ಭಾರತ ಒಂದು ಕೃಷಿ ಪ್ರಧಾನ ರಾಷ್ಟ್ರ. ನಮ್ಮ ದೇಶದ ಅನೇಕರ ಜೀವನಾವಲಂಬನೆಯ ವೃತ್ತಿ ಕೃಷಿ. ಇಂದು ಅನೇಕರು ವಿವಿಧ ವೃತ್ತಿಯನ್ನು ಪಾಲಿಸುತ್ತಾ ಜೀವಿಸುತ್ತಿದ್ದಾರಾದರೂ ಅವರಲ್ಲಿ ಬಹುತೇಕರು ವ್ಯವಸಾಯ ಕುಟುಂಬ ಹಿನ್ನಲೆಯನ್ನು ಹೊಂದಿದವಾರಾಗಿದ್ದಾರೆ. ಸ್ವಾತಂತ್ರ್ಯ ಪಡೆದ ನಂತರ ಭಾರತವು ಅನೇಕ ಪ್ರಧಾನ ಮಂತ್ರಿಗಳನ್ನು ಕಂಡಿದೆ.ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ರಾಷ್ಟ್ರ ನಿರ್ಮಾಣ ಮತ್ತು ಅಭಿವೃದ್ಧಿಯಲ್ಲಿ ರೈತರ ಮಹತ್ವವನ್ನು ಮನಗಂಡು ರೈತರಿಗೂ ಯೋಧರಂತೆ ಸಮಾನ ಗೌರವವನ್ನು ಸಲ್ಲಿಸಿದ ಮೊದಲ ಪ್ರಧಾನಿ ಎಂಬುದು ಉತ್ಪ್ರೇಕ್ಷೆಯಲ್ಲ. ಪ್ರಾಕೃತಿಕ ವೈಪರೀತ್ಯದಿಂದ ಬಂದ ಬರಗಾಲದ ಸಂದರ್ಭದಲ್ಲಿ ಅವರು “ಜೈ ಜವಾನ್, ಜೈ ಕಿಸಾನ್ ” ಎನ್ನುತ್ತಾ ಸಮಸ್ತ ದೇಶದ ಪರವಾಗಿ ರೈತರ ಬೆನ್ನಿಗೆ ನಿಂತರು. ಇದರಿಂದ ರೈತರ ಆತ್ಮವಿಶ್ವಾಸವೂ ದ್ವಿಗುಣಗೊಂಡಿತ್ತು. ಶಾಸ್ತ್ರೀಜಿ ಅವರ ನಂತರದಲ್ಲೂ ಅನೇಕ ಪ್ರಧಾನಿಗಳು ಗದ್ದುಗೆಯನ್ನೆರಿದರು, ಅವರ್ಯಾರೂ ರೈತರ ಹಿತದ ಬಗ್ಗೆ ಗಮನ ಹರಿಸುವುದು ಮುಖ್ಯವೆಂದು ಭಾವಿಸಲಿಲ್ಲ. ಆದರೆ ನರೇಂದ್ರ ಮೋದಿಜಿ ಪ್ರಧಾನಿಯಾದ ಬಳಿಕ ಅವರು ಮತ್ತೆ “ಜೈ ಜವಾನ್, ಜೈ ಕಿಸಾನ್” ಎಂಬ ಮಾತನ್ನು ಆಡಳಿತದಲ್ಲಿ ಅನ್ವಯಿಸಿಕೊಂಡರು. ರೈತರ ಹಿತ ರಕ್ಷಣೆಗಾಗಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡರು. ಹಲವಾರು ಅಧಿಕಾರಿಗಳ ಹಿಂದೆ ಅಲೆದಾಡಿ ಪಡೆಯಬೇಕಿದ್ದ ಹಲವು ಬೆಂಬಲ ಬೆಲೆಗಳು, ಸಬ್ಸಿಡಿಗಳು ನೇರವಾಗಿ ರೈತನ ಖಾತೆಗೆ ವರ್ಗಾವಣೆಗೊಳ್ಳುವ ರೀತಿಯಲ್ಲಿ ಅನೇಕ ಉತ್ತಮ ಬದಲಾವಣೆಗಳು ನರೇಂದ್ರ ಮೋದಿಜಿ ಸರ್ಕಾರದ ಉತ್ತಮ ಕಾರ್ಯಗಳಾಗಿವೆ.
ಇದೀಗ ರೈತ ಪರ ನಿಯಮಗಳ ಭಾಗವಾಗಿ ಕೇಂದ್ರ ಸರಕಾರವು ಐತಿಹಾಸಿಕ ಕೃಷಿ ಮಾಸೂದೆಯನ್ನು ಜಾರಿಗೆ ತರುತ್ತಿದೆ. ಇದರ ಪ್ರಮುಖ ಉದ್ದೇಶ ರೈತರನ್ನು ಸ್ವಾವಲಂಬಿ ಹಾಗೂ ಗೌರವಾನ್ವಿತರನ್ನಾಗಿಸುವುದು. ಅನೇಕ ದಶಕಗಳಿಂದಲೂ ರಾಜಕಾರಣಿಗಳ ಕಯ್ಯಲ್ಲಿದ್ದ ಮಂಡಿ ವ್ಯವಸ್ಥೆಗೆ ಮುಕ್ತಾಯ ಹೇಳಿ ಕೃಷಿಕರಿಗೆ ನೇರ ಆದಾಯ ಲಭಿಸುವಂತೆ ಮಾಡಲು ಈ ಮಾಸೂದೆಯು ನೆರವಾಗಲಿದೆ. ಆದರೂ ಕಳೆದ ಕೆಲವು ದಿನಗಳಿಂದ ಪಂಜಾಬ್ ಪ್ರಾಂತ್ಯದ ರೈತರು ಈ ಮಾಸೂದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಯಾವುದನಾದರೂ ಪರ ವಹಿಸುವ ಮತ್ತು ವಿರೋಧಿಸುವ ಹಕ್ಕು ದೇಶದ ಪ್ರತಿಯೊಬ್ಬ ನಾಗರಿಕರಿಗೂ ಇದೆ. ಆದರೆ ಈ ಪ್ರತಿಭಟನೆಯನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ ಕೆಲವು ಅಚ್ಚರಿಯ ಅಂಶಗಳು ಕಾಣಸಿಗುತ್ತಿವೆ.
ಮೊದಲನೇಯದಾಗಿ ಪಂಜಾಬಿನಂತೆ ಹರಿಯಾಣವೂ ಕೃಷಿ ಪ್ರಧಾನ ರಾಜ್ಯ. ಆದರೆ ಅಲ್ಲಿನ ಕೃಷಿಕರು ಸಂಪೂರ್ಣವಾಗಿ ಕೃಷಿ ಮಸೂದೆಗೆ ಬೆಂಬಲವನ್ನು ಸೂಚಿಸಿ ಪತ್ರವನ್ನೂ ಸಲ್ಲಿಸಿದ್ದಾರೆ. ಭಾರತದ ಇತರ ರಾಜ್ಯಗಳೂ ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಭೂಮಿಯನ್ನು ಹೊಂದಿದ್ದು, ಎಲ್ಲೆಡೆಯಲ್ಲೂ ಕೃಷಿಕರಿದ್ದಾರೆ. ಹಾಗಿದ್ದ ಸಂದರ್ಭದಲ್ಲಿ ಕೇವಲ ಕಾಂಗ್ರೆಸ್ ಆಡಳಿತವಿರುವ (ಕೇಂದ್ರದಲ್ಲಿ ವಿರೋಧಪಕ್ಷವಾಗಿರುವ )ಪಂಜಾಬ್ ನಲ್ಲಿ ಮಾತ್ರ ಇಷ್ಟು ತೀವ್ರ ವಿರೋಧ ಕಂಡು ಬರುತ್ತಿರುವುದೇಕೆ? ಇತರ ರಾಜ್ಯಗಳು /ರಾಜ್ಯವಾಳುವ ಸರ್ಕಾರಗಳು ಕೃಷಿಕರಿಗೆ ಕೃಷಿ ಮಸೂದೆಯ ಲಾಭಗಳನ್ನು ತಿಳಿಸಿಕೊಡಲು ಸಫಲರಾಗಿದ್ದಾರೆ ಎಂದರೆ ಪಂಜಾಬ್ ಸರಕಾರ ತನ್ನ ರಾಜ್ಯದ ಕೃಷಿಕರಿಗೆ ಮಾಸೂದೆಯನ್ನು ಮನದಟ್ಟು ಮಾಡಿಸಲು ವಿಫಲವಾಗಿದೆ ಅಥವಾ ಮಸೂದೆಯ ಪ್ರಯೋಜನವನ್ನು ತಿಳಿಸುವ ಬದಲಾಗಿ ತಿರುಚಿ ತಪ್ಪು ಕಲ್ಪನೆಯನ್ನು ಮೂಡಿಸಿ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದೆಯೋ ಎಂಬ ಸಂದೇಹ ಮೂಡಲು ಆಸ್ಪದವನ್ನು ನೀಡುತ್ತಿದೆ. ಯಾವ ರಾಜಕೀಯ ಪಕ್ಷವು ತಾನು ಅಧಿಕಾರದಲ್ಲಿದ್ದಾಗ ಕೃಷಿ ಮಸೂದೆಯನ್ನು ತರುವ ಕುರಿತಾಗಿ ಪತ್ರಗಳನ್ನು ಬರೆದಿತ್ತೋ, ಅದೇ ರಾಜಕೀಯ ಪಕ್ಷವು ಅಧಿಕಾರದಲ್ಲಿರುವ ರಾಜ್ಯದಲ್ಲಿ ಮಾತ್ರ ಪ್ರತಿಭಟನೆ ನಡೆಯುತ್ತಿರುವುದು ಆಶ್ಚರ್ಯಕಾರಕ.
ಇಂದು ಪಂಜಾಬಿನ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸುತ್ತಿರುವ ಕಾಂಗ್ರೆಸ್ ಪಕ್ಷದ ಯುವರಾಜ ರಾಹುಲ್ ಗಾಂಧಿ ಸ್ವತಃ ತರಕಾರಿ ಮತ್ತು ಹಣ್ಣುಹಂಪಲು ಗಳ ಮಾರಾಟವನ್ನು ಮಂಡಿ ವ್ಯವಸ್ಥೆಯಿಂದ ಹೊರತೆಗೆಯಬೇಕು ಹಾಗೂ ಇದರಿಂದ ರೈತರಿಗೆ ಅನುಕೂಲವಾಗುವುದು ಎಂದು ಕಾಂಗ್ರೆಸ್ ಆಡಳಿತವಿದ್ದ ರಾಜ್ಯಗಳಿಗೆ ಸೂಚನೆಗಳನ್ನು ನೀಡಿದ್ದರು. ಶರದ್ ಪವಾರ್ ಅವರು ಕೃಷಿ ಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಸ್ವತಃ ದೆಹಲಿಯ ಮುಖ್ಯಮಂತ್ರಿಯಾಗಿದ್ದ ಶೀಲಾ ದೀಕ್ಷಿತ್ ಅವರಿಗೆ ಈ ಕುರಿತಾಗಿ ಪತ್ರವನ್ನೂ ಬರೆದಿದ್ದರು. ಆದರೆ ತಾವು ಜಾರಿಗೆ ತರಲು ಬಯಸಿದ್ದ ಮಾಸೂದೆಯನ್ನು ಮೋದಿಜಿ ನೇತೃತ್ವದ ಸರಕಾರ ಜಾರಿಗೆ ತಂದ ತಕ್ಷಣ ಅದನ್ನು ರೈತ ವಿರೋಧಿ ಎಂದು ಬಿಂಬಿಸುವ ವಿಫಲ ಯತ್ನ ನಡೆಸುತ್ತಿದ್ದಾರೆ. ಮೋದಿಜಿ ಸರಕಾರದ ವಿರುದ್ಧ ಜನರನ್ನು ಎತ್ತಿಕಟ್ಟಲು ಏನೂ ಸಿಗದೇ ಹೋದಾಗ ಈ ರೀತಿಯಲ್ಲಿ ವಿರೋಧ ಪಕ್ಷಗಳು ಅಡ್ಡ ದಾರಿ ಹಿಡಿಯುತ್ತಿರುವುದು ಇದೇ ಮೊದಲೇನಲ್ಲ.
