ಕೊನೆಗೂ ರಾಜ್ಯದಲ್ಲಿ ಬಹುನಿರೀಕ್ಷಿತ ಮತ್ತು ಬಹು ಸಮಯದಿಂದ ಚರ್ಚೆಯಲ್ಲಿದ್ದ ಗೋಹತ್ಯೆ ನಿಷೇಧ ಕಾಯ್ದೆ ವಿಧೇಯಕವನ್ನು ಬಿಜೆಪಿ ಸರ್ಕಾರ ಚಳಿಗಾಲದ ಅಧಿವೇಶನದಲ್ಲಿ ನಿನ್ನೆಯಷ್ಟೇ ಮಂಡನೆ ಮಾಡಿದೆ. ಈ ಚಳಿಗಾಲದಲ್ಲಿ ಸದನದ ಕಾವು ಏರಿಸಿದ್ದ, ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷಗಳ ನಡುವೆ ಪರ-ವಿರೋಧ ಚರ್ಚೆಗಳನ್ನು ಹುಟ್ಟುಹಾಕಿದ್ದ ‘ಗೋಹತ್ಯೆ ನಿಷೇಧ’ ವಿಧೇಯಕವನ್ನು ಮಂಡನೆ ಮಾಡುವ ಮೂಲಕ ಗೋವನ್ನು ‘ತಾಯಿ’ ಎಂದು ಪೂಜಿಸುವ ಬಹುಸಂಖ್ಯಾತರ (ಜಾತ್ಯಾತೀತ, ಧರ್ಮಾತೀತ ನೆಲೆಯಲ್ಲಿ) ಭಾವನೆಗಳನ್ನು ಗೌರವಿಸಿದೆ ಎನ್ನುವುದು ಸತ್ಯ.
ಭಾರತದ ಭವ್ಯ ಪರಂಪರೆಯನ್ನು ಗಮನಿಸಿದರೆ ವೇದಗಳ ಕಾಲದಿಂದಲೂ ಗೋವಿಗೆ ಪೂಜನೀಯ ಸ್ಥಾನವನ್ನು ನೀಡಲಾಗಿದೆ. ಹೆತ್ತ ತಾಯಿ ಬೇರೆಯಲ್ಲ, ಗೋವು ಬೇರೆಯಲ್ಲ ಎಂಬ ಪರಂಪರೆಯನ್ನು ಹೊಂದಿರುವ ರಾಷ್ಟ್ರ ಜಾತ್ಯಾತೀತ ಭಾರತ. ಹಲವು ಬುದ್ಧಿಜೀವಿಗಳು ಈ ವಾದಕ್ಕೆ ಪ್ರತಿವಾದಗಳನ್ನು ಮಂಡಿಸುವ, ಹಿಂದೆಲ್ಲಾ ಗೋವುಗಳನ್ನು ಆಹಾರವಾಗಿ ಬಳಸುವ ಪದ್ಧತಿ ಇತ್ತು ಎನ್ನುವ ಮೊಂಡು ವಾದಗಳನ್ನು ಮಂಡನೆ ಮಾಡುವುದರ ಮೂಲಕ ತಮ್ಮ ಚಿಂತನೆ ‘ಗೋಹತ್ಯೆ’ಗೆ ಬೆಂಬಲ ಸೂಚಿಸುವ, ಗೋ ಹತ್ಯೆ ನಿಷೇಧ ವಿಧೇಯಕವನ್ನು ವಿರೋಧಿಸುವತ್ತಲೂ ಚಿತ್ತ ಹರಿಸುತ್ತಾರೆ ಎಂಬುದನ್ನು ನಾವು ಈ ಸಂದರ್ಭದಲ್ಲಿ ಒಪ್ಪಿಕೊಳ್ಳಲೇ ಬೇಕು. ಆದರೆ, ಭಾರತದ ಬಹುಸಂಖ್ಯಾತರಲ್ಲಿ ಅಂದರೆ ಜಾತಿ, ಧರ್ಮಾತೀತವಾದ ಭಾರತೀಯರು ಎಂಬ ಪರಿಕಲ್ಪನೆಯಲ್ಲಿ ಗೋವಿಗೆ ಮಾತೆಯ ಸ್ಥಾನ ನೀಡಿರುವುದನ್ನು ನಾವು ಅಲ್ಲಗಳೆಯುವಂತಿಲ್ಲ. ಹಾಗೆಯೇ ಹಿಂದಿನಿಂದ ಇಂದಿನವರೆಗೂ ಗೋವನ್ನು ತಾಯಿ ಎಂದೇ ಗೌರವಿಸುವ ಸಮಾಜದಲ್ಲಿ ನಾವಿರುವುದನ್ನು ಮರೆಯುವಂತಿಲ್ಲ.
