ದು ಮತ್ತು ಅವುಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ನಡೆಸಬೇಕಾದದ್ದು ಸರ್ಕಾರದ ಜವಾಬ್ದಾರಿ. ಈ ಹಿನ್ನೆಲೆಯಲ್ಲಿ ಸರ್ಕಾರ ಮತ್ತು ನೌಕರರ ನಡುವಿನ ವಾಹಕವಾಗಲು ಸಾರಿಗೆ ನೌಕರರ ಯೂನಿಯನ್ ಇರುವಾಗ, ನೌಕರರ ಸಮಸ್ಯೆಗಳನ್ನು ಸರಿಯಾದ ರೀತಿಯಲ್ಲಿ ಸರ್ಕಾರಕ್ಕೆ ತಲುಪಿಸಲು ಸಾರಿಗೆ ನೌಕರರ ಮುಖಂಡರೇ ಇರುವಾಗ, ಇದರಲ್ಲಿ ಮೂಗು ತೂರಿಸುವ, ನೌಕರರನ್ನು ದಾರಿ ತಪ್ಪಿಸುವ ‘ಕೋಡಿಹಳ್ಳಿ ಚಂದ್ರಶೇಖರ್’ ಅವರಂತಹವರ ಉದ್ದೇಶದ ಬಗ್ಗೆ ಅನುಮಾನ ಮೂಡುತ್ತದೆ.
ನಿಜವಾದ ರೈತನೊಬ್ಬನ ಮನಸ್ಸು ಹೇಗಿರುತ್ತದೆ ಎಂದರೆ, ನನ್ನಿಂದಾಗಿ ಇತರರಿಗೆ ಯಾವುದೇ ತೊಂದರೆಯಾಗಬಾರದು, ನನ್ನಿಂದಾಗಿ ಯಾರಿಗೂ ನಷ್ಟ ಉಂಟಾಗಬಾರದು, ನನ್ನಿಂದ ಮತ್ತೊಬ್ಬರಿಗೆ ಸಹಾಯವಾಗುತ್ತದೋ ಬಿಡುತ್ತದೋ, ಸಮಸ್ಯೆಯಂತೂ ಆಗದಿರಲಿ ಎಂಬಂತೆ ರೈತ ಚಿಂತಿಸುತ್ತಾನೆ. ಇಂತಹ ಸಹೃದಯಿ ರೈತರನ್ನು ನಮ್ಮ ರಾಜ್ಯ ಹೊಂದಿದೆ. ರೈತರ ಮೇಲೆ ಸಾರ್ವಜನಿಕರು ಇರಿಸಿರುವ ಇಂತಹ ನಂಬಿಕೆಗೆ ‘ಮಸಿ ಬಳಿಯುವ’ ಕೆಲಸವನ್ನು ಸಾರಿಗೆ ನೌಕರರ ದಾರಿ ತಪ್ಪಿಸುವ ಪ್ರಯತ್ನದ ಮೂಲಕ ಕೋಡಿಹಳ್ಳಿಯಂತಹವರು ಮಾಡುತ್ತಿದ್ದಾರೆ ಎಂಬುದು ದುರಂತವೇ ಸರಿ.
ಸಾರಿಗೆ ನೌಕರರ ಸಮಸ್ಯೆಗೆ ಮತ್ತು ರೈತ ಮುಖಂಡರಿಗೆ ಏನು ಸಂಬಂಧ? ಎಂಬ ಪ್ರಶ್ನೆ ಕಳೆದ ನಾಲ್ಕು ದಿನಗಳ ಸಾರಿಗೆ ನೌಕರರ ಮುಷ್ಕರವನ್ನು ಗಮನಿಸಿದವರಿಗೆ ಸಹಜವಾಗಿಯೇ ಮೂಡುತ್ತದೆ. ಏಕೆಂದರೆ, ಸಾರಿಗೆ ನೌಕರರ ಸಮಸ್ಯೆಗಳ ಬಗ್ಗೆ ಮಾತನಾಡಲು ಅವರದ್ದೇ ಸಂಘಟನೆಗಳು ಇವೆ ಸ್ವಾಮಿ. ಅದಕ್ಕೆ ಯಾವ ಕೋಡಿಹಳ್ಳಿಯೂ ಬೇಕಾಗಿಲ್ಲ. ಅಥವಾ ಇನ್ಯಾವುದೋ ಸಮಾಜ ಸುಧಾರಕರೂ ಬೇಕಿಲ್ಲ. ಸಾರಿಗೆ ನೌಕರರ ಸಂಕಷ್ಟದ ಅರಿವೇ ಇರದವರು ಅವರನ್ನು ಮುಷ್ಕರ ನಡೆಸಲು ಪ್ರೇರೇಪಣೆ ನೀಡುವುದು, ಆ ಮೂಲಕ ಸಾರ್ವಜನಿಕರಿಗೆ ಸಮಸ್ಯೆ ತಂದೊಡ್ಡುವುದು, ಸಾರ್ವಜನಿಕವಾಗಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುವುದು ಕಾನೂನಾತ್ಮಕವೂ ಅಲ್ಲ. ಅದು ಖಂಡನೀಯ ಅಪರಾಧ.