ನಡೆಯುತ್ತಿರುವ ಪ್ರತಿಭಟನೆಯಲ್ಲಿ ರೈತ ಪರವಾದ ಘೋಷಣೆಗಳಿಗಿಂತಲೂ ಹೆಚ್ಚಾಗಿ, ರೈತರಿಗೂ ಮಾಸೂದೆಗೂ ಸಂಬಂಧವೇ ಇಲ್ಲದ ಘೋಷಣೆಗಳು ಕೇಳಿಬರುತ್ತಿರುವುದು ಇನ್ನೊಂದು ಗಮನಿಸಬೇಕಾದ ವಿಚಾರ. ಖಲಿಸ್ತಾನ ಪರವಾದ ಘೋಷಣೆಗಳು, ಒಬ್ಬ ಪ್ರತಿಭಟನಾಕಾರ ‘ಇಂದಿರಾಗಾಂಧಿಯನ್ನೇ ಹತ್ಯೆಗೈದ ನಮಗೆ ಮೋದಿ ಯಾವ ಲೆಕ್ಕ ‘ ಎಂಬ ಮಾತುಗಳನ್ನೂ ಹೇಳಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇಷ್ಟು ಮಾತ್ರವಲ್ಲದೆ ಇಮ್ರಾನ್ ಖಾನ್ ನಮ್ಮ ಮಿತ್ರ, ನಮ್ಮ ಶತ್ರು ದೆಹಲಿಯಲ್ಲಿದ್ದಾನೆ ಎಂಬ ಘೋಷಣೆಗಳೂ, ಭಿತ್ತಿ ಪತ್ರಗಳೂ ಕಾಣಸಿಗುತ್ತಿವೆ ಎಂದರೆ ಇದರ ಅರ್ಥವೇನು? ಕಳೆದ ಬಾರಿ ಜೆಎನ್ಯು ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಹೆಸರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಕೂಡಾ ಇಂತಹ ಅಪ್ರಸ್ತುತ ಘೋಷಣೆಗಳು, ಕರಪತ್ರಗಳು ಕಂಡು ಬಂದಿತ್ತು. ಅಂದು ವಿದ್ಯಾರ್ಥಿಗಳು (!) ಕಾಶ್ಮೀರ ಸ್ವತಂತ್ರವಾಗಬೇಕು, ಆರ್ಟಿಕಲ್ 370 ನ್ನು ಪುನಃ ಸ್ಥಾಪೀಸಬೇಕು, ಎಂಬಿತ್ಯಾದಿ ಘೋಷನೆಗಳನ್ನು ಕೂಗಿದ್ದು ಜನರ ಮನದಿಂದ ಮಾಸುವ ಮೊದಲೇ ರೈತರ ಪ್ರತಿಭಟನೆಯಲ್ಲಿ ಖಲಿಸ್ಥಾನದ ಪರ ಘೋಷಣೆಗಳು ಕೇಳುತ್ತಿವೆ. ದೆಹಲಿಯಲ್ಲಿ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ನಡೆದಂತೆಯೇ ಇಲ್ಲೂ ರಸ್ತೆ ತಡೆ, ರೈಲು ತಡೆಗಳು ನಡೆಯುತ್ತಿವೆ. ಎಲ್ಲ ಪ್ರತಿಭಟನೆಗಳಲ್ಲೂ ಇಷ್ಟೊಂದು ಸಾಮ್ಯತೆಗಳು ಏಕಿವೆ?