ಸದ್ಯ ನಮ್ಮ ಸಮಾಜದಲ್ಲಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದ ವಿಚಾರ ಗೋ ಕಳ್ಳತನ, ಗೋಹತ್ಯೆ. ಕೆಲವು ವರ್ಷಗಳಿಂದೀಚೆಗೆ ಗೋವಿನ ವಿಚಾರದಲ್ಲಿ ಸಂಘರ್ಷಗಳು ನಡೆಯುತ್ತಲೇ ಬಂದಿವೆ. ರೈತರು, ಹೈನುಗಾರರು ತಮ್ಮ ಹಟ್ಟಿಯ ಗೋವುಗಳನ್ನು ಮನೆಯ ಐಶ್ವರ್ಯ ಎಂದೇ ನಂಬಿದ್ದಾರೆ. ಹೀಗೆ ಮನುಷ್ಯನ ಜೀವನದ ಅವಿಭಾಜ್ಯ ಅಂಗದಂತೆಯೇ ಗುರುತಿಸಿಕೊಂಡಿರುವ ಗೋವುಗಳನ್ನು ಮೇವಿಗಾಗಿ ಬಿಟ್ಟ ಸಂದರ್ಭದಲ್ಲಿ, ಅಥವಾ ರಾತ್ರಿ ವೇಳೆ ಮನೆಯ ಹಟ್ಟಿಯಲ್ಲೇ ಕಟ್ಟಿದ್ದ ಹಸುಗಳನ್ನು ಕದ್ದೊಯ್ಯುವ, ಅವುಗಳನ್ನು ಕಟುಕರ ಕೈಗೆ ಕೊಡುವ, ಅವುಗಳನ್ನು ಹತ್ಯೆ ಮಾಡುವ ಅದೆಷ್ಟೋ ದುರಂತಗಳು ನಮ್ಮ ಕಣ್ಣ ಮುಂದೆ ನಡೆಯುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಇಂತಹ ಆತಂಕಕಾರಿ ಬೆಳವಣಿಗೆಗೆ ಕುಮ್ಮಕ್ಕು ನೀಡುವ ಅದೆಷ್ಟೋ ಜನರು, ಸಮಾಜದ ಮುಖ್ಯ ಸ್ಥರದಲ್ಲಿ ಗುರುತಿಸಿಕೊಂಡವರಿಗೂ ನಮ್ಮಲ್ಲೇನೂ ಕಮ್ಮಿ ಇಲ್ಲ. ಇಂತಹ ಸಂದರ್ಭದಲ್ಲಿ ನಾವು ಸಾಕಿದ ನಮ್ಮ ತಾಯಿಯ ಸ್ಥಾನದಲ್ಲಿರುವ ಗೋವುಗಳ ರಕ್ಷಣೆ ಹೇಗೆ ಎಂಬ ಪ್ರಶ್ನೆ ಬಹುಸಂಖ್ಯಾತರ ಮನದಲ್ಲಿ ಆತಂಕವಾಗಿಯೇ ಉಳಿದಿತ್ತು. ಈ ಸಮಸ್ಯೆಗೆ ಪರಿಹಾರವಾಗಿ ರಾಜ್ಯ ಬಿಜೆಪಿ ಸರ್ಕಾರ ಗೋ ಹತ್ಯೆ ನಿಷೇಧ ಕಾಯ್ದೆ ವಿಧೇಯಕವನ್ನು ಮಂಡಿಸಿದೆ.
ಗೋಹತ್ಯೆ ನಿಷೇಧ ಕಾಯ್ದೆ ವಿಧೇಯಕದಲ್ಲೇನಿದೆ?
ಈ ಬಗ್ಗೆ ಗಮನಿಸುವುದಾದರೆ, ಗೋವನ್ನು ಕಟುಕರಿಗೆ ಮಾರಾಟ ಮಾಡುವವರಿಂದ ಹಿಡಿದು, ಗೋವನ್ನು ಹತ್ಯೆ ಮಾಡುವವರಿಗೆ ಈ ಕಾಯ್ದೆಯಲ್ಲಿ ಏನು ಶಿಕ್ಷೆ, ಶಿಕ್ಷೆಯ ಪ್ರಮಾಣ, ದಂಡದ ಪ್ರಮಾಣ ಮೊದಲಾದವುಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಲಾಗಿದೆ. ಗೋವುಗಳ ಸಾಲಿನಲ್ಲಿ ಹಸು, ಕರು, ಎತ್ತು, ಎಮ್ಮೆ, ಕೋಣಗಳು ಸೇರಿರುವುದಾಗಿಯೂ ಸರ್ಕಾರ ತಿಳಿಸಿದೆ.
ಕರ್ನಾಟಕ ಗೋಹತ್ಯೆ ನಿಯಂತ್ರಣ ಮತ್ತು ಜಾನುವಾರು ಸಂರಕ್ಷಣಾ ವಿಧೇಯಕ 2020 – ಪ್ರಮುಖ ಅಂಶಗಳನ್ನು ಗಮನಿಸುವುದಾದರೆ,
* ಗೋಹತ್ಯೆ ಮಾಡಿದರೆ 3 ವರ್ಷಗಳಿಗೆ ಕಡಿಮೆ ಇಲ್ಲದ 7 ವರ್ಷಗಳಿಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ
* ಮೊದಲ ಬಾರಿ ಜಾನುವಾರು ಹತ್ಯೆ ಮಾಡಿದರೆ ರೂ. 50 ಸಾವಿರದಿಂದ ರೂ. 5 ಲಕ್ಷಗಳವರೆಗೆ ದಂಡ
* ಎರಡು ಅಥವಾ ಹೆಚ್ಚಿನ ಅಪರಾಧಕ್ಕೆ ರೂ. 1 ಲಕ್ಷದಿಂದ ರೂ. 3 ಲಕ್ಷ ದಂಡ ಮತ್ತು 7 ವರ್ಷ ಕಾರಾಗೃಹ ಶಿಕ್ಷೆ
* ಗೋಹತ್ಯೆ ಮಾಡುವವರಿಗೆ ನಿರ್ದಿಷ್ಟ ಅವಧಿಯವರೆಗೆ ಜಾಮೀನು ನೀಡುವಂತಿಲ್ಲ
* ಹತ್ಯೆ ಮಾಡುವ ಉದ್ದೇಶದಿಂದ ಜಾನುವಾರುಗಳ ಸಾಗಾಟ ಮತ್ತು ಸಾಗಾಟಕ್ಕೆ ಸಹಕರಿಸುವುದು ಅಪರಾಧ
* ಸಬ್ ಇನ್ಸ್ಪೆಕ್ಟರ್, ಅಧಿಕಾರಿಗಳಿಗೆ ಸಕ್ಷಮ ಪ್ರಾಧಿಕಾರದ ಅಧಿಕಾರ
* ಸಬ್ ಇನ್ಸ್ಪೆಕ್ಟರ್ಗಳಿಗೆ ದಾಳಿ, ಪರಿಶೀಲನೆ ಮತ್ತು ವಶಕ್ಕೆ ಪಡೆಯುವ ಅಧಿಕಾರ ಮತ್ತು ಅವಕಾಶ
* ಗೋವನ್ನು ಅನುಮಾನಾಸ್ಪದವಾಗಿ ಕಟ್ಟಿಕೊಂಡಿದ್ದರೆ ಅಥವಾ ಸಾಗಣೆ ಮಾಡುತ್ತಿದ್ದರೆ ತನಿಖಾಧಿಕಾರಿಗಳಿಗೆ ಸಹಕಾರ ನೀಡಬೇಕು