ಕೋಡಿಹಳ್ಳಿ ಅವರು ಸಾರಿಗೆ ನೌಕರರ ಮುಷ್ಕರ ಎಂಬ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿ ನೌಕರರಲ್ಲೇ ಎರಡು ಬಣ ಸೃಷ್ಟಿಯಾಗುವ ಪರಿಸ್ಥಿತಿ ಬಂದಿರುವುದು ಖೇದಕರ ವಿಚಾರ. ನೌಕರರ ಒಗ್ಗಟ್ಟು ಮುರಿದು ಅವರಿಗೆ ಮತ್ತಷ್ಟು ಸಮಸ್ಯೆ ಮಾಡಲು ಹೊರಟಿರುವ ಕೋಡಿಹಳ್ಳಿ ಅವರ ಆಶಯ ಶುದ್ಧವಾಗಿರಲಂತೂ ಸಾಧ್ಯವಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬರುವ ಸತ್ಯ. ಇದೀಗ ಕೋಡಿಹಳ್ಳಿ ಜೊತೆಗೆ ಕೈ ಜೋಡಿಸದ ಬಣ ಇಂದು ಬಸ್ಸುಗಳನ್ನು ರಸ್ತೆಗಿಳಿಸಲು ಮುಂದಾಗಿದ್ದರೆ, ಅವರ ಜೊತೆಗೆ ಕೈ ಜೋಡಿಸಿರುವ ನೌಕರರು ಮುಷ್ಕರ ಮುಂದುವರೆಸಲು ಹೊರಟಿದ್ದಾರೆ. ಪರಿಸ್ಥಿತಿ ಬಿಗಡಾಯಿಸುವ ಮೊದಲೇ ನೌಕರರು ಎಚ್ಚೆತ್ತುಕೊಳ್ಳದಿದ್ದರೆ ಇಂತಹ ಸಮಯ ಸಾಧಕರು ನೌಕರರಿಗೆ ಮತ್ತಷ್ಟು ಸಮಸ್ಯೆ ಸೃಷ್ಟಿಸುವ ದಿನ ದೂರವಿಲ್ಲ.
ನೌಕರರು ಈ ಸಂದರ್ಭದಲ್ಲಿ ಯೋಚಿಸಬೇಕಾದ ವಿಚಾರವೆಂದರೆ, ನೀವು ಇಟ್ಟ ಬೇಡಿಕೆಗಳಲ್ಲಿ ಹೆಚ್ಚಿನವುಗಳನ್ನು ಈಡೇರಿಸುವ ಭರವಸೆಯನ್ನು ಸರ್ಕಾರ ನೀಡಿದೆ. ಸದ್ಯ ಕೊರೋನಾ ಕಾರಣದಿಂದ ಸರ್ಕಾರ ಸಹ ಆರ್ಥಿಕ ಸಂಕಷ್ಟದಲ್ಲಿದೆ. ಈ ಸಂದರ್ಭದಲ್ಲಿಯೂ ಸಾರಿಗೆ ನೌಕರರ ಕುಟುಂಬಗಳ ಬಗ್ಗೆ ಚಿಂತನೆ ನಡೆಸಿ, ಸರ್ಕಾರ ತನ್ನ ಬೊಕ್ಕಸದಿಂದಲೇ ನೌಕರರ ವೇತನವನ್ನು ಸಹ ನೀಡಿದೆ. ಕೊರೋನಾ ಸಂದರ್ಭದಲ್ಲಿ ಬಸ್ಸುಗಳ ಓಡಾಟ ಸ್ಥಗಿತಗೊಂಡ ಪರಿಣಾಮ ಸಾರಿಗೆ ಸಂಸ್ಥೆಯ ಆರ್ಥಿಕ ಪರಿಸ್ಥಿತಿಯೂ ಉತ್ತಮವಾಗಿಲ್ಲ. ಇನ್ನು ನೌಕರರೇ, ನೀವು ಇದೇ ರೀತಿ ಮುಷ್ಕರ ಮುಂದುವರೆಸಿದಲ್ಲಿ ಸರ್ಕಾರಕ್ಕೂ ನಷ್ಟ ಜೊತೆಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಸ್ಯೆ ಅನುಭವಿಸುವವರೂ ನೀವೇ ಆಗುತ್ತೀರಿ. ದಯಮಾಡಿ ಒಮ್ಮೆ ನಿಮ್ಮ ಕುಟುಂಬದ ಬಗ್ಗೆ, ನಿಮ್ಮನ್ನೇ ನಂಬಿಕೊಂಡು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣ ಬೆಳೆಸುವ ಪ್ರಯಾಣಿಕರ ಸಂಕಷ್ಟವನ್ನು, ಅವರು ನಿಮ್ಮ ಮುಷ್ಕರದಿಂದಾಗಿ ಅನುಭವಿಸುವ ಸಮಸ್ಯೆಯನ್ನು ಮನಸ್ಸಿಗೆ ತೆಗೆದುಕೊಳ್ಳಿ. ಆಗ ನಿಮಗೇ ಅನಿಸುತ್ತದೆ, ಹೌದು ಈ ಮುಷ್ಕರ ಮತ್ತಷ್ಟು ಸಮಸ್ಯೆಗೆ ದಾರಿಯಾಗಬಹುದೇ ವಿನಃ, ಇದು ಯಾವುದೇ ರೀತಿಯ ಪರಿಣಾಮಾತ್ಮಕ ಪರಿಹಾರವನ್ನು ಒದಗಿಸಲು ಸಾಧ್ಯವಿಲ್ಲ ಎಂಬುದು.
ನೌಕರರೇ, ನಿಮಗೆ ಇಂದು ಕೋಡಿಹಳ್ಳಿ ಚಂದ್ರಶೇಖರ್ ಅವರಂತಹವರು ಬೆಂಬಲ ನೀಡುತ್ತಾರೆ ನಿಜ. ಆದರೆ ಮುಂದೆ ಇಂದಿನ ಮುಷ್ಕರದಿಂದ ಮತ್ತಷ್ಟು ಸಮಸ್ಯೆ ಸೃಷ್ಟಿಯಾದಲ್ಲಿ ಅವರು ನಿಮ್ಮೊಂದಿಗೆ ಕೊನೆವರೆಗೂ ನಿಲ್ಲಬಹುದೇ? ಖಂಡಿತಾ ಸಾಧ್ಯವಿಲ್ಲ. ನಿಮ್ಮ ಸಮಸ್ಯೆಗೆ ಕಣ್ಣೀರಿಡುವವರು ನೀವು ಮತ್ತು ನಿಮ್ಮ ಕುಟುಂಬಸ್ಥರು ಮಾತ್ರವೇ ಆಗಿರುತ್ತಾರೆ ಅಲ್ಲವೇ. ನಿಮ್ಮ ಮುಷ್ಕರದ ದಿನಗಳ ಸಂಬಳ ಕಡಿತವಾದರೆ ನೌಕರರೇ, ಕೋಡಿಹಳ್ಳಿ ಅವರು ನಿಮ್ಮ ಕುಟುಂಬದ ಜವಾಬ್ದಾರಿ ಹೊತ್ತುಕೊಳ್ಳುವರೇ? ಒಮ್ಮೆ ಯೋಚಿಸಿ. ಇಂತಹ ಸಮಯ ಸಾಧಕರಿಂದ ದೂರವಿದ್ದು ನಿಮ್ಮ ಸಂಘಟನೆಗಳು ಅಂದರೆ ಸರ್ಕಾರಿ ಸಾರಿಗೆಯ ನೌಕರರ ಸಂಘಟನೆಗಳ ಮೇಲೆ ನಂಬಿಕೆ ಇರಿಸಿ. ಏಕೆಂದರೆ ಅಂತಹ ಸಂಘಟನೆಗಳೇ ಕೊನೆ ವರೆಗೂ ನಿಮ್ಮ ಸಮಸ್ಯೆಗಳ ಜೊತೆ ನಿಲ್ಲಲು ಸಾಧ್ಯ. ಸರ್ಕಾರಕ್ಕೆ ನಿಮ್ಮ ಬೇಡಿಕೆಗಳನ್ನು ಸರಿಯಾದ ಧ್ವನಿಯಲ್ಲಿ ತಲುಪಿಸಲು ಸಾಧ್ಯ. ಹಾಗೆಯೇ ನಿಮಗೆ ಯಾವುದೇ ರೀತಿಯ ಸಮಸ್ಯೆಗಳು ಎದುರಾದ ಸಂದರ್ಭದಲ್ಲಿ ನಿಮ್ಮೊಂದಿಗೆ ಹೆಜ್ಜೆ ನೆಡಲು ಸಾಧ್ಯ. ಹೌದೋ, ಅಲ್ಲವೋ ಎಂಬುದು ನಿಮ್ಮ ಅರಿವಿಗೆ, ನಿಮ್ಮ ಚಿಂತನೆಗೆ ಬಿಟ್ಟದ್ದು.