ಸಿಎಎ ಸಂದರ್ಭದಲ್ಲಿ ದೇಶದ ನಾಗರಿಕರಿಗೆ ತೊಂದರೆಯನ್ನು ಉಂಟುಮಾಡುವ ಯಾವುದೇ ಅಂಶಗಳು ಇಲ್ಲದಿದ್ದರೂ ಕೂಡಾ ಅದರ ಕುರಿತಾಗಿ ನಡೆದ ಅಪಪ್ರಚಾರ ಅನೇಕ ಪ್ರತಿಭಟನೆಗೆ ಕಾರಣವಾಯಿತು. ಮುಂದೆ ಅದನ್ನೇ ಅನೇಕ ಪಕ್ಷಗಳು ತಮ್ಮ ರಾಜಕೀಯ ಉದ್ದೇಶಕ್ಕಾಗಿ ಬಳಸಿಕೊಂಡರು ಮಾತ್ರವಲ್ಲದೆ, ಮತ್ತೆ ನಡೆದ ತನಿಖೆಯಲ್ಲಿ ಈ ಪ್ರತಿಭಟನೆ ನಡೆಸಲು ವಿವಿಧ ಸಂಘಟನೆಗಳಿಂದ ದೇಣಿಗೆ ಹರಿದು ಬಂದ ವಿಚಾರಗಳೂ ಹೊರ ಬಂದದ್ದು ಪತ್ರಿಕೆಗಳಲ್ಲಿ ಸುದ್ದಿಯಾಯಿತು. ಇದೀಗ ರೈತರ ಹೆಸರಿನಲ್ಲಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ರೈತರಲ್ಲದವರೂ, ರಾಜಕೀಯ ಪಕ್ಷಗಳೂ ತಮ್ಮ ದುರುದ್ದೇಶವನ್ನು ಸಾಧಿಸಲು ಪ್ರಯತ್ನ ನಡೆಸುತ್ತಿರುವಂತೆ ಗೋಚರಿಸುತ್ತಿದೆ. ದಲ್ಲಾಳಿಗಳನ್ನು ಹೊರಗಿರಿಸಿ ರೈತರಿಗೆ ಲಾಭವನ್ನು ನೀಡುವ, ಮಂಡಿ ವ್ಯವಸ್ಥೆಯಿಂದ ಹೊರಬರುವ ಮತ್ತು ಕನಿಷ್ಠ ಬೆಲೆಯನ್ನು ನಿಗದಿಪಡಿಸುವ ಹೀಗೇ ಬಹುತೇಕ ಎಲ್ಲಾ ಬೇಡಿಕೆಗಳನ್ನೂ ಕೇಂದ್ರ ಸರಕಾರ ಪೂರೈಸಿದೆ ಮಾತ್ರವಲ್ಲದೆ ಮುಂದಿನ ಬೇಡಿಕೆಗಳ ಕುರಿತಾಗಿ ವಿಮರ್ಶೆ ನಡೆಸಲೂ ಸಿದ್ಧವಿದೆ. ಹೀಗಿದ್ದ ಸಂದರ್ಭಲ್ಲೂ ನಡೆಸುತ್ತಿರುವ ಈ ಪ್ರತಿಭಟನೆಗೆ ದೇಶದ ಇತರೆಡೆಗಳಿಂದ ಸ್ಪಂದನೆ ವ್ಯಕ್ತವಾಗದೇ ಇರಲೂ ಕಾರಣವಿದೆ ಎಂದು ನಿಮಗನಿಸುವುದಿಲ್ಲವೇ? ಸುಳ್ಳಿನ ಸರಮಾಲೆಯನ್ನು ಹೆಣೆದು, ತಪ್ಪು ಮಾಹಿತಿಗಳನ್ನು ನೀಡಿ, ತಪ್ಪು ದಾರಿಗೆಳೆದು ರಾಜಕೀಯ ಪಕ್ಷಗಳು ನಡೆಸುವ ಪ್ರತಿಭಟನೆಗಳಿಂದ ಮುಂದಿನ ದಿನಗಳಲ್ಲಿ ಪ್ರತಿಭಟನೆಗಳ ಕುರಿತು ಯಾವ ರೀತಿಯಲ್ಲಿ ನಂಬಿಕೆ ಉಳಿಯಬಹುದು ಎಂಬುದು ಯೋಚಿಸಬೇಕಾದ ವಿಚಾರವಲ್ಲವೇ?
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.