* ಕೃಷಿ, ಪಶುಸಂಗೋಪನೆ ಉದ್ದೇಶದಿಂದ ಜಾನುವಾರುಗಳ ಸಾಗಾಟ ಮಾಡಬಹುದು
* ಕೃಷಿ ಮತ್ತು ಪಶುಸಂಗೋಪನೆ ಉದ್ದೇಶದಿಂದ ಅಂತಾರಾಜ್ಯ ಸಾಗಾಟ ಮಾಡಲು ಸಕ್ಷಮ ಪ್ರಾಧಿಕಾರದಿಂದ ಅನುಮತಿ ಅಗತ್ಯ
* ಕೃಷಿ ಚಟುವಟಿಕೆಗಳಿಗೆ ಗೋವುಗಳ ಸಾಗಣೆಗೆ ಅನುಮತಿ ಮತ್ತು ಅದಕ್ಕೆ ನಿರ್ದಿಷ್ಟ ಶುಲ್ಕ ನಿಗದಿ
* ವಧೆ ಉದ್ದೇಶದಿಂದ ಜಾನುವಾರುಗಳ ಮಾರಾಟ, ಖರೀದಿ ಅಥವಾ ಖರೀದಿಗೆ ಪ್ರೇರೇಪಿಸುವಂತಿಲ್ಲ
* ಕಾಯಿಲೆ ಇದೆ ಎಂದು ಪಶುವೈದ್ಯಾಧಿಕಾರಿ ಅನುಮತಿ ನೀಡಿದರೆ ಹತ್ಯೆ ಮಾಡಲು ಅವಕಾಶವಿದೆ
* ವಶಕ್ಕೆ ಪಡೆದ ವಿಚಾರವನ್ನು ತಕ್ಷಣ ಸಬ್ ಡಿವಿಶನ್ ಮ್ಯಾಜಿಸ್ಟ್ರೇಟರ್ಗಳಿಗೆ ತಿಳಿಸಿ ಅಲ್ಲಿಂದ ಮುಟ್ಟುಗೋಲು ಹಾಕಿಕೊಳ್ಳುವುದು
* ಗೋ ಮಾಂಸ ವಶಕ್ಕೆ ಪಡೆದಿದ್ದರೆ ಮನುಷ್ಯನ ಉಪಭೋಗಕ್ಕೆ ಉಪಯೋಗವಲ್ಲ ಎಂದು ಪರಿಗಣಿಸಿ ನಾಶಪಡಿಸಬಹುದು
* ವಶಪಡಿಸಿಕೊಂಡ ಹಸುಗಳನ್ನು ಸಾರ್ವಜನಿಕ ಹರಾಜು ಮಾಡಲು ಅವಕಾಶ
* ಸೆಕ್ಷನ್ 19 ರ ಪ್ರಕಾರ ಯಾವುದೇ ಸಂದರ್ಭದಲ್ಲಿ ವಶಕ್ಕೆ ಪಡೆದ ಹಸುಗಳನ್ನು ಆರೋಪಿತರಿಗೆ ಹಿಂದಿರುಗಿಸುವಂತಿಲ್ಲ
* ಗೋ ಹತ್ಯೆ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ಜಿಲ್ಲೆಗಳಲ್ಲಿ ವಿಶೇಷ ನ್ಯಾಯಾಲಯ ಸ್ಥಾಪನೆ
* ಆರೋಪಿತರ ವಶಕ್ಕೆ ಪಡೆಯುವುದು, ಪ್ರಕರಣ ವಿಲೇವಾರಿ ಸೆಷನ್ ಜಡ್ಜ್ ಹಂತದಲ್ಲೇ ನಡೆಯಬೇಕು
* ಪ್ರಕರಣ ಮುಗಿದ ಬಳಿಕ ಆರೋಪ ಸಾಬೀತು ಆದಲ್ಲಿ ಹಸು, ಸಾಗಣೆ ವಾಹನ ಮುಟ್ಟುಗೋಲು ಹಾಕಿಕೊಳ್ಳಬಹುದು
* ಗೋ ರಕ್ಷಣೆಗೆ ಶ್ರಮಿಸುವವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ
* ಯಾವುದೇ ಲಸಿಕೆ, ಪ್ರಯೋಗಕ್ಕಾಗಿ ಸರ್ಕಾರ ಸ್ಥಾಪನೆ ಮಾಡಿರುವ ಪ್ರಯೋಗಾಲಯಕ್ಕೆ ಈ ನಿಯಮ ಅನ್ವಯವಾಗುವುದಿಲ್ಲ
* ಸಾಂಕ್ರಾಮಿಕ ರೋಗಗಳ ಜಾನುವಾರುಗಳನ್ನು ಕೊಲ್ಲುವುದಕ್ಕೆ ತೊಂದರೆಯಿಲ್ಲ, ಆದರೆ, ಪಶುವೈದ್ಯಾಧಿಕಾರಿ ಪ್ರಮಾಣಪತ್ರ ಅಗತ್ಯ.
* ಗುಣ ಆಗದ ಕಾಯಿಲೆ ಹೊಂದಿದ ಹಸು ಕೊಲ್ಲಲು ಅವಕಾಶವಿದೆ, ಆದರೆ, ಪ್ರಮಾಣ ಪತ್ರ ಅಗತ್ಯ.
* 13 ವರ್ಷ ಮೇಲ್ಪಟ್ಟ ಎಮ್ಮೆ ಮತ್ತು ಕೋಣವನ್ನು ಸೂಕ್ತ ಪ್ರಾಧಿಕಾರದ ಪರವಾನಗಿಯೊಂದಿಗೆ ವಧಿಸಬಹುದು
* ವಧೆಗೆ ಪಶು ವೈದ್ಯಾಧಿಕಾರಿಯಿಂದ ಪ್ರಾಮಾಣ ಪತ್ರ ಕಡ್ಡಾಯ
ಇಂತಹ ಹಲವು ನೀತಿ ನಿಯಮಗಳ ಜೊತೆ ರಾಜ್ಯದಲ್ಲಿ ಸಮರ್ಥವಾಗಿ ಮತ್ತು ಸಮರ್ಪಕವಾಗಿ ಗೋಹತ್ಯೆ ನಿಷೇಧ ವಿಧೇಯಕದ ಮಂಡನೆಯನ್ನು ವಿಧಾನಸಭೆಯಲ್ಲಿ ಮಾಡಲಾಗಿದೆ. ಈ ಕಾಯ್ದೆಯ ರೂಪು ರೇಷೆಗಳನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಮತ್ತು ಇದನ್ನು ಇತರ ರಾಜ್ಯಗಳಿಗೂ ಮಾದರಿಯಾಗುವಂತೆ ಕರ್ನಾಟಕದಲ್ಲಿ ಜಾರಿಗೊಳಿಸುವ ನಿಟ್ಟಿನಲ್ಲಿ ಪಶುಸಂಗೋಪನಾ ಸಚಿವರಾದ ಪ್ರಭು ಚೌಹಾಣ್ ಮತ್ತು ಅಧಿಕಾರಿಗಳ ತಂಡ ಅಧ್ಯಯನವನ್ನು ನಡೆಸಿದ್ದಾರೆ. ಹಾಗೆಯೇ ಈಗಾಗಲೇ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಿರುವ ಉತ್ತರ ಪ್ರದೇಶ, ಗುಜರಾತ್ ಮೊದಲಾದ ರಾಜ್ಯಗಳಿಗೂ ಭೇಟಿ ನೀಡಿ, ಇದರ ಸಾಧಕ ಬಾಧಕಗಳ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಳ್ಳಲಾಗಿದೆ. ಕೊನೆಗೆ ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯದಲ್ಲಿ ಈ ಕಾಯ್ದೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ಸರ್ಕಾರ ದಿಟ್ಟ ಹೆಜ್ಜೆ ಇರಿಸಿದೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳ ಬಳಕೆಯೂ ಸಾರ್ವಜನಿಕ ವಲಯದಲ್ಲಿ ಹೆಚ್ಚಾಗಿದೆ. ಕೆಲ ಸಮಯದ ಹಿಂದೆ ಗೋಹತ್ಯೆ ತಡೆಗೆ ನಿಷೇಧ ಕಾಯ್ದೆ ಜಾರಿಗೊಳಿಸುವಂತೆ ಹಲವು ಜನರು ಸಾಮಾಜಿಕ ಜಾಲತಾಣಗಳ ಮೂಲಕವೂ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ನಡೆಸಿದ್ದರು ಎಂಬುದನ್ನು ನಾವು ಮರೆಯುವಂತಿಲ್ಲ. ಅದರೊಂದಿಗೆ ಹಲವು ಸಂಘ, ಸಂಸ್ಥೆಗಳು, ಸಂಘಟನೆಗಳು ಸಹ ಗೋಹತ್ಯೆ ನಿಷೇಧಕ್ಕೆ ಸಂಬಂಧಿಸಿದಂತೆ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಸಹ ನಡೆಸಿದ್ದವು. ಇಂತಹ ಪ್ರಯತ್ನಗಳಿಗೆ ಸದ್ಯ ಫಲ ದೊರೆಯುವ ಸಮಯ ಸನ್ನಿಹಿತವಾಗಿದೆ.
ಗೋಹತ್ಯೆ ನಿಷೇಧ ಮಾಡುವ ಭರವಸೆಯನ್ನು ಬಿಜೆಪಿ ಸಹ ರಾಜ್ಯದ ಜನರಿಗೆ ಈ ಹಿಂದೆಯೇ ನೀಡಿತ್ತು. ಅದರಂತೆ ಇದೀಗ ಈ ಸಂಬಂಧ ವಿಧೇಯಕವನ್ನು ಮಂಡಿಸಿ, ಅಂಗೀಕಾರ ಪಡೆದಿದೆ. ಆ ಮೂಲಕ ಬಿಜೆಪಿಗೆ ಮತ ನೀಡಿದ ಜನರ, ಗೋವುಗಳನ್ನು ಪೂಜನೀಯ ಎಂದು ಭಾವಿಸಿರುವ ಅನೇಕಾನೇಕ ಜನರ ಮನೋಭಿಲಾಷೆಯನ್ನು ಈಡೇರಿಸಿದೆ. ಒಟ್ಟಿನಲ್ಲಿ ‘ನುಡಿದಂತೆ ನಡೆಯುವ ಪಕ್ಷ’ ಬಿಜೆಪಿ ಎಂಬ ಭರವಸೆಯನ್ನು ಜನರಲ್ಲಿ ಮುಂದುವರಿಯುವಂತೆ ಮಾಡಿದೆ. ಅದರೊಂದಿಗೆ ಗೋವುಗಳಿಗೂ ನಿಜವಾದ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸತ್ಕಾರ್ಯ ಮಾಡಿದೆ ಎಂದರೆ ಅತಿಶಯವಲ್ಲ.
✍️ಭುವನ ಬಾಬು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.