ಆದ್ದರಿಂದ ಸಾರಿಗೆ ನೌಕರರ ಸಮಸ್ಯೆಯನ್ನು ಪರಿಹರಿಸುವ ಸೋಗಿನಲ್ಲಿ ಮತ್ತಷ್ಟು ಸಮಸ್ಯೆಯನ್ನು ನೌಕರರಿಗೆ ಮತ್ತು ಸಾರ್ವಜನಿಕ ವಲಯಕ್ಕೆ ನೀಡಲು ಹೊರಟಿರುವ, ಒಟ್ಟಾರೆ ವ್ಯವಸ್ಥೆಯನ್ನೇ ತಮ್ಮ ದುರುದ್ದೇಶದಿಂದ ಹಾಳು ಮಾಡುತ್ತಿರುವ ‘ನಾಲಾಯಕರ’ ಕಪಿಮುಷ್ಟಿಯೊಳಗೆ ಬಂಧಿಯಾಗುವ ಮೊದಲು ಎಚ್ಚೆತ್ತುಕೊಳ್ಳೋಣ. ನಮ್ಮ ಸಮಸ್ಯೆಗೆ ಸರ್ಕಾರ ಪರಿಹಾರ ನೀಡುತ್ತದೆ. ಈ ನಂಬಿಕೆಯ ಜೊತೆಗೆ ಮುಷ್ಕರ ಬಿಟ್ಟು, ಮತ್ತೆ ಕಾರ್ಯಕ್ಷೇತ್ರದತ್ತ ತೆರಳೋಣ. ಹೌದು ವಿದ್ಯಾರ್ಥಿಗಳು, ಸಾರ್ವಜನಿಕರು, ಕೆಲಸಕ್ಕೆ ತೆರಳಬೇಕಾದವರು ಸೇರಿದಂತೆ ಹೆಚ್ಚಿನ ಸಾಮಾನ್ಯ ಜನರು ನಿಮ್ಮ ದಾರಿಯನ್ನು ಕಾಯುತ್ತಿದ್ದಾರೆ. ಅವರ ಹೊಟ್ಟೆಗೆ ನಮ್ಮಿಂದಾಗಿ ಹೊಡೆತ ಬೀಳುವುದು ಸರಿಯಲ್ಲ ಅಲ್ಲವೇ. ಹಾಗಾಗಿ ಜನಸೇವೆಯೇ ಜನಾರ್ಧನ ಸೇವೆ ಎಂಬಂತೆ ಬಸ್ಸುಗಳನ್ನು ಬೀದಿಗಿಳಿಸಿ, ಸಾರ್ವಜನಿಕ ಸೇವೆ ಆರಂಭಿಸೋಣ. ಏಕೆಂದರೆ ಮುಷ್ಕರದಿಂದ ಕೇವಲ ದೇಶಕ್ಕೆ, ರಾಜ್ಯಕ್ಕೆ ಮಾತ್ರ ನಷ್ಟವಲ್ಲ. ಸಾರ್ವಜನಿಕರ ಜೊತೆಗೆ ಮುಷ್ಕರ ಮಾಡಿದವರಿಗೂ ತೊಂದರೆಯಾಗುತ್ತದೆ. ಆದ್ದರಿಂದ ಕರ್ತವ್ಯ ಮಾಡುತ್ತಲೇ ನಮ್ಮ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು ಈಡೇರಿಸಿಕೊಳ್ಳುವತ್ತ ಚಿತ್ತ ಹರಿಸೋಣ. ಇದರಿಂದ ಯಾರಿಗೆ ಯಾವುದೇ ರೀತಿಯ ಸಮಸ್ಯೆಆಗಲಾರದು. ಸಮಸ್ಯೆಯಾದರೆ ಅದು ಕೋಡಿಹಳ್ಳಿ ಅವರಂತಹವರಿಗೆ ಮಾತ್ರ.
ಸರ್ಕಾರ ಮತ್ತು ನೌಕರರ ಸಮಸ್ಯೆಗೆ ಮೂಗುತೂರಿಸಿ, ಆ ಸಮಸ್ಯೆಯನ್ನು. ಮತ್ತಷ್ಟು ಬಿಗಡಾಯಿಸುವ ಹಾಗೆ ಮಾಡಿರುವ ಕೋಡಿಹಳ್ಳಿ ಚಂದ್ರಶೇಖರ್ ಅವರ ಮೇಲೆ ನನಗಾವುದೇ ದ್ವೇಷವಿಲ್ಲ. ಅವರು ರೈತ ಮುಖಂಡರಾಗಿದ್ದರೆ ನ್ಯಾಯಯುತವಾಗಿ ರೈತರ ಸಮಸ್ಯೆಗಳನ್ನು ಸರ್ಕಾರ ಗಮನಕ್ಕೆ ತಂದು ಬಗೆಹರಿಸಿಕೊಡುವತ್ತ ಚಿಂತನೆ ನಡೆಸಲಿ. ಅದರ ಹೊರತಾಗಿ ತಮಗೆ ಸಂಬಂಧವೇ ಇಲ್ಲದ ಕ್ಷೇತ್ರಗಳತ್ತ ಮೂಗು ತೂರಿಸಿ ಇರುವ ವ್ಯವಸ್ಥೆಯನ್ನು ಹಾಳು ಮಾಡುವ, ಸಾರ್ವಜನಿಕ ನಷ್ಟಕ್ಕೆ ಕಾರಣವಾಗುವ ಚಿಂತನೆಗಳನ್ನು ಪಕ್ಕಕ್ಕಿಡಲಿ ಎಂಬುದಷ್ಟೇ ಈ ಲೇಖನದ ಸದಾಶಯ. ಅವರ ರೈತ ಚಳುವಳಿ, ಹೋರಾಟಗಳ ಬಗೆಗೂ ನನಗ್ಯಾವುದೇ ತಕರಾರಿಲ್ಲ. ಆದರೆ ಅವರು ಅವರಿಗೆ ಸಂಬಂಧವೇ ಇರದ ಸಾರಿಗೆ ನೌಕರರ ಮತ್ತು ಸರ್ಕಾರದ ನಡುವಿನ ವ್ಯವಹಾರಕ್ಕೆ ತಲೆ ತೂರಿಸಿದ್ದಕ್ಕಷ್ಟೇ ಈ ವಿರೋಧ. ಏಕೆಂದರೆ ಸಾರಿಗೆ ನೌಕರರನ್ನು ನಂಬಿ ಅವರ ಕುಟುಂಬವಿದೆ. ಆ ಕುಟುಂಬಗಳ ಕಣ್ಣೀರಿಗೆ ನಿಮ್ಮಿಂದಾಗಿ ಹುಟ್ಟಿಕೊಂಡಿರುವ ಮತ್ತು ಹುಟ್ಟಿಕೊಳ್ಳಬಹುದಾದ ಸಮಸ್ಯೆಗಳು ಹೊಸ ಸವಾಲುಗಳಾಗದಿರಲಿ ಎಂಬುದಷ್ಟೇ ಸದಾಶಯ. ‘ದಿ ಬೆಸ್ಟ್’ ಸಾರಿಗೆ ಸಂಸ್ಥೆ ಅದೇ ಹೆಸರನ್ನು ಉಳಿಸಿಕೊಳ್ಳಲು, ಬೆಳೆಯಲು ಬಿಡಿ ಎಂಬುದಷ್ಟೇ ಕೋರಿಕೆ. ಸಾರಿಗೆ ನೌಕರರಿಗೆ ನ್ಯಾಯ ಸಿಗಲಿ, ಅವರ ಹೋರಾಟಕ್ಕೆ ಇನ್ನಾರಿಂದಲೋ ಅನ್ಯಾಯ ಆಗದಿರಲಿ ಎಂಬುದಷ್ಟೇ ಆಗ್ರಹ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.